Conscious Breathing: ಗಮನವಿಟ್ಟು ಉಸಿರಾಡಿ ಒತ್ತಡ, ಖಿನ್ನತೆಯಿಂದ ಮುಕ್ತರಾಗಿ

| Updated By: Pavitra Bhat Jigalemane

Updated on: Feb 04, 2022 | 10:45 AM

ಉಸಿರಾಟ ದೇಹವನ್ನು ನಿಯಂತ್ರಿಸುತ್ತದೆ ಹೀಗಾಗಿ ಪ್ರತಿದಿನ ಒಂದೈದು ನಿಮಿಷವಾದರೂ ಗಮನವಿಟ್ಟು ಉಸಿರಾಡಿ ಇದರಿಂದ ನಿಮ್ಮ ಉಸಿರಾಟದ ಸಮಸ್ಯೆಯೂ ನಿವಾರಣೆಯಾಗುತ್ತದೆ.

Conscious Breathing: ಗಮನವಿಟ್ಟು ಉಸಿರಾಡಿ ಒತ್ತಡ, ಖಿನ್ನತೆಯಿಂದ ಮುಕ್ತರಾಗಿ
ಪ್ರಾತಿನಿಧಿಕ ಚಿತ್ರ
Follow us on

ಪ್ರತೀ ಜೀವಿಯ ಅಸ್ತಿತ್ವವವನ್ನು ತೋರ್ಪಡಿಸುವುದು ಉಸಿರಾಟ (Breathing). ಉಸಿರಾಡುವಾಗ ಉಚ್ವಾಸ ನಿಶ್ಚಾಸ ಕ್ರಿಯೆಗಳು ಬಹುತೇಕ ಸಮಯದಲ್ಲಿ ನಮಗೆ ಅರಿವಿಲ್ಲದಂತೆ ಆಗುತ್ತದೆ. ಇದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ  ಒತ್ತಡಕ್ಕೆ ಒಳಗಾದಾಗ ನಿಟ್ಟುಸಿರನ್ನು ಬಿಡುತ್ತೇವೆ. ಇದನ್ನು ಪ್ರಜ್ಞಾಪೂರ್ವಕ ಉಸಿರಾಟ (Conscious Breathing) ಅಥವಾ ಉಸಿರಾಟದ ಮೇಲೆ ಗಮನಹರಿಸುವುದು ಎನ್ನುತ್ತಾರೆ. ತಜ್ಞರ ಪ್ರಕಾರ ಒಬ್ಬ ಆರೋಗ್ಯವಂತ ವ್ಯಕ್ತಿ ಒಂದು ನಿಮಿಷಕ್ಕೆ 10 ರಿಂದ 12 ಬಾರಿ ಉಸಿರಾಡುತ್ತಾನೆ, ಒಂದು ದಿನಕ್ಕೆ ಸರಿಸುಮಾರು 28,800 ಬಾರಿ ಉಸಿರಾಟ ನಡೆಸುತ್ತಾನೆ. ಆಗಲೇ ಹೇಳಿದಂತೆ ಬಹುತೇಕ ಬಾರಿ ಅರಿವಿಲ್ಲದಂತೆ ಉಸಿರಾಟ ನಡೆಸುತ್ತೇವೆ. ಆದರೆ  ಉಸಿರಾಟದೆಡೆಗೆ ಅಂದರೆ ಉಚ್ವಾಸ ಮತ್ತು ನಿಶ್ವಾಸದೆಡೆಗೆ ಗಮನ ಹರಿಸಿದರೆ ವ್ಯಕ್ತಿ ಹೆಚ್ಚು ಜಾಗೃತನಾಗಿರುತ್ತಾನೆ. ಒತ್ತಡ (Stress), ಖಿನ್ನತೆಗಳೂ (Anxiety) ದೂರವಾಗುತ್ತವೆ ಎನ್ನುವುದು ವೈದ್ಯ ಲೋಕದ ಅಭಿಪ್ರಾಯ. 

ಏನಿದು ಉಸಿರಾಟದೆಡೆಗೆ ಗಮನಹರಿಸುವುದು ಅಥವಾ ಪ್ರಜ್ಞಾಪೂರ್ವಕ ಉಸಿರಾಟ?

ಸಾಮಾನ್ಯವಾಗಿ ಯೋಗ ಮಾಡುವಾಗ ಉಸಿರಾಟದೆಡೆಗೆ ಹೆಚ್ಚು ಗಮನ ಹರಿಸುತ್ತೇವೆ. ಪ್ರತೀ ಬಾರಿ ಉಸಿರನ್ನು ತೆಗೆದುಕೊಳ್ಳುವಾಗ ಮತ್ತು ಬಿಡುವಾಗ ಗಮನಹರಿಸುತ್ತೇವೆ. ಇದನ್ನೇ ಪ್ರಜ್ಞಾಪೂರ್ವಕ ಉಸಿರಾಟ ಎಂದು ಕರೆಯುತ್ತಾರೆ. ಧ್ಯಾನದ ರೂಪದಲ್ಲಿ ಉಸಿರಾಟದೆಡೆಗೆ ಗಮನಹರಿಸುವ ರೂಪ ಎಂದರೂ ತಪ್ಪಾಗದು. ಈ ರೀತಿ ಮಾಡುವುದರಿಂದ ಒತ್ತಡಗಳು ನಿವಾರಣೆಯಾಗಿ ಮೆದುಳು ಶಾಂತ ಸ್ಥಿತಿಗೆ ಬರುತ್ತದೆ. ಚಂಚಲ ಮನಸ್ಥಿತಿ ಸ್ಥಿಮಿತಕ್ಕೆ ಬಂದು ಏಕಾಗ್ರತೆ ಬರುತ್ತದೆ.

ಗಮನವಿಟ್ಟು ಉಸಿರಾಡುವುದರಿಂದ ಆಗುವ ಲಾಭಗಳೇನು? :
ನಿಮಗೆ ತುಂಬಾ ಒತ್ತಡವಾದಾಗ ಐದು ನಿಮಿಷ ಕಣ್ಣು ಮುಚ್ಚಿ ಜೋರಾಗಿ ಉಸಿರಾಡಿ. ಆಗ ನಿಮ್ಮ ಸಂಪೂರ್ಣ ಗಮನ ಉಸಿರಾಟದೆಡೆಗೆ ಇರುತ್ತದೆ. ಇದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ.

ಉಸಿರಾಡುವಾಗ ಅದರೆಡೆಗೆ ಹೆಚ್ಚು ಗಮನಹರಿಸಿದರೆ ಬಹುಬೇಗ ನಿದ್ದೆ ಆವರಿಸಿಕೊಳ್ಳುತ್ತದೆ.

ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತದೆ ಜತೆಗೆ ದೇಹದ ತೂಕವನ್ನು ಕಾಪಾಡಿಕೊಳ್ಳಲು ಉಸಿರಾಟ ನೆರವಾಗುತ್ತದೆ.

ಉಸಿರಾಟ ಇಡೀ ದೇಹವನ್ನು ನಿಯಂತ್ರಿಸುತ್ತದೆ. ಆರಾಮವಾಗಿ ಉಸಿರಿನ ಪ್ರಕ್ರಿಯೆಯನ್ನು ಗಮನಿಸಿದರೆ ನಿಮ್ಮ ಒತ್ತಡ ಮಾತ್ರವಲ್ಲ ಹೃದಯ ಬಡಿತವೂ ನಾರ್ಮಲ್​ ಹಂತದಲ್ಲಿದ್ದು, ರಕ್ತದೊತ್ತಡದಂತಹ ಸಮಸ್ಯೆಗಳೂ  ಶಮನವಾಗುತ್ತವೆ.

ಉಸಿರಾಟ ದೇಹವನ್ನು ನಿಯಂತ್ರಿಸುತ್ತದೆ ಹೀಗಾಗಿ ಪ್ರತಿದಿನ ಒಂದೈದು ನಿಮಿಷವಾದರೂ ಗಮನವಿಟ್ಟು ಉಸಿರಾಡಿ ಇದರಿಂದ ನಿಮ್ಮ ಉಸಿರಾಟದ ಸಮಸ್ಯೆಯೂ ನಿವಾರಣೆಯಾಗುತ್ತದೆ. ಜತೆಗೆ ದೇಹದ ಚಯಾಪಯ ಕ್ರಿಯೆ ಮತ್ತು ಜೀರ್ಣ ಕ್ರಿಯೆ ಕೂಡ ಉತ್ತಮವಾಗುತ್ತದೆ.

ಅಸ್ತಮಾದಂತಹ ಸಮಸ್ಯೆಗಳಿಗೆ ಉಸಿರಾಟವೇ ಮೂಲವಾಗಿರುತ್ತದೆ. ಈ ಕಾರಣದಿಂದ ನಿಮ್ಮ ಉಸಿರಾಟವನ್ನು ನೀವು ಗಮನವಿಟ್ಟು ಮಾಡಿದರೆ ಅಸ್ತಮಾ ನಿಯಂತ್ರದಲ್ಲಿರುತ್ತದೆ. ಜತೆಗೆ ನಿಮ್ಮ ಏಕಾಗ್ರತೆ, ನರಗಳ ಸ್ವಾಸ್ಥ್ಯ ಮತ್ತು ಕ್ರೀಯಾಶೀಲತೆ ಕೂಡ ಉತ್ತಮಗೊಳ್ಳುತ್ತದೆ ಎನ್ನುತ್ತಾರೆ ವೈದ್ಯರು.

ಪ್ರಜ್ಞಾಪೂರ್ವಕ ಉಸಿರಾಟ ವಿಧಗಳು ಮತ್ತು ಅಭ್ಯಾಸ ಹೇಗೆ?
ಪ್ರಜ್ಞಾ ಪೂರ್ವಕ ಉಸಿರಾಟದಲ್ಲಿ ಹಲವು ವಿಧಗಳಿವೆ ಅವುಗಳಲ್ಲಿ ಮುಖ್ಯವಾಗಿ ಕಪಾಲಭಾತಿ, ಭಸ್ತ್ರಿಕಾ, ಬ್ರಾಹ್ಮರಿ, ಉಜ್ಜಯಿ, ಅನುಲೋಮ್​ ವಿಲೋಮ್ ಸೇರಿದಂತೆ ಹಲವು ವಿಧಗಳಿವೆ. ಈ ರೀತಿಯ ಉಸಿರಾಟದ ಅಭ್ಯಾಸವನ್ನು ನೀವು ಯೋಗ ತಜ್ಞರಿಂದ ಪಡೆಯಬಹುದು, ದೈಹಿಕ ಆರೋಗ್ಯ ವೈದ್ಯರಿಂದ ಪಡೆಯಬಹುದಾಗಿದೆ.

(ಈ ಮೇಲಿನ ಮಾಹಿತಿಯು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಹೆಲ್ತ್​ ಲೈನ್​ ಸುದ್ದಿಸಂಸ್ಥೆಯ ವರದಿಯನ್ನು ಆಧರಿಸಿ ಸಲಹೆಗಳನ್ನು ನೀಡಲಾಗಿದೆ.)

ಇದನ್ನೂ ಓದಿ:

Winter Allergy: ಚಳಿಗಾಲದಲ್ಲಿ ಉಂಟಾಗುವ ಅಲರ್ಜಿಗಳಿಂದ ಆರೋಗ್ಯ ಹದಗೆಡಬಹುದು; ಇಲ್ಲಿದೆ 5 ಪರಿಹಾರ

Published On - 10:45 am, Fri, 4 February 22