ಬೆಂಗಳೂರು: ಸಕ್ರಿಯ ಕೋವಿಡ್-19 (COVID-19) ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಕಳೆದೊಂದು ವಾರದಿಂದ ಹೆಚ್ಚಾಗುತ್ತಿದ್ದು, 600ರ ಗಡಿ ದಾಟಿದೆ. ಈ ಮಧ್ಯೆ ಕರ್ನಾಟಕ (Karnataka) ಸೇರಿದಂತೆ ಐದು ರಾಜ್ಯಗಳಿಗೆ ಕೋವಿಡ್ ಪ್ರಸರಣ ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ರಾಜ್ಯದಲ್ಲಿ ವಾರದ ಕೋವಿಡ್ ಪ್ರಕರಣಗಳ ಸಂಖ್ಯೆ 493ರಿಂದ 604ಕ್ಕೆ ಏರಿಕೆಯಾಗಿರುವುದು ಆರೋಗ್ಯ ಕಾರ್ಯದರ್ಶಿ ಪತ್ರದಿಂದ ತಿಳಿದುಬಂದಿದೆ. ಮಾರ್ಚ್ 15ಕ್ಕೆ ಕೊನೆಗೊಂಡ ವಾರದಲ್ಲಿ ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ 2.77 ಇತ್ತು.
ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಮಾರ್ಚ್ 8ಕ್ಕೆ ಕೊನೆಗೊಂಡ ವಾರಕ್ಕೆ ಹೋಲಿಸಿದರೆ 15ಕ್ಕೆ ಕೊನೆಗೊಂಡ ವಾರದಲ್ಲಿ ಪ್ರಕರಣಗಳಲ್ಲಿ ಏರಿಕೆ ದಾಖಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಪತ್ರ ಉಲ್ಲೇಖಿಸಿದೆ.
ಮಾರ್ಚ್ 10ರ ಶುಕ್ರವಾರದಿಂದ ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 468ರಿಂದ 587ಕ್ಕೆ ಹೆಚ್ಚಳವಾಗಿದೆ. ಆದರೆ, ಸಾವಿನ ಸಂಖ್ಯೆ ಕಡಿಮೆ ಇದೆ. ಮಾರ್ಚ್ 11ರಿಂದ 15ರ ಅವಧಿಯಲ್ಲಿ ದೈನಂದಿನ ಪಾಸಿಟಿವಿಟಿ ಸಂಖ್ಯೆ 100 ದಾಟಿದೆ.
ದೈನಂದಿನ ಹಾಗೂ ವಾರದ ಪಾಸಿಟಿವಿಟಿ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇದೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ 4.53 ಇದ್ದು, ವಿಶ್ವ ಆರೋಗ್ಯ ಸಂಸ್ಥೆಯ ಮಿತಿಯ ಒಳಗೆಯೇ ಇದೆ. ಕಳೆದ ಏಳು ದಿನಗಳಲ್ಲಿ ರಾಜ್ಯದಲ್ಲಿ ಸರಾಸರಿ 3,426 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.
ಇದನ್ನೂ ಓದಿ: COVID Vaccine: ಕೋವಿಡ್ ಲಸಿಕೆ ಯಾವುದೇ ಅಡ್ಡ ಪರಿಣಾಮವನ್ನುಂಟು ಮಾಡಿಲ್ಲ
ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮೌಲ್ಯಮಾಪನ ಆಧಾರಿತ ವಿಧಾನವನ್ನು ಅನುಸರಿಸಲು ಕೇಂದ್ರ ಸರ್ಕಾರವು ಆರು ರಾಜ್ಯಗಳಿಗೆ ಗುರುವಾರ ಸೂಚಿಸಿತ್ತು. ಈ ವಿಚಾರವಾಗಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಕರ್ನಾಟಕಕ್ಕೆ ಪತ್ರ ಮುಖೇನ ಸೂಚನೆ ನೀಡಿದ್ದರು.
ಮಹಾರಾಷ್ಟ್ರದಲ್ಲಿ ಮಾರ್ಚ್ 8ಕ್ಕೆ ಕೊನೆಗೊಂಡ ವಾರದಲ್ಲಿ 355, ಮಾರ್ಚ್ 15ಕ್ಕೆ ಕೊನೆಗೊಂಡ ವಾರದಲ್ಲಿ 668 ಪ್ರಕರಣಗಳು ದಾಖಲಾಗಿದ್ದವು. ಮಾರ್ಚ್ 15ಕ್ಕೆ ಕೊನೆಗೊಂಡ ವಾರದಲ್ಲಿ ರಾಜ್ಯದಲ್ಲಿ ಶೇಕಡಾ 1.92 ರಷ್ಟು ಪಾಸಿಟಿವಿಟಿ ದಾಖಲಾಗಿತ್ತು. ಇದೇ ಅವಧಿಯಲ್ಲಿ ದೇಶದ ಒಟ್ಟಾರೆ ಪಾಸಿಟಿವಿಟಿ ದರ ಶೇ 0.61 ಆಗಿತ್ತು.
ಮಾರ್ಚ್ 8ಕ್ಕೆ ಕೊನೆಗೊಂಡ ವಾರದಲ್ಲಿ ಗುಜರಾತ್‌ನಲ್ಲಿ 105 ಪ್ರಕರಣಗಳು ದಾಖಲಾಗಿದ್ದು ಮಾರ್ಚ್ 15ಕ್ಕೆ ಕೊನೆಗೊಂಡ ವಾರದಲ್ಲಿ 279ಕ್ಕೆ ಏರಿಕೆಯಾಗಿತ್ತು. ಮಾರ್ಚ್ 15ಕ್ಕೆ ಕೊನೆಗೊಂಡ ವಾರದಲ್ಲಿ ರಾಜ್ಯದಲ್ಲಿ ಶೇ 1.11ರ ಪಾಸಿಟಿವಿಟಿ ವರದಿಯಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ