
ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಸಕ್ಕರೆಯ ಬದಲಿಗೆ ಬೆಲ್ಲ ಮತ್ತು ಖರ್ಜೂರವನ್ನು ಆಹಾರದಲ್ಲಿ ಬಳಸಲು ಆರಂಭಿಸಿದ್ದಾರೆ. ಇವೆರಡೂ ಸಕ್ಕರೆಗಿಂತ ಉತ್ತಮ ಪರ್ಯಾಯಗಳಾಗಿದ್ದರೂ, ತೂಕ ಇಳಿಸಿಕೊಳ್ಳುವವರಿಗೆ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಹುಟ್ಟುಕೊಳ್ಳುತ್ತದೆ. ಆರೋಗ್ಯ ತಜ್ಞರ ಅಭಿಪ್ರಾಯ ಹಾಗೂ ವಿವಿಧ ಅಧ್ಯಯನಗಳ ಪ್ರಕಾರ, ಖರ್ಜೂರ ಮತ್ತು ಬೆಲ್ಲ ಎರಡಕ್ಕೂ ತಮ್ಮದೇ ಆದ ಆರೋಗ್ಯ ಲಾಭಗಳಿದ್ದರೂ, ಅವುಗಳನ್ನು ಸೇವಿಸುವ ವಿಧಾನ ಬಹಳ ಮುಖ್ಯವಾಗುತ್ತದೆ. ಹಾಗಾದರೆ ಇವೆರಡರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಯಾವುದರ ಸೇವನೆ ಮಾಡುವುದು ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಖರ್ಜೂರದಲ್ಲಿ ನಾರಿನಾಂಶ (ಫೈಬರ್), ಪೊಟ್ಯಾಶಿಯಂ, ಮೆಗ್ನೀಷಿಯಂ, ಕಬ್ಬಿಣ, ಆ್ಯಂಟಿಆಕ್ಸಿಡೆಂಟ್‌ಗಳು ಸಾಕಷ್ಟು ಇರುತ್ತವೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಿ ನಡೆಯುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವು ಏಕಾಏಕಿ ಏರುವುದನ್ನು ತಡೆಯಲು ಸಹಕಾರಿ.
ಬೆಲ್ಲವು ಕಬ್ಬು ಅಥವಾ ತಾಳೆ ರಸದಿಂದ ತಯಾರಾಗುವ ನೈಸರ್ಗಿಕ ಸಿಹಿ ಪದಾರ್ಥ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಕೆಲವು ಖನಿಜಗಳು ಇದ್ದರೂ, ಫೈಬರ್ ಬಹಳ ಕಡಿಮೆ. ಆದ್ದರಿಂದ ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡಿದರೂ ಹೆಚ್ಚು ಸೇವಿಸಿದರೆ ಕ್ಯಾಲೊರಿಗಳ ಪ್ರಮಾಣವೂ ಹೆಚ್ಚಾಗುತ್ತದೆ.
ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೆ ಖರ್ಜೂರವೇ ಉತ್ತಮ ಆಯ್ಕೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಾರಣ, ಇದರಲ್ಲಿ ಇರುವ ಫೈಬರ್ ಹೊಟ್ಟೆ ತುಂಬಿದ ಅನುಭವವನ್ನು ನೀಡುವುದರಿಂದ ಪದೇ ಪದೇ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ. ಇನ್ನೊಂದೆಡೆ ಬೆಲ್ಲದಲ್ಲಿ ಫೈಬರ್ ಇಲ್ಲದ ಕಾರಣ ಅದು ಬೇಗ ಜೀರ್ಣವಾಗಿ ಮತ್ತೆ ಹಸಿವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ಟೀ, ಕಾಫಿ ಅಥವಾ ಸಿಹಿ ಪದಾರ್ಥಗಳಲ್ಲಿ ಬೆಲ್ಲ ಬಳಸಿದರೆ ತಿಳಿಯದಂತೆ ಹೆಚ್ಚು ಪ್ರಮಾಣದಲ್ಲಿ ಸೇವಿಸುವ ಸಾಧ್ಯತೆ ಇರುತ್ತದೆ.
ಖರ್ಜೂರದ ಗ್ಲೈಸೆಮಿಕ್ ಇಂಡೆಕ್ಸ್ ಮಧ್ಯಮ ಮಟ್ಟದಲ್ಲಿದ್ದು, ರಕ್ತದಲ್ಲಿನ ಗ್ಲೂಕೋಸ್ ಏರಿಳಿತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಬೆಲ್ಲದ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚು ಇರುವುದರಿಂದ ಮಧುಮೇಹ ಅಥವಾ ಪ್ರೀ-ಡಯಾಬಿಟಿಸ್ ಇರುವವರು ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.
ಇದನ್ನೂ ಓದಿ: ರಾತ್ರಿ ಊಟದ ನಂತರ ಈ ತಪ್ಪುಗಳನ್ನು ಮಾಡಬೇಡಿ; ಜೀರ್ಣಕ್ರಿಯೆ ಹಾಳಾಗಬಹುದು
ಪೌಷ್ಟಿಕ ತಜ್ಞರ ಪ್ರಕಾರ, ತೂಕ ಇಳಿಸಿಕೊಳ್ಳುವವರು ದಿನಕ್ಕೆ 1–2 ಖರ್ಜೂರ ಅಥವಾ 1 ಟೀಸ್ಪೂನ್‌ಗಿಂತ ಕಡಿಮೆ ಬೆಲ್ಲ ಸೇವಿಸಿದರೆ ಸಾಕು. ಮಧುಮೇಹ, ಫ್ಯಾಟಿ ಲಿವರ್ ಅಥವಾ ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆಯೊಂದಿಗೆ ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತ.
ಗಮನಿಸಿ: ಬೆಲ್ಲ ಮತ್ತು ಖರ್ಜೂರ ಎರಡೂ ನೈಸರ್ಗಿಕ ಸಿಹಿ ಪದಾರ್ಥಗಳೇ ಹೊರತು “ಸಕ್ಕರೆ ರಹಿತ” ಆಹಾರವಲ್ಲ. ಆದ್ದರಿಂದ ಮಿತ ಪ್ರಮಾಣವೇ ಆರೋಗ್ಯಕರ ಆಯ್ಕೆ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನೀರಿನ ಸೇವನೆಯೊಂದಿಗೆ ಇವುಗಳನ್ನು ಬಳಸಿದಾಗ ಮಾತ್ರ ತೂಕ ನಿಯಂತ್ರಣದಲ್ಲಿದ್ದು ಉತ್ತಮ ಫಲಿತಾಂಶ ದೊರೆಯುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ