AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಊಟದ ನಂತರ ಈ ತಪ್ಪುಗಳನ್ನು ಮಾಡಬೇಡಿ; ಜೀರ್ಣಕ್ರಿಯೆ ಹಾಳಾಗಬಹುದು

ಆರೋಗ್ಯವಾಗಿರಲು ಕೇವಲ ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಆಹಾರ ಸೇವನೆ ಮಾಡಿದರೆ ಸಾಲುವುದಿಲ್ಲ. ಬದಲಾಗಿ ಊಟದ ನಂತರ ನೀವು ಅನುಸರಿಸುವ ಅಭ್ಯಾಸಗಳು ಸಹ ನಿಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಊಟವಾದ ತಕ್ಷಣ ಮಲಗುವುದು, ವ್ಯಾಯಾಮ ಮಾಡುವುದು, ಹೆಚ್ಚು ನೀರು ಕುಡಿಯುವುದು ಅಥವಾ ತಮ್ಮ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಅಂಟಿಕೊಂಡಿರುವುದು ಮುಂತಾದ ಅಭ್ಯಾಸಗಳು ಜೀರ್ಣಕ್ರಿಯೆಯನ್ನು ಹಾಳುಮಾಡಬಹುದು.

ರಾತ್ರಿ ಊಟದ ನಂತರ ಈ ತಪ್ಪುಗಳನ್ನು ಮಾಡಬೇಡಿ; ಜೀರ್ಣಕ್ರಿಯೆ ಹಾಳಾಗಬಹುದು
ಕರುಳಿನ ಆರೋಗ್ಯImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 15, 2026 | 7:53 PM

Share

ಮುಖ್ಯಾಂಶಗಳು

  • ಕರುಳಿನ ಆರೋಗ್ಯಕ್ಕೆ ಊಟದ ನಂತರದ ಈ ಅಭ್ಯಾಸಗಳು ಬಹಳ ಮುಖ್ಯ
  • ಊಟದ ಬಳಿಕ ಈ ತಪ್ಪುಗಳನ್ನು ಮಾಡಬೇಡಿ; ಜೀರ್ಣಕ್ರಿಯೆ ಹಾಳಾಗಬಹುದು!
  • ಜೀರ್ಣಕ್ರಿಯೆ ಉತ್ತಮವಾಗಿರಬೇಕೇ? ಊಟದ ನಂತರ ಈ ತಪ್ಪುಗಳನ್ನು ಮಾಡಬೇಡಿ

ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯಕರ ಆಹಾರ ಸೇವಿಸುವುದು ಎಷ್ಟು ಮುಖ್ಯವೋ, ಆಹಾರ ಸೇವಿಸಿದ ನಂತರ ಪಾಲಿಸುವ ಅಭ್ಯಾಸಗಳೂ ಅಷ್ಟೇ ಮುಖ್ಯ. ಹಲವರು ರಾತ್ರಿ ಊಟ ಮಾಡಿದ ತಕ್ಷಣವೇ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ, ಆಸಿಡ್ ರಿಫ್ಲಕ್ಸ್, ಗ್ಯಾಸ್ಟ್ರಿಕ್ ಹಾಗೂ ನಿದ್ರೆ ಸರಿಯಾಗಿ ಬರದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲಿಯೂ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಊಟದ ನಂತರದ ಮೊದಲ 2– 3 ಗಂಟೆಗಳು ಜೀರ್ಣಕ್ರಿಯೆಗೆ ಅತ್ಯಂತ ಪ್ರಮುಖ ಸಮಯವಾಗಿದ್ದು ಈ ಸಮಯದಲ್ಲಿ ಕೆಲವು ಆರೋಗ್ಯ ಹಾಳು ಮಾಡುವ ಅಭ್ಯಾಸಗಳನ್ನು ರೂಢಿಸಿಕೊಳ್ಳಬಾರದು.

ಊಟ ಮಾಡಿದ ತಕ್ಷಣ ಈ ತಪ್ಪುಗಳನ್ನು ಮಾಡಬೇಡಿ

ತಕ್ಷಣ ಮಲಗಬೇಡಿ: ರಾತ್ರಿ ಊಟ ಮಾಡಿದ ಕೂಡಲೇ ಮಲಗುವುದರಿಂದ ಹೊಟ್ಟೆಯಲ್ಲಿರುವ ಆಮ್ಲವು ಆಹಾರ ನಾಳದ ಕಡೆಗೆ ಮರಳುವ (Acid Reflux) ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಎದೆ ಉರಿ, ಗಂಟಲಲ್ಲಿ ಉರಿ ಮತ್ತು ಅಜೀರ್ಣದ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಮಲಗುವ ಮೊದಲು ಕನಿಷ್ಠ 2– 3 ಗಂಟೆಗಳ ಅಂತರ ಇರಲಿ.

ವ್ಯಾಯಾಮ ಬೇಡ: ಊಟದ ನಂತರ ತಕ್ಷಣ ಜಿಮ್, ಓಟ ಅಥವಾ ಹೆಚ್ಚು ಶ್ರಮದ ವ್ಯಾಯಾಮ ಮಾಡುವುದರಿಂದ ಹೊಟ್ಟೆನೋವು, ವಾಕರಿಕೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಭಾರೀ ವ್ಯಾಯಾಮ ಮಾಡಲು 1.5 ರಿಂದ 2 ಗಂಟೆಗಳ ಅಂತರ ಇರಬೇಕು.

ಒಂದೇ ಬಾರಿ ಹೆಚ್ಚು ನೀರು ಕುಡಿಯಬೇಡಿ: ಊಟದ ತಕ್ಷಣ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಕೆಲವರಿಗೆ ಹೊಟ್ಟೆ ತುಂಬಿದ ಅನುಭವ, ಉಬ್ಬರ ಮತ್ತು ಅಸಹಜತೆ ಉಂಟಾಗಬಹುದು. ಅಗತ್ಯವಿದ್ದರೆ ಸ್ವಲ್ಪ ಸ್ವಲ್ಪವಾಗಿ ನೀರು ಕುಡಿಯುವುದು ಉತ್ತಮ.

ಧೂಮಪಾನ ಮತ್ತು ಮದ್ಯಪಾನ ತಪ್ಪಿಸಿ: ಊಟದ ತಕ್ಷಣ ಧೂಮಪಾನ ಅಥವಾ ಮದ್ಯಪಾನ ಮಾಡುವುದರಿಂದ ಜೀರ್ಣಾಂಗಗಳ ಮೇಲೆ ಒತ್ತಡ ಹೆಚ್ಚಾಗಿ ಗ್ಯಾಸ್ಟ್ರಿಕ್ ಹಾಗೂ ಆಸಿಡ್ ಸಮಸ್ಯೆಗಳು ಹೆಚ್ಚಾಗಬಹುದು.

ಅತಿಯಾಗಿ ತಿನ್ನಬೇಡಿ: ಒಂದೇ ಬಾರಿ ಅತಿಯಾಗಿ ಆಹಾರ ಸೇವಿಸುವುದರಿಂದ ಹೊಟ್ಟೆ ಭಾರವಾಗುವುದು, ಗ್ಯಾಸ್, ಅಜೀರ್ಣ ಮತ್ತು ತೂಕ ಹೆಚ್ಚುವ ಸಾಧ್ಯತೆ ಹೆಚ್ಚಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಸಮತೋಲಿತ ಆಹಾರ ಸೇವಿಸುವುದು ಉತ್ತಮ.

ಇದನ್ನೂ ಓದಿ: ಗಾಣದ ಎಣ್ಣೆ Vs ರಿಫೈನ್ಡ್ ಎಣ್ಣೆ: ಆರೋಗ್ಯಕ್ಕೆ ಯಾವುದು ಒಳ್ಳೆಯದು ತಿಳಿದುಕೊಳ್ಳಿ

ಊಟದ ನಂತರ ಏನು ಮಾಡಬೇಕು?

  • 10– 15 ನಿಮಿಷ ನಿಧಾನವಾಗಿ ನಡೆಯಿರಿ.
  • ಆಹಾರವನ್ನು ಚೆನ್ನಾಗಿ ಜಗಿದು ಸೇವಿಸಿ.
  • ಊಟವಾದ ತಕ್ಷಣ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮುಂದೆ ದೀರ್ಘ ಸಮಯ ಕುಳಿತುಕೊಳ್ಳಬೇಡಿ.
  • ಹಣ್ಣುಗಳನ್ನು ಊಟದ ತಕ್ಷಣ ಸೇವಿಸುವ ಬದಲು 1- 2 ಗಂಟೆಗಳ ನಂತರ ಸೇವಿಸಿ.
  • ಪ್ರತಿದಿನ ಒಂದೇ ಸಮಯಕ್ಕೆ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ಜೀರ್ಣಕ್ರಿಯೆ ಸರಿಯಾಗಿ ಇರಲು ಈ ಸಲಹೆಗಳನ್ನು ಪಾಲಿಸಿ:

ಆಹಾರದಲ್ಲಿ ಫೈಬರ್, ಪ್ರೋಟೀನ್ ಮತ್ತು ತರಕಾರಿಗಳನ್ನು ಸಮತೋಲನವಾಗಿ ಸೇರಿಸುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರಾತ್ರಿ ವೇಳೆ ಅತಿಯಾದ ಎಣ್ಣೆ, ಕರಿದ ಆಹಾರ ಹಾಗೂ ಸಕ್ಕರೆ ಅಧಿಕ ಇರುವ ಸಿಹಿತಿಂಡಿಗಳನ್ನು ಕಡಿಮೆ ಮಾಡುವುದು ಉತ್ತಮ. ಗ್ರೀನ್ ಟೀ ಅಥವಾ ಕಾಫಿಯನ್ನು ಊಟದ ತಕ್ಷಣ ಕುಡಿಯುವುದಕ್ಕಿಂತ ಕನಿಷ್ಠ ಒಂದು ಗಂಟೆಯ ನಂತರ ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಊಟದ ನಂತರ ಪದೇಪದೇ ಎದೆ ಉರಿ, ಹೊಟ್ಟೆ ಉಬ್ಬರ, ಅಜೀರ್ಣ, ಗ್ಯಾಸ್ಟ್ರಿಕ್, ವಾಕರಿಕೆ ಅಥವಾ ಆಹಾರ ನುಂಗಲು ತೊಂದರೆ ಕಾಣಿಸಿಕೊಂಡರೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಅಥವಾ ಅರ್ಹ ವೈದ್ಯರನ್ನು ಸಂಪರ್ಕಿಸಬೇಕು. ಸರಿಯಾದ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯೇ ಉತ್ತಮ ಆರೋಗ್ಯದ ಗುಟ್ಟು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us