ಮಧುಮೇಹವು ಒಂದು ದೊಡ್ಡ ಸಮಸ್ಯೆಯಾಗಿದ್ದು, ಜಗತ್ತಿನಾದ್ಯಂತ ಸಾಕಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಗ್ಲೂಕೋಸ್ ಅಥವಾ ಸಕ್ಕರೆಯ ಮಟ್ಟವು ಅತಿಯಾಗಿ ಹೆಚ್ಚಾದಾಗ ಈ ಕಾಯಿಲೆ ಉಂಟಾಗುತ್ತದೆ. ಇದು ಮೂತ್ರಪಿಂಡ ವೈಫಲ್ಯ ಮತ್ತು ಪಾರ್ಶ್ವವಾಯು ಮುಂತಾದ ಇತರ ತೀವ್ರ ಸಮಸ್ಯೆಗಳಿಗೆ ಕಾರಣವಾಗಬಹುದು.
ಈ ಕಾಯಿಲೆಯ ಬಗ್ಗೆ ಜಗತ್ತಿನಾದ್ಯಂತ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲದೊಂದಿಗೆ 1991 ರಲ್ಲಿ ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್ ಈ ದಿನವನ್ನು ಪ್ರಸ್ತಾಪಿಸಿತು ಮತ್ತು 2006 ರ ನಂತರ ಅಧಿಕೃತವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಆದ್ದರಿಂದ, ನೀವು ಮಧುಮೇಹಿಗಳಾಗಿದ್ದರೆ, ನಿಮ್ಮ ಆಹಾರ ಪದ್ಧತಿಯನ್ನು ನೀವು ಜಾಗೃತಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಜೊತೆಗೆ ನಿಮ್ಮ ರಕ್ತದಲ್ಲಿನ ಗ್ಲೂಕೋಸ್, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೇಗೆ ನಿರ್ವಹಿಸುವುದು ಎಂಬುದರ ಬಗ್ಗೆ ತಿಳಿದಿರಬೇಕು.
ವಿಶ್ವ ಮಧುಮೇಹ ದಿನದ ಸಂದರ್ಭದಲ್ಲಿ, ಮಧುಮೇಹ ಇರುವವರಿಗೆ ಪ್ರಯೋಜನಕಾರಿಯಾದ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ.
ಸಿಟ್ರಸ್ ಹಣ್ಣುಗಳು:
ಕಿತ್ತಳೆ ಮತ್ತು ನಿಂಬೆ ಹಣ್ಣುಗಳು ತಾಜಾತನ ಮತ್ತು ಹುಳಿ ರುಚಿಗೆ ಹೆಸರುವಾಸಿಯಾಗಿದೆ. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, ಸಿಟ್ರಸ್ ಹಣ್ಣುಗಳು ಪೊಟ್ಯಾಸಿಯಮ್ ಮತ್ತು ಫೋಲೇಟ್ ಜೊತೆಗೆ ಆರೋಗ್ಯಕರ ಫೈಬರ್ ಅನ್ನು ಹೊಂದಿರುತ್ತವೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಯೋಗರ್ಟ್:
ನೀವು ಮಧುಮೇಹಿಗಳಾಗಿದ್ದರೆ, ನಿಮ್ಮ ಆಹಾರದಲ್ಲಿ ಯೋಗರ್ಟ್ ಸೇರಿಸಿಕೊಳ್ಳಿ. ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ (HSPH) ಸಂಶೋಧಕರು ನಡೆಸಿದ ಅಧ್ಯಯನವು ಯೋಗರ್ಟ್ ಸೇವನೆಯು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ. ಜೊತೆಗೆ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗಳು ಸಮೃದ್ಧವಾಗಿದ್ದು ಆರೋಗ್ಯವನ್ನು ಸುಧಾರಿಸುತ್ತದೆ.
ಚಿಯಾ ಬೀಜಗಳು:
ಚಿಯಾ ಬೀಜಗಳು ತೂಕ ನಷ್ಟಕ್ಕೆ ಸಹಾಯ ಮಾಡುವ ಪರಿಣಾಮಕಾರಿ ಸೂಪರ್‌ಫುಡ್ ಎಂದು ಹೇಳಲಾಗುತ್ತದೆ. ಮಧುಮೇಹವನ್ನು ನಿಭಾಯಿಸಲು ಚಿಯಾ ಬೀಜಗಳು ಸಹ ನಿಮಗೆ ಸಹಾಯ ಮಾಡಬಹುದು ಎಂದು ತಜ್ಞರು ಸೂಚಿಸುತ್ತಾರೆ. ಅವು ಉತ್ಕರ್ಷಣ ನಿರೋಧಕಗಳು, ಒಮೆಗಾ -3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಫೈಬರ್ ಅನ್ನು ಹೊಂದಿರುತ್ತವೆ. ಈ ಪೋಷಕಾಂಶಗಳು ಮಧುಮೇಹದ ಅಪಾಯವನ್ನು ಮತ್ತು ಅದಕ್ಕೆ ಸಂಬಂಧಿಸಿದ ತೊಡಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಡ್ರೈ ಫ್ರೂಟ್ಸ್:
ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಅಲ್ಲದೆ, ಮಧುಮೇಹ ಉರಿಯೂತ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನು ಓದಿ: ಮಧುಮೇಹ ಮತ್ತು ಕ್ಯಾನ್ಸರ್ ಕಾಯಿಲೆಗಳನ್ನು ನಿರ್ವಹಿಸಲು ಚುಚ್ಚುಮದ್ದು ಅಗತ್ಯವಿಲ್ಲ
ಧಾನ್ಯಗಳು:
ನೀವು ಮಧುಮೇಹಿಗಳಾಗಿದ್ದರೆ, ಬಾರ್ಲಿ ಮತ್ತು ಓಟ್ಸ್‌ನಂತಹ ಧಾನ್ಯಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಾಗದಂತೆ ತಡೆಯುತ್ತದೆ. ಧಾನ್ಯಗಳು ವಿಟಮಿನ್ ಬಿ, ಕಬ್ಬಿಣ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದ್ದು, ಅತ್ಯಂತ ಪ್ರಯೋಜನಕಾರಿಯಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: