
ಸಾಮಾನ್ಯವಾಗಿ ಪಾದಗಳು ಚಳಿಗೆ ತಣ್ಣಗಾಗುತ್ತವೆ ಎಂದು ಅನೇಕರು ಭಾವಿಸುತ್ತಾರೆ. ಸಾಕ್ಸ್ ಹಾಕಿಕೊಂಡು, ದಪ್ಪದ ಹೊದಿಕೆ ಹೊದ್ದು ಕುಳಿತರು ಕೂಡ ಪಾದ ಬೆಚ್ಚಗಾಗುವುದಿಲ್ಲ. ಆದರೆ ಇದನ್ನು ಹವಾಮಾನದ ಪರಿಣಾಮ ಎಂದು ಪರಿಗಣಿಸಿ ನಿರ್ಲಕ್ಷಿಸುವವರ ಸಂಖ್ಯೆಯೇ ಹೆಚ್ಚಾಗಿದೆ. ಕೆಲವೊಮ್ಮೆ ಈ ರೀತಿಯ ಸಂಕೇತ ಅನಾರೋಗ್ಯದ ಮುನ್ಸೂಚನೆಯೂ ಆಗಿರಬಹುದು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಹೌದು, ಇದು ಮಧುಮೇಹದ (Diabetes) ಲಕ್ಷಣವೂ ಆಗಿರಬಹುದು. ಆದರೆ ಪಾದಗಳು ತಂಪಾಗುವುದಕ್ಕೆ ಕೇವಲ ಮಧುಮೇಹವೂ ಕಾರಣವಲ್ಲ. ಒಬ್ಬ ವ್ಯಕ್ತಿಯಲ್ಲಿ ಪಾದಗಳು ತಣ್ಣಗಾಗುವ (Cold Feet) ಸಮಸ್ಯೆ ದೀರ್ಘಕಾಲದಿಂದ ಪದೇ ಪದೇ ಕಂಡುಬರುತ್ತಿದ್ದರೆ ಅಥವಾ ಇತರ ದೈಹಿಕ ಬದಲಾವಣೆಗಳೊಂದಿಗೆ ಇದ್ದರೆ, ಜಾಗರೂಕರಾಗಿರುವುದು ಅಗತ್ಯವಾಗುತ್ತದೆ.
ಲೇಡಿ ಹಾರ್ಡಿಂಜ್ ಆಸ್ಪತ್ರೆಯ ಡಾ. ಎಲ್.ಎಚ್. ಘೋಟೇಕರ್ ತಿಳಿಸಿರುವ ಮಾಹಿತಿ ಪ್ರಕಾರ, ಮಧುಮೇಹ, ರಕ್ತದ ಸಕ್ಕರೆ ಮಟ್ಟದ ಹೆಚ್ಚಳದಿಂದ ನರ ಮತ್ತು ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಇದು ಮರಗಟ್ಟುವಿಕೆ, ಜುಮ್ಮೆನಿಸುವಿಕೆ, ಸುಡುವಿಕೆ ಅಥವಾ ಪಾದಗಳಲ್ಲಿ ತಂಪು ಭಾವನೆ ಉಂಟಾಗಲು ಕಾರಣವಾಗುತ್ತದೆ, ಇವುಗಳ ಜೊತೆಗೆ ಪಾದಗಳಲ್ಲಿ ಪುನರಾವರ್ತಿತ ನೋವು, ಒಣ ಚರ್ಮ, ಗಾಯಗಳು ನಿಧಾನವಾಗಿ ಗುಣವಾಗುವುದು ಅಥವಾ ಆಯಾಸ ಕೂಡ ಮಧುಮೇಹದ ಲಕ್ಷಣಗಳಾಗಿರಬಹುದು. ಈ ಲಕ್ಷಣಗಳು ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಏಕೆಂದರೆ ಈ ಸಮಯದಲ್ಲಿ ರಕ್ತದ ಹರಿವು ನಿಧಾನವಾಗಿರುತ್ತದೆ. ಆದರೆ ಪಾದಗಳು ತಣ್ಣಗಾದ ಮಾತ್ರಕ್ಕೆ ಮಧುಮೇಹ ಬಂದಿದೆ ಎಂದಲ್ಲ. ಆದರೆ ಈ ರೀತಿ ಆಗುವುದರ ಜೊತೆಗೆ ಅತಿಯಾದ ಬಾಯಾರಿಕೆ, ಆಗಾಗ ಮೂತ್ರ ವಿಸರ್ಜನೆ ಅಥವಾ ತೂಕದಲ್ಲಿ ಬದಲಾವಣೆಗಳಂತಹ ಲಕ್ಷಣಗಳೊಂದಿಗೆ ಇದ್ದರೆ, ಪರೀಕ್ಷೆಗೆ ಒಳಗಾಗುವುದು ಬಹಳ ಮುಖ್ಯವಾಗುತ್ತದೆ.
ಪಾದಗಳು ತಂಪಾಗುವುದು ಮಧುಮೇಹದ ಸಂಕೇತ ಮಾತ್ರವಲ್ಲ, ರಕ್ತ ಪರಿಚಲನೆ ಸರಿಯಾಗಿ ಆಗದಿದ್ದಾಗಲೂ ಈ ರೀತಿಯ ಸಂಕೇತಗಳು ಕಂಡುಬರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ರಕ್ತ ಪಾದವನ್ನು ತಲುಪದಿದ್ದಾಗ, ಅವು ತಣ್ಣಗಾಗಲು ಪ್ರಾರಂಭಿಸುತ್ತವೆ. ಈ ಸಮಸ್ಯೆಯು ದೀರ್ಘಕಾಲ ಕುಳಿತುಕೊಳ್ಳುವುದು, ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ ಅಥವಾ ವಯಸ್ಸಾಗುವುದರಿಂದಲೂ ಉಂಟಾಗಬಹುದು.
ಸಾಮಾನ್ಯವಾಗಿ ಚಳಿಗಾಲದಲ್ಲಿ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ, ರಕ್ತದ ಹರಿವು ಕಡಿಮೆಯಾಗುತ್ತದೆ. ಪರಿಣಾಮವಾಗಿ, ಪಾದಗಳ ಮೇಲಿನ ಚರ್ಮವು ತಣ್ಣಗಾಗಿ, ಸ್ವಲ್ಪ ನೀಲಿ ಬಣ್ಣದಲ್ಲಿ ಕಾಣಿಸಬಹುದು. ಕೆಲವೊಮ್ಮೆ, ಸೌಮ್ಯ ನೋವು ಅಥವಾ ಸೆಳೆತವೂ ಕಂಡುಬರಬಹುದು. ಆದರೆ ಪಾದ ಭಾರವಾಗಿ ನಡೆಯಲು ತೊಂದರೆಯಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು.
ಇದನ್ನೂ ಓದಿ: ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಕೈ ಕಾಲು ಮರಗಟ್ಟುವಿಕೆಗೆ ನರದ ಸಮಸ್ಯೆ ಕಾರಣವೇ; ಈ ಬಗ್ಗೆ ತಜ್ಞರು ಏನನ್ನುತ್ತಾರೆ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ