ನವದೆಹಲಿ: ದೇಶದಾದ್ಯಂತ ಕಳೆದ ಎರಡು ತಿಂಗಳುಗಳಿಂದ ಶೀತ ಜ್ವರ (Influenza) ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ. ದೀರ್ಘ ಕಾಲದ ಅನಾರೋಗ್ಯ, ಕೆಮ್ಮುವಿಗೆ ಕಾಣವಾಗುವುದರ ಜತೆಗೆ ರೋಗಲಕ್ಷಣಗಳೂ ಹೆಚ್ಚು ಕಾಣಿಸುತ್ತಿವೆ. ಕೋವಿಡ್ ಸಾಂಕ್ರಾಮಿಕದ ನಂತರ ಇದೀಗ ಶೀತ ಜ್ವರ ಪ್ರಕರಣಗಳು ಹೆಚ್ಚಾಗಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಸಲಹಾ ಟಿಪ್ಪಣಿಯೊಂದನ್ನೂ ಐಸಿಎಂಆರ್ ಬಿಡುಗಡೆ ಮಾಡಿದೆ. ಇನ್‌ಫ್ಲುಯೆಂಜಾ ಎ ಸಬ್‌ಟೈಪ್ ಎಚ್3ಎನ್2 ವೈರಸ್ನಿಂದಾಗಿ (H3N2 virus) ಈ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ ಎಂದು ಅದು ತಿಳಿಸಿದೆ. ಎಚ್3ಎನ್2 ವೈರಸ್ನಿಂದ ಉಂಟಾಗುವ ಸೋಂಕು ಪ್ರಕರಣಗಳಲ್ಲಿ ಇತರ ಉಪ ತಳಿಗಳ ಸೋಂಕುಗಳಿಗಿಂತಲೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ. ಕಳೆದ 2-3 ತಿಂಗಳುಗಳಲ್ಲಿ ಈ ಸೋಂಕು ಹರಡುವಿಕೆ ಹೆಚ್ಚಾಗಿದೆ ಎಂದು ಐಸಿಎಂಆರ್ ತಜ್ಞರು ಹೇಳಿದ್ದಾರೆ.
ನಿರಂತರ ಕೆಮ್ಮು, ಜ್ವರ ಈ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ಇತ್ತೀಚೆಗೆ ವರದಿಯಾದ ಪ್ರಕರಣಗಳಲ್ಲಿ ಸೋಂಕಿತರು ದೀರ್ಘ ಕಾಲದ ವರೆಗೆ ರೋಗ ಲಕ್ಷಣ ಹೊಂದಿರುವುದು ಕಂಡುಬಂದಿದೆ ಎಂದು ಐಸಿಎಂಆರ್ ಹೇಳಿದೆ. ಸೋಂಕು ಕಡಿಮೆಯಾಗಲು ಸಮಯ ತೆಗೆದುಕೊಳ್ಳುತ್ತಿದೆ. ರೋಗಲಕ್ಷಣಗಳು ಬಲವಾಗಿರುತ್ತವೆ. ರೋಗಿಯ ಚೇತರಿಕೆಯ ನಂತರವೂ ರೋಗಲಕ್ಷಣಗಳು ದೀರ್ಘಕಾಲದವರೆಗೆ ಇರುತ್ತವೆ ಎಂದು ತಜ್ಞ ವೈದ್ಯ ಡಾ. ಅನುರಾಗ್ ಮೆಹ್ರೋತ್ರಾ ತಿಳಿಸಿದ್ದಾರೆ.
ಜ್ವರ, ಶೀತ, ಕಫ ಮತ್ತಿತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕೂಡಲೇ, ಅನಿವಾರ್ಯವಲ್ಲದ ಹೊರತು ಆ್ಯಂಟಿಬಯಾಟಿಕ್ಗಳನ್ನು ಸೇವಿಸಬಾರದು. ವೈದ್ಯರು ಕೂಡ ರೋಗಿಗಳಿಗೆ ಆ್ಯಂಟಿಬಯಾಟಿಕ್ಸ್ ತೆಗೆದುಕೊಳ್ಳುವಂತೆ ಸಲಹೆ ನೀಡಬಾರದು ಎಂದು ಭಾರತೀಯ ವೈದ್ಯಕೀಯ ಸಂಘ ಈಗಾಗಲೇ ಎಚ್ಚರಿಕೆ ನೀಡಿದೆ. ಇದನ್ನು ಐಸಿಎಂಆರ್ ಕೂಡ ಪುನರುಚ್ಚರಿಸಿದೆ.
ಇದನ್ನೂ ಓದಿ: ಜ್ವರ, ಶೀತ, ಕಫ ಎಂದು ಮನಬಂದಂತೆ ಆ್ಯಂಟಿಬಯಾಟಿಕ್ ಸೇವಿಸಬೇಡಿ; ಐಎಂಎ ಎಚ್ಚರಿಕೆ
ಎಚ್3ಎನ್2 ಇನ್‌ಫ್ಲುಯೆಂಜಾ ವೈರಸ್ನಿಂದಾಗಿ ಸೋಂಕು ಉಂಟಾದವರಲ್ಲಿ ಕಫ, ವಾಕರಿಕೆ, ವಾಂತಿ, ಗಂಟಲು ಕಿರಿಕಿರಿ, ಜ್ವರ, ಮೈಕೈ ನೋವು, ಭೇದಿ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಈ ಪ್ರಕರಣಗಳಲ್ಲಿ ಇತ್ತೀಚೆಗೆ ಹಠಾತ್ ಹೆಚ್ಚಳ ಕಂಡುಬಂದಿದೆ. ಸೋಂಕು ಸಾಮಾನ್ಯವಾಗಿ ಐದರಿಂದ ಏಳು ದಿನಗಳವರೆಗೆ ಇರುತ್ತದೆ. ಜ್ವರವು ಮೂರು ದಿನಗಳಲ್ಲಿ ಕಡಿಮೆಯಾಗುತ್ತದೆ. ಆದರೆ, ಕೆಮ್ಮು ಮಾತ್ರ ಮೂರು ವಾರಗಳವರೆಗೆ ಇರುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿತ್ತು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ