ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಡಯಾಬಿಟೀಸ್ ರೋಗಿಗಳಿಗೆ ಇರುವ ಒಂದು ದೊಡ್ಡ ಸವಾಲು. ಸಕ್ಕರೆ ಮಟ್ಟ ಹೆಚ್ಚಾದರೆ ಮಧುಮೇಹ ಸಮಸ್ಯೆ ನಿಯಂತ್ರಣವಾಗಲು ಸಾಧ್ಯವೇ ಇಲ್ಲ. ಹೀಗಿದ್ದಾಗ ಮಧುಮೇಹಿಗಳು ಆಹಾರ ಪದಾರ್ಥಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಅದಾಗ್ಯೂ ಮಧುಮೇಹಿಗಳು ತಾವು ಸೇವಿಸುವ ಆಹಾರದ ಬಗ್ಗೆ ಹಲವು ಅನುಮಾನಗಳನ್ನು ಹೊಂದಿರುತ್ತಾರೆ. ಅದರಲ್ಲೂ ಹಣ್ಣುಗಳ ಸೇವನೆಯ ಸಂದರ್ಭದಲ್ಲಿ ಹೆಚ್ಚು ಗೊಂದಲಕ್ಕೆ ಒಳಗಾಗುತ್ತಾರೆ. ಅರಿವಿನ ಕೊರತೆಯಿಂದ ಹಲವು ಬಗೆಯ ಹಣ್ಣುಗಳನ್ನು ತಿಂದು ಅನೇಕರು ಅನಾರೋಗ್ಯಕ್ಕೆ ತುತ್ತಾಗಿದ್ದೂ ಇದೆ. ಇಂತಹ ಸಮಯದಲ್ಲಿ ಮಧುಮೇಹಿಗಳು ಯಾವ ರೀತಿಯ ಹಣ್ಣುಗಳನ್ನು ಸೇವಿಸಬೇಕು? ಯಾವ ಹಣ್ಣುಗಳನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ಈ ಬಗ್ಗೆ ಮಾಹಿತಿ ಇಲ್ಲಿದೆ:
ಮಧುಮೇಹಕ್ಕೆ ಮುಖ್ಯ ಕಾರಣ ದೇಹದಲ್ಲಿ ಹೆಚ್ಚಿನ ಸಕ್ಕರೆ ಅಂಶ. ಆಹಾರದ ಮೂಲಕ ದೇಹದಲ್ಲಿ ಹೆಚ್ಚು ಸಕ್ಕರೆ ಇದ್ದರೆ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿರುವ ಹಣ್ಣುಗಳನ್ನು ಹೆಚ್ಚು ತಿನ್ನಬಾರದು. ಒಂದು ಹಣ್ಣು ಗ್ಲೈಸೆಮಿಕ್ ಇಂಡೆಕ್ಸ್ ಮಟ್ಟ 70-100ರ ನಡುವೆ ಹೊಂದಿದ್ದರೆ ಅಂತಹ ಹಣ್ಣುಗಳು ಮತ್ತು ತರಕಾರಿಗಳು ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿರುತ್ತವೆ. ನೀವು ಮಧುಮೇಹ ಅಥವಾ ರೋಗಲಕ್ಷಣಗಳನ್ನು ಹೊಂದಿದ್ದರೆ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ.
ಯಾವ ಹಣ್ಣುಗಳನ್ನು ತಿನ್ನಬಾರದು?
ಕಲ್ಲಂಗಡಿ, ಒಣದ್ರಾಕ್ಷಿ, ಅನಾನಸ್, ಮಾಗಿದ ಬಾಳೆಹಣ್ಣು, ಕಿತ್ತಳೆ, ಒಣದ್ರಾಕ್ಷಿ, ದ್ರಾಕ್ಷಿ, ಖರ್ಜೂರದಂತಹ ಸಿಹಿ ಹಣ್ಣುಗಳ ಸೇವನೆಯನ್ನು ಆದಷ್ಟು ತಪ್ಪಿಸಿ. ಏಕೆಂದರೆ ಇಂತಹ ಹಣ್ಣುಗಳು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿವೆ. ಇದು ನಿಮ್ಮ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಯಾವ ಹಣ್ಣುಗಳನ್ನು ತಿನ್ನಬಹುದು?
ಪ್ಲಮ್, ಕಿವಿ, ಜಾಮೂನ್‌ಗಳಂತಹ ಹಣ್ಣುಗಳ ಸೇವನೆ ಮಾಡಬಹುದು. ಇವುಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮಟ್ಟವನ್ನು ಹೊಂದಿರುವುದರಿಂದ ಮಧುಮೇಹಿಗಳು ಸೇವನೆ ಮಾಡಬಹುದು.
ಹಣ್ಣುಗಳು ಮಾತ್ರವಲ್ಲ ಇವುಗಳನ್ನೂ ಅವಾಯ್ಡ್ ಮಾಡಿ.
ತಂಪು ಪಾನೀಯಗಳು, ಬಿಳಿ ಬ್ರೆಡ್, ಬಿಳಿ ಅಕ್ಕಿ ಮತ್ತು ಆಲೂಗಡ್ಡೆಗಳಲ್ಲಿ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಮಟ್ಟವನ್ನು ಹೊಂದಿದೆ. ಇಂತಹ ಆಹಾರದ ಸೇವನೆಯನ್ನು ಕೂಡ ಅವಾಯ್ಡ್ ಮಾಡುವುದು ಉತ್ತಮ. ಏಕೆಂದರೆ ಗ್ಲೈಸೆಮಿಕ್ ಇಂಡೆಕ್ಸ್ ಜೊತೆಗೆ, ಹಣ್ಣುಗಳು, ತರಕಾರಿಗಳು ಮತ್ತು ಹೆಚ್ಚಿನ ಕಾರ್ಬೋಹೈಡ್ರೇಟ್ ಮಟ್ಟವನ್ನು ಹೊಂದಿರುವ ಆಹಾರಗಳು ಮಧುಮೇಹ ಹೊಂದಿರುವ ಜನರಿಗೆ ಅಪಾಯವನ್ನುಂಟುಮಾಡುತ್ತವೆ. ಮಾವು, ದ್ರಾಕ್ಷಿ, ಸೇಬು ಮತ್ತು ಬಾಳೆಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುತ್ತದೆ.
(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.)
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:20 am, Tue, 30 August 22