ಕೆಲವರು ಹೊಟ್ಟೆ ಬಿರಿಯುವಷ್ಟು ಊಟ ಮಾಡಿದ ಕೂಡಲೆ ತಣ್ಣನೆಯ ಸೋಡಾವನ್ನೋ, ನೀರನ್ನೋ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಸೋಡಾ ಕುಡಿದರೆ ಜೀರ್ಣಕ್ರಿಯೆ ಸುಲಭವಾಗುತ್ತದೆ ಎಂಬುದು ನಿಜವಾದರೂ ತಣ್ಣನೆಯ ಪಾನೀಯ ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಆರೋಗ್ಯ ಕೆಡುತ್ತದೆ ಎಂಬುದು ಕೂಡ ಸತ್ಯ. ಹೀಗಾಗಿ, ಎಣ್ಣೆ ತಿಂಡಿಗಳನ್ನು ತಿಂದ ನಂತರ ಅಥವಾ ಅತಿಯಾಗಿ ಊಟ ಮಾಡಿದ ನಂತರ ಐಸ್ ಇರುವ ನೀರು, ಐಸ್ ಕ್ರೀಂ, ಕೋಲ್ಡ್ ಜ್ಯೂಸ್ ಕುಡಿಯುವುದು ಒಳ್ಳೆಯ ಅಭ್ಯಾಸವಲ್ಲ.
ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ನಂತರ ಐಸ್ ಕ್ರೀಂನಂತಹ ತಣ್ಣನೆಯ ಆಹಾರವನ್ನು ಸೇವಿಸುವುದರಿಂದ ಯಕೃತ್ತು, ಹೊಟ್ಟೆ ಮತ್ತು ಕರುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಎಣ್ಣೆಯುಕ್ತ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ತಣ್ಣನೆಯ ಆಹಾರದೊಂದಿಗೆ ಅತಿಯಾದ ಆಹಾರ ಅಥವಾ ಎಣ್ಣೆ ಆಹಾರ ಸೇರಿ ಜೀರ್ಣಕ್ರಿಯೆಯನ್ನು ಕಷ್ಟಕರವಾಗಿಸುತ್ತದೆ. ಇದರಿಂದ ನೀವು ಹೊಟ್ಟೆ ನೋವು, ಗ್ಯಾಸ್ಟ್ರಿಕ್, ಮತ್ತು ಅಜೀರ್ಣವನ್ನು ಅನುಭವಿಸಬಹುದು. ಆದ್ದರಿಂದ, ಭಾರೀ ಊಟದ ನಂತರ ತಣ್ಣನೆಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಎಣ್ಣೆಯುಕ್ತ ಆಹಾರ ಸೇವನೆಯ ನಂತರ ಆಲ್ಕೋಹಾಲ್ ಕೂಡ ಸೇವಿಸುವುದು ಒಳ್ಳೆಯದಲ್ಲ.
ಇದನ್ನೂ ಓದಿ: Belly Fat: ಸುಲಭವಾಗಿ ನಿಮ್ಮ ಹೊಟ್ಟೆಯ ಬೊಜ್ಜು ಕರಗಿಸುವ 7 ಆಹಾರಗಳಿವು
ಹಾಗೇ, ಎಣ್ಣೆಯುಕ್ತ ಆಹಾರ ಸೇವನೆಯ ನಂತರ ಮಲಗುವುದನ್ನು ಅವಾಯ್ಡ್ ಮಾಡಿ. ಭಾರೀ ಊಟದ ನಂತರ ನೇರವಾಗಿ ಮಲಗಲು ಹೋಗಬೇಡಿ. ರಾತ್ರಿಯ ಊಟ ಮತ್ತು ಮಲಗುವ ಸಮಯದ ನಡುವೆ ಯಾವಾಗಲೂ 2-3 ಗಂಟೆಗಳ ಅಂತರವನ್ನು ನೀಡಿ. ಊಟವಾದ ತಕ್ಷಣ ಮಲಗುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ ಮತ್ತು ಕೊಬ್ಬಿನ ಶೇಖರಣೆಯನ್ನು ಹೆಚ್ಚಿಸುತ್ತದೆ.
ಎಣ್ಣೆಯುಕ್ತ ಆಹಾರಗಳಲ್ಲಿ ಹೆಚ್ಚಿನ ಕ್ಯಾಲೋರಿಗಳು, ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳಿರುತ್ತವೆ ಎಂಬುದನ್ನು ನೆನಪಿಡಿ. ಇವು ಬೊಜ್ಜು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗೇ, ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಶಮನಗೊಳಿಸಲು ಮತ್ತು ಸಕ್ರಿಯಗೊಳಿಸಲು ಸಹಾಯವಾಗುತ್ತದೆ. ಬಿಸಿನೀರನ್ನು ಕುಡಿಯುವುದರಿಂದ ಪೋಷಕಾಂಶಗಳನ್ನು ಅವುಗಳ ಜೀರ್ಣಕಾರಿ ರೂಪಕ್ಕೆ ಪರಿವರ್ತಿಸಲು ಸಹಾಯ ಮಾಡುತ್ತದೆ. ನೀವು ಸಾಕಷ್ಟು ನೀರು ಕುಡಿಯದಿದ್ದರೆ, ಸಣ್ಣ ಕರುಳು ಜೀರ್ಣಕ್ರಿಯೆಗೆ ಆಹಾರದಿಂದ ನೀರನ್ನು ಹೀರಿಕೊಳ್ಳುತ್ತದೆ, ಇದು ನಿರ್ಜಲೀಕರಣ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ.
ಇದನ್ನೂ ಓದಿ: ನೀವು ಡಯೆಟ್ನಲ್ಲಿದ್ದೀರಾ? ಎಣ್ಣೆ ತಿಂಡಿಗಳನ್ನು ತಿಂದ ಮೇಲೆ ಏನು ಮಾಡಬೇಕು?
ಡಿಟಾಕ್ಸ್ ಪಾನೀಯಗಳು ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ನಂತರ ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಂಗ್ರಹವಾಗುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಡಿಟಾಕ್ಸ್ ಪಾನೀಯಗಳು ವಿಷವನ್ನು ದೇಹದಿಂದ ಹೊರಹಾಕಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತವೆ. ಅತ್ಯುತ್ತಮ ಜೀರ್ಣಕ್ರಿಯೆಗಾಗಿ ಎಣ್ಣೆಯುಕ್ತ ಆಹಾರ ಸೇವನೆಯ ನಂತರ ಕೆಫೀನ್ ಸೇವಿಸುವುದನ್ನು ಅವಾಯ್ಡ್ ಮಾಡಿ.
ಹೊಟ್ಟೆ ತುಂಬ ಊಟ ಮಾಡಿದ ನಂತರ 30 ನಿಮಿಷಗಳ ಕಾಲ ನಡೆಯುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ದೇಹವನ್ನು ವಿಶ್ರಾಂತಿ ಮಾಡಲು ಜಿಡ್ಡಿನ ಆಹಾರವನ್ನು ಸೇವಿಸಿದ ನಂತರ 30 ನಿಮಿಷಗಳ ಕಾಲ ನಿಧಾನವಾಗಿ ನಡೆಯಿರಿ. ಎಣ್ಣೆಯುಕ್ತ ಆಹಾರ ಸೇವನೆಯ ನಂತರ ಭಾರೀ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಡಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ