Heat stroke: ಹೀಟ್ ಸ್ಟ್ರೋಕ್ ನಿರ್ಲಕ್ಷ್ಯವು ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾದೀತು ಎಚ್ಚರ!

| Updated By: ಅಕ್ಷಯ್​ ಪಲ್ಲಮಜಲು​​

Updated on: May 27, 2024 | 4:01 PM

ವರ್ಷದಿಂದ ವರ್ಷಕ್ಕೆ ಭೂಮಿಯ ಮೇಲಿನ ತಾಪ ಹೆಚ್ಚುತ್ತಲೇ ಸಾಗುತ್ತಿದೆ. ತಾಪಮಾನದ ನಿರಂತರ ಏರಿಕೆಯಿಂದಾಗಿ ಜನರು ಅನೇಕ ರೀತಿಯ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಬೇಸಿಗೆ ಬಂತೆಂದರೆ ಸಾಕು ಹೀಟ್ ಸ್ಟ್ರೋಕ್ ನಂತಹ ಪ್ರಕರಣಗಳ ಸಂಖ್ಯೆ ಏರಿಕೆಯಾಗೋದು ಸರ್ವೇ ಸಾಮಾನ್ಯ ಎಂಬಂತ ಸ್ಥಿತಿ ಬಂದೊದಗಿದೆ. ಹಾಗಾದರೆ ಹೀಟ್ ಸ್ಟ್ರೋಕ್ ಲಕ್ಷಣಗಳೇನು? ಇದರಿಂದ ತಪ್ಪಿಸಿಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ.

Heat stroke: ಹೀಟ್ ಸ್ಟ್ರೋಕ್ ನಿರ್ಲಕ್ಷ್ಯವು ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾದೀತು ಎಚ್ಚರ!
Heat Stroke
Follow us on

ಪ್ರಕೃತಿಯಲ್ಲಿನ ಅಸಮತೋಲನದಿಂದಾಗಿ ವರ್ಷದಿಂದ ವರ್ಷಕ್ಕೆ ಭೂಮಿಯ ಮೇಲಿನ ತಾಪ ಹೆಚ್ಚುತ್ತಲೇ ಸಾಗುತ್ತಿದೆ. ತಾಪಮಾನದ ನಿರಂತರ ಏರಿಕೆಯಿಂದಾಗಿ ಜನರು ಅನೇಕ ರೀತಿಯ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಬೇಸಿಗೆ ಬಂತೆಂದರೆ ಸಾಕು ಹೀಟ್ ಸ್ಟ್ರೋಕ್ ನಂತಹ ಪ್ರಕರಣಗಳ ಸಂಖ್ಯೆ ಏರಿಕೆಯಾಗೋದು ಸರ್ವೇ ಸಾಮಾನ್ಯ ಎಂಬಂತ ಸ್ಥಿತಿ ಬಂದೊದಗಿದೆ. ಹಾಗಾದರೆ ಹೀಟ್ ಸ್ಟ್ರೋಕ್ ಲಕ್ಷಣಗಳೇನು? ಇದರಿಂದ ತಪ್ಪಿಸಿಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ.

ಹೀಟ್ ಸ್ಟ್ರೋಕ್ ಲಕ್ಷಣಗಳೇನು?

ತೀವ್ರವಾದ ಬಿಸಿಲಿನ ತಾಪಕ್ಕೆ ದೇಹದ ಉಷ್ಣತೆ ಹೆಚ್ಚುವುದರ ಜೊತೆಗೆ ಚರ್ಮದ ಬಣ್ಣ ಬದಲಾಗುವುದು, ತಲೆನೋವು, ತಲೆ ತಿರುಗುವಿಕೆ, ಅತಿಯಾಗಿ ಬೆವರುವುದು, ತೀವ್ರ ಸುಸ್ತಿನಿಂದ ಕುಸಿದು ಬೀಳುವುದು ಮುಂತಾದವುಗಳನ್ನ ಹೀಟ್ ಸ್ಟ್ರೋಕ್ ಲಕ್ಷಣಗಳೆಂದು ಪರಿಗಣಿಸಲಾಗುತ್ತದೆ. ಇದನ್ನು ಹೀಟ್ ಸ್ಟ್ರೋಕ್, ಸನ್ ಸ್ಟ್ರೋಕ್ ಅಂತಲೂ ಕರೆಯಲಾಗುತ್ತೆ. ಕೆಲವೊಮ್ಮೆ ಇದು ಜೀವಕ್ಕೂ ಅಪಾಯ ತರುವ ಸಾಧ್ಯತೆಗಳು ಇರುವುದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಅತ್ಯಗತ್ಯ. ಹೀಟ್ ಸ್ಟ್ರೋಕ್ ಲಕ್ಷಣಗಳು ಕಂಡುಬಂದಾಗ ವಹಿಸುವ ನಿರ್ಲಕ್ಷ್ಯ ಬಹು ಅಂಗಾಂಗ ವೈಫಲ್ಯಕ್ಕೂ ಕಾರಣವಾಗಬಹುದು. ಅಂದರೆ ಶಾಖದ ಆಘಾತದಿಂದಾಗಿ, ದೇಹದ ಅನೇಕ ಭಾಗಗಳು ಏಕಕಾಲದಲ್ಲಿ ಹಾನಿಗೊಳಗಾಗಬಹುದು.

ಇತ್ತೀಚೆಗೆ, ರಾಜಸ್ಥಾನದಲ್ಲಿ ಸುಡುವ ಬಿಸಿಲಿನಿಂದ ಬಂದ 23 ವರ್ಷದ ಮಹಿಳೆಯೊಬ್ಬರು ಎಸಿ ಕಚೇರಿಗೆ ತಲುಪಿದ ಸ್ವಲ್ಪ ಸಮಯದಲ್ಲೇ ಪ್ರಜ್ಞೆ ತಪ್ಪಿದ್ದರು. ಆಸ್ಪತ್ರೆಗೆ ಕರೆದೊಯ್ದಾಗ, ಅವರಿಗೆ ಮೆದುಳಿನ ರಕ್ತಸ್ರಾವ ಇರುವುದು ಕಂಡುಬಂದಿತ್ತು. ಕೆಲವೊಮ್ಮೆ ಸುಡು ಬಿಸಿಲಿನಲ್ಲಿ ನಿಂತ ಸಂದರ್ಭ ನಿಮ್ಮ ಮುಚ್ಚಿದ ಕಾರಿನ ತಾಪಮಾನವು 60 ರಿಂದ 70 ಡಿಗ್ರಿಗಳವರೆಗೂ ಏರುತ್ತದೆ. ಅಂತಹ ಸಂದರ್ಭಗಳಲ್ಲಿ ನೀವು ಎಸಿ ತಾಪಮಾನದೊಂದಿಗೆ ನಿಮ್ಮ ಕಾರಿನಲ್ಲಿ ಕುಳಿತಾಗ, ನಿಮಗೆ ಹೀಟ್ ಸ್ಟ್ರೋಕ್ ಬರುವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗದು ಎಂಬುದು ವೈದ್ಯರ ಅಭಿಪ್ರಾಯ.

ಇದನ್ನೂ ಓದಿ: ಅಡುಗೆಗೆ ಬಳಸುವ ಈ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕ, ಆರೋಗ್ಯಕ್ಕೆ ಅಪಾಯ ಖಂಡಿತ

ಹೀಟ್ ಸ್ಟ್ರೋಕ್ ನಿಂದ ತಪ್ಪಿಸಿಕೊಳ್ಳೋದು ಹೇಗೆ?

  • ನಿಮ್ಮ ಕಾರನ್ನು ನೆರಳಿನಲ್ಲಿ ನಿಲ್ಲಿಸಲು ಪ್ರಯತ್ನಿಸಿ.
  • ಮನೆಯಿಂದ ಹೊರಗೆ ಹೋಗುವಾಗ ತಲೆಯ ಭಾಗವನ್ನು ಸರಿಯಾಗಿ ಮುಚ್ಚಿಕೊಳ್ಳಿ.
  • ಜಾಸ್ತಿ ಬಿಸಿಲಿರುವ ಹೊತ್ತು ( ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ) ಹೊರಗಡೆ ಓಡಾಟ ಬೇಡ.
  • ಹಗುರವಾದ, ತಿಳಿ ಬಣ್ಣದ, ಸಡಿಲವಾದ ಬಟ್ಟೆಗಳನ್ನು ಧರಿಸಿ.
  • ಆಗಾಗ ದ್ರವ ರೂಪದ ಆಹಾರ, ನೀರು ಸೇವಿಸುತ್ತಿರಿ.
  • ಆಲ್ಕೋಹಾಲ್ ಅಥವಾ ಕೆಫೀನ್ ಹೊಂದಿರುವ ಪಾನೀಯಗಳನ್ನು ತಪ್ಪಿಸಿ.
  • ಹೀಟ್ ಸ್ಟ್ರೋಕ್ನ ಲಕ್ಷಣಗಳು ಗಂಭೀರವಾಗಿ ಕಂಡುಬಂದಲ್ಲಿ ತುರ್ತಾಗಿ ವೈದ್ಯರನ್ನ ಸಂಪರ್ಕಿಸಿ.

ಪ್ರಾಣಿಗಳ ಮೇಲೂ ಇದೆ ಹೀಟ್ ಸ್ಟ್ರೋಕ್ ಎಫೆಕ್ಟ್!

ಕೇವಲ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳಲ್ಲಿಯೂ ಹೀಟ್ ಸ್ಟ್ರೋಕ್ ಎಫೆಕ್ಟ್ ಕಂಡು ಬರುತ್ತಿದೆ. ಪ್ರಾಣಿಗಳು ಅತಿಯಾಗಿ ಜೊಲ್ಲು ಸುರಿಸುವುದು, ಉಸಿರಾಟದಲ್ಲಿ ತೊಂದರೆ, ಜಾಸ್ತಿ ಬೆವರುವುದು ಕೂಡ ಹೀಟ್ ಸ್ಟ್ರೋಕ್ನ ಲಕ್ಷಣಗಳಾಗಿವೆ. ಹೀಗಾಗಿ ಅತಿಯಾದ ಬಿಸಿಲಿರುವ ವೇಳೆಯಲ್ಲಿ ಪ್ರಾಣಿಗಳನ್ನು ನೆರಳಿಗೆ ಸ್ಥಳಾಂತರಿಸುವುದು, ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿಸುವುದು ಮತ್ತು ಕುಡಿಯಲು ನೀರು ಅಥವಾ ಎಲೆಕ್ಟ್ರೋಲೈಟ್ ಅನ್ನು ನೀಡುವ ಮೂಲಕ ಅವುಗಳ ಜೀವವನ್ನು ಪ್ರಾಣಾಪಾಯದಿಂದ ತಪ್ಪಿಸಬಹುದಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:07 pm, Sun, 26 May 24