ಪ್ರತಿಯೊಬ್ಬ ಮನುಷ್ಯನೂ ಕೂಡಾ ತನ್ನ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಒತ್ತಡವನ್ನು ಎದುರಿಸುತ್ತಾನೆ. ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆಯ ಒತ್ತಡ ಹೀಗೆ ನಾನಾ ಕಾರಣಗಳಿಂದ ಜನರು ಒತ್ತಡಕ್ಕೆ ಒಳಗಾಗುತ್ತಾರೆ. ಒತ್ತಡಕ್ಕೆ ಒಳಗಾದವರಲ್ಲಿ ಅನೇಕರು ಒತ್ತಡದಿಂದ ಹೊರ ಬರುವ ಸಲುವಾಗಿ ಧೂಮಪಾನ, ಮದ್ಯಪಾನ ಹಾಗೂ ಇನ್ನಿತರ ತಂಬಾಕು ಸೇವನೆಯ ಚಟಕ್ಕೆ ದಾಸರಾಗುತ್ತಾರೆ. ಈ ಚಟಗಳು ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತವೆ. ಮಾತ್ರವಲ್ಲದೆ ಇದು ಆತನ ಕುಟುಂಬದ ಮೇಲೂ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇನ್ನೂ ಕೆಲವೊಂದು ವರದಿಗಳ ಪ್ರಕಾರ ತಂಬಾಕು ಸೇವನೆಯಿಂದ ಪ್ರತಿ ವರ್ಷ 8 ಮಿಲಿಯನ್ಗಿಂತಲೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದುರಾದೃಷ್ಟವಶಾತ್ ತಂಬಾಕು ಸೇವನೆ ಮಾಡದ ಬರೀ ಧೂಮಪಾನದ ಹೊಗೆಗೆ ಒಡ್ಡಿಕೊಂಡವರು ಕೂಡ ಇದರಲ್ಲಿ ಸೇರಿದ್ದಾರೆ. ಹಾಗಾಗಿ ಇಂತಹ ಚಟಗಳಿಗೆ ಬಲಿಯಾಗದೆ ಆರೋಗ್ಯರ ರೀತಿಯಲ್ಲಿ ಒತ್ತಡದಿಂದ ಹೊರಬರಲು ತಜ್ಞರು ಸೂಕ್ತ ಸಲಹೆಗಳನ್ನು ನೀಡಿದ್ದಾರೆ.
ಇಂಟರ್ ನ್ಯಾಷನಲ್ ಎಸ್.ಓ.ಎಸ್ ನ ವೈದ್ಯಕೀಯ ನಿರ್ದೇಶಕ ಡಾ. ವಿಕ್ರಮ್ ವೋರಾ ಅವರು ಹೆಚ್.ಟಿ ಲೈಫ್ ಸ್ಟೈಲ್ಗೆ ನೀಡಿದ ಸಂದರ್ಶನದಲ್ಲಿ ಒತ್ತಡವನ್ನು ನಿವಾರಿಸಲು ಹಾಗೂ ತಂಬಾಕು ಸೇವನೆಯನ್ನು ತಪ್ಪಿಸಲು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ಅವರ ಪ್ರಕಾರ ತಂಬಾಕಿನ ಚಟವನ್ನು ನಿರ್ಮೂಲನೆ ಮಾಡಲು ತೀವ್ರಕರವಾಧ ಪ್ರಯತ್ನದ ಅಗತ್ಯವಿದೆ. ಹೆಚ್ಚಿನವರು ಒತ್ತಡದ ಕಾರಣ ತಂಬಾಕು ಸೇವನೆಗೆ ಒಗ್ಗಿಕೊಳ್ಳುತ್ತಾರೆ. ಕೌಟುಂಬಿಕ ಅಥವಾ ವೃತ್ತಿಪರ ಏನೇ ಒತ್ತಡವಿರಲಿ, ಚಟಗಳಿಗೆ ಒಗ್ಗಿಕೊಳ್ಳದೆ ಉತ್ತಮ ಆಹಾರದ ಆಯ್ಕೆಗಳು ಮತ್ತು ದೈಹಿಕ ಚಟುವಟಿಕೆಗಳನ್ನು ಒಳಗೊಂಡತೆ ಸಮತೋಲಿತ ಜೀವನ ಶೈಲಿಯು, ಒತ್ತಡವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯವನ್ನು ಮಾಡುತ್ತದೆ.”
ಒತ್ತಡವನ್ನು ಪ್ರಚೋದಿಸುವಂತಹ ಸಂದರ್ಭಗಳು ಎದುರಾದಾಗ, ಒತ್ತಡಕ್ಕೆ ಒಳಗಾಗಿ ತಂಬಾಕು ಸೇವನೆಯನ್ನು ಮಾಡುವ ಬದಲಿಗೆ ಆಳವಾದ ಉಸಿರಾಟದ ವ್ಯಾಯಾಮಗಳು, ನಡಿಗೆ ಅಥವಾ ಸಾವಧಾನತೆಯ ತಂತ್ರಗಳನ್ನು ಅಭ್ಯಾಸ ಮಾಡುವ ಮೂಲಕ ಒತ್ತಡವನ್ನು ನಿಭಾಯಿಸಬಹುದು. ತೀರಾ ಒತ್ತಡದಿಂದ ಬಳಲುತ್ತಿದ್ದರೆ ಹಾಗೂ ಅದು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದರೆ, ಮಾನಸಿಕ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ. ಅವರು ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡಬಹುದು. ಅಲ್ಲದೆ ತಂಬಾಕಿನ ಚಟದಿಂದ ಹೊರಬರುವುದು ಅತ್ಯಂತ ಸವಾಲಿನ ಕೆಲಸವಾಗಿದೆ, ಅಂತಹ ಸಮಯದಲ್ಲಿ ಆರೋಗ್ಯ ವೃತ್ತಿಪರರ ಸಹಾಯ ಹಾಗೂ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ಚಟದಿಂದ ಹೊರಬರಬಹುದು.” ಎಂದು ಡಾ. ವಿಕ್ರಮ್ ವೋರಾ ಸಲಹೆ ನೀಡಿದ್ದಾರೆ. ಜೊತೆಗೆ ವೃತ್ತಿಪರ ಸಂಸ್ಥೆಗಳು ಉದ್ಯೋಗಿಗಳಿಗೆ ಸಾಕಷ್ಟು ಮಾನಸಿಕ ಬೆಂಬಲವನ್ನು ಒದಗಿಸುವುದು ಮತ್ತು ಧೂಮಪಾನದಿಂದ ಉಂಟಾಗುವ ಆರೋಗ್ಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಒತ್ತಡವನ್ನು ನಿರ್ವಹಿಸುವುದು ತುಂಬಾ ಮುಖ್ಯವಾಗಿದೆ. ಆದರೆ ಅದಕ್ಕಾಗಿ ತಂಬಾಕು ಸೇವನೆ ಸರಿಯಲ್ಲ. ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ಕ್ರಮೇಣ ಒತ್ತಡದಿಂದ ಹಾಗೂ ತಂಬಾಕು ಸೇವನೆಯ ಚಟದಿಂದ ಮುಕ್ತರಾಗಬಹುದು ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ಒತ್ತಡ ಮತ್ತು ಆತಂಕವನ್ನು ನಿವಾರಿಸುವ ಭ್ರಮರಿ ಪ್ರಾಣಾಯಾಮದ ಬಗ್ಗೆ ಇಲ್ಲಿದೆ ಮಾಹಿತಿ
ಮುಂಬೈನ ಮೆಡಿಕಲ್ ಆಂಕೊಲಾಜಿ ಸಲಹೆಗಾರರಾದ ಡಾ. ವಿಜಯ್ ಪಾಟೀಲ್ ಅವರು ಒತ್ತಡವನ್ನು ನಿವಾರಿಸಲು ಕೆಲವೊಂದು ಸಲಹೆಗಳನ್ನು ಸೂಚಿಸಿದ್ದಾರೆ:
• ಆಳವಾದ ಉಸಿರಾಟ, ಧ್ಯಾನ, ಯೋಗದಂತಹ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ
• ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವ ಎಂಡಾರ್ಫಿನ್ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
• ಕೆಲಸ ಅಥವಾ ದಿಚರಿಯಿಂದ ಆಗಾಗ್ಗೆ ವಿರಾಮ ತೆಗೆದುಕೊಳ್ಳುತ್ತಿರಿ. ಮತ್ತು ನಿಮಗೆ ಖುಷಿ ನೀಡುವ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.
• ಒತ್ತಡವನ್ನು ನಿರ್ವಹಿಸುವಲ್ಲಿ ಸಾಮಾಜಿಕ ಬೆಂಬಲವು ನಿರ್ಣಾಯಕವಾಗಿರುವುದರಿಂದ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಮಯ ಕಳೆಯಿರಿ.
• ಒತ್ತಡವು ನಿಮ್ಮ ದೈನಂದಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದರೆ ಆರೋಗ್ಯ ವೃತ್ತಿಪರರ ಸಹಾಯವನ್ನು ಪಡೆಯುವ ಮೂಲಕ ಒತ್ತಡವನ್ನು ನಿಭಾಯಿಸಿ.
• ಧೂಮಪಾನವನ್ನು ತ್ಯಜಿಸಲು ದೃಢ ಸಂಕಲ್ಪ ಮಾಡಿ ಮತ್ತು ಆ ಬದ್ಧತೆಯನ್ನು ತಪ್ಪದೆ ಪಾಲಿಸಿ. ಇದರಿಂದ ಸುಲಭವಾಗಿ ಚಟದಿಂದ ಮುಕ್ತರಾಗಬಹುದು.
• ಇತರರು ಧೂಮಪಾನ ಮಾಡುತ್ತಿದ್ದರೆ, ಅದು ನಿಮ್ಮನ್ನು ಧೂಮಪಾನ ಮಾಡುವಂತೆ ಪ್ರಚೋದಿಸಬಹುದು ಆದ್ದರಿಂದ ಅಂತಹ ಸನ್ನಿವೇಶಗಳಿಂದ ನಿಮ್ಮನ್ನು ನೀವು ದೂರವಿರಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: