Health Tips: ನಿಮ್ಮ ಕುಟುಂಬದಲ್ಲಿ ಮಧುಮೇಹವಿದ್ದರೆ ಹೇಗೆ ಜಾಗ್ರತೆವಹಿಸಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: shivaprasad.hs

Updated on: Apr 25, 2022 | 6:30 AM

Diabetes: ಮಧುಮೇಹ ದೀರ್ಘಕಾಲದಲ್ಲಿ ಹೃದ್ರೋಗಗಳು, ಸ್ಥೂಲಕಾಯತೆ ಸೇರಿದಂತೆ ಕೆಲವು ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು. ಹೀಗಿರುವಾಗ ಇಂತಹ ಖಾಯಿಲೆಗಳನ್ನು ಬರದಂತೆ ನಮ್ಮ ಜೀವನಶೈಲಿಯನ್ನು ರೂಢಿಸಿಕೊಳ್ಳುವುದೇ ಜಾಣತನ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

Health Tips: ನಿಮ್ಮ ಕುಟುಂಬದಲ್ಲಿ ಮಧುಮೇಹವಿದ್ದರೆ ಹೇಗೆ ಜಾಗ್ರತೆವಹಿಸಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್
ಪ್ರಾತಿನಿಧಿಕ ಚಿತ್ರ
Follow us on

ಆಧುನಿಕ ಕಾಲದಲ್ಲಿ ಬಹಳಷ್ಟು ಜನರನ್ನು ಬಾಧಿಸುತ್ತಿರುವ ಹಲವು ಖಾಯಿಲೆಗಳು ಬಹುತೇಕ ಬಾರಿ ಅನುವಂಶಿಕವಾಗಿರುವುದಿಲ್ಲ. ಅವು ಜೀವನಶೈಲಿ ಹಾಗೂ ಆಹಾರದಲ್ಲಿನ ಏರುಪೇರಿನಿಂದಲೂ ಬರಬಹುದು. ಅದಾಗ್ಯೂ ಕುಟುಂಬದಲ್ಲಿ ಆ ರೋಗದ ಇತಿಹಾಸವಿದ್ದರೆ ಅದು ಖಾಯಿಲೆಯ ಪ್ರಭಾವವನ್ನು ಹೆಚ್ಚಿಸಬಹುದು ಎನ್ನುತ್ತಾರೆ ತಜ್ಞರು. ಇಂತಹ ಖಾಯಿಲೆಯಗಳಲ್ಲಿ ಮಧುಮೇಹವೂ (Diabetes) ಒಂದು. ಇದು ಅನುವಂಶಿಕವಾಗಿಯೂ ಬರಬಹುದು ಅಥವಾ ಜೀವನಶೈಲಿಯಲ್ಲಿನ ಸಮಸ್ಯೆಗಳಿಂದಲೂ ಬರಬಹುದು. ದೀರ್ಘಕಾಲದಲ್ಲಿ ಹಲವು ರೀತಿಯ ಪರಿಣಾಮಗಳನ್ನು ಇದು ಉಂಟುಮಾಡುತ್ತದೆ. ಕಾಲಾನಂತರದಲ್ಲಿ ಹೃದ್ರೋಗಗಳು, ಸ್ಥೂಲಕಾಯತೆ ಸೇರಿದಂತೆ ಕೆಲವು ಗಂಭೀರ ಸಮಸ್ಯೆಗಳಿಗೂ ಇದು ಕಾರಣವಾಗಬಹುದು. ಹೀಗಿರುವಾಗ ಇಂತಹ ಖಾಯಿಲೆಗಳನ್ನು ಬರದಂತೆ ನಮ್ಮ ಜೀವನಶೈಲಿಯನ್ನು ರೂಢಿಸಿಕೊಳ್ಳುವುದೇ ಜಾಣತನ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

  1. ಉತ್ತಮ ನಿದ್ರೆ: ಸಾಕಷ್ಟು ನಿದ್ರೆಯನ್ನು ನೀವು ಮಾಡುತ್ತಿಲ್ಲ ಎಂದಾದಲ್ಲಿ ಅದು ಇನ್ಸುಲಿನ್ ಸೆನ್ಸಿಟಿವಿಟಿ ಮೇಲೆ ಪರಿಣಾಮ ಬೀರಬಹುದು. ಇದರಿಂದ ಇದು ತೂಕ ಹೆಚ್ಚಾಗುವುದು, ಆತಂಕ, ಖಿನ್ನತೆಗೆ ತುತ್ತಾಗಬಹುದು. ಆದ್ದರಿಂದ ನಿಮ್ಮ ಕುಟುಂಬದಲ್ಲಿ ಮಧುಮೇಹ ಯಾರಿಗಾದರೂ ಇದ್ದಲ್ಲಿ ನೀವು ನಿಮ್ಮ ನಿದ್ರೆಯ ಬಗ್ಗೆ ಎಚ್ಚರ ವಹಿಸಿ. ವಯಸ್ಕರು ದಿನಕ್ಕೆ ಕನಿಷ್ಠ 7- 8 ಗಂಟೆ ನಿದ್ರೆ ಮಾಡಿ. ಒಂದು ಅಧ್ಯಯನದ ಪ್ರಕಾರ, ನಿದ್ರೆಯ ಸಮಯ ವಿಸ್ತರಿಸುವುದರಿಂದ ಇನ್ಸುಲಿನ್ ಸೆನ್ಸಿಟಿವಿಟಿಯನ್ನು ಸುಧಾರಿಸುತ್ತದೆ. ಪುರುಷರಲ್ಲಿ ಟೈಪ್ -2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
  2. ಸರಿಯಾದ ಸಮಯ ಹಾಗೂ ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸಿ: ಸರಿಯಾದ ಸಮಯದಲ್ಲಿ, ಸರಿಯಾದ ಆಹಾರವನ್ನು ತಿನ್ನುವುದು ಮಧುಮೇಹದ ಕುಟುಂಬದ ಇತಿಹಾಸ ಹೊಂದಿರುವ ಜನರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಕುಟುಂಬದಲ್ಲಿ ಮಧುಮೇಹ ರೋಗಿಗಳಿದ್ದರೆ, ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸಿ ಮತ್ತು ನಿಮ್ಮ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಮಿತಿಯಲ್ಲಿಡಿ.
  3. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ: ಟೈಪ್ -2 ಮಧುಮೇಹ ಹೊಂದಿರುವ ರೋಗಿಗಳು ಆರಂಭದಲ್ಲಿ ತೂಕ ನಷ್ಟ ಹೊಂದಬಹುದು. ಆದರೆ ದೀರ್ಘಾವಧಿಯಲ್ಲಿ, ಅದು ತಿರುವುಮುರುವೂ ಆಗಬಹುದು. ನಿಮ್ಮ ಬಾಡಿ ಮಾಸ್ ಇಂಡೆಕ್ಸ್ (BMI) ಸ್ಥೂಲಕಾಯತೆಯ ವ್ಯಾಪ್ತಿಯಲ್ಲಿದ್ದರೆ, ಸಾಧ್ಯವಾದಷ್ಟು ಬೇಗ ತೂಕವನ್ನು ಕಳೆದುಕೊಳ್ಳಿ. ಹೊಟ್ಟೆಯ ಸುತ್ತ ಅತಿಯಾದ ಕೊಬ್ಬಿನ ಶೇಖರಣೆಯು ದೇಹವನ್ನು ಇನ್ಸುಲಿನ್‌ ನಿರೋಧಕವಾಗಿಸುತ್ತದೆ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
  4. ಚಟುವಟಿಕೆಯಿಂದಿರಿ: ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಕುಳಿತು ಅಧ್ಯಯನ ಮಾಡುವುದು ಅಥವಾ ಚಲನಚಿತ್ರಗಳನ್ನು ನೋಡುವುದು ಅಥವಾ ಮನೆಯಿಂದ ಕೆಲಸ ಮಾಡುವ ಅಭ್ಯಾಸಗಳು ಡಯಾಬಿಟೀಸ್​ಗೆ ಆಹ್ವಾನ ನೀಡಬಹುದು. ಆದ್ದರಿಂದ ನೀವು ನಿಮ್ಮ ಕೆಲಸಗಳ ಮಧ್ಯೆ ಸಾಕಷ್ಟು ವಿಶ್ರಾಂತಿ ಪಡೆಯಿರಿ ಮತ್ತು ಚಟುವಟಿಕೆಯಿಂದಿರಿ. ದೇಹವು ಚಟುವಟಿಕೆಯಿಂದಿದ್ದರೆ ಸ್ನಾಯುಗಳಿಗೆ ಅಗತ್ಯವಿರುವ ಗ್ಲೂಕೋಸ್ ಅನ್ನು ಪಡೆಯಲು ಸಹಾಯಕವಾಗುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.
  5. ರಕ್ತದಲ್ಲಿನ ಸಕ್ಕರೆ ಮಟ್ಟದ ಬಗ್ಗೆ ನಿಗಾ ಇರಲಿ: ದೇಹದ ತೂಕವನ್ನು ಸಮಸ್ಥಿತಿಯಲ್ಲಿಟ್ಟುಕೊಂಡರೆ ಬೊಜ್ಜು, ಹೃದ್ರೋಗ ಮತ್ತು ಮಧುಮೇಹ ನಿರ್ವಹಣೆಗೆ ಸಹಾಯಕವಾಗುತ್ತದೆ. ಹಾಗೆಯೇ ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆಗಾಗ ಗಮನಿಸುವುದು ಕೂಡ ಮುಖ್ಯ. ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರೀಕ್ಷಿಸಿದಾಗ ನಿಮಗೆ ಅಪಾಯಗಳನ್ನು ಮೊದಲೇ ಪತ್ತೆಹಚ್ಚಲು ಮತ್ತು ಸಮಯಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯಕವಾಗುತ್ತದೆ. ನಿಮ್ಮ ಕುಟುಂಬದಲ್ಲಿ ಮಧುಮೇಹದ ಇತಿಹಾಸ ಹೊಂದಿದ್ದರೆ ಇದು ಮತ್ತಷ್ಟು ಸಹಾಯಕವಾಗಬಹುದು.

(ವಿ.ಸೂ.: ಈ ವಿಚಾರಗಳನ್ನು ಮಾಹಿತಿಯ ದೃಷ್ಟಿಯಿಂದ ನೀಡಲಾಗಿದೆ. ಅನುಸರಿಸುವ ಮುನ್ನ ತಜ್ಞರ ಸಲಹೆಯನ್ನು ಪಡೆಯಿರಿ)

ಇದನ್ನೂ ಓದಿ: ಮಧುಮೇಹಿಗಳು ಮಾವಿನ ಹಣ್ಣನ್ನು ತಿನ್ನಬಹುದೇ?

Health care: ಮಧುಮೇಹ ಇರುವವರು ಈ ಅಂಶಗಳನ್ನು ಗಮನಿಸಿ; ಇಲ್ಲದಿದ್ದರೆ ಅಪಾಯಗಳು ತಪ್ಪಿದ್ದಲ್ಲ