ಇಂದು ಮಂಡಿನೋವಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ವಯಸ್ಸಿನ ಭೇದವಿಲ್ಲದೇ ಎಲ್ಲರನ್ನೂ ಇದು ಕಾಡುತ್ತದೆ. ಅದರಲ್ಲೂ ನಮ್ಮ ದೇಶದಲ್ಲಿ ಮಂಡಿ ನೋವಿನಿಂದ ನರಳುವವರಲ್ಲಿ ನೂರಕ್ಕೆ 65 ಜನ ಹೆಣ್ಣು ಮಕ್ಕಳೇ. ಒಂದೇ ಕಡೆ ಹೆಚ್ಚಿನ ಸಮಯ ಕುಳಿತುಕೊಳ್ಳುವ ಕಾರಣ ಮಂಡಿ ನೋವು ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಹೆಚ್ಚಿನ ತೂಕ ಇರುವವರಲ್ಲಿ ಈ ಸಮಸ್ಯೆ ಹೆಚ್ಚು. ಇಡೀ ಶರೀರದ ಭಾರ ಮಂಡಿಗಳ ಮೇಲೆ ಒತ್ತಡ ಹೇರುವುದರಿಂದ ಮಂಡಿ ನೋವು ಬರುತ್ತದೆ.
ಪ್ರಾಥಮಿಕ ಹಂತದಲ್ಲಿ ಮಂಡಿನೋವನ್ನು ನಿರ್ಲಕ್ಷ್ಯ ಮಾಡಿದಲ್ಲಿ ಮುಂದೆ ಅದೇ Arthritis ಅಲ್ಲದೆ Osteoarthritis ಹಂತಕ್ಕೆ ಸಹ ಹೋಗಬಹುದು. ಮಂಡಿ ನೋವು ಒಂದೇ ಮಾದರಿಯದ್ದು ಎನಿಸಿದರೂ, ವೈದ್ಯಕೀಯ ಲೋಕದಲ್ಲಿ 6 ಬೇರೆ ಬೇರೆ ವಿಭಾಗ ಮಾಡಲಾಗಿದೆ. ಅವು ಸರಿಯಾಗಿ ಮಧ್ಯದ ಮಂಡಿ ಚಿಪ್ಪಿನ ಒಳಭಾಗ, ಮೇಲೆ ಮತ್ತು ಕೆಳಗೆ, ಎಡ ಮತ್ತು ಬಲ ಪಕ್ಕ ಮತ್ತು ಮಂಡಿಯ ಹಿಂಭಾಗ. ಹೀಗೆ ಒಟ್ಟು ಆರು ವಿಧಗಳಲ್ಲಿ ಇದು ಕಾಡುತ್ತದೆ. ಈ ಆರೂ ತರಹದ ನೋವಿಗೆ ಕಾರಣ ಮತ್ತು ಚಿಕಿತ್ಸೆ ಬೇರೆ ಬೇರೆಯಾಗಿಯೇ ಇರುತ್ತದೆ.
ಅಪಘಾತದ ಪರಿಣಾಮ ಮಂಡಿ ನೋವು ಕಾಣಿಸಿಕೊಳ್ಳುವುದು ಬಿಟ್ಟರೆ, ಹೆಚ್ಚಾಗಿ ಅತೀ ದೇಹ ತೂಕ ಮಂಡಿ ನೋವಿಗೆ ಮೂಲ ಕಾರಣ.
ನೆಲದ ಮೇಲೆ ಮಂಡಿ ಊರಿ ಕೆಲಸ ಮಾಡುವುದು, ಉದ್ಯೋಗ, ಆಟ ಆಡುವುದು, ಎತ್ತರದ ಹಿಮ್ಮಡಿ ಇರುವ ಪಾದರಕ್ಷೆ ಹಾಕುವುದು, ಮಾಂಸಖಂಡಗಳ ಹರಿಯುವಿಕೆ, ಮಂಡಿಯ ದ್ರವ ಸೂಸುವಿಕೆ, ಒಣಗುವಿಕೆ, ಕೆಲವೊಮ್ಮೆ ವೈರಸ್ ಜ್ವರ, ತಪ್ಪಾಗಿ ನಡೆಯುವ ವಿಧಾನ… ಹೀಗೆ ಹಲವು ಕಾರಣಗಳಿಂದ ಮಂಡಿ ನೋವು ಕಾಣಿಸಿಕೊಳ್ಳುತ್ತದೆ.
ಈ ಸಮಸ್ಯೆಗೆ ಹೆಚ್ಚಿನ ಸಲ ವಿಶ್ರಾಂತಿಯೇ ಮುಖ್ಯ ಪರಿಹಾರವಾಗುತ್ತದೆ. ತೂಕವನ್ನು ಇಳಿಸಿಕೊಳ್ಳುವುದು, ಸರಿಯಾದ ಕ್ರಮದಲ್ಲಿ ಉತ್ತಮ ವ್ಯಾಯಾಮ ಮಾಡುವುದು ಸೂಕ್ತ. ಇದರ ಹೊರತಾಗಿ ಎಲ್ಲರಿಗೂ ಅನುಕೂಲ ಆಗುವಂತಹ ಒಂದಿಷ್ಟು ಮಾಹಿತಿ ಇಲ್ಲಿದೆ:
* ಎಲ್ಲರಿಗೂ ತಿಳಿದಂತೆ ಒಂದಿಷ್ಟು ನಿಧಾನವಾಗಿ ವಾಕಿಂಗ್, ವ್ಯಾಯಾಮ, ಯೋಗ ಇವೆಲ್ಲಾ ಮಾಡಿ ಮಂಡಿ ನೋವು ಬಾರದಂತೆ ತಡೆಯುತ್ತವೆ. ಈಜುವಿಕೆ ಉತ್ತಮ ಪರಿಹಾರ ಕೊಡುತ್ತೆ. ಇದಕ್ಕಾಗಿ ಕೊನೆಯ ಪಕ್ಷ 10–15 ನಿಮಿಷಗಳನ್ನಾದರೂ ಮೀಸಲು ಇಡಬೇಕು.
* ರಾತ್ರಿ ಇಡೀ ಮೆಂತ್ಯದ ಬೀಜಗಳನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ರುಬ್ಬಿ ಪೇಸ್ಟ್ ಮಾಡಿಕೊಂಡು ಮಂಡಿಗೆ ಹಚ್ಚಿ ಒಂದು ಗಂಟೆ ಬಿಡುವುದು. ಇದು ನೋವಿಗೆ ಉಪಶಮನ ನೀಡುತ್ತದೆ. ರಾತ್ರಿ ಪೂರ್ತಿ ನೆನೆಸಿಟ್ಟ ಮೆಂತ್ಯ ಕಾಳನ್ನು ಅದರ ನೀರಿನ ಸಮೇತ ಸೇವನೆ ಮಾಡುವುದು ಸಹ ಒಳ್ಳೆಯದೇ.
* ಬೆಚ್ಚಗಿನ ತೆಂಗಿನೆಣ್ಣೆಗೆ ಅಥವಾ ಎಳ್ಳೆಣ್ಣೆಗೆ ಚಿಟಿಕೆ ಪಚ್ಚ ಕರ್ಪೂರ (ದೇವರ ಮಂಗಳಾರತಿ ಉಪಯೋಗಿಸುವ ಕರ್ಪೂರ ಅಲ್ಲ) ಬೆರೆಸಿ ನೋವಿರುವ ಮಂಡಿಗೆ ಮಸಾಜ್ ಮಾಡುತ್ತಾ ಬನ್ನಿ. ಹೀಗೆ ಮಾಡುವುದರಿಂದ ನೋವಿನಿಂದ ತುರ್ತು ಪರಿಹಾರ ಕಾಣಬಹುದು.
* ಅರಿಶಿಣದ ಹಾಲು ಹಾಗೂ ಶುಂಠಿ ಹಾಲು ಸೇವನೆಯು ಮಂಡಿ ನೋವಿಗೆ ತಕ್ಕಮಟ್ಟಿಗೆ ಪರಿಹಾರ ನೀಡುತ್ತದೆ. ಪ್ರತಿ ದಿನ ಈ ಹಾಲನ್ನು ಕುಡಿಯುತ್ತಾ ಬನ್ನಿ. ಅರಿಶಿಣ ನಂಜುನಿರೋಧ ಅಂಶ ಹೊಂದಿದ್ದರೆ ಹಾಲು ಮೂಳೆಗಳಿಗೆ ಅತ್ಯುತ್ತಮ.
* ಎಣ್ಣೆಯಲ್ಲಿ ಕರಿದಿರುವ ಪದಾರ್ಥ ಸೇವಿಸಬೇಡಿ. ಬದಲು ಎಳ್ಳು, ಅಗಸೆ ಬೀಜ, ಆಕ್ರೋಟ್, ಬಾಳೆಹಣ್ಣು, ಬೆಳ್ಳುಳ್ಳಿ ಸೇವನೆ ಜಾಸ್ತಿ ಮಾಡಿ. ಓಮ ಕಾಳನ್ನು ರುಬ್ಬಿ ಮಂಡಿಗೆ ಹಚ್ಚಿಕೊಳ್ಳಿ.
* ಉಪ್ಪಿನ ಶಾಖ, ಸಾಸಿವೆ ಎಣ್ಣೆಯ ಶಾಖ, ಬೆಚ್ಚಗಿನ ನೀಲಗಿರಿ ಎಣ್ಣೆಯ ಮಸಾಜ್, ಸುಣ್ಣದ ಅಂಶ ಸೇವನೆ – ಉದಾಹರಣೆಗೆ ಎಲೆ ಅಡಿಕೆ ಹಾಕಿಕೊಳ್ಳುವುದು ಇದೆಲ್ಲಾ ನೋವನ್ನು ಸಾಕಷ್ಟು ಕಮ್ಮಿ ಮಾಡುತ್ತದೆ.
ಇನ್ನು ವ್ಯಾಯಾಮ ಹಾಗೂ ಯೋಗಾಸನದಿಂದ ಪರಿಹಾರವೆಂದರೆ:
* ಕುರ್ಚಿಯ ಮೇಲೆ ಕುಳಿತುಕೊಂಡು ಪಾದಕ್ಕೆ ಟವಲನ್ನು ಸುತ್ತಿ ಹಿಡಿಯಬೇಕು. ಎರಡೂ ಕೈಗಳಲ್ಲಿ ಟವಲನ್ನು ಹಿಂದಕ್ಕೆ ಎಳೆದಾಗ ಮಂಡಿ ಮಡಚಿದಂತೆ ಆಗುತ್ತದೆ. ಇದನ್ನು 5-10 ಸೆಕೆಂಡ್ ಹಾಗೆಯೇ ಇರಿಸಬೇಕು. ಪ್ರತಿ ಕಾಲಿಗೆ 5 ಬಾರಿ ಹೀಗೆ ಮಾಡಿದರೆ ನೋವು ನಿಯಂತ್ರಣಕ್ಕೆ ಬರುತ್ತದೆ.
* ನೇರವಾಗಿ ನಿಂತುಕೊಂಡು ಮುಂದೆ ಕುರ್ಚಿಯ ಮೇಲೆ ಕಾಲಿರಿಸಿ ಕೈಯಿಂದ ಕಾಲಿನ ಹೆಬ್ಬರಳನ್ನು ಮುಟ್ಟಿಸಬೇಕು. ಮಂಡಿ ಸ್ವಲ್ಪವೇ ಬಾಗುವಂತೆ ಮಾಡಬೇಕು. ಇದನ್ನು 5 ಬಾರಿ ಮಾಡಬೇಕು. ದಿನನಿತ್ಯ ಈ ವ್ಯಾಯಾಮ ಮಾಡಿದರೆ ಒಳ್ಳೆಯದು.
* ಮೆಟ್ಟಿಲಿನ ಬಳಿ ನಿಂತುಕೊಂಡು ಎಡಗಾಲನ್ನು ಮಾತ್ರ ಕೆಳಗಿನ ಮೆಟ್ಟಲಿಗಿಳಿಸಿ ಎತ್ತಿ ಇಳಿಸಿ ಮಾಡುತ್ತಲೇ ಇರಬೇಕು. ಇದು ನೋವನ್ನು ನಿಧಾನವಾಗಿ ಕಡಿಮೆ ಮಾಡುತ್ತದೆ. 30-40 ಸೆಕೆಂಡ್ ಎರಡೂ ಕಾಲನ್ನೂ ಹಾಗೆ ಮಾಡಬೇಕು.
* ಒಂದು ಬಟ್ಟೆ ತುಂಡನ್ನು ತೆಗೆದುಕೊಂಡು ಎರಡೂ ಪಾದಗಳಿಗೂ ಅದನ್ನು ಕಟ್ಟಿ ಒಂದು ಕಾಲನ್ನು ಆದಷ್ಟು ಎಳೆಯಬೇಕು. ಬಟ್ಟೆ ಎಷ್ಟು ಎಳೆಯುತ್ತದೋ ಅಷ್ಟೂ ಸಾಧ್ಯವಾಗುವಂತೆ ಮಾಡಬೇಕು. ಇದರಿಂದ ಮಂಡಿನೋವು ಗಣನೀಯವಾಗಿ ಕಡಿಮೆ ಯಾಗುತ್ತದೆ. ಈ ವ್ಯಾಯಾಮವನ್ನು ಮಾಡುವುದರಿಂದ ಮಂಡಿನೋವು ಕಡಿಮೆಗೊಳ್ಳುವುದಲ್ಲದೆ ಪ್ರತಿನಿತ್ಯ ಇದನ್ನು ರೂಢಿಸಿಕೊಂಡರೆ ನೋವು ನಿಮ್ಮ ನಿಯಂತ್ರಣಕ್ಕೆ ಬರುತ್ತದೆ.
* ಇತ್ತೀಚಿನ ವರ್ಷಗಳಲ್ಲಿ ಹಿಮ್ಮುಖ ನಡಿಗೆ ಅದರಲ್ಲೂ ಸ್ವಲ್ಪ ಇಳಿಜಾರಿನಲ್ಲಿ ಕೆಳಗಿನಿಂದ ಮೇಲಕ್ಕೆ ನಡಿಗೆ ಮಾಡುವುದರಿಂದ ಮಂಡಿಯ ನೋವು ಸಾಕಷ್ಟು ಕಡಿಮೆಯಾಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.
* ಮೊದಲೇ ಹೇಳಿದ ಹಾಗೆ ಯೋಗ, ವ್ಯಾಯಾಮ ದೇಹಕ್ಕೆ ಅಗತ್ಯ. ಆದರೆ ಕೆಲವೊಮ್ಮೆ ವಿಪರೀತ ಮಂಡಿನೋವಿರುವ ವ್ಯಕ್ತಿಗಳು ಕೆಲವು ಆಸನಗಳನ್ನು ಮಾಡಬಾರದು. ಹಾಗಾಗಿ ಯೋಗ ಗುರುಗಳ ಸಲಹೆ ಪಡೆಯಿರಿ.
ಪ್ರಾರಂಭದಲ್ಲೇ ಮನೆಮದ್ದು, ವ್ಯಾಯಾಮಗಳಿಂದ ಪರಿಹಾರ ಮಾಡಿಕೊಂಡರೆ ಮುಂದೆ ನೂರಾರು ರೂಪಾಯಿ ಬೆಲೆಯ ಮಸಾಜ್ ಎಣ್ಣೆಗಳನ್ನು ಉಪಯೋಗಿಸುವುದು ಅಥವಾ ಲಕ್ಷಾಂತರ ಖರ್ಚು ಬರುವ ಮಂಡಿ ಚಿಪ್ಪಿನ ಬದಲಾವಣೆ (total knee replacement operation) ತಪ್ಪಿಸಬಹುದು. (ಲೇಖನ: ಮಂಜುನಾಥ್ ಪ್ರಸಾದ್)