ಅನಿಯಮಿತ ಮುಟ್ಟಿನಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ? – ಪರಿಹಾರ ಸೂಚಿಸಿದ್ದಾರೆ ಸ್ತ್ರೀರೋಗ ತಜ್ಞೆ ಡಾ.ಶ್ರೀಲಕ್ಷ್ಮಿ

| Updated By: Digi Tech Desk

Updated on: May 28, 2021 | 4:08 PM

World Menstrual Hygiene Day 2021: ಇತ್ತೀಚಿಗೆ ಹೆಣ್ಣು ಮಕ್ಕಳು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಅನಿಯಮಿತ ಮುಟ್ಟು. ಬಹುತೇಕರು ಆಸ್ಪತ್ರೆಗೆ ಹೋಗಿ ವೈದ್ಯರ ಸಲಹೆ ಪಡೆದು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವರು ಮುಂದೆ ಸರಿಯಾಗುತ್ತದೆ ಎಂದು ವೈದ್ಯರ ಸಲಹೆ ಅಗತ್ಯವಿಲ್ಲ ಎಂದು ನಿರ್ಲಕ್ಷ್ಯ ತೋರುತ್ತಾರೆ.

ಅನಿಯಮಿತ ಮುಟ್ಟಿನಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ? - ಪರಿಹಾರ ಸೂಚಿಸಿದ್ದಾರೆ ಸ್ತ್ರೀರೋಗ ತಜ್ಞೆ ಡಾ.ಶ್ರೀಲಕ್ಷ್ಮಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಪ್ರತಿ ತಿಂಗಳು 5 ರಿಂದ 6 ದಿನ ಹೆಣ್ಣು ಪಡುವ ಕಷ್ಟ ಅಷ್ಟಿಷ್ಟಲ್ಲ. ಆ ದಿನಗಳ ಪ್ರತಿ ನಿಮಿಷವೂ ನರಕಕ್ಕೆ ಹೋಗಿ ಬಂದಂತಾಗುವ ಅನುಭವ. ಊಟ, ನೀರು ಏನು ಬೇಡ.. ಬೇಗ ದಿನ ಕಳೆದರೆ ಸಾಕಪ್ಪ ಎಂದು ನಿಟ್ಟಿಸಿರು ಬಿಡುವ ಹೆಣ್ಣಿಗೆ ಸಮಸ್ಯೆಗಳು ಒಂದೆರೆಡಲ್ಲ. ದಿನ ಹತ್ತಿರ ಬರುತ್ತಿದೆ ಎಂದಾಗಲೇ ಒಂದು ರೀತಿ ಆತಂಕ, ಭಯ, ಹಿಂಸೆ ಎಲ್ಲವೂ ಒಟ್ಟೊಟ್ಟಿಗೆ ಬರುತ್ತದೆ. ಇದಕ್ಕೆಲ್ಲಾ ಕಾರಣ ಮುಟ್ಟು. ಮುಟ್ಟು ಎನ್ನುವುದು ಪ್ರಕೃತಿ ನಿಯಮ. ಆದರೆ ಮುಟ್ಟದಾಗ ಆಗುವ ಅನುಭವ ನರಕಕ್ಕಿಂತ ಹೆಚ್ಚು. ಹಾಗಂತ ಈ ಋತುಚಕ್ರ ಅನಿಷ್ಟವಲ್ಲ. ಪ್ರತಿಯೊಂದು ಹೆಣ್ಣಿಗೆ ಆಗಲೇಬೇಕಾದ ಪ್ರಕ್ರಿಯೆ ಇದು.

ಇತ್ತೀಚಿಗೆ ಹೆಣ್ಣು ಮಕ್ಕಳು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಅನಿಯಮಿತ ಮುಟ್ಟು (Irregular menstruation) . ಅಂದರೆ ತಿಂಗಳಿಗೆ ಸರಿಯಾಗಿ ರಕ್ತಸ್ರಾವ ಆಗದೆ ಇರುವುದು. ಮೂರ್ನಾಲ್ಕು ತಿಂಗಳಿಗೊಮ್ಮೆ ಮುಟ್ಟಾಗುವುದು. ಮುಟ್ಟಾದರೂ ತಿಂಗಳವರೆಗೆ ರಕ್ತಸ್ರಾವ ಆಗುತ್ತಲೇ ಇರುವುದು..ಹೀಗೆ ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ.  ಬಹುತೇಕರು ಆಸ್ಪತ್ರೆಗೆ ಹೋಗಿ ವೈದ್ಯರ ಸಲಹೆ ಪಡೆದು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವರು ಮುಂದೆ ಸರಿಯಾಗುತ್ತದೆ ಎಂದು ವೈದ್ಯರ ಸಲಹೆ ಅಗತ್ಯವಿಲ್ಲ ಎಂದು ನಿರ್ಲಕ್ಷ್ಯ ತೋರುತ್ತಾರೆ. ಹೆಣ್ಣು ಮಕ್ಕಳಿಗೆ ಮುಟ್ಟು ಸರಿಯಾಗದಿರುವುದಕ್ಕೆ ಮುಖ್ಯ ಕಾರಣವೇನು? ಸೂಕ್ತ ಪರಿಹಾರವೇನು? ಬೇಜಾವಾಬ್ದಾರಿಯಿಂದ ಮುಂದಿನ ಭವಿಷ್ಯದ ಮೇಲೆ ಬೀಳುವ ಪರಿಣಾಮವೇನು? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಮ್ಮ ಟಿವಿ9 ಕನ್ನಡ ಡಿಜಿಟಲ್ ಟೀಮ್ ಮುಂದಾಗಿದೆ. ಖ್ಯಾತ ಸ್ತ್ರೀರೋಗತಜ್ಞೆ ಡಾ.ಶ್ರೀಲಕ್ಷ್ಮಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಅನಿಯಮಿತ ಮುಟ್ಟಿಗೆ (Irregular menstruation) ಕಾರಣವೇನು?
ಅತಿಯಾದ ತೂಕ, ಒತ್ತಡ, ಚಿಂತೆ, ಜೀವನಶೈಲಿ, ಆಹಾರ ಪದ್ಧತಿಗಳು ಅನಿಯಮಿತ ಮುಟ್ಟಿಗೆ ಪ್ರಮುಖ ಕಾರಣವಾಗಿದೆ. ಈ ಮೇಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಅನಿಯಮಿತ ಮುಟ್ಟಿಗೆ ಪರಿಹಾರ ಸಿಗುತ್ತದೆ ಎನ್ನುತ್ತಾರೆ  ಸ್ತ್ರೀರೋಗತಜ್ಞೆ ಡಾ.ಶ್ರೀಲಕ್ಷ್ಮಿ. ಪ್ರತಿ 28 ದಿನಕ್ಕೊಮ್ಮೆ ಋತುಚಕ್ರವಾದರೆ ಅದನ್ನು ನಿಯಮಿತ ಮುಟ್ಟು ಎಂದು ಕರೆಯಲಾಗುತ್ತದೆ. ಆದರೆ 35 ರಿಂದ 40 ದಿನಕ್ಕೊಮ್ಮೆ ಮುಟ್ಟಾದರೆ ಅದನ್ನು ಅನಿಯಮಿತ ಮುಟ್ಟೆಂದು ಪರಿಗಣಿಸಲಾಗುವುದು.

ಋತುಚಕ್ರ ನಿಲ್ಲುವ ವಯಸ್ಸು ಎಂದರೆ 45 ಕ್ಕೆ ಈ ಅನಿಯಮಿತ ಮಟ್ಟಿನ ಸಮಸ್ಯೆ ಸಹಜವಾಗಿ ಕಾಡುತ್ತದೆ. ಅಲ್ಲದೇ ಋತುಸ್ರಾವ ಆರಂಭವಾದ ಮೊದಲು ಎರಡು ವರ್ಷಗಳ ಕಾಲ ಈ ಸಮಸ್ಯೆ ಹೆಣ್ಣಿಗೆ ಕಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ 20ರ ವಯಸ್ಸಿನ ಹೆಣ್ಣು ಮಕ್ಕಳು ಅನಿಯಮಿತ ಮುಟ್ಟು ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ಇದಕ್ಕೆ ಪ್ರಮುಖ ಕಾರಣ ಜೀವನಶೈಲಿಯೇ ಆಗಿದೆ ಎನ್ನುತ್ತಾರೆ ವೈದ್ಯೆ ಶ್ರೀಲಕ್ಷ್ಮೀ.

ಕಾಡುವ ಸಮಸ್ಯೆಗಳು?
ನಿಯಮಿತ ಮುಟ್ಟಿನಲ್ಲಿ ದಿನ ತಿಳಿದಿರುತ್ತದೆ. ಯಾವಾಗ ಮುಟ್ಟಾಗಬಹುದು ಎಂದು ಮಹಿಳೆಯರ ಗಮನಕ್ಕೆ ಬಂದಿರುತ್ತದೆ. ಆದರೆ ಅನಿಯಮಿತ ಮುಟ್ಟಿನಲ್ಲಿ ಹಾಗಾಗುದಿಲ್ಲ. ಯಾವ ಸಮಯದಲ್ಲೂ ಮುಟ್ಟಾಗಬಹುದು. ಇದರಿಂದ ಕಿರಿ ಕಿರಿ ಉಂಟಾಗುತ್ತದೆ. ಕಾಲೇಜು, ಆಫೀಸ್​ಗಳಲ್ಲಿ ತಮ್ಮ ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ. ಆದರೆ ತಿಳಿಯದೆ ಆಗುವ ಮುಟ್ಟಿನಿಂದ ಇಡೀ ದಿನದ ಸಂತೋಷ ಕ್ಷಣಗಳು ಕಿತ್ತುಕೊಳ್ಳುತ್ತದೆ. ಅಲ್ಲದೆ ಬಹುಮುಖ್ಯವಾಗಿ ಮುಟ್ಟಿನ ಬಗ್ಗೆ ಸುಳಿವಿಲ್ಲದ ಕಾರಣ ಅಗತ್ಯವಿರುವ ಪ್ಯಾಡ್​ಗಳು ಅಥವಾ ಬಟ್ಟೆ ತಕ್ಷಣ ಸಿಗುವುದಿಲ್ಲ. ಇದರಿಂದ ಹೆಚ್ಚು ಮುಜುಗರಕ್ಕೆ ಕಾರಣವಾಗುತ್ತದೆ.

ಅದರಲ್ಲೂ ಗರ್ಭ ಧಾರಣೆಯ ಸಂದರ್ಭದಲ್ಲಿ  ಈ ಅನಿಮಯಮಿತ ಮಟ್ಟು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ ಎಂದು ಹೇಳಿದ ಡಾ.ಶ್ರೀಲಕ್ಷ್ಮೀ,  ಆ ವೇಳೆ ಚಿಕಿತ್ಸೆ ಅಗತ್ಯವಿರುತ್ತದೆ ಎಂಬುದನ್ನೂ ಖಚಿತಪಡಿಸಿದ್ದಾರೆ.  ಅನಿಯಮಿತ ಮುಟ್ಟಿನಿಂದ ಬಳಲುತ್ತಿರುವವರು ಗರ್ಭ ಧರಿಸಬೇಕು ಎಂದಾಗ  ಹಲವು ರೀತಿಯ ಸಮಸ್ಯೆಗಳು ಕಾಡುತ್ತವೆ. ಹೀಗಾದಾಗ ವೈದ್ಯರ ಬಳಿ ಹೋಗಿ ಅಗತ್ಯ ಚಿಕಿತ್ಸೆ ಪಡೆಯುವುದು ಅನಿವಾರ್ಯ. ಚಿಕಿತ್ಸೆಯ ಜೊತೆಜೊತೆಗೆ  ಆಹಾರ ಕ್ರಮ, ಯೋಗ, ವ್ಯಾಯಾಮವನ್ನು ರೂಢಿಸಿಕೊಂಡರೆ ತಾಯಿಯಾಗುವ ಕನಸು ನನಸಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಹಾರ್ಮೋನುಗಳ ಅಸಮತೋಲನದಿಂದಲೂ ಅನಿಯಮಿತ ಮುಟ್ಟು ಉಂಟಾಗುತ್ತದೆ. ಹಾರ್ಮೋನುಗಳ ಅಸಮತೋಲನ (Hormone Imbalance)ವಾದಾಗ ತೂಕ ಹೆಚ್ಚಾಗುತ್ತದೆ. ತೂಕ ಹೆಚ್ಚಾದಾಗ ಮುಟ್ಟು ಸರಿಯಾಗಿ ಆಗುವುದಿಲ್ಲ. ಮುಖದಲ್ಲಿ ಮೊಡವೆಗಳು ಏಳುವುದಕ್ಕೆ ಶುರುವಾಗುತ್ತದೆ. ಇತ್ತೀಚೆಗೆ ಹೆಣ್ಣು ಮಕ್ಕಳು ಮುಟ್ಟಿನ ವಿಚಾರಕ್ಕೆ ಸಂಬಂಧಿಸಿ ಎರಡು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಮೊದಲನೆಯದ್ದು ಒಂದೂವರೆ ತಿಂಗಳಿನಿಂದ ಎರಡ್ಮೂರು ತಿಂಗಳಿಗೊಮ್ಮೆ ಮುಟ್ಟಾಗುವುದು. ಇನ್ನೊಂದು ಪ್ರತಿ 20 ದಿನಗಳಿಗೊಮ್ಮೆ ಮುಟ್ಟಾಗುವುದು. ಈ ಎರಡು ಸಮಸ್ಯೆಗಳಲ್ಲಿ ಹೆಚ್ಚಾಗಿ ತಡವಾಗಿ ಮುಟ್ಟಾಗುವವರ ಸಂಖ್ಯೆ ಹೆಚ್ಚಾಗಿದೆ. ಎರಡು ಸಮಸ್ಯೆಗಳು ಹೆಚ್ಚಾಗಿ 10 ರಿಂದ 19 ವಯಸ್ಸಿನವರಿಗೆ ಕಾಡುತ್ತದೆ. ಸಮಸ್ಯೆಗಳು ಮುಂದಿನ ದಿನಗಳಲ್ಲಿ ಮದುವೆಯಾದ ಬಳಿಕ ಸರಿಯಾಗುತ್ತದೆ ಎಂದು ನಿರ್ಲಕ್ಷ್ಯದಿಂದ ವರ್ತಿಸುವವರೆ ಹೆಚ್ಚು. ಆದರೆ ಅದರ ಕೆಟ್ಟ ಪರಿಣಾಮ 4 ರಿಂದ 5 ವರ್ಷಗಳಲ್ಲಿ ತಿಳಿಯುತ್ತದೆ. ಹಾಗಾಗಿ ಮುಟ್ಟಿಗೆ ಸಂಬಂಧಿಸಿ ಯಾವುದೇ ಸಮಸ್ಯೆಗಳು ಇದ್ದರೂ ವೈದ್ಯರ ಮೊರೆ ಹೋಗುವುದು ಅನಿವಾರ್ಯವಾಗಿದೆ. ವೈದ್ಯಕೀಯ ಪ್ರಕಾರ ವರ್ಷಕ್ಕೆ 4 ರಿಂದ 5 ಬಾರಿಯಾದರೂ ಮುಟ್ಟಾದರೆ ದೇಹಕ್ಕೆ ಆಗುವ ತೊಂದರೆ ಮಟ್ಟ ಕಡಿಮೆ ಇರುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ ಶ್ರೀಲಕ್ಷ್ಮೀ ಅವರು.

ಮಟ್ಟಿನ ಸಮಯದಲ್ಲಿ ವಿಪರೀತ ಹೊಟ್ಟೆ ನೋವು..
ಅಸಂಖ್ಯಾತ ಹೆಣ್ಣುಮಕ್ಕಳ ಸಮಸ್ಯೆ ಇದು. ಒಬ್ಬೊಬ್ಬರಿಗೂ ಒಂದೊಂದು ತರದ ಹೊಟ್ಟೆನೋವು. ಶತ್ರುವಿಗೂ ಬೇಡ ಎನ್ನುವಷ್ಟು ಹೊಟ್ಟೆನೋವಿಂದ ಬಳಲುತ್ತಾರೆ. ಮುಟ್ಟು ಎನ್ನುವುದು ಗರ್ಭಕೋಶದ ಪದರ ಹೊರಗೆ ಬರಬೇಕು. ಹೊರಗೆ ಬರುವ ಹೊತ್ತಿಗೆ ಅತಿಯಾದ ಹೊಟ್ಟೆ ನೋವು, ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಇದು ಸಹಜ. ಆದರೆ ವಿಪರೀತ ಹೊಟ್ಟೆ ನೋವಿನಿಂದ ತಲೆ ನೋವು, ಸುಸ್ತು, ವಾಂತಿ, ಬೇಧಿ ಶುರುವಾಗುತ್ತದೆ. ಈ ವೇಳೆ ವೈದ್ಯರನ್ನು ಭೇಟಿ ಮಾಡಲೇಬೇಕಾಗುತ್ತದೆ. ಯಾಕೆಂದರೆ ಅದಕ್ಕೆ ಬೇರೆಬೇರೆ ಕಾರಣಗಳು ಇರುತ್ತವೆ. ಹಾಗೆ ಸಮಸ್ಯೆಯ ಇರುವವರನ್ನು ತಪಾಸಣೆಗೆ ಒಳಪಡಿಸಿ, ಅದನ್ನು ಗುರುತಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.

ಆಹಾರ ಕ್ರಮ ಹೇಗಿರಬೇಕು? 
ಅನಿಯಮಿತ ಮುಟ್ಟಿನ ಸಮಸ್ಯೆಗೆ ಕೇವಲ ಔಷಧಿಯೇ ಪರಿಹಾರವಲ್ಲ. ಇದಕ್ಕೆ ಸೂಕ್ತ ಪರಿಹಾರ ಅವರವರ ಕೈಯಲ್ಲಿರುತ್ತದೆ. ಮೊದಲೇ ಹೇಳಿದಂತೆ ಸರಿಯಾದ ಸಮಯಕ್ಕೆ ಆಹಾರ ತೆಗೆದುಕೊಳ್ಳುವುದು, ಪ್ರತಿದಿನ ಕನಿಷ್ಠ 30 ನಿಮಿಷ ಯೋಗ ಮಾಡುವುದನ್ನು ರೂಢಿಸಿಕೊಳ್ಳುವುದು, ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು, ತೂಕ ಕಡಿಮೆ ಮಾಡುವತ್ತ ಹೆಚ್ಚು ಗಮನ ಹರಿಸುವುದರಿಂದ ಮುಟ್ಟಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎಂಬುದು ಡಾ. ಶ್ರೀಲಕ್ಷ್ಮೀಯವರ ಸಲಹೆ.

ಅನಿಯಮಿತ ಮುಟ್ಟಿನಿಂದ ಬಳಲುತ್ತಿರುವವರು ಮನೆಯಲ್ಲಿ ಮಾಡಿದ ಆಹಾರವನ್ನು ಹೆಚ್ಚಾಗಿ ಸೇವಿಸಿ. ಚೆನ್ನಾಗಿ ನೀರು ಕುಡಿಯಬೇಕು. ಹಣ್ಣು ಮತ್ತು ಹಸಿ ತರಕಾರಿಯನ್ನು ತಿನ್ನುತ್ತಿರಬೇಕು. ಊಟದ ಜೊತೆ ಹಸಿ ತರಕಾರಿಯನ್ನು ಇಟ್ಟುಕೊಳ್ಳಿ. ಕೆಲಸದ ಮಧ್ಯೆ ಹಸಿವಾದಾಗ ಬೇರೆ ಯಾವುದನ್ನೋ ತಿನ್ನುವ ಬದಲು ಹಣ್ಣು ಮತ್ತು ತರಕಾರಿಯನ್ನು ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಹಣ್ಣಿನ ಜ್ಯೂಸ್ ಮತ್ತು ಮಜ್ಜಿಗೆ ಕುಡಿಯುತ್ತಿರಬೇಕು. ಜೊತೆಗೆ ಬೆವರು ಇಳಿಸುವ ಯೋಗವನ್ನು ಅಥವಾ ವ್ಯಾಯಾಮವನ್ನು ಮಾಡಬೇಕು.

ಸ್ವಚ್ಛತೆ ಹೇಗಿರಬೇಕು?
ಮುಟ್ಟಾದ ಸಮಯದಲ್ಲಿ ಹೆಚ್ಚು ಸ್ವಚ್ಛತೆ ಅನಿವಾರ್ಯವಾಗಿರುತ್ತದೆ. ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ ದಿನಕ್ಕೆ ನಾಲ್ಕು ಬಾರಿ ಸ್ಯಾನಿಟರಿ ಪ್ಯಾಡ್ಗಳನ್ನು ಬದಲಿಸಬೇಕು. ಬಟ್ಟೆ ಉಪಯೋಗಿಸುವವರು ಪದೇ ಪದೇ ತೊಳೆಯುತ್ತಿರಬೇಕು. ಪ್ಯಾಡ್ಗಳನ್ನು ಬದಲಿಸುವಾಗ ಸೂಕ್ಷ್ಮ ಜಾಗವನ್ನು ಚೆನ್ನಾಗಿ ತೊಳೆದುಕೊಂಡು, ಬೇರೆ ಬಟ್ಟೆಯಿಂದ ಚೆನ್ನಾಗಿ ಒರೆಸಿ, ಒಣಗಿದ ಬಳಿಕ ಅಥವಾ ಡ್ರೈ ಆದ ನಂತರ ಪ್ಯಾಡ್​ನ ಬಳಸಬೇಕು. ಈ ರೀತಿ ಸ್ವಚ್ಛತೆ ಕಾಪಾಡಿಕೊಂಡರೆ ಒಳಿತು. ಇಲ್ಲವಾದರೆ ಬೇರೆ ಸಮಸ್ಯೆಗಳ ಹುಟ್ಟಿಗೆ ಕಾರಣವಾಗುತ್ತದೆ.

ಸ್ತ್ರೀರೋಗ ತಜ್ಞರಾದ ಡಾ. ಶ್ರೀಲಕ್ಷ್ಮಿ

ಇದನ್ನೂ ಓದಿ

ತಲೆ ಕೂದಲಿನ ಆರೈಕೆಗೆ ಇಲ್ಲಿದೆ ಮದ್ದು; ಕೇಶರಾಶಿಯ ಹೊಳಪು ಹೆಚ್ಚಿಸಲು ವೈದ್ಯರ ಸಲಹೆಗಳೇನು?

Health Tips: ಕಲ್ಲು ಸಕ್ಕರೆಯಲ್ಲಿನ ಸಿಹಿಯಿಂದ ದೇಹಕ್ಕೆ ಪ್ರಯೋಜನವೇನು? ವೈದ್ಯರ ಸಲಹೆಗಳೇನು?

(Reason and solution for irregular periods)

Published On - 10:39 am, Fri, 28 May 21