ದೇಶಕ್ಕೆ ಪ್ರೋಟೀನ್ ಸಮೃದ್ಧತೆ ತರಲು ಭಾರತದಲ್ಲಿ ಆಹಾರ ವಿಜ್ಞಾನವನ್ನು ಶಕ್ತಿಯುತಗೊಳಿಸಲಾಗಿದೆ. ಜನಸಂಖ್ಯೆಯ ಬಹುಭಾಗಕ್ಕೆ ಪೌಷ್ಠಿಕ ಭದ್ರತೆ ಒದಗಿಸುವಲ್ಲಿ ತಂತ್ರಜ್ಞಾನ, ನಾವೀನ್ಯತೆಯನ್ನು ಆಹಾರ ಸಂಸ್ಕರಣ ಕೈಗಾರಿಕೆಗಳಲ್ಲಿ ಬಳಸುವುದರಿಂದ ಕೃಷಿ ಉತ್ಪಾದನೆಯಲ್ಲಿ ಗಣನೀಯ ಸುಧಾರಣೆ ತರಬಹುದು. ತಜ್ಞರ ಪ್ರಕಾರ, ಈ ಕ್ಷಣದ ಅಗತ್ಯ ಉತ್ಪಾದನೆ ಮಾತ್ರವಲ್ಲ, ಆಹಾರದ ಪೌಷ್ಠಿಕ ಗುಣಮಟ್ಟವಾಗಿದೆ. ಐಐಟಿ ಖರಗ್ ಪುರ್ ನ ಆಹಾರ ತಂತ್ರಜ್ಞಾನ ವಿಭಾಗದ ಪ್ರೊಫೆಸರ್ ಹರಿ ನಿವಾಸ್ ಮಿಶ್ರಾ ಸಲಹೆ ನೀಡುತ್ತಾರೆ, “ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಬದಲು ಗುಣಮಟ್ಟದ ಆಹಾರ ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕಾಗಿದೆ “ ಎಂದು. ಪ್ರೊ. ಮಿಶ್ರಾ ಹೇಳುತ್ತಾರೆ “ಇಂದು ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯಗಳು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಮಟ್ಟ ತಲುಪಿದೆ. ಈ ಮೊದಲು ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ, ಆಹಾರ ಉತ್ಪಾದನೆ ಹೆಚ್ಚಿಸುವತ್ತ ಕೇಂದ್ರಿಕೃತವಾಗಿತ್ತು. ಆದರೆ ಇಂದು ಸ್ವಾವಲಂಬನೆ ತಲುಪಿದ ಮೇಲೆ ನಾವು ಆರೋಗ್ಯವಂತ ಜೀವನ ನಡೆಸಲು ಗುಣಮಟ್ಟದ ಆಹಾರ ಸುಧಾರಣೆಯತ್ತ ಗಮನಹರಿಸಿದ್ದೇವೆ. ”
ಪೌಷ್ಠಿಕತೆ ಗುಣಮಟ್ಟದ ಸುಧಾರಣೆಯೆಂದರೆ ಭಾರತದ ಸರಾಸರಿ ಆಹಾರದಲ್ಲಿ ಪ್ರೊಟೀನ್, ವಿಟಮಿನ್ ಗಳು ಹಾಗೂ ಖನಿಜಗಳಂತಹ ಪೌಷ್ಠಿಕಾಂಶಗಳನ್ನು ಹೆಚ್ಚಿಸುವುದಾಗಿದೆ. ಸಂಸ್ಕರಿಸಿದ ಆಹಾರ ಮತ್ತು ಕುಲಾಂತರಿ ಆಹಾರ ಭಾರತದಲ್ಲಿ ಪೌಷ್ಠಿಕ ಪೂರ್ಣತೆಗೆ ದಾರಿ ಮಾಡಿಕೊಡಲಿದೆ. ಆದರೆ, ಕಡೆಗಣಿತವಾಗಿರುವ ಜನಸಂಖ್ಯೆಗೆ ಇದನ್ನು ತಲುಪಿಸುವತ್ತ ಗಮನಹರಿಸುವುದು ಅಗತ್ಯವಾಗಿದೆ.
ದೆಹಲಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ತಳಿ ತಜ್ಞ ಪ್ರೊ. ದೀಪಕ್ ಪೆಂಟಾಲ್ ಹೇಳುತ್ತಾರೆ , “ ಸೋಯಾಬೀನ್ ಮನುಷ್ಯರಿಗೆ ಹಾಗೂ ಕುಕ್ಕುಟೋದ್ಯಮಕ್ಕೆ ಅದ್ಭುತವಾದ ಪೌಷ್ಠಿಕ ಮೂಲ. ಮಧ್ಯಮ ಮತ್ತು ಮೇಲು ಮಧ್ಯಮ ವರ್ಗ ಇಂದು ಸಂಸ್ಕರಿತ ಆಹಾರ ಸೇವಿಸುತ್ತಿದೆ. ಆದರೆ ಪೌಷ್ಠಿಕ ಆಹಾರದ ಅಗತ್ಯವಿರುವ ಸಮಾಜದ ಒಂದು ವರ್ಗಕ್ಕೆ ನಾವೇನೂ ಮಾಡಿಲ್ಲ. ನಾವು ಆಹಾರ ಸಂಸ್ಕರಣೆ ಬಗ್ಗೆ ಸಾಕಷ್ಟು ಮಾತನಾಡುತ್ತೇವಾದರೂ ದೇಶದ ಪೌಷ್ಠಿಕ ಅಗತ್ಯವನ್ನು ಸರಿದೂಗಿಸಲು ಸಂಸ್ಕರಿತ ಸೋಯಾಬೀನ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ.
ಪ್ರೊ. ಪೆಂಟಾಲ್ , ಹೇಳುತ್ತಾರೆ, “ ಇಂದು ಮಧ್ಯಭಾರತದ ಹತ್ತರಿಂದ 11 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಅನ್ನು ಯಥೇಚ್ಛವಾಗಿ ಬೆಳೆಯುತ್ತಾರೆ. ಆದರೆ, ನಮ್ಮ ಉತ್ಪಾದನೆ ಪ್ರತಿ ಹೆಕ್ಟೇರ್ ಗೆ 1 ಟನ್ ಗೆ ಮಾತ್ರ ಸೀಮಿತವಾಗಿದೆ. ಇದನ್ನು ಪ್ರತಿ ಹೆಕ್ಟೇರ್ ಗೆ 2 ಟನ್ ಗಳಿಗೆ ಏರಿಸುವ ಸವಾಲು ನಮ್ಮ ಕೃಷಿ ವಿಜ್ಞಾನಿಗಳ ಮುಂದಿದೆ.” ಇದರಿಂದ ಅರ್ಥವಾಗುವುದೇನೆಂದರೆ, ಆಹಾರ ವಿಜ್ಞಾನ, ಆಹಾರ ಸಾರವರ್ಧಿತಗೊಳಿಸಲಷ್ಟೇ ಅಲ್ಲ, ಭಾರತದ ಆಹಾರದಲ್ಲಿ ಕೊರತೆಯುಂಟು ಮಾಡಿರುವ ಪೌಷ್ಠಿಕಾಂಶದ ಮೂಲಗಳ ಉತ್ಪಾದನೆಯನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ತೆರೆಯಲಿದೆ.
ಭಾರತದ ಆಹಾರ ಉತ್ಪಾದನೆಯ ಅತ್ಯಂತ ಕಳವಳಕಾರಿ ವಿಚಾರವಾದ ಪೋಲಾಗುವುದು ಮತ್ತು ಹಾಳಾಗುವುದನ್ನು ನಿರ್ವಹಿಸಲು ಸಹ ಆಹಾರ ವಿಜ್ಞಾನ ನೆರವಾಗಲಿದೆ. ಉತ್ಪಾದನೆಯ ಬಹುದೊಡ್ಡ ಭಾಗ ಅದಕ್ಷ ನಿರ್ವಹಣೆ , ದಾಸ್ತಾನು ಮತ್ತು ಆಹಾರ ಧಾನ್ಯಗಳು ಮತ್ತು ತರಕಾರಿಯ ಸಾರಿಗೆ ಸಂದರ್ಭದಲ್ಲಿ ವ್ಯರ್ಥವಾಗುತ್ತಿದೆ. ಆದ್ದರಿಂದ ಪ್ರೊಫೆಸರ್ ಮಿಶ್ರಾ ಸಲಹೆ ನೀಡುತ್ತಾರೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ, ಕೊಯ್ಲೋತ್ತರ ನಷ್ಟವನ್ನು ತಗ್ಗಿಸುವ ಮೂಲಕ ಆಹಾರ ಲಭ್ಯತೆಯನ್ನು ಹೆಚ್ಚಿಸಬಹುದಾಗಿದೆ ಎಂದು.
ಪ್ರೊಫೆಸರ್ ಮಿಶ್ರಾ, ಹೀಗೂ ಹೇಳುತ್ತಾರೆ “ಇಂದಿಗೂ ಶೇಕಡಾ 15 ರಿಂದ 20ರಷ್ಟು ಆಹಾರ ಧಾನ್ಯ ಹಾಳಾಗುತ್ತಿದೆ. ಈ ಪ್ರಮಾಣ ನಶಿಸಿ ಹೋಗುವ ಆಹಾರದಲ್ಲಿ ಇನ್ನೂ ಹೆಚ್ಚಿದ್ದು, ಶೇಕಡಾ 35ರಿಂದ 40ಕ್ಕೆ ತಲುಪಿದೆ. ಆದ್ದರಿಂದ ನಾವು ನಮ್ಮ ಗಮನವನ್ನು ಕೊಯ್ಲೋತ್ತರ ನಷ್ಟವನ್ನು ತಗ್ಗಿಸುವ ತಂತ್ರಜ್ಞಾನದತ್ತ ಕೇಂದ್ರೀಕರಿಸಿದ್ದೇವೆ. ಇದರಿಂದ ಆಹಾರದ ಲಭ್ಯತೆಯಲ್ಲಿ ಹೆಚ್ಚಳವಾಗಿ ತನ್ಮೂಲಕ ಆಹಾರದ ಗುಣಮಟ್ಟ ಹೆಚ್ಚಿಸಲಿದೆ.” ಆಹಾರ ಸಂಸ್ಕರಣೆಯನ್ನು ಆಧರಿಸಿದ ಆಹಾರ ವಿಜ್ಞಾನ ತತ್ವಗಳು ಮತ್ತು ಸಂಬಂಧಿತ ನಾವೀನ್ಯತೆಗಳು ಆಹಾರದ ಪೌಷ್ಠಿಕ ಮೌಲ್ಯವನ್ನು ಬಹುಕಾಲ ಉಳಿಯುವಂತೆ ಮಾಡಿ, ಗ್ರಾಹಕರಿಗೆ ತಲುಪುವವರೆಗೂ ಕಾಪಾಡುವಲ್ಲಿ ಗುರುತರವಾದ ಪಾತ್ರ ವಹಿಸಲಿವೆ. ಭಾರತ, ಕ್ಷೀರ ಉತ್ಪಾದನೆಯ ಯಶೋಗಾಥೆಯನ್ನು ಅನುಕರಣೆ ಮಾಡುವಲ್ಲಿ ವಿಫಲಗೊಂಡಿದೆ ಎಂದು ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಫುಡ್ ಟೆಕ್ನಾಲಜಿ ಎಂಟರ್ ಪ್ರಿನ್ಯೂರ್ ಶಿಪ್ ಅಂಡ್ ಮ್ಯಾನೇಜ್ ಮೆಂಟ್ (ಎನ್ ಐಎಫ್ ಟಿ ಇಎಂ) ನ ಪ್ರೊಫೆಸರ್ ಅಶುತೋಷ್ ಉಪಾಧ್ಯಾಯ ಹೇಳುತ್ತಾರೆ.
ಪ್ರೊಫೆಸರ್ ಉಪಾಧ್ಯಾಯ ಹೇಳುತ್ತಾರೆ “ ನಮ್ಮ ನೆರೆ ರಾಷ್ಟ್ರಗಳಾದ ಥಾಯ್ಲೆಂಡ್ ನಲ್ಲಿ ಆಹಾರ ಸಂಸ್ಕರಣೆ ವಲಯ ಭಾರತಕ್ಕಿಂತ ಹಲವು ಪಟ್ಟು ಹೆಚ್ಚು ಇದ್ದು, ನಮ್ಮ ತಾಜಾ ಹಣ್ಣು ಮತ್ತು ತರಕಾರಿ ಉತ್ಪಾದನೆ ಶೇಕಡಾ 4 ರಿಂದ 5ರಷ್ಟಿದೆ. ಕ್ಷೀರ ಕ್ರಾಂತಿಯ ನಂತರ ಹಾಲು ಉತ್ಪಾದನೆ ಮತ್ತು ಸಂಸ್ಕರಣೆಯ ಒಂದು ಸಂಪೂರ್ಣ ಪರಿಸರ ವ್ಯವಸ್ಥೆ ರೂಪುಗೊಂಡಿದ್ದು. ಹಾಲು ಸಂಸ್ಕರಣೆಯ ಸ್ಥಳವನ್ನು ತಲುಪುವ ಮೊದಲು ಉತ್ಪಾದನೆ , ಸಂಗ್ರಹ ಹಾಗೂ ಶೀಥಲೀಕರಣದ ಸರಬರಾಜು ಸರಪಳಿ ಅಸ್ತಿತ್ವದಲ್ಲಿದೆ. ಗ್ರಾಹಕರಿಗೆ ಸುರಕ್ಷಿತ ಹಾಲನ್ನು ನೀಡುವಲ್ಲಿ ಪಾಶ್ಚರೈಸೇಷನ್ ಪ್ರಮುಖ ಪಾತ್ರ ವಹಿಸಿದ್ದು, ಇದು ಹಾಲು ಸಂಸ್ಕರಣೆಯ ಯಶಸ್ಸಿನ ಹಿಂದಿರುವ ಕಾರಣವಾಗಿದೆ. ಇದೇ ಮಾದರಿಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ವ್ಯವಸ್ಥಿತವಾಗಿ ಸಂಸ್ಕರಿಸಿ, ಗ್ರಾಹಕರಿಗೆ ಸುರಕ್ಷಿತವಾಗಿ ತಲುಪಿಸುವುದನ್ನು ಖಾತರಿಪಡಿಸಿಕೊಳ್ಳಬೇಕಾಗಿದೆ.
ಆದಾಗ್ಯೂ, ಪ್ರೊಫೆಸರ್ ಉಪಾಧ್ಯಾಯ ಹೇಳುತ್ತಾರೆ, ಬದಲಾಗುತ್ತಿರುವ ಜೀವನಶೈಲಿಯಲ್ಲಿ ಸಂಸ್ಕರಿತ ಆಹಾರವನ್ನು ವ್ಯಾಪಕವಾಗಿ ಒಪ್ಪಿಕೊಳ್ಳಬಹುದು ಎಂದು. ಇದರ ಜೊತೆಗೆ ಸರ್ಕಾರ ಹಾಗೂ ಖಾಸಗಿಯವರ ಆಸಕ್ತಿಯಿಂದಾಗಿ ಸಂಸ್ಕರಣೆ ಉದ್ಯಮದ ಮೂಲಸೌಕರ್ಯ ಭಾರತದಲ್ಲಿ ರೂಪುಗೊಳ್ಳಲಿದೆ ಎನ್ನುತ್ತಾರೆ. ಕುಲಾಂತರಿ ಆಹಾರದ ಸ್ವೀಕಾರ ಕುರಿತಾದ ಪ್ರಶ್ನೆಗೆ ಪ್ರೊಫೆಸರ್ ಉಪಾಧ್ಯಾಯ ಹೇಳುತ್ತಾರೆ, ವಿಶ್ವದ ಇತರ ಭಾಗಗಳಲ್ಲಿರುವಂತೆ ಕುಲಾಂತರಿ ಆಹಾರಗಳನ್ನು ಭಾರತದ ಮಾರುಕಟ್ಟೆಯಲ್ಲಿ ಸ್ವೀಕಾರವಾಗುವಂತಹ ಒಂದು ಚೌಕಟ್ಟು ಕ್ರಮೇಣವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು. ಇದು ಪೌಷ್ಠಿಕ ಭದ್ರತೆಗೂ ಕೂಡ ಪ್ರಸ್ತುತವಾಗಬಹುದು. ಪ್ರೊಫೆಸರ್ ಉಪಾಧ್ಯಾಯ ಮುಂದುವರಿದು ಹೇಳುತ್ತಾರೆ, “ದೇಶದಲ್ಲಿ ಆಹಾರ ಸಂಸ್ಕರಣೆಯ ನವೋದ್ಯಮ ಸಂಸ್ಕೃತಿ ಚೇತೋಹಾರಿಯಾಗಿದೆ ಮತ್ತು ಇದು ಗ್ರಾಹಕರ ಸ್ವೀಕಾರಕ್ಕೆ ಇರುವ ಕಟ್ಟುಪಾಡುಗಳನ್ನು ಮೀರಿ ನಿಲ್ಲಲು ನೆರವಾಗಲಿದೆ ಎಂದು ನಾನು ಭಾವಿಸುತ್ತೇನೆ. ಇದಲ್ಲದೆ ಸಂಸ್ಕರಣೆ ಮತ್ತು ಪೌಷ್ಠಿಕ ಸಾರವರ್ಧಿತ ಆಹಾರಗಳನ್ನು ಹೆಚ್ಚಿಸಲು ಇರುವ ಸೂಕ್ತ ತಂತ್ರಜ್ಞಾನದ ಮೂಲಸೌಕರ್ಯದ ಕೊರತೆಯನ್ನು ಇದು ಮೆಟ್ಟಿನಿಲ್ಲಲಿದೆ.” ಎನ್ನುತ್ತಾರೆ.
Published On - 6:14 pm, Thu, 12 May 22