ಆರಂಭಿಕ ಹಂತದಲ್ಲಿರುವ ಅಂಡಾಶಯದ ಕ್ಯಾನ್ಸರ್ ಗುರುತಿಸುವುದು ಹೇಗೆ?
ಅಂಡಾಶಯದ ಕ್ಯಾನ್ಸರ್ ಎಂಬುದು ಗಂಭೀರ ಕಾಯಿಲೆಗಳಲ್ಲಿ ಒಂದಾಗಿದ್ದು, ಇದನ್ನು ಸಮಯಕ್ಕೆ ಸರಿಯಾಗಿ ಪತ್ತೆ ಮಾಡಿದರೆ ಚಿಕಿತ್ಸೆ ಸಾಧ್ಯವಾಗುತ್ತದೆ. ಏಕೆಂದರೆ ಈ ರೀತಿಯ ರೋಗವು ಯಾವುದೇ ರೀತಿಯ ಎಚ್ಚರಿಕೆ ನೀಡದೆಯೇ ಸೈಲೆಂಟ್ ಆಗಿ ಬೆಳೆಯುತ್ತದೆ, ಇದರ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ನೀವು ಊಹಿಸಿರದ ಮಟ್ಟಿಗೆ ಹೋಗಿರುತ್ತದೆ ಹಾಗಾಗಿ ಇದರ ಬಗ್ಗೆ ತಿಳಿದುಕೊಂಡು ಅದನ್ನು ತಡೆಗಟ್ಟಬೇಕಾಗಿದೆ? ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಇಂದಿನ ವೇಗದ ಜೀವಶೈಲಿ (Lifestyle) ಯಲ್ಲಿ ಮಹಿಳೆಯರು ತಮ್ಮ ಆರೋಗ್ಯ (Health) ವನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಅನೇಕ ಗಂಭೀರ ಕಾಯಿಲೆಗಳು ಸಮಯಕ್ಕೆ ಸರಿಯಾಗಿ ಪತ್ತೆಯಾಗುವುದಿಲ್ಲ. ಇಂತಹ ಒಂದು ಅಪಾಯಕಾರಿ ಕಾಯಿಲೆಗಳಲ್ಲಿ ಅಂಡಾಶಯದ ಕ್ಯಾನ್ಸರ್ (Ovarian Cancer) ಕೂಡ ಒಂದು. ಇದು ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ರೋಗವು ಯಾವುದೇ ರೀತಿಯ ಎಚ್ಚರಿಕೆ ನೀಡದೆಯೇ ಸೈಲೆಂಟ್ ಆಗಿ ಬೆಳೆಯುತ್ತದೆ, ಇದರ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ನೀವು ಊಹಿಸಿರದ ಮಟ್ಟಿಗೆ ಹೋಗಿರುತ್ತದೆ ಹಾಗಾಗಿ ಈ ರೀತಿಯ ರೋಗಗಳನ್ನು ಸಕಾಲದಲ್ಲಿ ಗುರುತಿಸಲು (Early Detection) ಇದರ ಬಗ್ಗೆ ತಿಳುವಳಿಕೆ ಇರುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಅಂಡಾಶಯದ ಕ್ಯಾನ್ಸರ್ ಎಂದರೇನು? ಇದು ಕಂಡು ಬರಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.
ಈ ಕ್ಯಾನ್ಸರ್ ಕಂಡುಬರುವುದಕ್ಕೆ ಕಾರಣವೇನು?
ಅಂಡಾಶಯದ ಕ್ಯಾನ್ಸರ್ ಎಂಬುದು ಮಹಿಳೆಯರ ಅಂಡಾಶಯದಲ್ಲಿ ಕಂಡುಬರುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಈ ಅಂಡಾಶಯಗಳಲ್ಲಿನ ಜೀವಕೋಶಗಳು ಅಸಹಜವಾಗಿ ಬೆಳೆದು ಗೆಡ್ಡೆಯಾಗಲು ಪ್ರಾರಂಭಿಸಿದಾಗ, ಅದನ್ನು ಅಂಡಾಶಯದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಈ ರೋಗದ ಹಿಂದೆ ಹಲವಾರು ಕಾರಣಗಳಿರಬಹುದು. ಹೊಟ್ಟೆ ನೋವು ಅಥವಾ ಊತ, ಸ್ವಲ್ಪ ತಿಂದ ನಂತರ ಹೊಟ್ಟೆ ತುಂಬಿದ ಭಾವನೆ, ಆಗಾಗ ಮೂತ್ರ ವಿಸರ್ಜನೆ, ಆಯಾಸ ಅಥವಾ ದೌರ್ಬಲ್ಯ ಮತ್ತು ಅನಿರೀಕ್ಷಿತ ತೂಕ ನಷ್ಟ ಇವುಗಳ ಲಕ್ಷಣಗಳಾಗಿವೆ. ಇನ್ನು ಈ ಕ್ಯಾನ್ಸರ್‌ನ ಲಕ್ಷಣಗಳು ಜೀರ್ಣಕಾರಿ ಸಮಸ್ಯೆ ಅಥವಾ ಮೂತ್ರದ ಅಸ್ವಸ್ಥತೆಗಳಂತಹ ಇತರ ಸಾಮಾನ್ಯ ಕಾಯಿಲೆಗಳಂತೆಯೇ ಇರುತ್ತವೆ. ಆದರೆ ಇದರ ಲಕ್ಷಣಗಳು ಕ್ರಮೇಣ ಬೆಳವಣಿಗೆಯಾಗುತ್ತವೆ, ಹಾಗಾಗಿ ಅವುಗಳನ್ನು ಆರಂಭಿಕ ಹಂತದಲ್ಲಿ ಗುರುತಿಸುವುದು ಕಷ್ಟವಾಗುತ್ತದೆ. ಅದರಲ್ಲಿಯೂ ಅಂಡಾಶಯದ ಕ್ಯಾನ್ಸರ್ ಬಗ್ಗೆ ಅರಿವಿನ ಕೊರತೆಯಿಂದಾಗಿ, ಮಹಿಳೆಯರು ರೋಗಲಕ್ಷಣಗಳು ಕಂಡುಬಂದಾಗ ಗಂಭೀರವಾಗಿ ಪರಿಗಣಿಸುವುದಿಲ್ಲ, ಅವುಗಳನ್ನು ನಿರ್ಲಕ್ಷಿಸುತ್ತಾರೆ. ಹಾಗಾಗಿ ನಿಯಮಿತ ತಪಾಸಣೆಗಳನ್ನು ಮಾಡಿಕೊಳ್ಳಿ. ಯಾವುದೇ ರೀತಿಯ ಲಕ್ಷಣಗಳು ದೀರ್ಘಕಾಲದ ವರೆಗೆ ಮುಂದುವರಿದರೆ, ಅವುಗಳನ್ನು ಗಂಭೀರವಾಗಿ ಪರಿಗಣಿಸಿ, ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಯಾರಲ್ಲಿ ಕಂಡುಬರುತ್ತದೆ?
ವಯಸ್ಸು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಈ ರೋಗದ ಅಪಾಯ ಹೆಚ್ಚಾಗಿರುತ್ತದೆ. ಹಾಗಂತ ಇದು ಸಣ್ಣ ವಯಸ್ಸಿನವರಲ್ಲಿ ಕಂಡುಬರುವುದಿಲ್ಲ ಎಂದರ್ಥವಲ್ಲ. ಇದು ಕುಟುಂಬದ ಇತಿಹಾಸ ಅಂದರೆ ಕುಟುಂಬದ ಮಹಿಳೆಯರಿಗೆ ಯಾರಿಗಾದರೂ ಸ್ತನ, ಅಂಡಾಶಯ ಅಥವಾ ಕೊಲೊನ್ ಕ್ಯಾನ್ಸರ್ ಇದ್ದರೆ, ಅಪಾಯ ಹೆಚ್ಚಾಗಿರುತ್ತದೆ. ಅಲ್ಲದೆ, ಮದುವೆಯಾಗಿ ಬಹಳ ವರ್ಷಗಳಾದರೂ ಗರ್ಭಿಣಿಯಾಗದ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಇನ್ನು ಅನಿಯಮಿತ ಜೀವನಶೈಲಿ ಅಂದರೆ ಪ್ರತಿನಿತ್ಯವೂ ಬೊಜ್ಜು, ಜಂಕ್ ಫುಡ್, ಧೂಮಪಾನ ಮತ್ತು ಮದ್ಯಪಾನದಂತಹ ಅಂಶಗಳು ಸಹ ಅಪಾಯವನ್ನು ಹೆಚ್ಚಿಸಬಹುದು.
ಆರಂಭಿಕ ಹಂತಗಳಲ್ಲಿ ಹೇಗೆ ಗುರುತಿಸುವುದು?
ಅಂಡಾಶಯದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ಬಹಳ ಸಾಮಾನ್ಯವಾಗಿದೆ, ಅದಕ್ಕಾಗಿಯೇ ಅವುಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಬೇಗನೆ ಹೊಟ್ಟೆ ತುಂಬಿದ ಭಾವನೆ ಅಥವಾ ಹಸಿವು ಕಡಿಮೆಯಾಗುವುದು, ಆಗಾಗ ಮೂತ್ರ ವಿಸರ್ಜನೆ, ಹೊಟ್ಟೆ ಅಥವಾ ಕೆಳ ಬೆನ್ನಿನಲ್ಲಿ ನಿರಂತರ ನೋವು, ಮುಟ್ಟಿನ ಚಕ್ರದಲ್ಲಿ ಬದಲಾವಣೆ, ತ್ವರಿತ ತೂಕ ನಷ್ಟ ಅಥವಾ ಹೆಚ್ಚಳ, ಆಯಾಸ ಮತ್ತು ದೌರ್ಬಲ್ಯದಂತಹ ಕೆಲವು ಚಿಹ್ನೆಗಳಿಗೆ ಗಮನ ಕೊಡುವ ಮೂಲಕ ಇದನ್ನು ಗುರುತಿಸಬಹುದು. ಈ ಲಕ್ಷಣಗಳು 23 ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ವೈದ್ಯರನ್ನು ತಕ್ಷಣ ಸಂಪರ್ಕಿಸಿ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕಂಡುಬರುವ ಮಲಬದ್ಧತೆಗೆ ಇಲ್ಲಿದೆ ಪರಿಹಾರ
ಅದನ್ನು ತಡೆಯುವುದು ಹೇಗೆ ?
ಅಂಡಾಶಯದ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಲಾಗದಿದ್ದರೂ, ಕೆಲವು ಮುನ್ನೆಚ್ಚರಿಕೆಗಳು ಈ ಅಪಾಯವನ್ನು ಕಡಿಮೆ ಮಾಡಬಹುದು. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮ ಮಾಡುವುದು. ದೇಹದಲ್ಲಿನ ಯಾವುದೇ ರೀತಿಯ ಬದಲಾವಣೆಗಳಾದರೂ ಅದನ್ನು ನಿರ್ಲಕ್ಷಿಸಬೇಡಿ. ಅಲ್ಲದೆ, ನಿಯಮಿತವಾಗಿ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುತ್ತಿರಿ. ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸವಿದ್ದರೆ, ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ