ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು, ಜೊತೆಗೆ ಜ್ವರ,ನೆಗಡಿ,ಕೆಮ್ಮು ಎಲ್ಲವೂ ಒಟ್ಟಿಗೆ ಬಂದುಬಿಡುತ್ತವೆ. ಜ್ವರದ ಲಕ್ಷಣ ಏನಾದರೂ ಕಂಡುಬಂದರೆ ತಕ್ಷಣಕ್ಕೆ ತೆಗೆದುಕೊಳ್ಳುವುದೇ ಪ್ಯಾರೆಸಿಟಮಾಲ್. ಇದು ತಕ್ಷಣಕ್ಕೆ ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಅಥವಾ ಅಸ್ವಸ್ಥತೆಯನ್ನು ಉತ್ತಮವಾಗಿ ನಿಭಾಯಿಸಲು ಸಹಾಯ ಮಾಡಬಹುದು. ಈ ಮಾತ್ರೆಯನ್ನು ತಲೆ ನೋವು, ಬೆನ್ನು ನೋವು ಹಲ್ಲು ನೋವು, ಸಂಧಿವಾತ, ನೆಗಡಿ ಮತ್ತು ಜ್ವರವನ್ನು ವಾಸಿಮಾಡಲು ಸಹಾಯಕ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಪ್ರತೀ ಬಾರೀ ಪ್ಯಾರೆಸಿಟಮಾಲ್ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮವನ್ನುಂಟು ಮಾಡಬಹುದು ಎಂಬುದು ತಿಳಿದುಕೊಳ್ಳುವುದು ಅಗತ್ಯ.
ಪ್ಯಾರಸಿಟಮಾಲ್ ತೆಗೆದುಕೊಳ್ಳುವ ಪ್ರಮಾಣ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ವಿಭಿನ್ನವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತೂಕ ಮತ್ತು ವಯಸ್ಸಿನ ಆಧಾರದ ಮೇಲೆ ಸಣ್ಣ ಪ್ರಮಾಣದಲ್ಲಿ ನೀಡಲಾಗುತ್ತದೆ. ಪ್ಯಾರಸಿಟಮಾಲ್ನ್ನು ಆಹಾರದ ನಂತರ ತೆಗೆದುಕೊಳ್ಳಿ, ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದನ್ನು ತಪ್ಪಿಸಿ. ಖಾಲಿ ಹೊಟ್ಟೆಯಲ್ಲಿ ಪ್ಯಾರೆಸಿಟಮಾಲ್ ತೆಗೆದುಕೊಳ್ಳುವುದರಿಂದ ಗ್ಯಾಸ್ಟ್ರಿಕ್ ಕಿರಿಕಿರಿಯನ್ನು ಉಂಟುಮಾಡಬಹುದು.
ನ್ಯೂಸ್9 ಜೊತೆಗಿನ ಸಂವಾದದಲ್ಲಿ, ನಾರಾಯಣ ಹೆಲ್ತ್ ಸಿಟಿಯ ಇಂಟರ್ನಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ ನಿಧಿನ್ ಮೋಹನ್, ಪ್ಯಾರಸಿಟಮಾಲ್ನ ಸುರಕ್ಷಿತ ಬಳಕೆಯ ಬಗೆಗಿನ ಕೆಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.
“ಪ್ಯಾರೆಸಿಟಮಾಲ್ ಸೂಕ್ತ ರೀತಿಯಲ್ಲಿ ಬಳಸಿದಾಗ, ಹಲವಾರು ಪ್ರಯೋಜನಗಳನ್ನು ನೀಡುವ ಸುರಕ್ಷಿತ ಮತ್ತು ಪರಿಣಾಮಕಾರಿ ಔಷಧವಾಗಿದೆ. ಇದು ನೋವಿನಿಂದ ತಕ್ಷಣದ ಪರಿಹಾರವನ್ನು ನೀಡುತ್ತದೆ ಮತ್ತು ಜ್ವರವನ್ನು ಕಡಿಮೆ ಮಾಡುತ್ತದೆ. ಪ್ಯಾರಸಿಟಮಾಲ್ನ ಶಿಫಾರಸು ಡೋಸೇಜ್ ವಯಸ್ಸಿನ ಗುಂಪುಗಳನ್ನು ಆಧರಿಸಿ ಬದಲಾಗುತ್ತದೆ. ಶಿಶುಗಳಿಗೆ (2 ವರ್ಷ ವಯಸ್ಸಿನವರೆಗೆ), ಪ್ಯಾರೆಸಿಟಮಾಲ್ ದ್ರವ ರೂಪದಲ್ಲಿ ಬರುತ್ತದೆ. ವಯಸ್ಕರಿಗೆ ಪ್ಯಾರೆಸಿಟಮಾಲ್ ಸಾಮಾನ್ಯವಾಗಿ ಮಾತ್ರೆಗಳು ಅಥವಾ ಕ್ಯಾಪ್ಸುಲ್ಗಳಲ್ಲಿ ಬರುತ್ತದೆ” ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ಮಳೆಗಾಲ ಮತ್ತು ಮಧುಮೇಹ: ಮಧುಮೇಹಿಗಳಿಗೆ ಅಗತ್ಯವಾದ ಪಾದದ ಆರೈಕೆ ಸಲಹೆಗಳು
“ಅತಿಯಾದ ಬಳಕೆ ಅಥವಾ ಶಿಫಾರಸು ಮಾಡಲಾದ ಡೋಸೇಜ್ ಅನ್ನು ಮೀರಿದರೆ ಯಕೃತ್ತಿನ ಹಾನಿಯಂತಹ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು. ಆದ್ದರಿಂದ ನಿಗದಿತ ಮಿತಿಗಳಿಗೆ ಬದ್ಧವಾಗಿರುವುದು ಅಗತ್ಯವಾಗಿದೆ. ಸೌಮ್ಯದಿಂದ ಮಧ್ಯಮ ನೋವು, ಜ್ವರ ಅಥವಾ ಅಸ್ವಸ್ಥತೆಯ ಸಂದರ್ಭಗಳಲ್ಲಿ, ಪ್ಯಾರೆಸಿಟಮಾಲ್ ಅನ್ನು ಸೇವಿಸಬಹುದು. ಆದಾಗ್ಯೂ, ಔಷಧಿಗೆ ತಿಳಿದಿರುವ ಅಲರ್ಜಿಯಿದ್ದರೆ ಪ್ಯಾರೆಸಿಟಮಾಲ್ ತಪ್ಪಿಸುವುದು ಮುಖ್ಯ. ಇದು ವ್ಯಾಪಕವಾಗಿ ಬಳಸಲ್ಪಟ್ಟಿದ್ದರೂ ಸಹ, ವೈದ್ಯರೊಂದಿಗೆ ಸಂಪರ್ಕಿಸಿ ತೆಗೆದುಕೊಳ್ಳುವುದು ಅಗತ್ಯ ಎಂದು ಡಾ ಮೋಹನ್ ಸಲಹೆ ನೀಡುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: