ಭಾರತದಲ್ಲಿ ಕೊರೊನಾ ಎರಡನೇ ಅಲೆ ಅತ್ಯಂತ ಗಂಭೀರ ಸ್ವರೂಪಕ್ಕೆ ತಿರುಗಿದ್ದು ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಮೊದಲ ಅಲೆಗಿಂತಲೂ ಈ ಬಾರಿ ಸೋಂಕು ಅತ್ಯಂತ ವೇಗವಾಗಿ ಹಬ್ಬುತ್ತಿರುವುದರ ಜತೆಗೆ ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣ ಎರಡೂ ಆತಂಕಕಾರಿ ರೀತಿಯಲ್ಲಿ ಏರುತ್ತಿರುವುದು ವೈದ್ಯಕೀಯ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ವೈದ್ಯರು ಹೇಳುವ ಪ್ರಕಾರ ಎರಡನೇ ಅಲೆಯಲ್ಲಿ ಹರಡುತ್ತಿರುವ ಸೋಂಕು ಕಳೆದ ಬಾರಿಗಿಂತಲೂ ಹೆಚ್ಚು ಗಂಭೀರವಾಗಿದ್ದು ವೈದ್ಯಕೀಯ ಸೌಲಭ್ಯಗಳ ಅಭಾವವೂ ಉಂಟಾಗಿರುವುದರಿಂದ ಜನರು ಎಚ್ಚೆತ್ತುಕೊಳ್ಳಲೇಬೇಕಿದೆ. ಪ್ರಸ್ತುತ ಸನ್ನಿವೇಶದಲ್ಲಿ ಕೊವಿಡ್ಗೆ ತುತ್ತಾದ ನಂತರ ಗುಣಮುಖವಾಗುವುದು ಹೇಗೆ ಎಂದು ತಿಳಿಯುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊವಿಡ್ಗೆ ತುತ್ತಾಗದೇ ವೈರಾಣುವಿನಿಂದ ಬಚಾವಾಗುವುದು ಹೇಗೆ ಎಂದು ಅರಿತುಕೊಳ್ಳುವುದಕ್ಕೆ ನೀಡಬೇಕಿದೆ.
ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಇವೆಲ್ಲಕ್ಕಿಂತಲೂ ಅತಿ ಹೆಚ್ಚು ಸುರಕ್ಷಿತ ಮಾರ್ಗವೆಂದರೆ ಕೆಲ ದಿನಗಳ ಕಾಲ ಮನೆಯಿಂದ ಆಚೆ ಬಾರದೇ ಇರುವುದು. ಸೋಂಕು ಸಮುದಾಯಕ್ಕೆ ಹಬ್ಬಿರುವುದರಿಂದ ಎಷ್ಟೇ ಜಾಗರೂಕರಾಗಿದ್ದರೂ ಅದು ಯಾವ ಕ್ಷಣದಲ್ಲಿ ಬೇಕಾದರೂ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದ ನಂತರ ನೋಡೋಣ ಎಂಬ ಮನೋಭಾವವನ್ನು ಬಿಟ್ಟು ಸ್ವಯಂಪ್ರೇರಿತರಾಗಿ ಎಚ್ಚೆತ್ತುಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯ. ವೈದ್ಯರೇ ಹೇಳುವಂತೆ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ಅಭಾವ ಉಂಟಾಗಿದೆ. ರೆಮ್ಡೆಸಿವರ್ ಸೇರಿದಂತೆ ತುರ್ತು ಸಂದರ್ಭದಲ್ಲಿ ಬಳಕೆ ಮಾಡಬಹುದಾದ ಔಷಧಗಳು ದುರ್ಲಭವಾಗಿವೆ. ವೆಂಟಿಲೇಟರ್, ಐಸಿಯು ಘಟಕಗಳು ಹಾಗೂ ಸಾಮಾನ್ಯ ಬೆಡ್ಗಳೂ ಆಸ್ಪತ್ರೆಯಲ್ಲಿ ತುಂಬಿಕೊಂಡಿವೆ. ಇನ್ನೂ ಭಯ ಮೂಡಿಸುವ ವಿಚಾರವೆಂದರೆ ಸೋಂಕಿನಿಂದ ಸತ್ತವರ ಶವ ಸಾಗಣೆಗೆ ಆ್ಯಂಬುಲೆನ್ಸ್ ಸಮಸ್ಯೆ ತಲೆದೋರಿದೆ.
ಈ ಬಗ್ಗೆ ಟಿವಿ9 ಡಿಜಿಟಲ್ ಜತೆ ಮಾತನಾಡಿ ಕರಾಳ ಸತ್ಯವನ್ನು ತೆರೆದಿಟ್ಟ ವೈದ್ಯರೊಬ್ಬರು, ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ ಬರಬೇಡಿ ಅಂತ ಹೇಳುವ ಪರಿಸ್ಥಿತಿ ಬಂದಿದೆ. ತೀರಾ ಗಂಭೀರ ಪರಿಸ್ಥಿತಿಗೆ ತಲುಪಿದವರನ್ನು ಕರೆದುಕೊಂಡು ಬಂದರೂ ಅವರನ್ನು ಉಳಿಸಿಕೊಳ್ಳಲು ಬೇಕಾದ ಅಗತ್ಯ ಸೌಲಭ್ಯಗಳೇ ಸಿಗುತ್ತಿಲ್ಲ. ಇನ್ನೊಂದೆಡೆ ಇಲ್ಲಿ ಜೀವಬಿಟ್ಟವರ ಪರಿಸ್ಥಿತಿಯೂ ಕರುಣಾಜನಕವಾಗಿದೆ. ಶವಗಳನ್ನು ಸಾಗಿಸೋಕೆ ಆ್ಯಂಬುಲೆನ್ಸ್ನವರು ₹50 ಸಾವಿರ ಕೇಳ್ತಾರೆ. ಕೊಟ್ಟಿಲ್ಲ ಅಂದ್ರೆ ಇನ್ನೊಂದು ಶವ ಬಂದೇಬರುತ್ತೆ ಎನ್ನುವ ಗ್ಯಾರಂಟಿ ಅವರಿಗಿದೆ. ಸಾಮಾನ್ಯ ಜನರಿಗೆ ಕೊರೊನಾ ಬಂದು ಗಂಭೀರ ಪರಿಸ್ಥಿತಿಗೆ ಹೋದರೆ ನಿಜಕ್ಕೂ ಕಷ್ಟವಿದೆ. ಇದು ಹೀಗೇ ಮುಂದುವರೆದರೆ, ಜನ ಎಚ್ಚೆತ್ತುಕೊಳ್ಳದಿದ್ದರೆ ಮೇ 2ನೇ ವಾರದಲ್ಲಿ ಇನ್ನೂ ಭೀಕರವಾದ ಸ್ಥಿತಿಯನ್ನು ನೋಡಬೇಕಾಗುತ್ತದೆ. ಕೊರೊನಾ ಉಚ್ಛ್ರಾಯ ಹಂತಕ್ಕೆ ತಲುಪಿದಾಗ ಏನೇನು ಸಮಸ್ಯೆ ಎದುರಾಗಬಹುದು ಎಂದು ಊಹಿಸಿದರೆ ಭಯವಾಗುತ್ತದೆ. ಈಗಲೇ ದಿನಕ್ಕೆ 150ರಿಂದ 200 ಜನ ಬೆಂಗಳೂರಿನಂತಹ ನಗರಗಳಲ್ಲಿ ಜೀವ ಬಿಡುತ್ತಿದ್ದಾರೆ. ಒಬ್ಬ ವೈದ್ಯನಾಗಿ ಜೀವ ಉಳಿಸುವ ದೃಷ್ಟಿಯಿಂದ ಹೇಳುವುದಾದರೆ ಲಾಕ್ಡೌನ್ ಮಾಡಿ ಸೋಂಕು ಹರಡುವುದನ್ನು ತಪ್ಪಿಸಿ ಎಂದೇ ಆಗ್ರಹಿಸುತ್ತೇನೆ ಎನ್ನುವ ಮೂಲಕ ಸದರಿ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ರೆಮ್ಡೆಸಿವರ್ಗೆ ಸ್ಟೀರಾಯ್ಡ್ ಪರ್ಯಾಯ ಎಂದು ಸರ್ಕಾರ ಹೇಳುತ್ತಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವೈದ್ಯರು, ಸರ್ಕಾರವೇ ರೆಮ್ಡೆಸಿವರ್ ಬಳಕೆಯನ್ನು ಶಿಫಾರಸು ಮಾಡಿದ್ದು. ಸ್ಟಿರಾಯ್ಡ್ ಎಲ್ಲರಿಗೂ ಕೊಡುವುದು ಸೂಕ್ತವಲ್ಲ. ನನ್ನ ತಿಳುವಳಿಕೆಯ ಪ್ರಕಾರ ಸ್ಟಿರಾಯ್ಡ್ ಕೊಟ್ಟಾಗ ದೇಹದಲ್ಲಿನ ಸಕ್ಕರೆ ಅಂಶದಲ್ಲಿ ಏರುಪೇರು ಕಂಡುಬರುತ್ತದೆ. ಕೊರೊನಾ ಸೋಂಕಿತರ ವಿಚಾರದಲ್ಲಿ ಹೀಗೆ ರಿಸ್ಕ್ ತೆಗೆದುಕೊಳ್ಳುವುದು ಸರಿಯಲ್ಲ. ಮೇಲಾಗಿ ರೆಮ್ಡೆಸಿವರ್ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಹೀಗೆ ಮನಸೋ ಇಚ್ಛೆ ಏನನ್ನಾದರೂ ಶಿಫಾರಸು ಮಾಡುವುದು ಸರ್ಕಾರದ ಹೊಣೆಗೇಡಿತನವನ್ನು ತೋರಿಸಿಕೊಡುತ್ತದೆ ಎಂದು ಸಿಟ್ಟಾದರು.
ಆಮ್ಲಜನಕದ ಕೊರತೆ ಉಂಟಾದರೆ ಜನ ಏನು ಮಾಡಬೇಕು?
ಈ ಪ್ರಶ್ನೆಗೆ ಉತ್ತರಿಸಿದ ವೈದ್ಯರು ಮೊದಲು ಹೇಳಿದ್ದು, ಈ ಹಂತಕ್ಕೆ ಹೋಗದಿರುವಂತೆ ಸಾಧ್ಯವಾದಷ್ಟು ಪ್ರಯತ್ನಿಸಿ. ಉಸಿರಾಟದ ಸಮಸ್ಯೆ, ತೀವ್ರ ಕೆಮ್ಮು, ವಿಪರೀತ ಜ್ವರ ಇವೆಲ್ಲವೂ ಕಾಣಿಸಿಕೊಂಡರೆ ತಡಮಾಡದೇ ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಕೊರೊನಾ ಸೋಂಕು ತಗುಲಿದ ಎಲ್ಲರಿಗೂ ಆಕ್ಸಿಜನ್ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಕೆಲವರಿಗೆ ಇದು ಪ್ರಾಣಕ್ಕೆ ಅಪಾಯ ತಂದೊಡ್ಡುವ ಮಟ್ಟಿಗೆ ಸಮಸ್ಯೆ ಸೃಷ್ಟಿಸುತ್ತದೆ. ಒಮ್ಮೆ ಉಸಿರಾಟದ ಸಮಸ್ಯೆ ಉಂಟಾದರೆ ನಂತರ ಅವರಿಗೆ ಕೃತಕ ಉಸಿರಾಟ ಮಾಡಲೇಬೇಕಾಗುತ್ತದೆ. ಹೀಗಾಗಿ ಸೋಂಕು ತಗುಲಿಸಿಕೊಳ್ಳಬೇಡಿ ಎಂದೇ ಪದೇಪದೇ ಹೇಳುತ್ತೇನೆ ಎನ್ನುವ ಮೂಲಕ ಚಿಕಿತ್ಸೆಗಿಂತಲೂ ಮುಂಜಾಗರೂಕತೆಗೆ ಹೆಚ್ಚು ಒತ್ತು ಕೊಟ್ಟರು.
ಇದನ್ನೂ ಓದಿ:
ಕೇಂದ್ರದಿಂದ ಆಮ್ಲಜನಕ ಬರದಿದ್ದರೆ ಕೆಲವು ಆಸ್ಪತ್ರೆ ಮುಚ್ಚಬೇಕಾದ ಪರಿಸ್ಥಿತಿ ಬರಬಹುದು; ಸಿಎಂ ಬಿಎಸ್ ಯಡಿಯೂರಪ್ಪ
ಕೊರೊನಾ ಸೋಂಕಿತರ ಚಿಕಿತ್ಸೆಗೆ ಹೊಸ ಔಷಧ ಬಳಸಲು ಅನುಮತಿ ನೀಡಿದ ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿ