Walking: ಕಾಲುಗಳು ದೇಹದ-ಆರೋಗ್ಯದ ಆಧಾರ ಸ್ತಂಭಗಳು! ನಡೆಯಿರಿ, ನಡೆಯುವುದು ನಿಮ್ಮ ಜೀವನದ ಮಂತ್ರವಾಗಲಿ

| Updated By: ಸಾಧು ಶ್ರೀನಾಥ್​

Updated on: Feb 02, 2022 | 6:12 AM

ಮೆಲ್ಲ ಮೆಲ್ಲನೆ ನಡೆದು ಹೋಗುವ ಇರುವೆಯೂ ಸಾವಿರ ಮೈಲುಗಳ ದೂರನ್ನಾದರೂ ಕ್ರಮಿಸುತ್ತದೆ. ನಾವು ಮುಂದೆ ಸಾಗಿದಂತೆ ಗುರಿಯು ತಾನೇ ಸಮೀಪ ಸಮೀಪ ಬರುತ್ತದೆ. ನಡೆದರೆ ನಮಗರಿಯದಂತೆ ಮನಸ್ಸಿಗೂ, ದೇಹಕ್ಕೂ ಹಿತ!

Walking: ಕಾಲುಗಳು ದೇಹದ-ಆರೋಗ್ಯದ ಆಧಾರ ಸ್ತಂಭಗಳು! ನಡೆಯಿರಿ, ನಡೆಯುವುದು ನಿಮ್ಮ ಜೀವನದ ಮಂತ್ರವಾಗಲಿ
ನಿಮ್ಮ ಕಾಲು ಸಕ್ರಿಯವಾಗಿ-ಸದೃಢವಾಗಿಸಿಕೊಳ್ಳೀ ಏಕೆಂದರೆ ನಿಮ್ಮ ವಯಸ್ಸು ಪಾದದಿಂದ ಆರಂಭವಾಗುತ್ತದೆ! ಇದು ವೈಜ್ಞಾನಿಕ ಚಿಂತನೆ
Follow us on

ನಿಮ್ಮ ಕಾಲುಗಳನ್ನು ಸದಾ ಸಕ್ರಿಯವಾಗಿಡಿ ತನ್ಮೂಲಕ ಬಲವಾಗಿರಿಸಿಕೊಳ್ಳಿ. ಏಕೆಂದರೆ ನಿಮ್ಮ ವಯಸ್ಸು ಪಾದದಿಂದ ಆರಂಭವಾಗುತ್ತದೆ! ಇದು ಶುದ್ಧ ವೈಜ್ಞಾನಿಕ ಚಿಂತನೆ. ನಮ್ಮ ವಯಸ್ಸು ದಿನೇದಿನೆ ಹೆಚ್ಚಾದಂತೆ ನಮ್ಮ ಕಾಲುಗಳು ಸದಾ ಸಕ್ರಿಯವಾಗಿ ಮತ್ತು ಬಲಿಷ್ಠಗೊಳ್ಳುತ್ತಾ ಸಾಗಬೇಕು. ನಮಗೆ ವಯಸ್ಸಾಗುತ್ತಿದೆ ಎಂದು ಬಿಳಿ ಕೂದಲು ಅಥವಾ ದೊಗಲೆ ಚರ್ಮ, ಮುಖದ ಸುಕ್ಕುಗಳಿಗೆ ಹೆದರುವುದು ಬೇಡಾ (health tips). ಬದಲಿಗೆ ನಮ್ಮ ಕಾಲಿನ ಸ್ನಾಯುಗಳನ್ನು ಸಬಲಗೊಳಿಸಿಕೊಳ್ಳಬೇಕು. ಅಮೆರಿಕಾದ ಖ್ಯಾತ ಆರೋಗ್ಯ ನಿಯತಕಾಲಿಕೆ ‘ಪ್ರಿವೆನ್ಷನ್‘ prevention.com ಪ್ರಕಾರ ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯವಾದ ಮತ್ತು ಅತ್ಯಗತ್ಯವಾದುದು ಪ್ರಬಲವಾದ ಕಾಲಿನ ಸ್ನಾಯುಗಳು ಎಂದು ಹೇಳಿದೆ. ದಿನವೂ ನಡೆಯಿರಿ ಎಂಬುದು ಆ ಲೇಖನದ ಸಾರವಾಗಿದೆ. ನೀವು ಎರಡು ವಾರ ಕಾಲ ನಿಮ್ಮ ಕಾಲುಗಳ ಮೇಲೆ ಚಲಿಸದಿದ್ದರೆ ನಿಮ್ಮ ನಿಜವಾದ ಕಾಲಿನ ಬಲವು 10 ವರ್ಷಗಳಷ್ಟು ಕಡಿಮೆಯಾಗುತ್ತದೆ ಎಂದು ಎಚ್ಚರಿಸಿರುವ ಸದರಿ ನಿಯತಕಾಲಿಕೆ ನಡೆಯಿರಿ, ನಡೆಯಿರಿ, ನಡೆಯುವುದು (Walking) ನಿಮ್ಮ ಜೀವ ಮಂತ್ರವಾಗಲಿ ಎಂದು ಕಿವಿಮಾತು ಹೇಳಿದೆ.

ವ್ಯಕ್ತಿಯ ದೇಹದಲ್ಲಿನ ಅರ್ಧದಷ್ಟು ಮೂಳೆಗಳು-ಸ್ನಾಯುಗಳು ಈ ಕಾಲುಗಳಲ್ಲಿವೆ!
ವೃದ್ಧರು ಮತ್ತು ಯುವಕರು ಎರಡು ವಾರಗಳವರೆಗೆ ನಿಷ್ಕ್ರಿಯವಾಗಿದ್ದರೆ ಅವರು ತಮ್ಮ ಕಾಲುಗಳಲ್ಲಿನ ಸ್ನಾಯುಗಳ ಮೂರನೇ ಒಂದು ಭಾಗವನ್ನು ಕಳೆದುಕೊಳ್ಳುತ್ತಾರೆ ಎಂದು ಡೆನ್ಮಾರ್ಕ್‌ನ ಕೋಪನ್​ಹೆಗನ್ ವಿಶ್ವವಿದ್ಯಾನಿಲಯದ ಅಧ್ಯಯನ ಹೇಳಿದೆ. ಇದು 20-30 ವರ್ಷಗಳ ವೃದ್ಧಾಪ್ಯಕ್ಕೆ ಸಮವಂತೆ! ಆದ್ದರಿಂದ ನಡೆಯಿರಿ, ನಡೆಯಿರಿ, ಮುನ್ನುಗ್ಗಿ ನಡೆಯಿರಿ.

ಕಾಲಿನ ಸ್ನಾಯುಗಳು ದುರ್ಬಲಗೊಳ್ಳುವುದರಿಂದ ನಾವು ಪುನರ್ವಸತಿ ಮತ್ತು ವ್ಯಾಯಾಮ ಮಾಡಿದರೂ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳಬಹುದು. ಆದ್ದರಿಂದ, ನಡಿಗೆಯಂತಹ ನಿಯಮಿತ ವ್ಯಾಯಾಮ ಬಹಳ ಮುಖ್ಯ. ಕಾಲುಗಳು ನಮ್ಮ ದೇಹದ ಎಲ್ಲಾ ತೂಕವನ್ನು ಹೊರುತ್ತವೆ. ಹಾಗಾಗಿ ಕಾಲುಗಳು ನಮ್ಮ ದೇಹದ ಆಧಾರ ಸ್ತಂಭ! ಇದು ಮಾನವ ದೇಹದ ಸಂಪೂರ್ಣ ಭಾರವನ್ನು ಹೊತ್ತುಕೊಳ್ಳುತ್ತದೆ. ಆದ್ದರಿಂದ ದೈನಂದಿನ ವಾಕಿಂಗ್ ಮಾಡಿ… ಕುತೂಹಲಕಾರಿ ವಿಷಯವೇನೆಂದರೆ ಯಾವುದೇ ವ್ಯಕ್ತಿಯ ದೇಹದಲ್ಲಿನ ಅರ್ಧದಷ್ಟು (50 % ) ಮೂಳೆಗಳು ಮತ್ತು ಅವರ ಅರ್ಧದಷ್ಟು (50 % ) ಸ್ನಾಯುಗಳು ಈ ಎರಡೂ ಕಾಲುಗಳಲ್ಲಿ ಇವೆ! ಆದ್ದರಿಂದ ಅವುಗಳ ಆರೋಗ್ಯ ಭಾಗ್ಯವೇ ನಮ್ಮ ದೇಹದ ಆರೋಗ್ಯ ಭಾಗ್ಯ. ಹಾಗಾಗಿ ನಡೆಯಿರಿ, ನಡೆಯಿರಿ, ನಡೆಯುತ್ತಿರಿ!

ಮೊಣಕಾಲಿನ ಕೆಳ ಭಾಗವನ್ನು ಎರಡನೆಯ ಹೃದಯ ಎಂದು ಕರೆಯಲ್ಪಡುತ್ತದೆ:
ಮಾನವ ದೇಹದಲ್ಲಿನ ಅತಿದೊಡ್ಡ ಮತ್ತು ಬಲವಾದ ಕೀಲುಗಳು ಮತ್ತು ಮೂಳೆಗಳು ಕಾಲುಗಳಲ್ಲಿ ಇವೆ: 10,000 ಹೆಜ್ಜೆಗಳು ದಿನಂಪ್ರತಿ ನಡೆಯಬೇಕು ಎಂಬ ಮಂತ್ರ ನಿಮ್ಮದಾಗಲಿ… ಏಕೆಂದರೆ ಬಲವಾದ ಮೂಳೆಗಳು, ಬಲವಾದ ಸ್ನಾಯುಗಳು ಮತ್ತು ಸರಿಹೊಂದಿಕೊಳ್ಳುವ ಕೀಲುಗಳು ನಮ್ಮ ದೇಹದಲ್ಲಿ ಕಬ್ಬಿಣದಷ್ಟು ಬಲಿಷ್ಠ ತ್ರಿಕೋನವನ್ನು ರೂಪಿಸುತ್ತವೆ. ಮಾನವನ ದೇಹವನ್ನು ಹೊರುವುದು ಇವೇ.

ವ್ಯಕ್ತಿಯ ಜೀವಿತಾವಧಿ ಕಾಲದಲ್ಲಿ ಶೇ. 70 ರಷ್ಟು ಭಾಗವು ಮಾನವ ಸಹಜ ಚಟುವಟಿಕೆಗಳಿಗೆ ವ್ಯಯವಾಗುತ್ತದೆ. ಉಳಿದ ಶೇ. 30ರಷ್ಟು ಎರಡೂ ಪಾದಗಳಿಂದ ಕ್ಯಾಲೊರಿಗಳನ್ನು ಬರ್ನ್​ ಮಾಡಲು ಖರ್ಚು ಮಾಡುತ್ತದೆ. ಇನ್ನು, ಒಬ್ಬ ವ್ಯಕ್ತಿಯು ಚಿಕ್ಕವನಾಗಿದ್ದಾಗ, ಅವನ ತೊಡೆಗಳು 800 ಕೆಜಿ ತೂಕದ ಸಣ್ಣ ಕಾರನ್ನು ಎತ್ತುವಷ್ಟು ಬಲವಾಗಿರುತ್ತದೆ!

ಎರಡೂ ಕಾಲುಗಳು ಒಟ್ಟಿಗೆ ಶೇ. 50 ರಷ್ಟು ನರಗಳನ್ನು ಮತ್ತು ಶೇ. 50 ರಷ್ಟು ರಕ್ತನಾಳಗಳನ್ನು ಸಂಭಾಳಿಸುತ್ತವೆ ಮತ್ತು ಶೇ. 50 ರಷ್ಟು ರಕ್ತವನ್ನು ಮಾನವ ದೇಹದಲ್ಲಿ ಸರಾಗವಾಗಿ ಒಯ್ಯುತ್ತವೆ. ಇದು ದೇಹವನ್ನು ಸಂಪರ್ಕಿಸುವ ಅತಿ ದೊಡ್ಡ ರಕ್ತಪರಿಚಲನಾ ವ್ಯವಸ್ಥೆ. ಆದ್ದರಿಂದ ನಡೆಯಿರಿ, ನಡೆಯಿರಿ, ನಡೆಯುತ್ತಿರಿ!

ಕಾಲುಗಳು ಆರೋಗ್ಯಕರವಾಗಿದ್ದಾಗ ಮಾತ್ರವೇ ರಕ್ತದ ಸಮೃದ್ಧ ಹರಿವು ಸರಾಗವಾಗಿರುತ್ತದೆ. ಆದ್ದರಿಂದ, ಬಲವಾದ ಕಾಲು ಸ್ನಾಯುಗಳನ್ನು ಹೊಂದಿರುವ ಜನರು ಖಂಡಿತವಾಗಿಯೂ ಬಲವಾದ ಹೃದಯವನ್ನು ಹೊಂದಿರುತ್ತಾರೆ. ಮೊಣಕಾಲಿನ ಕೆಳ ಭಾಗವನ್ನು ಎರಡನೆಯ ಹೃದಯ ಎಂದು ಕರೆಯಲ್ಪಡುತ್ತದೆ. ವ್ಯಕ್ತಿಯ ವಯಸ್ಸು ಪಾದದಿಂದ ಮೇಲಕ್ಕೆ ಆರಂಭವಾಗುತ್ತದೆ. ವ್ಯಕ್ತಿಗೆ ವಯಸ್ಸಾದಂತೆಲ್ಲ ಯೌವನದಲ್ಲಿ ಭಿನ್ನವಾಗಿ, ಮೆದುಳು ಮತ್ತು ಕಾಲುಗಳ ನಡುವಿನ ಆಜ್ಞೆಗಳ ಪ್ರಸರಣದ ನಿಖರತೆ ಮತ್ತು ವೇಗ ಕಡಿಮೆಯಾಗುತ್ತದೆ. ಆದ್ದರಿಂದ ನಡೆಯಿರಿ -ನಡೆಯುತ್ತಿರಿ ಅಷ್ಟೇ!

ಇದರ ಜೊತೆಯಲ್ಲಿ, ಮೂಳೆ ಮಜ್ಜೆಯೆಂದು ಕರೆಯಲ್ಪಡುವ ಕ್ಯಾಲ್ಸಿಯಂ ಅಂಶ ಕಾಲಾಂತರದಲ್ಲಿ ಕಳೆದುಹೋಗುತ್ತದೆ. ಇದು ವಯಸ್ಸಾದವರಲ್ಲಿ ಮುರಿತಗಳಿಗೆ ಕಾರಣವಾಗುತ್ತದೆ. ವಯಸ್ಸಾದವರಲ್ಲಿ ಮೂಳೆ ಮುರಿತಗಳು, ಮೂಳೆ ತೊಡಕುಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಮೆದುಳಿನ ಅಪಾಯಕಾರಿ ರೋಗಗಳು ಕಾಣಿಸಿಕೊಳ್ಳಬಹುದು. ಶೇ. 15 ವಯಸ್ಸಾದ ರೋಗಿಗಳು ಸಾಮಾನ್ಯವಾಗಿ ಮೂಳೆ ಮುರಿತದ ಒಂದು ವರ್ಷದೊಳಗೆ ಸಾಯುತ್ತಾರಂತೆ. ನಮ್ಮ ಕಾಲುಗಳಿಗೆ ಕ್ರಮೇಣ ವಯಸ್ಸಾಗುತ್ತಿದ್ದರೂ ನಮ್ಮ ಕಾಲುಗಳಿಗೆ ವ್ಯಾಯಾಮ ಮಾಡುವುದು ಆಜೀವ ಕೆಲಸ. ಹಾಗಾಗಿ ವಾಕಿಂಗ್, ವಾಕಿಂಗ್, ವಾಕಿಂಗ್ ಮಾಡಿ!

ದಿನಕ್ಕೆ 10,000 ಹೆಜ್ಜೆಯ ನಡಿಗೆ ಯಾವಾಗಲೂ ಕಾಲುಗಳನ್ನು ಬಲಪಡಿಸುವ ಮೂಲಕ ಮತ್ತಷ್ಟು ವಯಸ್ಸಾಗುವುದನ್ನು ತಡೆಯಬಹುದು ಅಥವಾ ಕಡಿಮೆ ಮಾಡಬಹುದು. 365 ದಿನಗಳ ನಡಿಗೆ – ನಿಮ್ಮ ಕಾಲುಗಳಿಗೆ ಸಾಕಷ್ಟು ವ್ಯಾಯಾಮವನ್ನು ಪಡೆಯಲು ಮತ್ತು ನಿಮ್ಮ ಕಾಲಿನ ಸ್ನಾಯುಗಳನ್ನು ಆರೋಗ್ಯವಾಗಿಡಲು ದಿನಕ್ಕೆ ಕನಿಷ್ಠ 30-40 ನಿಮಿಷಗಳ ಕಾಲ ನಡೆಯಿರಿ.

ಯೋಜನಾನಾಂ ಸಹಸ್ರಂ ತು ಶನೈರ್ಯಾತಿ ಪಿಪಿಲೀಕಾ: ಮೆಲ್ಲ ಮೆಲ್ಲನೆ ನಡೆದು ಹೋಗುವ ಇರುವೆಯೂ ಸಾವಿರ ಮೈಲುಗಳ ದೂರನ್ನಾದರೂ ಕ್ರಮಿಸುತ್ತದೆ. ನಾವು ಮುಂದೆ ಸಾಗಿದಂತೆ ಗುರಿಯು ತಾನೇ ಸಮೀಪ ಸಮೀಪ ಬರುತ್ತದೆ. ನಮಗರಿಯದಂತೆ ಆರೋಗ್ಯ ಭಾಗ್ಯ ಗಳಿಸಿರುತ್ತೇವೆ. ಇದೇ ಮನೋದಾರ್ಢ್ಯ. ನಡೆದರೆ ಮನಸ್ಸಿಗೂ, ದೇಹಕ್ಕೂ ಹಿತ! (ಆಕರ -ನಿತ್ಯಸತ್ಯ)