ಮಳೆಗಾಲವಾದರೂ ಸುಡುವ ಬಿಸಿಲು ಮಾತ್ರ ಕಡಿಮೆಯಾಗಿಲ್ಲ. ಒಂದು ದಿನ ಮಳೆ ಮತ್ತೆ ನಾಲ್ಕು ದಿನ ಬಿಸಿಲು. ಇಂತಹ ಹವಾಮಾನದಿಂದ ಬಾಯಾರಿಕೆ ಹೆಚ್ಚಾಗುತ್ತದೆ. ಎಷ್ಟು ನೀರು ಕುಡಿದರೂ ಸಾಲುವುದಿಲ್ಲ. ಆ ನೀರಿನ ದಾಹ ತಣಿಸಲು ಹಲವು ಜ್ಯೂಸ್ಗಳ ಮೊರೆ ಹೋಗುತ್ತೇವೆ. ಅದರಲ್ಲಿ ತಾಜಾ ಕಬ್ಬಿನ ರಸವೂ (Sugarcane) ಒಂದು. ಇದನ್ನು ಪ್ರತಿದಿನ ಕುಡಿಯಲು ಹಾತೊರೆಯುತ್ತೇವೆ. ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಿಂಡಿ, ಪುದೀನಾ ಎಲೆಗಳನ್ನು ಸಣ್ಣದಾಗಿ ಕಟ್ ಮಾಡಿ ಹಾಕಿ ಅದಕ್ಕೆ ಸ್ವಲ್ಪ ಚಾಟ್ ಮಸಾಲಾ ಸೇರಿಸಿದರೇ, ಆಹಾ! ಈ ರುಚಿ ನೆನಸಿಕೊಂಡರೆ ಖುಷಿಯಾಗುತ್ತದೆ. ಇನ್ನು ಕುಡಿದರೇ? ಇನ್ನೆಷ್ಟು ತೃಪ್ತಿ ನೀಡಬಹುದು ಅಲ್ಲವಾ? ಆದರೆ ಅದರ ಉಲ್ಲಾಸದಾಯಕ ರುಚಿಯ ಹೊರತಾಗಿ, ಅನೇಕರು ಇದನ್ನು ದೇಹಕ್ಕೆ ಒಳ್ಳೆಯದಲ್ಲ ಎಂದು ಪರಿಗಣಿಸುತ್ತಾರೆ. ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಪಾಲ್ ಮಾಣಿಕಂ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಕರುಳಿನ ಆರೋಗ್ಯದ ಮೇಲೆ ಕಬ್ಬಿನ ರಸದ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ. ಇದಲ್ಲದೆ, ಅವರು ಈ ಪಾನೀಯವನ್ನು ಮಿತವಾಗಿ ಸೇವಿಸಲು ಸಲಹೆಯನ್ನೂ ನೀಡಿದ್ದಾರೆ. “ಭಾರತವು ವಿಶ್ವದ ಮಧುಮೇಹ ರಾಜಧಾನಿಯಾಗಿರುವುದರಿಂದ, ಹೆಚ್ಚಿನ ನೈಸರ್ಗಿಕ ಸಕ್ಕರೆ ಅಂಶದಿಂದಾಗಿ ಕಬ್ಬಿನ ರಸವನ್ನು ಮಿತವಾಗಿ ಸೇವಿಸುವುದು ಬಹಳ ಮುಖ್ಯ” ಎಂದು ಮಾಣಿಕಂ ಹೇಳಿದ್ದಾರೆ.
ವೀಡಿಯೊದಲ್ಲಿ ಅವರು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣಾಂಶ ಮತ್ತು ಬಿ ಕಾಂಪ್ಲೆಕ್ಸ್ ಜೀವಸತ್ವಗಳು ಸೇರಿದಂತೆ ಕಬ್ಬಿನ ರಸದ ಸಮೃದ್ಧ ಪೋಷಕಾಂಶಗಳ ಅಂಶವಿದ್ದು, ಇದು ಪರಿಪೂರ್ಣ ಪಾನೀಯವಾಗಿದೆ. ಅದಲ್ಲದೆ ಕಬ್ಬಿನ ರಸವು ಅಮೂಲ್ಯವಾದ ಫೈಬರ್ನ್ನು ಹೊಂದಿರುತ್ತದೆ ಮತ್ತು ಕರುಳಿನ ಆರೋಗ್ಯಕ್ಕೂ ಪ್ರಯೋಜನಕಾರಿ ಎಂದು ಮಾಣಿಕಂ ವಿವರಿಸಿದ್ದಾರೆ. ಆದರೆ ಕಬ್ಬಿನ ರಸವನ್ನು ಅತಿಯಾಗಿ ಕುಡಿಯಬಾರದು. ಏಕೆಂದರೆ ಇವು ಪ್ರಾಥಮಿಕವಾಗಿ ನೈಸರ್ಗಿಕ ಸಕ್ಕರೆಗಳನ್ನು, ವಿಶೇಷವಾಗಿ “ಸುಕ್ರೋಸ್” ಅನ್ನು ಹೊಂದಿರುತ್ತದೆ ಆದ್ದರಿಂದ ಇದನ್ನು ಮಿತವಾಗಿ ಸೇವಿಸಬೇಕು ಎಂಬುದನ್ನು ಅವರು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕಬ್ಬಿನ ಹಾಲು ದೇಹಕ್ಕೆ ತುಂಬಾ ಸಹಕಾರಿ, ಆದರೆ ಈ ಸಮಸ್ಯೆ ಇರುವವರು ಕುಡೀಬೇಡಿ
ಬ್ರೆಜಿಲ್ ಹೆಚ್ಚು ಸಕ್ಕರೆಯನ್ನು ಉತ್ಪಾದಿಸುತ್ತಿದ್ದರೂ, ಭಾರತವು ವಿಶ್ವದ “ಮಧುಮೇಹ ರಾಜಧಾನಿ” ಎಂಬ ಬಿರುದನ್ನು ಹೊಂದಿದೆ. “ಅವರಲ್ಲಿ ಫುಟ್ಬಾಲ್ ಆಡುತ್ತಾರೆ, ಆದರೆ ನಾವಿಲ್ಲಿ ಮಧುಮೇಹದಿಂದ ಪಾದದ ಶಸ್ತ್ರಚಿಕಿತ್ಸೆಗಳನ್ನು ಪಡೆಯುತ್ತಿದ್ದೇವೆ.” ಎಂದು ಮಾಣಿಕಂ ಹೇಳಿದ್ದಾರೆ. ಅಲ್ಲದೆ ನೈರ್ಮಲ್ಯಕ್ಕಾಗಿ, ರಸ್ತೆ ಬದಿಯಲ್ಲಿ ಈ ಜ್ಯೂಸ್ ಮಾರಾಟ ಮಾಡುವವರ ಬಳಿ ಕುಡಿಯದಿದ್ದರೇ ಮನೆಯಲ್ಲಿಯೇ ನೀವು ಕಬ್ಬಿನ ರಸ ತಯಾರಿಸಿ ಆನಂದಿಸಬಹುದು. ಆದರೆ ಅದನ್ನು ಅತಿಯಾಗಿ ಸೇವಿಸಬೇಡಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Mon, 14 August 23