
ಕಳೆದ ಕೆಲವು ವರ್ಷಗಳಿಂದ ಹೃದಯಾಘಾತ (Heart Attack) ಸೇರಿದಂತೆ ಹೃದಯಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಯಸ್ಸಿನ ಹಂಗಿಲ್ಲದೆ ಸಣ್ಣ ಮಕ್ಕಳು, ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಎದೆಭಾಗದಲ್ಲಿ ನೋವು ಇಲ್ಲವಾದರೆ ಹಿಡಿದುಕೊಂಡಂತಹ ಅನುಭವವಾದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಆದರೆ ಹೃದಯದ ಆರೋಗ್ಯ ತಪಾಸಣೆಗೆಂದು ಹೋದಾಗ ವೈದ್ಯರು ಮೊದಲು ಹೇಳುವ ಪರೀಕ್ಷೆಯೇ ಇಸಿಜಿ. ಆದರೆ ಹೃದ್ರೋಗ ತಜ್ಞರು ಹೇಳುವ ಪ್ರಕಾರ ಹೃದಯದ ಆರೋಗ್ಯ ಹೇಗಿದೆ ಎಂದು ತಿಳಿಯಲು ಇನ್ನು ಎರಡು ಪರೀಕ್ಷೆಗಳಿವೆಯಂತೆ. ಹಾಗಾದ್ರೆ ಹೃದ್ರೋಗ ತಜ್ಞರಾದ ಎಂ.ಡಿ ಡಿಎಂ ಡಾ. ನವೀನ್ ಭಮ್ರಿ (Cardiologist MD DM Dr. Naveen Bhamri) ಅವರು ಈ ಬಗ್ಗೆ ಹೇಳಿದ್ದೇನು? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೃದಯದ ಆರೋಗ್ಯ ತಪಾಸಣಾ ಪರೀಕ್ಷೆಗಳು
ಹೃದಯದ ಆರೋಗ್ಯದ ಸ್ಥಿತಿ ಹೇಗಿದೆ ಎಂದು ತಿಳಿಯಲು ಇಸಿಜಿ ಜೊತೆಗೆ ಇನ್ನೆರಡು ಪರೀಕ್ಷೆಗಳಿವೆ. ಈ ಎರಡು ಪರೀಕ್ಷೆಗಳನ್ನು ಮಾಡಿಸಿದರೆ ನಿಮ್ಮ ಹೃದಯದ ಆರೋಗ್ಯ ಹೇಗಿದೆ ಎನ್ನುವ ಸ್ಪಷ್ಟ ಚಿತ್ರಣವು ಸಿಗುತ್ತದೆ ಎಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇಸಿಜಿ ನಿಮ್ಮ ಹೃದಯದ ಸ್ಥಿತಿಯ ಬಗ್ಗೆ ಕೇವಲ 20-30 ಪ್ರತಿಶತದಷ್ಟು ಮಾಹಿತಿಯನ್ನು ನೀಡುತ್ತದೆ. ಆದರೆ ಟಿಎಂಟಿ ಹಾಗೂ ಇಸಿಒ ಕಾರ್ಡಿಯೋಗ್ರಫಿ ಈ ಎರಡು ಪ್ರಬಲವಾದ ಪರೀಕ್ಷೆಗಳಿವೆ ಎಂದು ವಿವರಿಸಿದ್ದಾರೆ.
ಟಿಎಂಟಿ: ರೋಗಿಯ ಹೃದಯದ ಸ್ಥಿತಿ ತಿಳಿಯಲು ಸಹಾಯಕ
ಟಿಎಂಟಿ (ಟ್ರೆಡ್ ಮಿಲ್ ಪರೀಕ್ಷೆ) ಯನ್ನು ಇಸಿಜಿ ಜೊತೆಗೆ ಮಾಡಲಾಗುತ್ತದೆ. ಇದು ಓಡಾಡುವ ಯಂತ್ರದ ಮೂಲಕ ಈ ಪರೀಕ್ಷೆಯನ್ನು ಮಾಡಿಸುತ್ತಾರೆ. ಟಿಎಂಟಿ ಯಂತ್ರದ ಮೇಲೆ ರೋಗಿಯೂ ನಿಂತ ಕೂಡಲೇ ವೈದ್ಯರು ಅದರ ವೇಗ ಹಾಗೂ ಬಲವನ್ನು ಹೆಚ್ಚಿಸುತ್ತಾರೆ. ಈ ವೇಳೆಯಲ್ಲಿ ರೋಗಿಯ ಹೃದಯ ಸ್ಥಿತಿಯನ್ನು ತಿಳಿಯಬಹುದಾಗಿದೆ. ಈ ನೈಜ ಸಮಯದ ಇಸಿಜಿಯನ್ನು ದಾಖಲಿಸುತ್ತಾರೆ. ಈ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡರೆ ಅಥವಾ ಇಸಿಜಿಯಲ್ಲಿ ಕೆಲವು ಬದಲಾವಣೆಗಳಿದ್ದರೆ ಅದು ಹೃದಯದ ಆರೋಗ್ಯ ಸಮಸ್ಯೆಯಿದೆ ಎಂದು ಸೂಚಿಸುತ್ತದೆ ಎಂದು ಇಲ್ಲಿ ಹೇಳಿದ್ದಾರೆ. ಟಿಎಂಟಿ ಪರೀಕ್ಷೆಯ ಉದ್ದೇಶವು ಒತ್ತಡದ ಸಮಯದಲ್ಲಿ ನಿಮ್ಮ ಹೃದಯ ಸ್ನಾಯುಗಳು ಆಮ್ಲಜನಕವನ್ನು ಪಡೆಯುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು. ಈ ಪರೀಕ್ಷೆಯ ವೇಳೆಯಲ್ಲಿ ಎದೆ ನೋವನ್ನು ಮೌಲ್ಯಮಾಪನ ಮಾಡುವುದಾಗಿದೆ. ಈ ಒತ್ತಡದ ಸಮಯದಲ್ಲಿ ರಕ್ತದೊತ್ತಡ ಹಾಗೂ ಹೃದಯ ಬಡಿತವನ್ನು ದಾಖಲಿಸಲಾಗುತ್ತದೆ. ಇದರಲ್ಲಿ ಏನಾದ್ರು ವ್ಯತ್ಯಾಸ ಕಂಡು ಬಂದರೆ ಹ್ಸೃದಯ ಸಂಬಂಧಿ ಸಮಸ್ಯೆಯಿದೆ ಎಂದರ್ಥ.ಈ ವೇಳೆ ರೋಗಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದ ಹೃದ್ರೋಗ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: ಚರ್ಮದ ಮೇಲೆ ಈ ಸಮಸ್ಯೆಗಳು ಕಾಣಿಸಿಕೊಂಡರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು; ನಿರ್ಲಕ್ಷ್ಯ ಬೇಡ
ಎಕೋ ಕಾರ್ಡಿಯೋಗ್ರಫಿ ಟೆಸ್ಟ್
ಹೃದಯದ ಆರೋಗ್ಯ ಹೇಗಿದೆ ಎಂದು ತಿಳಿಯಲು ಸಹಕಾರಿಯಾಗಿರುವ ಪರೀಕ್ಷೆಗಳಲ್ಲಿ ECO ಕಾರ್ಡಿಯೋಗ್ರಫಿ ಅಥವಾ ಎಕೋಕಾರ್ಡಿಯೋಗ್ರಾಮ್ ಕೂಡ ಒಂದು. ಇದು ECO ಕಾರ್ಡಿಯೋಗ್ರಫಿ ಹೃದಯದ ಅಲ್ಟ್ರಾಸೌಂಡ್ ಆಗಿದ್ದು, ಹೃದಯದ ಚಲನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದರಲ್ಲಿ ಪಡೆಯಬಹುದು. ಈ ಪರೀಕ್ಷೆಯ ಮೂಲ ಉದ್ದೇಶವೇ ಹೃದಯದ ಎಜೆಕ್ಷನ್ ಭಾಗ ಅಥವಾ ಪಂಪಿಂಗ್ ಕಾರ್ಯ ಹೇಗಿದೆ ಎಂದು ತಿಳಿಯುವುದು, ಹೃದಯ ಕವಾಟಗಳ ಸ್ಥಿತಿಯ ಅವಲೋಕನ ಮಾಡುವುದಾಗಿದೆ. ಈ ಮೂರು ಪರೀಕ್ಷೆಗಳು ಶೇಕಡಾ 80 ರಷ್ಟು ಹೃದಯದ ಆರೋಗ್ಯ ಸ್ಥಿತಿ ಹೇಗಿದೆ ಎಂದು ತಿಳಿಸುತ್ತದೆ ಎಂದಿದ್ದಾರೆ ತಜ್ಞರು.
ಇನ್ನಷ್ಟು ಆರೋಗ್ಯ ಸಂಬಂಧಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ