Chandipura Virus in Gujarat: ಚಂಡೀಪುರ ವೈರಸ್​ಗೆ 4 ಮಕ್ಕಳು ಬಲಿ; ಏನಿದು ವೈರಸ್​​​? ಲಕ್ಷಣ ಮತ್ತು ಚಿಕಿತ್ಸೆಯ ಮಾಹಿತಿ ಇಲ್ಲಿದೆ

|

Updated on: Jul 16, 2024 | 11:21 AM

ಮಕ್ಕಳಲ್ಲಿ ಹರಡುವ ಚಂಡೀಪುರ ವೈರಸ್​ ಬಗ್ಗೆ ಪ್ರತೀ ಪೋಷಕರು ತಿಳಿದುಕೊಳ್ಳುವುದು ಅವಶ್ಯಕ. ಈ ಚಂಡೀಪುರ ವೈರಸ್ ಎಂದರೇನು? ಅದು ಹೇಗೆ ಹರಡುತ್ತದೆ? ಇದರ ಆರಂಭಿಕ ಲಕ್ಷಣ ಹಾಗೂ ಚಿಕಿತ್ಸೆಯ ಬಗ್ಗೆ ಗುರುಗ್ರಾಮ್‌ನ ಸಿಕೆ ಬಿರ್ಲಾ ಆಸ್ಪತ್ರೆಯ ಡಾ ಶ್ರೇಯಾ ದುಬೆ ನೀಡಿರುವ ಮಾಹಿತಿ ಇಲ್ಲಿದೆ.

Chandipura Virus in Gujarat:  ಚಂಡೀಪುರ ವೈರಸ್​ಗೆ 4 ಮಕ್ಕಳು ಬಲಿ; ಏನಿದು ವೈರಸ್​​​? ಲಕ್ಷಣ ಮತ್ತು ಚಿಕಿತ್ಸೆಯ ಮಾಹಿತಿ ಇಲ್ಲಿದೆ
Chandipura virus in Gujarat
Follow us on

ಇತ್ತೀಚಿಗಷ್ಟೇ ಗುಜರಾತಿನ ಸಬರಕಾಂತ ಜಿಲ್ಲೆಯ ಸಿವಿಲ್ ಆಸ್ಪತ್ರೆಯಲ್ಲಿ ಚಂಡೀಪುರ ವೈರಸ್​ಗೆ 4 ಮಕ್ಕಳು ಸಾವನ್ನಪ್ಪಿದ್ದು, ಮೂವರು ಮಕ್ಕಳು ಈ ಮಾರಣಾಂತಿಕ ಸೋಂಕಿನಿಂದ ನರಳಾಟ ನಡೆಸುತ್ತಿರುವುದು ವರದಿಯಾಗಿದೆ. ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚುವರಿ ಪ್ರಕರಣಗಳು ವರದಿಯಾಗುತ್ತಿವೆ. ಮಕ್ಕಳನ್ನೇ ಹೆಚ್ಚಾಗಿ ಬಲಿ ಪಡೆದುಕೊಳ್ಳುವ ಈ ಚಂಡೀಪುರ ವೈರಸ್ ಎಂದರೇನು? ಅದು ಹೇಗೆ ಹರಡುತ್ತದೆ? ಇದರ ಆರಂಭಿಕ ಲಕ್ಷಣಗಳಾವುವು? ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.

ಏನಿದು ಚಂಡಿಪುರ ವೈರಸ್?

ಚಂಡಿಪುರ ವೈರಸ್ ಸೊಳ್ಳೆ, ನೊಣ ಮತ್ತು ಸ್ಯಾಂಡ್ ಫ್ಲೈಗಳಿಂದ ಹರಡುತ್ತದೆ. ಇದು ರಾಬ್ಡೋವಿರಿಡೆ (Rhabdoviridae) ಹರಡುವ ಸೋಂಕಾಗಿದೆ. 2003ರಲ್ಲಿ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಇದು ಭೀತಿ ಹುಟ್ಟಿಸಿತ್ತು.329 ಮಕ್ಕಳಲ್ಲಿ ಕಾಣಿಸಿಕೊಂಡು ಈ ಪೈಕಿ 183 ಮಕ್ಕಳನ್ನ ಬಲಿ ಪಡೆದಿತ್ತು. ಈ ಚಂಡಿಪುರ ವೈರಸ್ (CHPV) ವೆಸಿಕ್ಯುಲರ್ ಸ್ಟೊಮಾಟಿಟಿಸ್ ಮತ್ತು ರೇಬೀಸ್‌ಗೆ ಕಾರಣವಾಗುವ ವೈರಸ್‌ಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಇದನ್ನು ಆರಂಭದಲ್ಲಿ 1965 ರಲ್ಲಿ ಮಹಾರಾಷ್ಟ್ರದ ಚಂಡಿಪುರ ಗ್ರಾಮದಲ್ಲಿ ಕಂಡುಹಿಡಿಯಲಾಯಿತು.

ಚಂಡಿಪುರ ವೈರಸ್ ಸೋಂಕಿನ ಲಕ್ಷಣಗಳು:

ಗುರುಗ್ರಾಮ್‌ನ ಸಿಕೆ ಬಿರ್ಲಾ ಆಸ್ಪತ್ರೆಯ ಡಾ ಶ್ರೇಯಾ ದುಬೆ ಅವರು ಚಂಡಿಪುರ ವೈರಸ್ ಸೋಂಕಿನ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

  • ಅಧಿಕ ಜ್ವರ: ಚಂಡಿಪುರ ವೈರಸ್ ಸೋಂಕಿನ ಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತವೆ ಮತ್ತು ವೇಗವಾಗಿ ಪ್ರಗತಿ ಹೊಂದಬಹುದು. ತೀವ್ರ ಜ್ವರದ ಹಠಾತ್ ಆಕ್ರಮಣವು ಆರಂಭಿಕ ರೋಗಲಕ್ಷಣಗಳಲ್ಲಿ ಒಂದಾಗಿದೆ.
  • ತೀವ್ರ ತಲೆನೋವು ಮತ್ತು ವಾಂತಿ: ರೋಗಿ ಆಗಾಗ್ಗೆ ತೀವ್ರ ತಲೆನೋವು ಮತ್ತು ಆಗಾಗ್ಗೆ ವಾಂತಿ ಮಾಡುವುದು.
  • ನರವೈಜ್ಞಾನಿಕ ಲಕ್ಷಣಗಳು ಮತ್ತು ಪ್ರಜ್ಞಾಹೀನತೆ: ನಿದ್ರಾಹೀನತೆ ಮತ್ತು ಸ್ಥಿತಿಯು ಹದಗೆಟ್ಟಾಗ ರೋಗಿ ಪ್ರಜ್ಞಾಹೀನರಾಗುತ್ತಾರೆ.

ಇದನ್ನೂ ಓದಿ: Men Health:ಪುರುಷರೇ ಎಚ್ಚರ, ಅತಿಯಾದ ಮೊಬೈಲ್ ಬಳಕೆಯಿಂದ ನಿಮ್ಮ ವೀರ್ಯ ಗುಣಮಟ್ಟದ ಮೇಲೆ ನೇರ ಪರಿಣಾಮ

ಚಂಡಿಪುರ ವೈರಸ್ ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ತಡೆಗಟ್ಟುವ ಕ್ರಮಗಳು :

  • ಸೊಳ್ಳೆ  ಕಡಿತವನ್ನು ತಪ್ಪಿಸಿ: ರೋಗದ ತೀವ್ರತೆ ಮತ್ತು ತ್ವರಿತ ಪ್ರಗತಿಯಿಂದಾಗಿ ಚಂಡಿಪುರ ವೈರಸ್ ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ತಡೆಗಟ್ಟುವ ಕ್ರಮಗಳು ಅತ್ಯಗತ್ಯ. ಅದ್ದರಿಂದ  ಮಕ್ಕಳು ಸೊಳ್ಳೆ ಪರದೆ ಕೆಳಗೆ ನಿದ್ರಿಸುವುದನ್ನು ಖಚಿತಪಡಿಸಿಕೊಳ್ಳಿ.
  • ಸ್ವಚ್ಛ ಪರಿಸರವನ್ನು ಕಾಪಾಡಿಕೊಳ್ಳಿ: ಕಸದ ರಾಶಿಗಳು, ನಿಂತ ನೀರು ಮತ್ತು ಕೊಳೆಯುವ ಸಾವಯವ ತ್ಯಾಜ್ಯದಂತಹ ಯಾವುದೇ ನೊಣ, ಸೊಳ್ಳೆ ಸಂತಾನೋತ್ಪತ್ತಿ ಸ್ಥಳಗಳನ್ನು ತೆಗೆದುಹಾಕಿ. ನಿಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಮತ್ತು ಸೋಂಕುರಹಿತಗೊಳಿಸುವ ಮೂಲಕ ಸೊಳ್ಳೆಗಳ ಆವಾಸಸ್ಥಾನಗಳನ್ನು ಕಡಿಮೆ ಮಾಡಿ.
  •  ವೈದ್ಯಕೀಯ ಆರೈಕೆ: ಮಗುವಿಗೆ ಹೆಚ್ಚಿನ ತಾಪಮಾನ, ತಲೆನೋವು ಅಥವಾ ವಾಂತಿಯಂತಹ ರೋಗಲಕ್ಷಣಗಳು ಇದ್ದಲ್ಲಿ ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯಿರಿ.
  • ವೈದ್ಯಕೀಯ ಸಲಹೆಯನ್ನು ಅನುಸರಿಸಿ: ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ವೈದ್ಯಕೀಯ ವೃತ್ತಿಪರರು ನೀಡಿದ ಸಲಹೆಯನ್ನು ಅನುಸರಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:36 am, Tue, 16 July 24