Pneumonia Early Symptoms; ನ್ಯುಮೋನಿಯಾದ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಹೇಗೆ?

| Updated By: Ganapathi Sharma

Updated on: Sep 25, 2023 | 4:30 PM

Pneumonia; ಜಾಗತಿಕ ನ್ಯುಮೋನಿಯಾ ಪಟ್ಟಿಯಲ್ಲಿ ಭಾರತವು 23 ಪ್ರತಿಶತ ಪ್ರಮಾಣ ಹೊಂದಿದೆ ಮತ್ತು ಇದರಿಂದ ಸಂಭವಿಸುವ ಸಾವಿನ ಪ್ರಮಾಣವು 14 ಮತ್ತು 30 ಪ್ರತಿಶತದಷ್ಟಿದೆ. ನ್ಯುಮೋನಿಯಾದ ಕೆಲವು ಆರಂಭಿಕ ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ. ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.

Pneumonia Early Symptoms; ನ್ಯುಮೋನಿಯಾದ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ನ್ಯುಮೋನಿಯಾ ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಉಂಟಾಗುವ ಶ್ವಾಸಕೋಶದ ಸೋಂಕು. ನ್ಯುಮೋನಿಯಾ (Pneumonia) ಉಂಟು ಮಾಡುವ ಅತ್ಯಂತ ಸಾಮಾನ್ಯವಾದ ಬ್ಯಾಕ್ಟೀರಿಯಾ ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ. ಇನ್​ಫ್ಲುಯೆಂಝ (Influenza) ಅಥವಾ ಜ್ವರವು ನ್ಯುಮೋನಿಯಾದ ಸಾಮಾನ್ಯ ವೈರಲ್ ಕಾರಣವಾಗಿದೆ. ವಿಶ್ವಾದ್ಯಂತ ವರ್ಷಕ್ಕೆ 1000 ವ್ಯಕ್ತಿಗಳಲ್ಲಿ 1.5 ರಿಂದ 14 ನ್ಯುಮೋನಿಯಾ ಪ್ರಕರಣಗಳು ದಾಖಲಾಗುತ್ತವೆ. ಜಾಗತಿಕ ನ್ಯುಮೋನಿಯಾ ಪಟ್ಟಿಯಲ್ಲಿ ಭಾರತವು 23 ಪ್ರತಿಶತ ಪ್ರಮಾಣ ಹೊಂದಿದೆ ಮತ್ತು ಇದರಿಂದ ಸಂಭವಿಸುವ ಸಾವಿನ ಪ್ರಮಾಣವು 14 ಮತ್ತು 30 ಪ್ರತಿಶತದಷ್ಟಿದೆ.

ವಯಸ್ಕರಲ್ಲಿ ನ್ಯುಮೋನಿಯಾದ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಶೀತ, ಉಸಿರಾಟದ ತೊಂದರೆ, ಉಸಿರಾಟದ ಸಮಯದಲ್ಲಿ ಎದೆ ನೋವು, ಹೃದಯ ಮತ್ತು ಉಸಿರಾಟದ ವೇಗ ಹೆಚ್ಚಳ, ವಾಕರಿಕೆ, ವಾಂತಿ, ಅತಿಸಾರ ಮತ್ತು ಕೆಮ್ಮು ಹೆಚ್ಚಾಗಿ ಹಸಿರು ಅಥವಾ ಹಳದಿ ಕಫವನ್ನು ಉತ್ಪಾದನೆ. ಆದಾಗ್ಯೂ, ಮಕ್ಕಳು ನಿರ್ಜಲೀಕರಣ, ಉಸಿರಾಟದ ತೊಂದರೆ, ತಿನ್ನದಿರುವುದು, ಕೆಮ್ಮುವುದು, ಜ್ವರ, ಕಿರಿಕಿರಿ ಮತ್ತು ಕೆಮ್ಮಿನ ನಂತರ ವಾಂತಿ ಮಾಡುವಂತಹ ವಿಭಿನ್ನ ಲಕ್ಷಣಗಳನ್ನು ಹೊಂದಿರಬಹುದು.

ನ್ಯುಮೋನಿಯಾ ಸೌಮ್ಯವಾಗಿರಬಹುದು. ಆದರೆ ಇದು ತುಂಬಾ ಗಂಭೀರವಾಗಿದೆ, ವಿಶೇಷವಾಗಿ ನೀವು ಅದಕ್ಕೆ ತ್ವರಿತವಾಗಿ ಚಿಕಿತ್ಸೆ ಪಡೆಯದಿದ್ದರೆ ಸಾವಿಗೂ ಕಾರಣವಾಗಬಹುದು.

ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ;

  • ಕಫದೊಂದಿಗೆ ಜ್ವರ ಮತ್ತು ಕೆಮ್ಮು ಸ್ವಲ್ಪ ಸಮಯದ ಬಳಿಕವೂ ಕಡಿಮೆಯಾಗದಿರುವುದು ಅಥವಾ ಮತ್ತಷ್ಟು ಉಲ್ಬಣಗೊಳ್ಳುವುದು.
  • ದಿನನಿತ್ಯದ ಕೆಲಸಗಳನ್ನು ಮಾಡುವಾಗ ಅಥವಾ ವಿಶ್ರಾಂತಿ ಪಡೆಯುವಾಗ ನೀವು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರೆ.
  • ನೀವು ಉಸಿರಾಡುವಾಗ ನಿಮಗೆ ಎದೆ ನೋವು ಕಾಣಿಸಿಕೊಂಡರೆ.
  • ಶೀತ ಅಥವಾ ಜ್ವರದಿಂದ ಗುಣಮುಖರಾದ ನಂತರ ನಿಮ್ಮ ಸ್ಥಿತಿಯು ಇದ್ದಕ್ಕಿದ್ದಂತೆ ಹದಗೆಟ್ಟರೆ.
  • ನೀವು ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದರೆ, ಅಂಗಾಂಗ ಕಸಿ ಅಥವಾ ಕಾಂಡಕೋಶ (ಮೂಳೆ ಮಜ್ಜೆ) ಕಸಿ ಮಾಡಿಸಿಕೊಂಡಿದ್ದರೆ, ಅಥವಾ ನೀವು ರೋಗನಿರೋಧಕ ವ್ಯವಸ್ಥೆಯನ್ನು ನಿಗ್ರಹಿಸುವ ಔಷಧಿಗಳನ್ನು ತೆಗೆದುಕೊಂಡರೆ.
  • ನೀವು ಈಗಾಗಲೇ ಹೃದಯ ರೋಗ, ಮಧುಮೇಹ, ಅಥವಾ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಂತಹ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿದ್ದರೆ.
  • ನೀವು ಚಿಕ್ಕ ಮಗು ಅಥವಾ 65 ವರ್ಷ ಮೇಲ್ಪಟ್ಟ ವಯಸ್ಸಿನವರಾಗಿದ್ದಾರೆ.
  • ವಿಶೇಷವಾಗಿ ವಯಸ್ಸಾದವರಲ್ಲಿ ಉಸಿರಾಟದ ರೋಗಲಕ್ಷಣಗಳು ಕಾಣಿಸಬಹುದು.

ನ್ಯುಮೋನಿಯಾ ರೋಗನಿರ್ಣಯ ಹೇಗೆ?

ನ್ಯುಮೋನಿಯಾವನ್ನು ಸಾಮಾನ್ಯವಾಗಿ ವೈದ್ಯಕೀಯ ಇತಿಹಾಸ ಮತ್ತು ದೈಹಿಕ ಪರೀಕ್ಷೆ ಮತ್ತು ಎದೆಯ ಎಕ್ಸ್-ರೇ, ರಕ್ತ ಪರೀಕ್ಷೆಗಳು, ಕಫ ಪರೀಕ್ಷೆ ಮೂಲಕ ರೋಗನಿರ್ಣಯ ಮಾಡಲಾಗುತ್ತದೆ. ರೋಗಿಗಳ ಕೆಲವು ಉಪವಿಭಾಗಗಳಲ್ಲಿ CT ಸ್ಕ್ಯಾನ್ ಮತ್ತು ಬ್ರಾಂಕೋಸ್ಕೋಪಿ ಅಗತ್ಯವಿದೆ.

ನ್ಯುಮೋನಿಯಾಕ್ಕೆ ಚಿಕಿತ್ಸೆ ಏನು?

ಆರಂಭದಲ್ಲಿ ನ್ಯುಮೋನಿಯಾ ಹೊಂದಿರುವವರನ್ನು, ಅದನ್ನು ಉಂಟುಮಾಡುವ ಸಾಧ್ಯತೆಯಿರುವ ಜೀವಿಗಳ ಪ್ರಕಾರವನ್ನು ಆಧರಿಸಿ ಮೌಖಿಕ ಪ್ರತಿಜೀವಕಗಳ ಮೂಲಕ ಮನೆಯಲ್ಲಿ ಚಿಕಿತ್ಸೆ ನೀಡುತ್ತಾರೆ.

ಹೃದಯ ಬಡಿತ, ಉಸಿರಾಟದ ದರ, ತಾಪಮಾನ ಮತ್ತು ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಗಂಭೀರವಾಗಿ ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಅಪಾಯ ಹೆಚ್ಚಿರುವ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಬಹುದು. ಆಸ್ಪತ್ರೆಗೆ ದಾಖಲಾದವರಿಗೆ ಸಾಮಾನ್ಯವಾಗಿ ಇಂಟ್ರಾವೆನಸ್ ಪ್ರತಿಜೀವಕಗಳನ್ನು ನೀಡಲಾಗುತ್ತದೆ. ಮೂರರಿಂದ ಐದು ದಿನಗಳ ಪ್ರತಿಜೀವಕ ಚಿಕಿತ್ಸೆಯ ನಂತರ ಹೆಚ್ಚಿನ ರೋಗಿಗಳು ಸುಧಾರಣೆ ಕಾಣಲು ಪ್ರಾರಂಭಿಸುತ್ತಾರೆ, ಆದರೆ ಆಸ್ಪತ್ರೆಗೆ ದಾಖಲಾದ ರೋಗಿಗಳು ಮೂರು ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಿಸಲು ಸಾಧ್ಯವಾಗುವುದಿಲ್ಲ.

ನ್ಯುಮೋನಿಯಾ ತಡೆಗಟ್ಟುವಿಕೆ ಹೇಗೆ?

ನ್ಯುಮೋನಿಯಾ ಮತ್ತು ಅದರ ತೊಡಕುಗಳನ್ನು ತಡೆಗಟ್ಟಲು ವ್ಯಾಕ್ಸಿನೇಷನ್ ಒಂದು ಪ್ರಮುಖ ಮಾರ್ಗವಾಗಿದೆ. ನ್ಯುಮೋಕೊಕಲ್ ಲಸಿಕೆ ಮತ್ತು ಇನ್ಫ್ಲುಯೆನ್ಸ ಅಥವಾ ಫ್ಲೂ ಲಸಿಕೆಗಳು ಶಿಫಾರಸು ಮಾಡುವ, ಅತ್ಯಂತ ಸಾಮಾನ್ಯವಾಗಿ ಲಭ್ಯವಿರುವ ಲಸಿಕೆಗಳಾಗಿವೆ.

ನ್ಯುಮೋನಿಯಾವನ್ನು ತಡೆಗಟ್ಟಲು ಧೂಮಪಾನವನ್ನು ತ್ಯಜಿಸುವುದು ಒಂದು ಪ್ರಮುಖ ಹಂತವಾಗಿದೆ. ಸೋಪ್ ಮತ್ತು ನೀರಿನಿಂದ ಆಗಾಗ್ಗೆ ಕೈ ತೊಳೆಯುವುದು ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್‌ಗಳಂತಹ ಸೋಂಕು ನಿಯಂತ್ರಣ ಅಭ್ಯಾಸಗಳು ತುಂಬಾ ಪರಿಣಾಮಕಾರಿಯಾಗಿರುತ್ತವೆ.

ಇದನ್ನೂ ಓದಿ: ಒತ್ತಡವೇ ನಿಮ್ಮ ಹೃದಯದ ಅತಿದೊಡ್ಡ ಶತ್ರು; ಯಾಕೆ ಗೊತ್ತಾ?

ನ್ಯುಮೋನಿಯಾ ರೋಗಲಕ್ಷಣಗಳನ್ನು ಹೊಂದಿರುವವರು ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು, ಅವರು ಬಳಸಿದ ಟಿಶ್ಯೂ ಪೇಪರ್‌ಗಳನ್ನು ತಕ್ಷಣವೇ ವಿಲೇವಾರಿ ಮಾಡಬೇಕು ಮತ್ತು ಆಗಾಗ್ಗೆ ತಮ್ಮ ಕೈಗಳನ್ನು ತೊಳೆಯಬೇಕು. ಸಾಂಕ್ರಾಮಿಕ ರೋಗವಾಗಿದ್ದು, ಪೀಡಿತರ ಎಂಜಲಿನಿಂದ, ಸೀನಿನಿಂದ ಹರಡಬಹುದು. ಹೀಗಾಗಿ ಇವು ಇನ್ನೊಬ್ಬರಿಗೆ ತಗುಲದಂತೆ ಎಚ್ಚರವಹಿಸಬೇಕು.

ಡಾ. ಸುನಿಲ್ ಬೋಹ್ರಾ

(ಲೇಖಕರು: ಹಿರಿಯ ಸಲಹೆಗಾರರು – ಆಂತರಿಕ ಔಷಧ ವಿಭಾಗ, ಫೋರ್ಟಿಸ್ ಆಸ್ಪತ್ರೆ, ರಿಚ್ಮಂಡ್ ರಸ್ತೆ, ಬೆಂಗಳೂರು)