
ಅಸ್ತಮಾ (Asthma) ಶ್ವಾಸಕೋಶವನ್ನು ಬಾಧಿಸುವ ಉಸಿರಾಟ (breathing) ಸಂಬಂಧಿತ ಕಾಯಿಲೆಯಾಗಿದ್ದು, ಧೂಳು, ಹೊಗೆ, ಮಾಲಿನ್ಯ ಇತ್ಯಾದಿ ಕಾರಣಗಳಿಂದ ಇಂದು ಅನೇಕ ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ. ಈ ಕಾಯಿಲೆ ಉಲ್ಭಣಗೊಂಡರೆ ಜೀವಕ್ಕೆ ಅಪಾಯಕಾರಿ. ಆದ್ದರಿಂದ ಸೂಕ್ತ ಚಿಕಿತ್ಸೆಯ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ಅಸ್ತಮಾ ಕಾಯಿಲೆಯ ವಿರುದ್ಧ ಗೆಲ್ಲಬಹುದು. ಮತ್ತು ಸರಿಯಾದ ಸಮಯಕ್ಕೆ ಅಸ್ತಮಾ ಇರುವುದನ್ನು ಗುರುತಿಸುವ ಮೂಲಕ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ಆದರೆ ಹೆಚ್ಚಿನವರು ಈ ಕಾಯಿಲೆಗೆ ಸರಿಯಾದ ಪರಿಹಾರವಿಲ್ಲ, ಏನೇ ಮಾಡಿದರೂ ಈ ಕಾಯಿಲೆ ಗುಣಮುಖವಾಗುವುದಿಲ್ಲ ಎಂದು ಹೇಳುತ್ತಿರುತ್ತಾರೆ. ಈ ನಿಟ್ಟಿನಲ್ಲಿ ರೋಗದ ಪತ್ತೆಹಚ್ಚುವಿಕೆ ಹಾಗೂ ಅದಕ್ಕಿರುವ ಸಕಾಲಿಕ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ ತಿಂಗಳ ಮೊದಲ ಮಂಗಳವಾರ ವಿಶ್ವ ಅಸ್ತಮಾ (World Asthma Day) ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ಅಸ್ತಮಾದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ ತಿಂಗಳ ಮೊದಲ ಮಂಗಳವಾರ ವಿಶ್ವ ಅಸ್ತಮಾ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 6 ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಅಸ್ತಮಾ ದಿನವನ್ನು 1998 ರಲ್ಲಿ ಗ್ಲೋಬಲ್ ಇನಿಶಿಯೇಟಿವ್ ಫಾರ್ ಅಸ್ತಮಾ (GINA) ಎಂಬ ಸಂಸ್ಥೆಯು ಪ್ರಾರಂಭಿಸಿತು. ಈ ದಿನವನ್ನು ಪ್ರಾರಂಭಿಸುವ ಉದ್ದೇಶವು ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಆಸ್ತಮಾದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೆಗೆದುಹಾಕುವುದಾಗಿತ್ತು. ಅಂದಿನಿಂದ ಈ ವಿಶೇಷ ದಿನವನ್ನು ಪ್ರತಿ ವರ್ಷ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ.
ಹೆಚ್ಚುತ್ತಿರುವ ಮಾಲಿನ್ಯ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ, ಜನರು ಚಿಕ್ಕ ವಯಸ್ಸಿನಲ್ಲಿಯೇ ಅಸ್ತಮಾ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜನರು ಈ ಉಸಿರಾಟದ ಕಾಯಿಲೆಯನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ ಮತ್ತು ಈ ರೋಗಕ್ಕೆ ಸಕಾಲಿಕ ಚಿಕಿತ್ಸೆಯನ್ನು ಕೂಡ ಪಡೆಯುವುದಿಲ್ಲ. ಆದರೆ ಸೂಕ್ತ ಹಾಗೂ ಸಕಾಲಿಕ ಚಿಕಿತ್ಸೆಯ ಮೂಲಕ ಈ ರೋಗದಿಂದ ಮುಕ್ತಿಯನ್ನು ಪಡೆಯಬಹುದು. ಹೀಗೆ ಅಸ್ತಮಾ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಈ ದಿನದಂದು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ ಆಸ್ತಮಾಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ತೆಗೆದುಹಾಕಬಹುದು. ಅರಿವು ಹೆಚ್ಚಾದಂತೆ, ಜನರು ತಮ್ಮ ರೋಗಲಕ್ಷಣಗಳನ್ನು ಗುರುತಿಸಬಹುದು ಮತ್ತು ಸಕಾಲಿಕ ಚಿಕಿತ್ಸೆಯನ್ನು ಪಡೆಯಲು ಪ್ರಾರಂಭಿಸಬಹುದು. ಇದಲ್ಲದೆ ಜಾಗೃತಿ ಅಭಿಯಾನಗಳು ಅಸ್ತಮಾ ರೋಗಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಕಬ್ಬಿನ ಜ್ಯೂಸ್ vs ಎಳ ನೀರು : ಬೇಸಿಗೆಯಲ್ಲಿ ಆರೋಗ್ಯಕ್ಕೆ ಉತ್ತಮ ಯಾವುದು?
ಅಸ್ತಮಾ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದರಲ್ಲಿ ರೋಗಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. ಕೆಲವೊಮ್ಮೆ ಈ ಸಮಸ್ಯೆ ಇದ್ದಕ್ಕಿದ್ದಂತೆ ತೀವ್ರಗೊಳ್ಳುತ್ತದೆ. ಧೂಳು, ಹೊಗೆ, ಮಾಲಿನ್ಯ ಇದರಿಂದ ಹೆಚ್ಚಾಗಿ ಅಸ್ತಮಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸರಿಯಾದ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಈ ಸಮಸ್ಯೆ ಹೆಚ್ಚಾಗಬಹುದು ಮತ್ತು ನಿಮ್ಮ ಜೀವಕ್ಕೆ ಅಪಾಯಕಾರಿ. ಆದ್ದರಿಂದ ಈ ಕಾಯಿಲೆ ಕಾಣಿಸಿಕೊಂಡಾಗ ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಅತ್ಯಗತ್ಯ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ