
ಯಾವುದಾದರೂ ಅಪಘಾತ, ಅವಘಡಗಳಾದ ಸಂದರ್ಭದಲ್ಲಿ ವೃತ್ತಿನಿರತ ವೈದ್ಯರು ಚಿಕಿತ್ಸೆ ಪ್ರಾರಂಭಿಸುವ ಮೊದಲು ತುರ್ತು ಸಂದರ್ಭದಲ್ಲಿ ಗಾಯಾಳು ಅಥವಾ ರೋಗಿಗೆ ಸಕಾಲದಲ್ಲಿ ನೀಡಲಾಗುವ ಆರೈಕೆ ಚಿಕಿತ್ಸೆಯೇ ಪ್ರಥಮ ಚಿಕಿತ್ಸೆ (First Aid). ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಿದರೆ, ಇದರ ಸಹಾಯದಿಂದ ವ್ಯಕ್ತಿಯನ್ನು ಗಂಭೀರ ಹಾನಿಯಿಂದ ತಪ್ಪಿಸಬಹುದು. ಒಟ್ಟಿನಲ್ಲಿ ಈ ಪ್ರಥಮ ಚಿಕಿತ್ಸೆಯನ್ನು ಸಕಾಲದಲ್ಲಿ ಜೀವ ಉಳಿಸುವ ಸಂಜೀವಿನಿ ಅಂತಾನೇ ಹೇಳಬಹುದು. ಇದು ಪ್ರತಿಯೊಬ್ಬರಿಗೂ ತಿಳಿದಿರಬೇಕಾದ ಪ್ರಾಥಮಿಕ ಕೌಶಲವಾಗಿದೆ. ಹಾಗಾಗಿ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್ ಎರಡನೇ ಶನಿವಾರ ವಿಶ್ವ ಪ್ರಥಮ ಚಿಕಿತ್ಸಾ (World First Aid Day) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
1859 ರಲ್ಲಿ ನಡೆದ ಸೋಲ್ಫೆರಿನೊ ಕದನದ ಸಮಯದಲ್ಲಿ, ಯುವ ಉದ್ಯಮಿ ಹೆನ್ರಿ ಡ್ಯೂನಾಂಟ್ ಹತ್ಯಾಕಾಂಡದಲ್ಲಿ ಗಾಯಗೊಂಡ ಅನೇಕರಿಗೆ ಪುನರ್ವಸತಿ ಕಲ್ಪಿಸಲು ಸಹಾಯ ಮಾಡಿದರು. ಈ ಘಟನೆಯು ಅವರನ್ನು “ಎ ಮೆಮೋರಿ ಆಫ್ ಸೋಲ್ಫೆರಿನೊ” ಎಂಬ ಪುಸ್ತಕ ಬರೆಯಲು ಪ್ರೇರೇಪಿಸಿತು. ಅದರಲ್ಲಿ ಅವರು ತಮ್ಮ ಅನುಭವಗಳನ್ನು ವಿವರಿಸಿದರು. ನಂತರ ಹೆನ್ರಿ ಡ್ಯೂನಾಂಟ್ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯನ್ನು ಸ್ಥಾಪಿಸಿದರು. ಇದು ಪ್ರಥಮ ವೈದ್ಯಕೀಯ ಆರೈಕೆ ಮತ್ತು ಜಾಗೃತಿ ಮೂಡಿಸಲು ಮೀಸಲಾಗಿರುವ ಸಂಸ್ಥೆಯಾಗಿದೆ. ಈ ಸಂಸ್ಥೆ 2000 ನೇ ಇಸವಿಯಲ್ಲಿ ರೆಡ್ ಕ್ರೆಸೆಂಟ್ ಸೊಸೈಟೀಸ್ ಒಕ್ಕೂಟದ (IFRC) ಜೊತೆಯಾಗಿ ವಿಶ್ವ ಪ್ರಥಮ ಚಿಕಿತ್ಸಾ ದಿನವನ್ನು ಆಚರಿಸಲು ಆರಂಭಿಸಿತು. ಈ ದಿನದ ಉದ್ದೇಶವು ಪ್ರಥಮ ಚಿಕಿತ್ಸೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಈ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ ಎರಡನೇ ಶನಿವಾರ ಆಚರಿಸಲಾಗುತ್ತದೆ.
ಇದನ್ನೂ ಓದಿ: ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ, ಈಸಬೇಕು ಇದ್ದು ಜಯಿಸಬೇಕು
ಪ್ರಥಮ ಚಿಕಿತ್ಸೆಯ ಸಹಾಯದಿಂದ ಜೀವಗಳನ್ನು ಉಳಿಸಬಹುದು. ವಿಶೇಷವಾಗಿ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯು ಜೀವಗಳನ್ನು ಉಳಿಸುತ್ತವೆ. ಇದು ಜೀವವನ್ನು ಸಂರಕ್ಷಿಸುವುದು ಮಾತ್ರವಲ್ಲದೆ ಗಾಯಗೊಂಡ ವ್ಯಕ್ತಿಗೆ ಮತ್ತಷ್ಟು ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಇದರ ಮಹತ್ವದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಈ ದಿನದಂದು ಪ್ರಥಮ ಚಿಕಿತ್ಸಾ ಆರೈಕೆಯ ಮಹತ್ವ ಮತ್ತು ಇದರ ಮೂಲಕ ಅಮೂಲ್ಯ ಜೀವವನ್ನು ಹೇಗೆ ಉಳಿಸಬಹುದು ಎಂಬುದರ ಕುರಿತು ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ದಿನದಂದು ಶಾಲೆಗಳು-ಕಾಲೇಜುಗಳು ಮತ್ತು ರೆಡ್‌ಕ್ರಾಸ್‌ನಂತಹ ಸಂಸ್ಥೆಗಳಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 am, Sat, 13 September 25