ಆರೋಗ್ಯವೇ ಭಾಗ್ಯ, ಅದಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಹೌದು, ಸದೃಢ ಆರೋಗ್ಯವಿದ್ದರೆ ಏನು ಬೇಕಾದರೂ ಕೂಡ ಮಾಡಬಹುದು. ಆದರೆ ಇಂದಿನ ಒತ್ತಡ ಭರಿತ ಜೀವನ ಶೈಲಿಯಿಂದಾಗಿ ಆರೋಗ್ಯ ಸಮಸ್ಯೆಗಳು ಎಲ್ಲರನ್ನು ಬಿಡದೇ ಕಾಡುತ್ತಿದೆ. ಹೀಗಾಗಿ ಆಸ್ಪತ್ರೆ ಚಿಕಿತ್ಸೆಯೆಂದು ಅಲೆಯುವವರ ಸಂಖ್ಯೆಯು ಹೆಚ್ಚಾಗಿದೆ. ಎಲ್ಲರೂ ಕೂಡ ಕಾಯಿಲೆಗಳು ಬಂದಾಗಲೇ ಈ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಅಲ್ಲಿಯವರೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಗಮನ ಹರಿಸುವುದೇ ಇಲ್ಲ. ದೈಹಿಕ ಹಾಗೂ ಮಾನಸಿಕ ಆರೋಗ್ಯವು ಎಷ್ಟು ಮುಖ್ಯ ಎನ್ನುವ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.
1948 ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡಲು 61 ದೇಶಗಳು ಒಟ್ಟು ಸೇರಿ ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಒಪ್ಪಂದಕ್ಕೆ ಸಹಿ ಹಾಕಿತು. ಆದಾದ ಬಳಿಕ ಮೊದಲ ಬಾರಿಗೆ ವಿಶ್ವ ಆರೋಗ್ಯ ದಿನವನ್ನಾಗಿ 1949ರಲ್ಲಿ ಜುಲೈ 22ರಂದು ಆಚರಣೆ ಮಾಡಲಾಯಿತು. ನಂತರದಲ್ಲಿ ಏಪ್ರಿಲ್ 07ಕ್ಕೆ ವಿಶ್ವ ಆರೋಗ್ಯ ದಿನವನ್ನಾಗಿ ಆಚರಣೆ ಮಾಡಲು ನಿರ್ಧರಿಸಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಇದನ್ನೂ ಓದಿ: ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವೇನು? ಈ ತಪ್ಪು ಮಾಡಬೇಡಿ
ಆರೋಗ್ಯದ ಕಾಳಜಿ, ಸೋಂಕುಗಳ ವಿರುದ್ಧ ತೆಗೆದುಕೊಳ್ಳಬಹುದಾದ ಚುಚ್ಚುಮದ್ದುಗಳು ಹೀಗೆ ಹತ್ತು ಹಲವು ವಿಚಾರಗಳ ಬಗೆಗೆ ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ. ಈ ದಿನದಂದು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಈ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಕೊಂಡು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತವೆ.