World Hepatitis Day 2021: ಹೆಪಟೈಟಿಸ್ ಸೋಂಕು ಪಿತ್ತಜನಕಾಂಗಕ್ಕೆ ಹಾನಿಕಾರಕ; ಮುನ್ನೆಚ್ಚರಿಕೆಯ ಬಗ್ಗೆ ಗಮನಹರಿಸಿ

| Updated By: preethi shettigar

Updated on: Jul 28, 2021 | 11:56 AM

ಡಬ್ಲ್ಯುಎಚ್‌ಒ ಪ್ರಕಾರ, 2020 ರಲ್ಲಿ ಭಾರತದ, ಸುಮಾರು 4 ಕೋಟಿ ಜನರು ಹೆಪಟೈಟಿಸ್ ಬಿ ಸೋಂಕಿಗೆ ಒಳಗಾಗಿದ್ದಾರೆ ಮತ್ತು 60 ಲಕ್ಷದಿಂದ 1.2 ಕೋಟಿ ಜನರು ಹೆಪಟೈಟಿಸ್ ಸಿ ಸೋಂಕಿಗೆ ಒಳಗಾಗಿದ್ದಾರೆ.

World Hepatitis Day 2021: ಹೆಪಟೈಟಿಸ್ ಸೋಂಕು ಪಿತ್ತಜನಕಾಂಗಕ್ಕೆ ಹಾನಿಕಾರಕ; ಮುನ್ನೆಚ್ಚರಿಕೆಯ ಬಗ್ಗೆ ಗಮನಹರಿಸಿ
ವಿಶ್ವ ಹೆಪಟೈಟಿಸ್ ದಿನ
Follow us on

ಹೆಪಟೈಟಿಸ್ ಯಕೃತ್ತನ್ನು ಅಥವಾ ಪಿತ್ತಜನಕಾಂಗವನ್ನು ನಿಧಾನವಾಗಿ ನಾಶಪಡಿಸುವ ಒಂದು ಕಾಯಿಲೆ. ಹೆಪಟೈಟಿಸ್‌ ಸೋಂಕಿನಲ್ಲಿ ಎ, ಬಿ, ಡಿ, ಇ ಎಂಬ ವಿಧಗಳಿವೆ. ಹೀಗಾಗಿ ಈ ರೋಗದ ವಿರುದ್ಧ ಮುನ್ನೆಚ್ಚರಿಕೆ ವಹಿಸುವುದು, ಈ ರೋಗದ ಲಕ್ಷಣಗಳನ್ನು ಅರಿಯುವುದು ಮುಖ್ಯ. ಆದರೆ ಈ ಕಾಯಿಲೆ ಬಗ್ಗೆ ಹೆಚ್ಚಿನ ಜನರಲ್ಲಿ ನಿರ್ಲಕ್ಷ್ಯ ಭಾವನೆ ಇದೆ. ಈ ಕಾರಣದಿಂದಾಗಿ ಲಕ್ಷಾಂತರ ಜನರು ಹೆಪಟೈಟಿಸ್ (World Hepatitis Day 2021) ​ನಿಂದಾಗಿ ಸಾವಿಗೀಡಾಗಿದ್ದಾರೆ. ಹೀಗಾಗಿ ಹೆಪಟೈಟಿಸ್​ ಸೋಂಕು ಹೇಗೆ ಹರಡುತ್ತದೆ ಮತ್ತು ಈ ಕಾಯಿಲೆ ಬಾರದಂತೆ ತಡೆಯುವುದು ಹೇಗೆ? ಎಂಬ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 28 ಅನ್ನು ವಿಶ್ವ ಹೆಪಟೈಟಿಸ್ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೆಪಟೈಟಿಸ್ ಅನ್ನು ಭಾರತದ ಪ್ರಮುಖ ಆರೋಗ್ಯ ಕಾಳಜಿಯ ಭಾಗ ಎಂದು ಗುರುತಿಸಿದೆ. ಡಬ್ಲ್ಯುಎಚ್‌ಒ ಪ್ರಕಾರ, 2020 ರಲ್ಲಿ ಭಾರತದ, ಸುಮಾರು 4 ಕೋಟಿ ಜನರು ಹೆಪಟೈಟಿಸ್ ಬಿ ಸೋಂಕಿಗೆ ಒಳಗಾಗಿದ್ದಾರೆ ಮತ್ತು 60 ಲಕ್ಷದಿಂದ 1.2 ಕೋಟಿ ಜನರು ಹೆಪಟೈಟಿಸ್ ಸಿ ಸೋಂಕಿಗೆ ಒಳಗಾಗಿದ್ದಾರೆ. ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಕಾರ, ಭಾರತದಲ್ಲಿ ಸುಮಾರು 2,50,000 ಜನರು ಹೆಪಟೈಟಿಸ್ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ.

ಇತಿಹಾಸ
ಪ್ರತಿ ವರ್ಷ ಜುಲೈ 28 ರಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಸ್ಯಾಮ್ಯುಯೆಲ್ ಬ್ಲೂಮ್‌ಬರ್ಗ್ ಅವರ ಜನ್ಮದಿನದಂದು ಹೆಪಟೈಟಿಸ್ ದಿನ ಎಂದು ಆಚರಿಸಲಾಗುತ್ತದೆ. ಬ್ಲೂಮ್‌ಬರ್ಗ್ ಹೆಪಟೈಟಿಸ್ ಬಿ ವೈರಸ್ (ಎಚ್‌ಬಿವಿ) ಅನ್ನು ಕಂಡುಹಿಡಿದರು. ಹೆಪ್-ಬಿ ವೈರಸ್‌ಗೆ ಚಿಕಿತ್ಸೆ ನೀಡಲು, ರೋಗನಿರ್ಣಯ ಪರೀಕ್ಷೆ ಮತ್ತು ಲಸಿಕೆಯನ್ನು ಸಹ ಇವರು ಅಭಿವೃದ್ಧಿಪಡಿಸಿದರು. ಹೀಗಾಗಿ ಹೆಪಟೈಟಿಸ್ ದಿನವನ್ನು ಅವರ ಜನ್ಮದಿನದಂದೇ ಆಚರಿಸಲಾಗುತ್ತದೆ.

ಹೆಪಟೈಟಿಸ್ ಎ ಮತ್ತು ಇ ಅಷ್ಟು ಅಪಾಯಕಾರಿಯಲ್ಲ. ಆದರೆ ಹೆಪಟೈಟಿಸ್ ಬಿ, ಸಿ ಮತ್ತು ಡಿ ವೈರಸ್​ಗಳು ಯಕೃತ್ತಿನ ಶಕ್ತಿಯನ್ನು ಕುಂದಿಸುತ್ತದೆ. ಕ್ರಮೇಣ ಯಕೃತ್ತಿನ ಕ್ಯಾನ್ಸರ್​ಗೆ ಇದು ಕಾರಣವಾಗುತ್ತದೆ. ಹೀಗಾಗಿ ಹೆಪಟೈಟಿಸ್ ದಿನವನ್ನು ಈ ವೈರಸ್‌ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮುಖ್ಯ ಉದ್ದೇಶದಿಂದ ಆಚರಿಸಲಾಗುತ್ತದೆ. 2030 ರ ವೇಳೆಗೆ ಹೆಪಟೈಟಿಸ್ ನಿರ್ಮೂಲನೆ ಮಾಡುವ ಗುರಿಯೊಂದಿಗೆ ಈ ವರ್ಷ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತಿದೆ. ಕೊರೊನಾ ಸೋಂಕು ಹರಡುವಿಕೆಯೊಂದಿಗೆ, ವಿಶ್ವಾದ್ಯಂತ ಹೆಪಟೈಟಿಸ್‌ಗೆ ಸಂಬಂಧಿಸಿದ ಕಾಯಿಲೆಗಳಿಂದ ಪ್ರತಿ 30 ಸೆಕೆಂಡಿಗೆ ಒಬ್ಬ ವ್ಯಕ್ತಿ ಸಾಯುತ್ತಿದ್ದಾನೆ. ಅದನ್ನು ತಡೆಗಟ್ಟಲು ಶ್ರಮವಹಿಸುವ ಆಶಯದೊಂದಿಗೆ ಈ ವರ್ಷ ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತಿದೆ.

ಹೆಪಟೈಟಿಸ್ ಬಗ್ಗೆ ಜಾಗೃತಿ
ಅಪಾಯಕಾರಿ ಹೆಪಟೈಟಿಸ್ ವೈರಸ್ ಹೇಗೆ ಹರಡುತ್ತದೆ? ವೈರಸ್ ಹರಡುವುದನ್ನು ತಡೆಯಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಎಂಬ ಪ್ರಶ್ನೆಗೆ ಉತ್ತರವನ್ನು ನೀಡಲು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಬೇಕಾಗಿದೆ. ಹೆಪಟೈಟಿಸ್ ಎ ಮತ್ತು ಬಿ ಲಸಿಕೆಗಳು ಲಭ್ಯವಿದೆ. ಅಂತೆಯೇ ಹೆಪಟೈಟಿಸ್ ಬಿ ಲಸಿಕೆಯ ಅಗತ್ಯವನ್ನು ವಿವರಿಸುವುದು ಈ ದಿನದ ಮುಖ್ಯ ಉದ್ದೇಶ. ಹೆಪಟೈಟಿಸ್ ಎ ಕಲುಷಿತ ಆಹಾರ ಮತ್ತು ನೀರಿನ ಮೂಲಕ ಹರಡುತ್ತದೆ. ಹೆಪಟೈಟಿಸ್ ಬಿ ಮತ್ತು ಸಿ ರಕ್ತ ವರ್ಗಾವಣೆ ಮತ್ತು ಚುಚ್ಚುಮದ್ದಿನ ಮೂಲಕ ಹರಡುತ್ತವೆ. ಹೀಗಾಗಿ ಈ ವೈರಸ್‌ಗಳು ದೇಹಕ್ಕೆ ಬರದಂತೆ ತಡೆಯಲು ಜಾಗೃತಿ ಅಗತ್ಯ.

ಗುರುತಿಸುವುದು ಹೇಗೆ?
ರಕ್ತ ಪರೀಕ್ಷೆಗಳಿಂದ ಹೆಪಟೈಟಿಸ್ ಬಿ ವೈರಸ್ ಅನ್ನು ಕಂಡುಹಿಡಿಯಬಹುದು. ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಪತ್ತೆಗಾಗಿ ಜನರು ಸ್ವಯಂಪ್ರೇರಿತವಾಗಿ ರಕ್ತ ಪರೀಕ್ಷೆಗೆ ಮುಂದಾಗಬೇಕು. ಈ ವಿಷಯವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕಾಗಿದೆ. ಹೆಪಟೈಟಿಸ್ ಬಿ ಮತ್ತು ಸಿ ವೈರಸ್​ಗಳು 10 ರಿಂದ 15 ವರ್ಷಗಳವರೆಗೆ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಅಂತಿಮವಾಗಿ ಪಿತ್ತಜನಕಾಂಗವು ಸಂಪೂರ್ಣವಾಗಿ ಅಸಮರ್ಥವಾಗುತ್ತದೆ. ಆ ಹಂತದಲ್ಲಿ ಪಿತ್ತಜನಕಾಂಗದ ಕಸಿ ಹೊರತುಪಡಿಸಿ ಯಾವುದೇ ಚಿಕಿತ್ಸೆಯು ಕಾರ್ಯನಿರ್ವಹಿಸುವುದಿಲ್ಲ.

ಅನಾರೋಗ್ಯ ಪೀಡಿತರಿಗೆ ಕೌನ್ಸೆಲಿಂಗ್ ನೀಡಬೇಕು
ಚಿಕಿತ್ಸೆಯನ್ನು ತೆಗೆದುಕೊಳ್ಳದಿದ್ದರೆ ಯಾವ ಹಾನಿ ಸಂಭವಿಸುತ್ತದೆ ಎಂದು ರೋಗಿಗಳಿಗೆ ತಿಳಿಸಬೇಕು. ವೈರಸ್ ತೀವ್ರತೆಯನ್ನು ಪ್ರತಿ ವರ್ಷ ವೈದ್ಯರ ಮೇಲ್ವಿಚಾರಣೆಯಲ್ಲಿ ನಿರ್ಣಯಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಹೆಪಟೈಟಿಸ್ ಎ, ಇ ಗೆ ವಿಶೇಷ ಚಿಕಿತ್ಸೆ ಅಗತ್ಯವಿಲ್ಲ. ಆದರೆ ಹೆಪಟೈಟಿಸ್ ಬಿ, ಸಿ ಅಪಾಯಕಾರಿ. ಆದ್ದರಿಂದ ಹೆಪಟೈಟಿಸ್ ಬಗ್ಗೆ ಯಾವುದೇ ಅನುಮಾನಗಳಿದ್ದರು ವೈದ್ಯರನ್ನು ಭೇಟಿಯಾಗುವುದು ಅಗತ್ಯ.

ಇದನ್ನೂ ಓದಿ:
Health Tips: ನೀರು ಕುಡಿಯುವುದು ಒಳ್ಳೆಯ ಅಭ್ಯಾಸ, ಆದರೆ ಅತಿಯಾದ ನಿರ್ಜಲೀಕರಣ ಆರೋಗ್ಯಕ್ಕೆ ಹಾನಿಕಾರಕ

Liver Health: ಪಿತ್ತಜನಕಾಂಗದ ಆರೋಗ್ಯವನ್ನು ಕಾಪಾಡಲು ವಾರದ 7 ದಿನವನ್ನು ಬಳಸಿ; ಆಹಾರದಲ್ಲಿನ ಈ ಕ್ರಮ ಯಕೃತ್ತಿನ ಕಾಯಿಲೆಯಿಂದ ನಿಮ್ಮನ್ನು ದೂರ ಇಡುತ್ತದೆ

Published On - 11:50 am, Wed, 28 July 21