ದೇಶದಾದ್ಯಂತ ಅನಾರೋಗ್ಯದಿಂದ ಸಾವನ್ನಪ್ಪುವವರ ಪೈಕಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯೇ ಹೆಚ್ಚಾಗಿದೆ. ಪ್ರತಿ ವರ್ಷ ಸುಮಾರು 10 ಮಿಲಿಯನ್ ಗೂ ಹೆಚ್ಚು ಜನರು ವಿವಿಧ ರೀತಿಯ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲಿಯೂ ಈ ಶ್ವಾಸಕೋಶದ ಕ್ಯಾನ್ಸರ್ ಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಈ ರೋಗ ಲಕ್ಷಣಗಳು ಕಾಣಿಸಿಕೊಂಡ ಪ್ರಾರಂಭದಲ್ಲಿಯೇ ಸರಿಯಾದ ಚಿಕಿತ್ಸೆ ನೀಡಿದರೆ ಈ ರೋಗದಿಂದ ಸ್ವಲ್ಪ ಮಟ್ಟಿಗೆ ಪಾರಾಗಬಹುದು. ಈ ಮಹಾಮಾರಿಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಆಗಸ್ಟ್ 1 ರಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಫೋರಮ್ ಆಫ್ ಇಂಟರ್ ನ್ಯಾಷನಲ್ ರೆಸ್ಪಿರೇಟರಿ ಸೊಸೈಟೀಸ್, ಇಂಟರ್ ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ಲಂಗ್ ಕ್ಯಾನ್ಸರ್ ಮತ್ತು ಅಮೇರಿಕನ್ ಕಾಲೇಜ್ ಆಫ್ ಚೆಸ್ಟ್ ಫಿಸಿಶಿಯನ್ಸ್ ಸಹಯೋಗದೊಂದಿಗೆ 2012ರಲ್ಲಿ ಮೊದಲ ಬಾರಿಗೆ ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನವನ್ನು ಆಚರಿಸಿತು. ಈ ದಿನದ ಮುಖ್ಯ ಉದ್ದೇಶವೇನೆಂದರೆ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುವ ಅಭ್ಯಾಸಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು ಹಾಗೂ ಈ ರೋಗದ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ವಿವಿಧ ಆರೋಗ್ಯ ಸಂಸ್ಥೆಗಳು ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮ ಹಾಗೂ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತವೆ.
ಶ್ವಾಸಕೋಶದ ಕ್ಯಾನ್ಸರ್ ಎನ್ನುವುದು ಶ್ವಾಸಕೋಶದಲ್ಲಿ ಕಂಡು ಬರುವ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಾಗಿದೆ. ಪ್ರಾರಂಭಿಕ ಹಂತದಲ್ಲಿ ಲಕ್ಷಣಗಳು ಗೋಚರವಾಗದಿದ್ದರೂ ಶ್ವಾಸಕೋಶದ ಕ್ಯಾನ್ಸರ್ ಗೆಡ್ಡೆ ಹತ್ತಿರದ ಅಂಗಗಳಿಗೆ ಹರಡುವ ಸಾಧ್ಯತೆಯೇ ಅಧಿಕ. ಇಲ್ಲದಿದ್ದರೆ ಕ್ಯಾನ್ಸರ್ ಕೋಶಗಳು ಇತರ ಅಂಗಗಳಲ್ಲಿ ಬೆಳೆಯಬಹುದು. ಆರಂಭದಲ್ಲೇ ಚಿಕಿತ್ಸೆಯನ್ನು ಪಡೆದುಕೊಂಡರೆ ಅಪಾಯವು ಕಡಿಮೆಯಿರುತ್ತದೆ.
ವ್ಯಕ್ತಿಯ ರೋಗ ಲಕ್ಷಣಗಳು ಹಾಗೂ ಕ್ಯಾನ್ಸರ್‌ನ ಹಂತಗಳ ಮೇಲೆ ಆಧಾರದ ಮೇಲೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ರೋಗಕ್ಕೆ ಶಸ್ತ್ರಚಿಕಿತ್ಸೆ, ಕೀಮೋಥೆರಡಿ, ರೇಡಿಯೊಥೆರಪಿ ಹಾಗೂ ಇಮ್ಯುನೊಥೆರಪಿಗಳಂತಹ ಚಿಕಿತ್ಸೆಗಳಿವೆ.
ಇದನ್ನೂಓದಿ: ಗೊರಕೆ ಸಮಸ್ಯೆಗೆ ಈ ಮನೆಮದ್ದುಗಳನ್ನು ಬಳಸಿ ನಿವಾರಣೆ ಮಾಡಿಕೊಳ್ಳಿ
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ