ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನ ಶೈಲಿ ಹದಗೆಟ್ಟಿದ್ದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿದೆ. ಆರೋಗ್ಯವಿದ್ದರೆ ಎಲ್ಲವೂ ಇದ್ದಂತೆ ಎಂಬ ಮಾತು ನಮಗೆ ಅರಿವಾಗುತ್ತಿದೆ. ನಾವು ಎಷ್ಟು ಒಳ್ಳೆಯ, ಆರೋಗ್ಯಕ್ಕೆ ಪೂರಕವಾಗುವಂತಹ ದಿನಚರಿಯನ್ನು ರೂಢಿಸಿಕೊಳ್ಳಬೇಕು ಎಂದುಕೊಂಡರೂ ಒಂದಿಲ್ಲೊಂದು ರೀತಿಯಲ್ಲಿ ಅದನ್ನು ನಾವೇ ತಡೆಯುತ್ತೇವೆ. ಜೊತೆಗೆ ಖರೀದ ಪದಾರ್ಥಗಳ ಸೇವನೆ ಮಾಡುವುದು, ಸರಿಯಾಗಿ ನಿದ್ರೆ ಮಾಡದಿರುವುದು, ಒತ್ತಡ ಎಲ್ಲವೂ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ? ಇಂತಹ ಅಭ್ಯಾಸಗಳನ್ನು ತಡೆಯಲು ಸಾಧ್ಯವಿಲ್ಲವೇ? ಆರೋಗ್ಯ ಹಾಳಾಗದಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಎಎನ್ಐ ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು “ಕುಳಿತುಕೊಳ್ಳುವುದಕ್ಕಿಂತ ಕೆಟ್ಟ ಅಭ್ಯಾಸ ಮತ್ತೊಂದಿಲ್ಲ. ಹಾಗಾಗಿ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಇರಬಾರದು. ಪ್ರತಿನಿತ್ಯ ಸ್ವಲ್ಪ ಸಮಯವಾದರೂ ನಡಿಗೆ ಮಾಡಬೇಕು. ಬೆಳಿಗ್ಗೆಯೇ ಮಾಡಬೇಕು ಎಂಬುದಿಲ್ಲ, ನಿಮ್ಮ ಬಿಡುವಿನ ಸಮಯದಲ್ಲಿ ಸಣ್ಣ ನಡಿಗೆ ಮಾಡಬಹುದು. ಸಾಧ್ಯವಾದರೆ ಸ್ಮಾರ್ಟ್ ವಾಚ್ ಗಳನ್ನು ಬಳಸಿ ಇದರಿಂದ ನೀವು ಎಷ್ಟು ದೂರ ಕ್ರಮಿಸುತ್ತೀರಿ ಎಂಬುದು ತಿಳಿಯುತ್ತದೆ ಆಗ ನಿಮಗೆ ಹೆಚ್ಚು ಉತ್ಸಾಹ ಮೂಡುತ್ತದೆ” ಎಂದಿದ್ದಾರೆ. ಇದರ ಜೊತೆಗೆ ಹೊರಗಡೆ ಆಹಾರ ಸೇವನೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಕಬಾಬ್, ಫಿಶ್, ಚಿಕನ್‌ಗೆ ಕೃತಕ ಬಣ್ಣ ಬಳಕೆಗೆ ನಿರ್ಬಂಧಿಸಿದ ಸರ್ಕಾರ
ಸಾಮಾನ್ಯವಾಗಿ ನಾವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅವರು ಮಾತನಾಡಿದ್ದು “ಯೋಗ ನಮಗೆ ಸಿಕ್ಕಿರುವ ಕೊಡುಗೆ ಅದನ್ನು ಆದಷ್ಟು ಸರಿಯಾಗಿ ಬಳಸಿಕೊಳ್ಳಿ, ಯಾವ ವಯಸ್ಸಿನವರಾಗಲಿ ಯೋಗವನ್ನು ಅಭ್ಯಾಸ ಮಾಡಿ, ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗೂ ಇದು ಪರಿಹಾರ ನೀಡುತ್ತದೆ. ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಸಮಸ್ಯೆ ಎಲ್ಲಕ್ಕೂ ಯೋಗ ಮಾಡುವುದರಿಂದ ಪರಿಹಾರ ಸಿಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿ ಇದರಿಂದ ಅವರಿಗೆ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ಜೊತೆಗೆ ಅವರು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಯೋಗ ಸಹಕಾರಿಯಾಗಿರುತ್ತದೆ” ಎಂದಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: