ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 11ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಈ ತನಕ ಏನೇನೋ ಮಾಡಿದ್ದೇನೆ, ಇದೊಂದು ಮಾಡಿದರಾಯಿತು ಎಂದು ಕೆಲವು ವಿಚಾರದಲ್ಲಿ ಅನಿಸಲಿದೆ. ಅದು ಖಂಡಿತವಾಗಿಯೂ ನಿಮಗೆ ಅನುಕೂಲ ಮಾಡಿಕೊಡುತ್ತದೆ. ನಿಮಗೇನಾದರೂ ಒಂದು ವೇಳೆ ಉದ್ಯೋಗ ಬದಲಾಯಿಸೋಣ, ಅದಕ್ಕಾಗಿ ಒಂದಿಷ್ಟು ಸ್ನೇಹಿತರ ಪಟ್ಟಿಯನ್ನು ಮಾಡಿಕೊಂಡು ಅವರೆಲ್ಲರಿಗೂ ರೆಸ್ಯೂಮೆ ಕಳಿಸೋಣ ಅಂತ ಏನಾದರೂ ಅನಿಸಿದ್ದಲ್ಲಿ ಆದ್ಯತೆಯ ಮೇಲೆ ಆ ಕೆಲಸವನ್ನು ಮಾಡಿ. ನಾಳೆ ಮಾಡಿದರಾಯಿತು ಎಂಬ ಉಡಾಫೆ ಯಾವ ಕಾರಣಕ್ಕೂ ಬೇಡ. ಸಣ್ಣ ಸಂಗತಿಗಳು ಎಂದು ಯಾವುದನ್ನೂ ಉಪೇಕ್ಷೆ ಮಾಡಬೇಡಿ. ಏಕೆಂದರೆ ಅದು ತೀರಾ ಕುತ್ತಿಗೆಗೆ ಬರುವಂಥ ಸಾಧ್ಯತೆ ಹೆಚ್ಚಿರುತ್ತದೆ.
ನಿಮ್ಮ ಬಗ್ಗೆ ನಿಮಗೇ ಬೇಸರ ಆಗುವಂಥ ಕೆಲವು ನಿರ್ಧಾರಗಳನ್ನು ಈ ದಿನ ಮಾಡಬಹುದು. ಅಥವಾ ಯಾಕಾದರೂ ಹಚ್ಚಿಕೊಂಡೆನು ಅಥವಾ ಸಲುಗೆಯೇ ಕೊಡಬಾರದಿತ್ತು ಎಂದು ಕೆಲವು ವ್ಯಕ್ತಿಗಳ ಬಗ್ಗೆ ನಿಮಗೆ ಈ ದಿನ ಬೇಸರ ಬರಲಿದೆ. ಇದರ ಜತೆಗೆ ಹಳೇ ಘಟನೆಗಳನ್ನು, ಸನ್ನಿವೇಶಗಳು, ಈ ಹಿಂದೆ ಆಗಿದ್ದ ಅವಮಾನಗಳು ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ನೆನಪಿಸಿಕೊಳ್ಳದಿರುವುದು ಉತ್ತಮ. ಏಕೆಂದರೆ ದ್ವೇಷ ಸಾಧನೆ ಎಂಬುದು ಈ ದಿನ ನಿಮಗೆ ಬಹಳ ಕಾಡಲಿದೆ. ಆದ್ದರಿಂದ ಮನಸ್ಸನ್ನು ಪ್ರಶಾಂತವಾಗಿ ಇರಿಸಿಕೊಳ್ಳಿ. ಏನೇನೋ ನೆನಪುಗಳು ಕಾಡುತ್ತಿದ್ದಲ್ಲಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಪಾದಕ್ಕೆ ಅಥವಾ ಹಿಮ್ಮಡಿಗೆ ಸಂಬಂಧಿಸಿದಂತೆ ಸಣ್ಣ- ಪುಟ್ಟ ಸಮಸ್ಯೆಯಾದರೂ ನಿಮ್ಮನ್ನು ಕಾಡುವಂಥ ಸಾಧ್ಯತೆಗಳಿವೆ.
ಇತರರಿಗೆ ಸಹಾಯ ಮಾಡುವುದು ಖಂಡಿತಾ ತಪ್ಪಲ್ಲ. ಆದರೆ ನಮ್ಮ ಪರಿಸ್ಥಿತಿ ಬಗ್ಗೆಯೂ ಯೋಚಿಸಬೇಕು. ಒಂದು ವೇಳೆ ಈ ದಿನ ಏನಾದರೂ ಇತರರಿಗೆ ಸಹಾಯ ಮಾಡೋಣ ಎಂದೇನಾದರೂ ಹೊರಡುವ ಮುನ್ನ ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಆಲೋಚನೆಯನ್ನು ಮಾಡಿ. ಏಕೆಂದರೆ ನೀವು ಏನು ಹೇಳಿದರೂ ಕೇಳಿಸಿಕೊಳ್ಳುತ್ತೀರಿ, ಕೇಳುತ್ತೀರಿ ಮತ್ತು ಕೆಲಸ ಮಾಡಿಕೊಡುತ್ತೀರಿ ಎಂಬ ಆಲೋಚನೆಯಿಂದ ಕೆಲವರು ಬಳಿಗೆ ಬರಲಿದ್ದಾರೆ. ಅವರ ಮಾತು, ಧ್ವನಿ, ಬಾಡಿ ಲ್ಯಾಂಗ್ವೇಜ್ ಸರಿಯಾಗಿ ಗಮನಿಸಿ. ಹಣಕಾಸು ವಿಚಾರಕ್ಕೆ ಸಂಬಂಧಿಗಳು, ಸ್ನೇಹಿತರು ತೀರಾ ನಿಮ್ಮ ಮೇಲೆ ಒತ್ತಡ ಹೇರುವಂಥ ಅವಕಾಶಗಳಿವೆ. ಆಗುವುದಿಲ್ಲ ಎಂದು ನಯವಾಗಿ ಹೇಳುವುದನ್ನು ರೂಢಿಸಿಕೊಳ್ಳಿ. ದಿಢೀರ್ ಪ್ರಯಾಣಗಳು ಬಂದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ತೀರ್ಮಾನ ಕೈಗೊಳ್ಳಿ.
ಕಡ್ಡಿ ತುಂಡು ಮಾಡಿದಂತೆ ಮಾತನಾಡುವುದನ್ನು ನೀವು ರೂಢಿಸಿಕೊಳ್ಳಲೇ ಬೇಕಾಗುತ್ತದೆ. ಎಲ್ಲರಿಗೂ ಒಳ್ಳೆಯವರಾಗುವ ಪ್ರಯತ್ನವನ್ನು ಮಾಡಿದಲ್ಲಿ ನೀವೇ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ. ನಿಮ್ಮ ಇನ್ ಟ್ಯೂಷನ್ ಈ ದಿನ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಅದನ್ನು ನೀವು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ನಿಮಗಿಂತ ತುಂಬ ದೊಡ್ಡ ಹುದ್ದೆಯಲ್ಲಿ ಇರುವವರು, ಜ್ಞಾನಿಗಳು, ನಿಧಾನಸ್ಥರು ಏನಾದರೂ ಸಲಹೆ ನೀಡಿದಲ್ಲಿ ಕಡ್ಡಾಯವಾಗಿ ಅದನ್ನು ಕೇಳಿಸಿಕೊಳ್ಳಿ ಮತ್ತು ಅನುಸರಿಸಿ. ಸ್ತ್ರೀಯರು ಮೆಟ್ಟಿಲು ಹತ್ತುವಾಗ ಅಥವಾ ಇಳಿಯುವಾಗ ಹೆಚ್ಚಿನ ಜಾಗ್ರತೆಯನ್ನು ವಹಿಸಿ. ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ಬೇಸರದ ದಿನ ಇದಾಗಿರುತ್ತದೆ.
ಹೊಸ ದಿರಿಸು, ಬ್ರ್ಯಾಂಡೆಡ್ ವಸ್ತುಗಳಿಗಾಗಿ ಕ್ರೆಡಿಟ್ ಕಾರ್ಡ್ ಬಳಸಿ ವಿಪರೀತ ಹಣ ಖರ್ಚು ಮಾಡಲಿದ್ದೀರಿ. ನಿಮ್ಮ ಸ್ನೇಹಿತರು ಅಥವಾ ಬಂಧುಗಳು ತೆಗೆದುಕೊಂಡಂಥ ನಿರ್ಧಾರಗಳಿಂದ ನೀವು ಪ್ರೇರಿತರಾಗುತ್ತೀರಿ. ಆದ್ದರಿಂದ ಏನನ್ನಾದರೂ ಖರೀದಿ ಮಾಡಲೇಬೇಕು ಎಂದು ನಿಮ್ಮನ್ನು ಬಲವಾಗಿ ಕಾಡಲಿದೆ. ಈ ಬಗ್ಗೆ ನಿಮ್ಮ ಆಪ್ತೇಷ್ಠರ ಜತೆಗೆ ಚರ್ಚೆ ಮಾಡುವ ಸಾಧ್ಯತೆಗಳು ಸಹ ಇವೆ. ನಿಮಗೆ ಇತರರ ಬಗ್ಗೆ ಏನಾದರೂ ಹೇಳಿಕೊಳ್ಳಬೇಕು ಎಂಬ ಭಾವನೆ ಇದ್ದಲ್ಲಿ ಒಂದೇ ಸಲಕ್ಕೆ ಹೇಳಿಕೊಂಡು ಬಿಡಬೇಡಿ. ಏಕೆಂದರೆ ಮೊದಲಿಗೆ ಅವರಿಗೆ ನಿಮ್ಮ ಬಗ್ಗೆ ಆ ನಿರ್ದಿಷ್ಟ ವಿಚಾರದ ಬಗ್ಗೆ ಎಂಥ ಅಭಿಪ್ರಾಯ ಇದೆ ಎಂಬುದನ್ನು ತಿಳಿಯುವುದಕ್ಕೆ ಪ್ರಯತ್ನಿಸಿ.
ನಿಮ್ಮ ಕಣ್ಣೆದುರಿಗೆ ಅವಕಾಶಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ನಿಮ್ಮ ಒಳಿತನ್ನು ಬಯಸುವವರು ಕೆಲವು ಸಲಹೆಗಳನ್ನು ಹಾಗೂ ಸೂಚನೆಗಳನ್ನು ನೀಡಲಿದ್ದಾರೆ. ಒಂದು ವೇಳೆ ಅವರು ಹೇಳಿದ ವಿಚಾರದಲ್ಲಿ ಎಲ್ಲ ಅನುಕೂಲ ಇದೆ, ಪರಿಸ್ಥಿತಿಯೂ ನಿಮ್ಮ ಪರವಾಗಿದೆ ಎಂಬುದು ಖಾತ್ರಿ ಆದ ಮೇಲೆ ಸ್ವಲ್ಪ ಮಟ್ಟಿಗಾದರೂ ರಿಸ್ಕ್ ತೆಗೆದುಕೊಂಡು ಮುನ್ನುಗ್ಗ ಬೇಕಾಗುತ್ತದೆ. ಈ ದಿನ ಅಂಥ ಅವಕಾಶಗಳು ನಿಮ್ಮ ಪಾಲಿಗೆ ಬರಲಿವೆ. ಅದನ್ನು ಹೇಗೆ ಸ್ವೀಕರಿಸಬೇಕು ಎಂಬುದು ನಿಮಗೆ ಬಿಟ್ಟಂಥ ವಿಚಾರವಾಗಿರುತ್ತದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಅಲ್ಪ ಸಮಯಕ್ಕಾದರೂ ವಿದೇಶಕ್ಕೆ ಪ್ರವಾಸ ತೆರಳಬೇಕಾದಂಥ ಸುಳಿವು ಸಿಗಬಹುದು.
ಹಣಕಾಸಿನ ಹರಿವಿನ ಬಗ್ಗೆ ಚಿಂತೆ ಕಾಡುತ್ತಿದ್ದಲ್ಲಿ ಅದು ಈ ದಿನ ನಿವಾರಣೆ ಆಗಲಿದೆ. ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಕೆಲವು ಸಕಾರಾತ್ಮಕವಾದ ಬೆಳವಣಿಗೆಗಳು ಆಗಲಿವೆ. ಅಂದುಕೊಂಡಂತೆಯೇ ಈ ದಿನ ಕೆಲಸ- ಕಾರ್ಯಗಳು, ಉದ್ಯಮ, ವ್ಯಾಪಾರ- ವ್ಯವಹಾರಗಳು ನಡೆಯಲಿವೆ. ಒಂದು ಬಗೆಯಲ್ಲಿ ಮಾನಸಿಕವಾಗಿಯೂ ಸಮಾಧಾನದ ದೊರೆಯಲಿದೆ. ನಿಮ್ಮ ಸಾಮರ್ಥ್ಯ, ಆಲೋಚನೆ, ವಿಚಾರಧಾರೆಗೆ ಪ್ರಾಮುಖ್ಯ ದೊರೆಯಲಿದೆ. ಇಷ್ಟು ಸಮಯ ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ವಿಷಯವನ್ನು ಹೇಳುವುದಕ್ಕೆ ಸಹ ವೇದಿಕೆ ದೊರೆಯಲಿದ್ದು, ಅದರ ಸದುಪಯೋಗ ಹೇಗೆ ಮಾಡಿಕೊಳ್ಳುವುದು ಎಂಬ ಬಗ್ಗೆ ಯೋಜನೆಯನ್ನು ಮಾಡಿಕೊಳ್ಳುವುದು ಒಳ್ಳೆಯದು.
ನಿಮ್ಮಲ್ಲಿ ಒಂದು ಬಗೆಯ ಆತಂಕ ಹಾಗೂ ಗೊಂದಲ ಕಾಡಲಿದೆ. ಮನಸ್ಸಿಗೆ ಬಂದದ್ದನ್ನು ಮಾಡಿಬಿಡುತ್ತೇನೆ ಎಂದು ಗಟ್ಟಿಯಾಗಿ ಅಂದುಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಆದ್ದರಿಂದ ಯಾರಾದರೂ ನೀವು ಈ ಕೂಡಲೇ ತೀರ್ಮಾನವನ್ನು ಹೇಳಿಬಿಡಬೇಕು ಎನ್ನುವಂಥ ಯಾವ ವಿಚಾರವನ್ನಾದರೂ ನಿಮ್ಮೆದುರು ತಂದಲ್ಲಿ ಆ ಬಗ್ಗೆ ಯಾವ ನಿರ್ಧಾರವನ್ನೂ ಹೇಳದಿರುವುದು ಉತ್ತಮ. ಇದರಿಂದ ಲಾಭ ಸಿಕ್ಕೀತು ಎಂದು ಮೇಲ್ನೋಟಕ್ಕೆ ಕಾಣುವ ವಿಚಾರಗಳನ್ನೇ ನೆಚ್ಚಿಕೊಂಡರೆ ಸಮಸ್ಯೆಗೆ ಸಿಕ್ಕಿ ಬೀಳುತ್ತೀರಿ. ಇನ್ನು ಲೋಕಾಭಿರಾಮದ ಮಾತುಗಳನ್ನೇ ಆಡುವಾಗಲೂ ಈ ಹಿಂದಿನ ಇತರರ ತಪ್ಪು- ಅಪಸವ್ಯಗಳನ್ನು ಎತ್ತಾಡಬೇಡಿ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಜತೆಗೆ ಯಾವುದೇ ಕಾರಣಕ್ಕೂ ಸಲುಗೆ ಬೇಡ.
ನಿಮ್ಮಲ್ಲಿ ಗಾಢವಾದ ದೈವ ಭಕ್ತಿ ಜಾಗೃತವಾಗುತ್ತದೆ. ಅದು ನಿಮ್ಮಲ್ಲಿ ನಾನಾ ಆಲೋಚನೆಗಳನ್ನು ಸಕಾರಾತ್ಮಕವಾಗಿ ತರುತ್ತದೆ. ನಿಮ್ಮ ಮನಸ್ಸಿಗೆ ತೀರ್ಥ ಕ್ಷೇತ್ರಗಳಿಗೆ ತೆರಳಬೇಕು ಎಂದೇನಾದರೂ ಪ್ರೇರಣೆ ಬಂತೆಂದರೆ ಆಮೇಲೆ ಆಲೋಚಿಸಿದರಾಯಿತು ಎಂದುಕೊಳ್ಳಬೇಡಿ. ಏಕೆಂದರೆ ನಿಮಗೆ ಅನಿಸಿದ್ದು ಮಾಡುವುದಕ್ಕೆ ಆರ್ಥಿಕವಾಗಿಯೂ ಸಾಧ್ಯವಿದೆ ಎಂದಾದಲ್ಲಿ ಮಾಡಿಬಿಡಿ. ಡೇರಿ ವ್ಯವಹಾರ ಮಾಡುತ್ತಿರುವವರು, ಪಶು ಸಾಕಣೆ ಮಾಡುತ್ತಿರುವವರಿಗೆ ದೀರ್ಘಾವಧಿಯ ಯೋಜನೆಯೊಂದು ಹುಡುಕಿಕೊಂಡು ಬರಬಹುದು. ಅದನ್ನು ಯಶಸ್ವಿ ಪೂರೈಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಸಮಯ ಮೀಸಲಿಡಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ