Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 29ರ ದಿನಭವಿಷ್ಯ 

| Updated By: ರಮೇಶ್ ಬಿ. ಜವಳಗೇರಾ

Updated on: Aug 29, 2023 | 1:04 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 29ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 29ರ ದಿನಭವಿಷ್ಯ 
ಪ್ರಾತಿನಿಧಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 29ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸಾವಧಾನದಿಂದ ಆಲೋಚನೆ ಮಾಡಿದ ಮೇಲಷ್ಟೇ ಅಭಿಪ್ರಾಯವನ್ನಾಗಲೀ ಹಣಕಾಸಿನ ವಿಚಾರಗಳ ಬಗ್ಗೆ ಆಗಲೀ ಮಾತನ್ನು ಶುರು ಮಾಡಿ. ಕೆಲಸದ ಸ್ಥಳದಲ್ಲಿ ಈ ಹಿಂದೆ ನಡೆದಿದ್ದ ಘಟನೆಯೊಂದಕ್ಕೆ ಬೇರೆಯದೇ ವ್ಯಾಖ್ಯಾನ ಸಿಕ್ಕಿ, ನಿಮಗೆ ಮುಜುಗರ ಮಾಡುವುದಕ್ಕೆ ಪ್ರಯತ್ನಿಸಬಹುದು. ಇಂಥ ಸನ್ನಿವೇಶದಲ್ಲಿ ಆತುರಕ್ಕೆ ಬಿದ್ದು, ಪ್ರತಿಕ್ರಿಯೆ ನೀಡುವುದಕ್ಕೆ ಹೋಗಬೇಡಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಸವಾಲುಗಳು ಎದುರಾಗಲಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಷ್ಠುರವಾದಿಗಳಂತೆ ನೇರಾನೇರ ಮಾತನಾಡುವುದಕ್ಕೆ ಹೋಗದಿರಿ. ನೀವು ತರ್ಕಬದ್ಧವಾಗಿಯೇ ಮಾತನಾಡಬಹುದು ಹಾಗೂ ನಿರ್ದಿಷ್ಟ ವ್ಯಕ್ತಿಯದೇ ತಪ್ಪು ಸಹ ಇರಬಹುದು. ಆದರೆ ಆ ಕಾರಣಕ್ಕಾಗಿ ಆತ್ಮವಿಶ್ವಾಸವನ್ನು ಕುಗ್ಗಿಸುವ ರೀತಿಯಲ್ಲಿ ಮಾತನಾಡಬೇಡಿ. ನಿಮ್ಮ ವರ್ಚಸ್ಸಿಗೆ ತಕ್ಕಂತೆ ನಡೆದುಕೊಳ್ಳುವುದು ಉತ್ತಮ. ಮನೆಯ ಹೊರಗಿನ ಊಟ ಮಾಡುವುದು ಅನಿವಾರ್ಯ ಅಲ್ಲ ಅಂತಾದಲ್ಲಿ ಊಟ ಮನೆಯಲ್ಲೇ ಮಾಡುವುದು ಉತ್ತಮ. ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಪ್ರಯಾಣದ ಮೂಲಕ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬ್ಯಾಂಕ್ ನಲ್ಲಿ ಎಫ್ ಡಿ ಎಂದಿಟ್ಟಿದ್ದಲ್ಲಿ ಅದನ್ನು ಮುರಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಅದೇ ಸಮಯದಲ್ಲಿ ಹಣವನ್ನು ಉತ್ತಮ ರಿಟರ್ನ್ ಬರುವ ಕಡೆಗೆ ಹೂಡಿಕೆ ಸಹ ಮಾಡುವ ಕಡೆಗೆ ಚಿಂತಿಸಲಿದ್ದೀರಿ. ತೀರಾ ಆಕ್ರಮಣಕಾರಿಯಾಗಿ ಹಣ ಕೂಡಿಡುವ ಬಗ್ಗೆ ಲೆಕ್ಕಾಚಾರ ಹಾಕಿಕೊಳ್ಳಲಿದ್ದೀರಿ. ಸ್ನೇಹಿತರು- ಸಂಬಂಧಿಕರು ನೀಡುವ ಮಾಹಿತಿ ಬಹಳ ಉಪಯುಕ್ತವಾಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಏಕಾಏಕಿ ಹಲವು ಬದಲಾವಣೆಗಳಿಗೆ ಸಿದ್ಧವಾಗಬೇಕಾಗುತ್ತದೆ. ಕಲೆ- ಸಾಹಿತ್ಯ ಇಂಥ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಉನ್ನತ ಸಂಸ್ಥೆಗಳಿಂದ ಕೆಲಸ ಮಾಡುವುದಕ್ಕೆ ಆಹ್ವಾನ ಬರಲಿದೆ. ದೈನಂದಿನ ವ್ಯವಹಾರಗಳು ಸ್ವಲ್ಪ ಮಟ್ಟಿಗೆ ಹಿಂದುಳಿಯಬಹುದು. ಆದರೆ ಕುಟುಂಬದ ಜತೆಗೆ ಸಂತೋಷವಾಗಿ ಕಾಲ ಕಳೆಯುವುದಕ್ಕೆ ವೇದಿಕೆ ಸಿದ್ಧವಾಗಲಿದೆ. ಬೆರಗು ಮೂಡುವ ರೀತಿಯಲ್ಲಿ ನಿಮ್ಮ ಸುಪ್ತಪ್ರಜ್ಞೆ ಕೆಲಸ ಮಾಡಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ತುಂಬ ಕಠಿಣ ಎಂದು ಇತರರು ನಿರ್ಧಾರ ಮಾಡಿಯೇ ಬಿಟ್ಟಿದ್ದ ಸಂಗತಿಗಳನ್ನು ಬಹಳ ಸರಳವಾಗಿ ವಿವರಿಸುವುದಕ್ಕೆ ನೀವು ಯಶಸ್ವಿಯಾಗಲಿದ್ದೀರಿ. ಹೊಸ ಬಟ್ಟೆ, ಆಭರಣ- ಅದರಲ್ಲೂ ಬೆಳ್ಳಿ ಆಭರಣವನ್ನು ಖರೀದಿಸುವಂಥ ಯೋಗ ನಿಮಗಿದೆ. ಇನ್ನು ನಿಮಗೆ ಕೆಲವರು ಉಡುಗೊರೆಗಳನ್ನು ನೀಡುವಂಥ ಸಾಧ್ಯತೆ ಇದೆ. ಗೇಟೆಡ್ ಕಮ್ಯುನಿಟಿಯಲ್ಲಿ ನಿವೇಶನ ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಇರುವಂಥವರು ಅಥವಾ ಈಗಾಗಲೇ ಅದೇ ಕಾರಣಕ್ಕೆ ಹೀಗಳೆದವರಿಗೆ ಸರಿಯಾದ ಉತ್ತರವನ್ನು ಕೆಲಸದ ಮೂಲಕವೇ ನೀಡಲಿದ್ದೀರಿ. ಯಾವುದಾದರೂ ಪ್ರಾಜೆಕ್ಟ್ ಗೆ ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುವ ಕುರಿತಂತೆ ಸೂಚನೆ ನೀಡಲಿದ್ದಾರೆ. ಅದೇ ವೇಳೆ ಅಲ್ಪಾವಧಿಗಾದರೂ ತರಬೇತಿ ಪಡೆದುಕೊಳ್ಳಬೇಕು ಎಂಬ ವಿಚಾರವನ್ನು ಸಹ ಹೇಳಲಿದ್ದಾರೆ. ಜವಾಬ್ದಾರಿಗಳನ್ನು ಧೈರ್ಯವಾಗಿ ವಹಿಸಿಕೊಳ್ಳಿ. ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ವಿಪರೀತ ಕೆಲಸದ ಒತ್ತಡ ಬೀಳಲಿದೆ. ಕೆಲವು ನೀವಾಗಿಯೇ ಮೈ ಮೇಲೆ ಹಾಕಿಕೊಳ್ಳಲಿದ್ದೀರಿ. ಇನ್ನು ಕೆಲವು ಅನಿರೀಕ್ಷಿತವಾಗಿ ತಾವಾಗಿಯೇ ಹುಡುಕಿಕೊಂಡು ಬರಲಿವೆ. ಯಾವುದಕ್ಕೆ ಹೌದು ಎನ್ನಬೇಕು ಹಾಗೂ ಯಾವುದಕ್ಕೆ ಇಲ್ಲ ಎನ್ನಬೇಕು ಎಂಬ ಬಗ್ಗೆ ಸ್ಪಷ್ಟತೆಯನ್ನು ಇರಿಸಿಕೊಳ್ಳಿ. ಇತರರ ಸಾಮರ್ಥ್ಯವನ್ನು ನಂಬಿಕೊಂಡು, ಹೂ ಅಂದುಬಿಡಬೇಡಿ. ಯಾವ ವಿಚಾರವಾದರೂ ದುಡ್ಡು- ಕಾಸಿನ ವಿಚಾರವನ್ನು ಆರಂಭದಲ್ಲಿಯೇ ಮಾತನಾಡಿಕೊಂಡು, ಮುಂದುವರಿಯಿರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಮನೆಯಲ್ಲಿನ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ಮುಖ್ಯವಾಗಿ ಮೊಬೈಲ್ ಫೋನ್ ಚಾರ್ಜಿಂಗ್, ಲ್ಯಾಪ್ ಟಾಪ್ ಚಾರ್ಜಿಂಗ್ ಅಥವಾ ಟ್ಯಾಬ್ ಚಾರ್ಜಿಂಗ್ ಹಾಕುತ್ತಿದ್ದೀರಿ ಎಂದಾದಲ್ಲಿ ತುಂಬ ಹೊತ್ತು ಹಾಗೇ ಹಾಕಿಡದಿರುವುದು ಮತ್ತು ಚಾರ್ಜ್ ಗೆ ಹಾಕಿರುವಾಗಲೇ ಬಳಸುವುದನ್ನು ಮಾಡಬೇಡಿ. ಇಷ್ಟು ಸಮಯ ಹವ್ಯಾಸ ಎಂದಿರುವುದು ನಿಮ್ಮ ಪಾಲಿಗೆ ದೊಡ್ಡ ಆದಾಯ ತರುವ ವೃತ್ತಿಯಾಗಿಯೇ ಮಾರ್ಪಡುವಂಥ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮಗೇ ಸರಿ ಎಂದು ಅನಿಸುವ ತನಕ ಯಾವ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳದಿರಿ. ಏಕೆಂದರೆ ಮೇಲುನೋಟಕ್ಕೆ ಬಹಳ ಸುಲಭ ಹಾಗೂ ತುಂಬ ಒಳ್ಳೆ ಫಲಿತಾಂಶ ನೀಡುವಂಥದ್ದು ಎಂದೆನಿಸಿದರೂ ಆ ನಂತರ ಗೊಂದಲಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಹೊಸದಾಗಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದೀರಿ ಅಂತಾದರೂ ಒಂದಕ್ಕೆ ನಾಲ್ಕು ಬಾರಿ ಆಲೋಚನೆಯನ್ನು ಮಾಡಿ, ಆ ಹುದ್ದೆಗೆ ಸೂಕ್ತ ಎಂದು ಸಂಪುರ್ಣ ಖಾತ್ರಿ ಆಗುವ ತನಕ ನಿರ್ಧಾರ ತೆಗೆದುಕೊಳ್ಳಬೇಡಿ.

ಲೇಖನ- ಎನ್‌.ಕೆ.ಸ್ವಾತಿ