ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 17ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಇತರರ ಮಾತಿನಿಂದ ಪ್ರಭಾವಕ್ಕೆ ಒಳಗಾಗಿ ಬೆಟ್ಟಿಂಗ್ ಮೇಲೆ ಹೆಚ್ಚಿನ ಹಣ ಹಾಕುವಂಥ ಸಾಧ್ಯತೆ ಇದೆ. ಆದ್ದರಿಂದ ರೊಚ್ಚಿಗೆದ್ದು ಜೂಜಿಗಾಗಿ ಹಣ ಹಾಕದಿರಿ. ಇನ್ನು ಬಾಡಿಗೆ ಆದಾಯದ ಮೂಲಕ ಹಣ ಗಳಿಸುವವರಿಗೆ ಅದರಲ್ಲಿ ಇಳಿಕೆ ಕಾಣಿಸಲಿದೆ. ನಿಮ್ಮ ಮೂಲ ಸ್ವಭಾವದಿಂದ ಬದಲಾವಣೆ ಮಾಡಿಕೊಳ್ಳದಿರಿ. ಸಂಬಂಧಿಕರ ಕಡೆಯಿಂದ ನಿಮ್ಮ ಸಹಾಯವನ್ನು ಕೇಳಿಕೊಂಡು ಬರಬಹುದು. ಎಷ್ಟೇ ಆತುರದಲ್ಲಿ ಇದ್ದರೂ ಈ ದಿನ ಯಾವ ಕಾರಣಕ್ಕೂ ವೇಗದ ಚಾಲನೆಯನ್ನು ಮಾಡದಿರಿ.
ಇಷ್ಟು ಸಮಯ ನಿಮ್ಮ ಬಳಿ ಬಹಳ ಸ್ನೇಹದಿಂದ ಇರುವ ಒಬ್ಬರು ಈ ದಿನ ನೀವು ಪರಿಚಯವೇ ಇಲ್ಲವೇನೋ ಎಂಬಂತೆ ನಡೆದುಕೊಳ್ಳಬಹುದು. ಆದರೆ ಈ ವಿಚಾರಕ್ಕಾಗಿ ಮನಸ್ಸು ನೊಂದುಕೊಂಡು ಮಾಡುವ ಕೆಲಸದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳದಿರಿ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದು. ವಿಲಾಸಿ ವಸ್ತುಗಳ ಖರೀದಿ ಮಾಡುವ ಸಲುವಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವಂಥ ಯೋಗ ಇದೆ. ಕ್ರೆಡಿಟ್ ಕಾರ್ಡ್ ಬಳಸುವಂಥವರು ಹಿಡಿತ ಇರಿಸಿಕೊಳ್ಳಿ.
ನಿಮ್ಮ ಶ್ರಮವನ್ನು ಗುರುತಿಸಿ, ಹೊಸ ಕೆಲಸಗಳನ್ನು ಕೆಲವರು ವಹಿಸಬಹುದು. ಯಾವುದೇ ಉತ್ತಮ ಅವಕಾಶಗಳು ಬಂದರೂ ಅವುಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಸರಿಯಾಗಿ ಆಲೋಚನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರು ಹೊಸ ಸಲಕರಣೆಗಳನ್ನು ಖರೀದಿಸಬಹುದು ಅಥವಾ ಕೋರ್ಸ್ ಗಳಿಗೆ ಸೇರ್ಪಡೆ ಆಗುವ ಬಗ್ಗೆ ಆಲೋಚಿಸಬಹುದು. ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ.
ನಿಮ್ಮ ಸಾಮರ್ಥ್ಯವನ್ನು ಸರಿಯಾಗಿ ತೀರ್ಮಾನಿಸಿ, ಆ ಮೇಲೆ ಜವಾಬ್ದಾರಿಗಳನ್ನು ವಹಿಸಿಕೊಳ್ಳಿ. ನೀವು ಬಹಳ ನಿರೀಕ್ಷೆಯಿಟ್ಟುಕೊಂಡು ಮಾಡುವುದಕ್ಕೆ ಹೊರಟ ಕೆಲಸವನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಬೇಕಾಗುತ್ತದೆ. ಕಬ್ಬಿಣ, ಸಿಮೆಂಟ್, ಇಟ್ಟಿಗೆ ಇಂಥ ವಸ್ತುಗಳ ಮಾರಾಟ ಮಾಡುವಂಥವರು ವಿಸ್ತರಣೆಗಾಗಿ ಹಣ ಹೂಡುವುದಕ್ಕೆ ಮುಂದಾಗುತ್ತೀರಿ. ಸ್ನೇಹಿತರು ಅಥವಾ ಸ್ನೇಹಿತೆಯರ ಸಲಹೆಯಿಂದ ಈ ದಿನ ಬಹಳ ದೊಡ್ಡ ಮಟ್ಟದ ಸಹಾಯ ಆಗಲಿದೆ.
ನೀವು ಬಹಳ ನಂಬಿಕೆ ಇಟ್ಟುಕೊಂಡ ವ್ಯಕ್ತಿ ಅಥವಾ ವ್ಯವಸ್ಥೆಯಿಂದ ಸಮಾಧಾನ ತರುವಂಥ ಫಲಿತಾಂಶವನ್ನು ಕಾಣಲಿದ್ದೀರಿ. ಬ್ರ್ಯಾಂಡೆಡ್ ಶೂ, ಬಟ್ಟೆ, ಗ್ಯಾಜೆಟ್ ಖರೀದಿ ಮಾಡುವಂಥ ಯೋಗ ಇದೆ. ರಾಜಕಾರಣಿಗಳ ಸಖ್ಯ ಇರುವಂಥವರಿಗೆ ಅವರಿಂದ ಅನುಕೂಲಗಳು ಒದಗಿ ಬರಲಿವೆ. ವಾಹನ ಖರೀದಿಗಾಗಿ ಪ್ರಯತ್ನಿಸುತ್ತಿರುವವರಿಗೆ ಹಣಕಾಸಿನ ವ್ಯವಸ್ಥೆ ಆಗಲಿದೆ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದೀರಿ ಅವರಿಂದ ನಿಮಗೆ ನೆರವಾಗಲಿದೆ.
ಮುಖದ ಮೇಲೆ ಕಲೆ ಆಗುವ ಅಥವಾ ಅಲರ್ಜಿ ಆಗುವಂಥ ಸಾಧ್ಯತೆ ಇದೆ. ಆದ್ದರಿಂದ ಬ್ಯೂಟಿ ಪ್ರಾಡಕ್ಟ್ ಬಳಸುವವರಂತೂ ತುಂಬ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ದೂರ ಪ್ರಯಾಣದಿಂದ ವೃತ್ತಿಪರರಿಗೆ ಅನುಕೂಲ ಒದಗಿಬರುತ್ತದೆ. ಮನೆ, ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಮೆಚ್ಚುವಂಥದ್ದು ದೊರೆಯುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿಗೆ ಒಪ್ಪಿಗೆ ಆಗದಂಥ ಕೆಲಸಗಳು ಇದ್ದಲ್ಲಿ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬೇಡಿ.
ಈ ದಿನ ಯಾವುದೇ ಕೆಲಸಕ್ಕೆ ಬಹಳ ಶ್ರಮಪಡಲಿದ್ದೀರಿ. ಒಂದೇ ವಿಚಾರ, ಕೆಲಸಕ್ಕಾಗಿ ಬಹಳ ಪ್ರಯತ್ನ ಪಡಬೇಕಾಗುತ್ತದೆ. ಮನೆಯ ಹೊರಗಿನ ಆಹಾರ ಸೇವಿಸುವವರಿಗೆ ಆರೋಗ್ಯ ಸಮಸ್ಯೆಗಳು ಕಾಡಬಹುದು. ಇತರರ ಭರವಸೆಯನ್ನು ನೆಚ್ಚಿಕೊಂಡು, ಹಣಕಾಸಿನ ವಿಚಾರವಾಗಿ ಇತರರಿಗೆ ಮಾತು ನೀಡಬೇಡಿ. ಮನೆ ದೇವರ ಪೂಜೆ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮುಖ್ಯವಾದ ತೀರ್ಮಾನವನ್ನು ತೆಗೆದುಕೊಳ್ಳುವಾಗ ವಿಷಯ ಪರಿಣತರು, ಅನುಭವಿಗಳ ನೆರವು ಪಡೆದುಕೊಳ್ಳಿ.
ಸರ್ಕಾರಿ ಕೆಲಸಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಉತ್ತಮವಾದ ಬೆಳವಣಿಗೆ ಕಾಣಲಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಮೇಲ್ದರ್ಜೆಯ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನ ಗಿಟ್ಟಿಸುವುದಕ್ಕೆ ಪ್ರಯತ್ನ ಪಡುತ್ತಿದ್ದಲ್ಲಿ ಅನುಕೂಲಕರವಾದ ಸನ್ನಿವೇಶ ಸೃಷ್ಟಿ ಆಗಲಿದೆ. ಕ್ರೀಡಾ ಕ್ಷೇತ್ರಗಳಲ್ಲಿ ಇರುವವರು ಪ್ರಾಯೋಜಕರಿಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಸಹಾಯ ಒದಗಿ ಬರಲಿದೆ. ನಿಮಗೆ ಸಂಬಂಧ ಪಡದ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಹೇಳದಿರುವುದು ಉತ್ತಮ.
ಹೂಡಿಕೆ ವಿಚಾರಗಳಲ್ಲಿ ಬಹಳ ಗಂಭೀರವಾದ ತೀರ್ಮಾನಗಳನ್ನು ಮಾಡಬೇಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮಿಂದ ನಿರೀಕ್ಷೆ ಮಾಡುವುದು ಬಹಳ ಹೆಚ್ಚಾಗುತ್ತದೆ. ಮನೆಯಲ್ಲಿ ಒತ್ತಡದ ಸನ್ನಿವೇಶ ಸೃಷ್ಟಿ ಆಗಲಿದೆ. ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದಿರುವವರಿಗೆ ನಿರೀಕ್ಷೆ ಮಾಡಿದಂಥದ್ದು ಸಿಗಲಿದೆ. ಸರ್ಕಾರಿ ಯೋಜನೆಗಳಲ್ಲಿ ಹಣಕಾಸಿನ ನೆರವಿಗಾಗಿ ಪ್ರಯತ್ನಿಸುತ್ತಿರುವವರಿಗೆ ಆಶಾದಾಯಕವಾದ ಬೆಳವಣಿಗೆ ಆಗಲಿದ್ದು, ಅನಿರೀಕ್ಷಿತವಾಗಿ ಪ್ರಭಾವಿಗಳ ನೆರವು ದೊರೆಯಲಿದೆ.
ಲೇಖನ- ಎನ್.ಕೆ.ಸ್ವಾತಿ