ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ ನೋಡುವುದು ಕೆಲವರಿಗೆ ಅಭ್ಯಾಸ. ಅದರಂತೆ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 19ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಮಕ್ಕಳ ಆರೋಗ್ಯ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳಲಿವೆ. ದೇವತಾ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರಿವರು ಸಲಹೆ ನೀಡುತ್ತಾರೆ. ಒಂದೇ ವಿಷಯವನ್ನು ಹಲವರು ಹೇಳುವುದರಿಂದ ನಿಮಗೂ ಇದು ಏನೋ ಸಮಸ್ಯೆ ಇದ್ದಂತಿದೆ ಎಂದೆನಿಸಲಿದೆ. ತಾಯಿಯ ಕಡೆ ಸಂಬಂಧಿಕರು ಮನೆಗೆ ಬರಲಿದ್ದಾರೆ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಮುಖ್ಯವಾದ ಮಾತುಕತೆಗಳು ನಡೆಯಬಹುದು. ನಿಮ್ಮ ನಿರ್ಧಾರ ತುಂಬ ಮುಖ್ಯ, ಕಾಗದಗಳಿಗೆ ಸಹಿ ಹಾಕುವಂತೆ ಕೇಳಿದರೆ ತಕ್ಷಣಕ್ಕೆ ಏನನ್ನೂ ಮಾಡದೆ ಒಂದೆರಡು ದಿನಗಳ ಸಮಯವನ್ನು ಕೇಳುವುದು ಒಳ್ಳೆಯದು. ಮತ್ತು ಇಡಿಯಾಗಿ ಓದಿದ ನಂತರದಲ್ಲಿ ಅನುಭವಿಗಳು, ಹಿರಿಯರ ಮಾರ್ಗದರ್ಶನ, ಸಲಹೆ ಪಡೆದು, ತೀರ್ಮಾನವನ್ನು ಕೈಗೊಳ್ಳಿ.
ಸಂಗಾತಿ ಅಥವಾ ಪ್ರೀತಿಪಾತ್ರರ ಅನಾರೋಗ್ಯ ಸಮಸ್ಯೆಗಳು ಮನಸ್ಸಿಗೆ ಆತಂಕವನ್ನು ಉಂಟು ಮಾಡಲಿದೆ. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರಗಳು ಮತ್ತು ಆಡಿದ ಮಾತುಗಳ ಬಗ್ಗೆ ಬೇಸರ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ನಿಮ್ಮ ಮಾತಿಗೆ ಮೊದಲಿನಂತೆ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಕೆಲವು ಸ್ನೇಹಿತರ ಸ್ವಭಾವದಿಂದ ಗಮನಕ್ಕೆ ಬರಲಿದೆ. ಸೆಕೆಂಡ್ ಹ್ಯಾಂಡ್ ಕಾರು ಅಥವಾ ಬೈಕ್ ಖರೀದಿ ಮಾಡಬೇಕು ಅಥವಾ ಈ ದಿನ ನೋಡಿಕೊಂಡು ಬರಬೇಕು ಎಂದಿದ್ದಲ್ಲಿ ಸಾಧ್ಯವಾದರೆ ಬೇರೆ ದಿನಕ್ಕೆ ಹಾಕಿಕೊಳ್ಳಿ. ಏಕೆಂದರೆ ಸಮಾಧಾನವಾಗಿ, ಸಮಚಿತ್ತದಿಂದ ಏನನ್ನೂ ಮಾಡುವ ಸನ್ನಿವೇಶ ಈ ದಿನ ಇರುವುದಿಲ್ಲ. ನಿಮ್ಮಿಂದ ತಪ್ಪು ನಿರ್ಧಾರಗಳು ಆಗುವ ಸಾಧ್ಯತೆಗಳಿವೆ.
ನಿಮ್ಮ ಪ್ರತಿಭೆ, ಸಾಮರ್ಥ್ಯ ಹಾಗೂ ಸಮಯಪ್ರಜ್ಞೆಯನ್ನು ಕಂಡು ಇತರರು ಗಾಬರಿ ಬಿದ್ದು, ಬೆರಗಾಗಲಿದ್ದಾರೆ. ತುಂಬ ಸಹಜವಾದ ಸಂಗತಿ ಎಂಬಂತೆ ನೀವು ಪೂರ್ಣಗೊಳಿಸುವ ವಿಚಾರಗಳು, ವಿಷಯಗಳನ್ನು ಇತರರು ಅಚ್ಚರಿಯಿಂದ ನೋಡುವಂತಾಗುತ್ತದೆ. ಮನೆ ಕಟ್ಟುತ್ತಿರುವವರು, ಸೈಟು ಖರೀದಿಗೆ ಮುಂಗಡ ನೀಡಿ, ಹಣಕಾಸನ್ನು ಹೊಂದಿಸುತ್ತಿರುವವರಿಗೆ ಬ್ಯಾಂಕ್ ಗಳು, ಬ್ಯಾಂಕಿಂಗೇತರ ಸಂಸ್ಥೆಗಳಲ್ಲಿ ಸಲೀಸಾಗಿ ಸಾಲ ದೊರೆಯಬಹುದು. ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ಕೆಲವು ವ್ಯಕ್ತಿಗಳು ನೆರವಿಗೆ ಬರುತ್ತಾರೆ. ಸಂಗಾತಿ ಜತೆಗೆ ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ. ಇದರಿಂದ ನಿಮ್ಮ ಸಂತೋಷ ಹೆಚ್ಚಾಗಲಿದೆ.
ಹಣದ ವಿಚಾರಕ್ಕೆ ಬಹಳ ಚರ್ಚೆಗಳು ಈ ದಿನ ನಡೆಯಲಿವೆ. ನೀನು ಮಾಡಿದ್ದು ತಪ್ಪು, ನಾನು ಮಾಡಿದ್ದು ಸರಿ ಎಂಬರ್ಥದಲ್ಲಿ ವಾದ- ವಾಗ್ವಾದಗಳು ನಡೆಯಲಿವೆ. ಮೊದಲಿಂದ ನನಗೆ ಅವರು ಗೊತ್ತು, ಅವರ ಸ್ವಭಾವ, ನಡವಳಿಕೆ ಎಲ್ಲವೂ ಚೆನ್ನಾಗಿ ಗೊತ್ತು ಎಂದು ನಿಮಗೆ ನೀವೇ ಅಂದುಕೊಂಡಿದ್ದ ವ್ಯಕ್ತಿಗಳಲ್ಲಿ ದೊಡ್ಡ ಬದಲಾವಣೆಯನ್ನು ಗಮನಿಸಲಿದ್ದೀರಿ. ಕುಟುಂಬ ಸದಸ್ಯರ ಸಲಹೆಗಳನ್ನು ಕೇಳಬೇಕಾಗಿತ್ತು ಎಂದೆನಿಸುವಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಒಂದು ಸಮಾಧಾನಕರ ಸಂಗತಿ ಏನೆಂದರೆ, ಮುಖ್ಯವಾದ ಕೆಲಸವೊಂದು, ಅದರಲ್ಲೂ ನಿಮಗೆ ತಲೆನೋವಾಗಿ ಪರಿಣಮಿಸಿದ್ದ ಸಂಗತಿಯೊಂದು ಮುಗಿಯಲಿದೆ.
ಉಲ್ಲಾಸ, ಉತ್ಸಾಹದಿಂದ ದಿನ ಕಳೆಯುವುದಕ್ಕೆ ಬೇಕಾದಂಥ ವಾತಾವರಣ ಇರಲಿದೆ. ಅದನ್ನು ಗುರುತಿಸುವುದು ಮುಖ್ಯವಾಗುತ್ತದೆ. ಒಂದು ಘಟನೆ ಅಥವಾ ಸನ್ನಿವೇಶವನ್ನು ಹಲವರು ನಿಮಗೆ ಹಲವು ಥರ ಹೇಳುವ ಸಾಧ್ಯತೆ ಇರಲಿದೆ. ಆದರೆ ನಿಮ್ಮ ಮನಸ್ಸಿಗೆ ಬಂದಂಥ ಸಂಗತಿಗಳಿಗೆ ಗೌರವಿಸುವುದನ್ನು ಮತ್ತು ಇನ್ ಟ್ಯೂಷನ್ ಗೆ ಬೆಲೆ ನೀಡುವುದನ್ನು ರೂಢಿಸಿಕೊಳ್ಳಿ. ಇಲ್ಲದಿದ್ದರೆ ದೊಡ್ಡ ಅವಕಾಶಗಳು ಕೈ ತಪ್ಪಿ ಹೋಗಬಹುದು. ಕಲಾ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ವಿಚಾರ ಸಂಕಿರಣ, ಅಧ್ಯಯನ ಪ್ರವಾಸ ಹೀಗೆ ಏನಾದರೊಂದು ಬರಲಿದೆ. ಆತುರಾತುರವಾಗಿ ತೆರಳ ಬೇಕಾಗಬಹುದು.
ನಿಮಗೆ ಸಂಬಂಧವೇ ಪಡದ ವಿಚಾರಗಳಿಗೆ ತಲೆ ಹಾಕಿ, ಮುಜುಗರವನ್ನು ಎದುರಿಸಲಿದ್ದೀರಿ. ವಯಸ್ಸಿನಲ್ಲಿ ನಿಮಗಿಂತ ಕಿರಿಯರು ಅಥವಾ ಉದ್ಯೋಗ ವಿಚಾರಕ್ಕೆ ಬಂದಲ್ಲಿ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರಿಂದಲೇ ಅವಮಾನಗಳನ್ನು ಎದುರಿಸಬೇಕಾದೀತು. ಆದ್ದರಿಂದ ಅಭಿಪ್ರಾಯ ಹೇಳುವುದರಲ್ಲೇ ಆಗಲಿ ಅಥವಾ ಸಲಹೆ ನೀಡುವುದರಲ್ಲೇ ಆಗಲಿ ಸನ್ನಿವೇಶದ ಅವಲೋಕನವನ್ನು ಸರಿಯಾಗಿ ಮಾಡಿ, ಆ ನಂತರದಲ್ಲಿ ತೀರ್ಮಾನವನ್ನು ಕೈಗೊಳ್ಳಿ. ಯಾರದೋ ಮೇಲಿನ ಹಠಕ್ಕೆ ಬಿದ್ದು, ವಸ್ತುಗಳ ಖರೀದಿ ಮಾಡಲಿಕ್ಕೆ ಹೋಗದಿರಿ. ಸಾಧ್ಯವಾದಷ್ಟೂ ಕ್ರೆಡಿಟ್ ಕಾರ್ಡ್ ಬಳಕೆ ಮಾಡದಿರುವುದು ಉತ್ತಮ ನಿರ್ಧಾರ ಎನಿಸಿಕೊಳ್ಳಲಿದೆ.
ವೃತ್ತಿಗೆ ಸಂಬಂಧಿಸಿದ ಪ್ರಯಾಣ ಮಾಡಬೇಕಾಗಲಿದೆ. ನಿಮ್ಮ ಆಲೋಚನಾ ಧಾಟಿ ಬದಲಾಗುವಂಥ ಸಮಯ ಈ ದಿನ ಆಗಿರಲಿದೆ. ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಿರುವವರಿಗೆ ಅಂದುಕೊಂಡಂತೆಯೇ ಬೆಳವಣಿಗೆಗಳು ಆಗಲಿವೆ. ವಿದ್ಯಾರ್ಥಿಗಳಿಗೆ ಕಲಿಕೆ ವಿಚಾರದಲ್ಲಿ ಪ್ರಮುಖವಾದ ತಿರುವು ದೊರೆಯಲಿದೆ. ಪ್ರಮುಖವಾದ ವ್ಯಕ್ತಿಯೊಬ್ಬರ ಪರಿಚಯ ಆಗಲಿದೆ. ಸಣ್ಣ ಸಂಗತಿಗಳಾಗಿದ್ದರೂ ನೀವು ಅವುಗಳಿಗೆ ನೀಡಿದ್ದ ಆದ್ಯತೆ ಮತ್ತು ಪ್ರಾಮುಖ್ಯಕ್ಕೆ ಫಲಿತವನ್ನು ಕಾಣಲಿದ್ದೀರಿ. ಕ್ರಿಯೇಟಿವಿಟಿ ಹೆಚ್ಚು ಬಳಕೆ ಮಾಡುವಂಥ ಕ್ಷೇತ್ರದಲ್ಲಿ ಇರುವಂಥವರಿಗೆ ಪ್ರಮುಖವಾದ ಸ್ಥಾನ- ಮಾನಗಳು ದೊರೆಯುವ ಸೂಚನೆ ಸಿಗಲಿದೆ.
ತಲೆ ಕೂದಲು ಉದುರುವಂಥ ಸಮಸ್ಯೆ ಇರುವವರಿಗೆ ಅದು ವಿಪರೀತಕ್ಕೆ ಹೋಗುತ್ತದೆ. ಒಂದು ವೇಳೆ ಈ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಲ್ಲಿ ಅದರ ಕೆಲ ಅಡ್ಡ ಪರಿಣಾಮಗಳು ಆಗುವಂತಹ ಸಾಧ್ಯತೆಗಳಿವೆ. ಹೋಟೆಲ್ ಉದ್ಯಮದಲ್ಲಿ ಇರುವವರು ಹೊಸ ಶಾಖೆಗಳನ್ನು ತೆರೆಯುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಇದಕ್ಕೆ ಬೇಕಾದ ಹಣಕಾಸು ಮತ್ತು ಇತರ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವುದಕ್ಕೆ ಗಮನ ನೀಡಬೇಕಾಗುತ್ತದೆ. ಈ ದಿನ ನಿಮ್ಮ ತಾಯಿ ನೀಡುವಂಥ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋಗುವಾಗ ವರಾಹ ದೇವರನ್ನು ಮನಸಲ್ಲಿ ಸ್ಮರಿಸಿ.
ನಿಮಗೆ ತಪ್ಪು ಎನಿಸಿದ ಸಂಗತಿಯನ್ನು ಹೇಳುವಾಗ ಎದುರಿನ ವ್ಯಕ್ತಿಗೆ ಹೆಚ್ಚು ಬಾಧೆ ಆಗದಂತೆ ದಾಟಿಸಿ. ಏಕೆಂದರೆ ಸ್ನೇಹ- ಸಂಬಂಧಗಳು ಶಾಶ್ವತವಾಗಿ ದೂರ ಆಗಿಬಿಡುವಂಥ ಸಾಧ್ಯತೆ ಇರುತ್ತದೆ. ಅಡುಗೆ ಕಾಂಟ್ರಾಕ್ಟ್ ಗಳನ್ನು ತೆಗೆದುಕೊಳ್ಳುವವರಿಗೆ ಇನ್ನೇನು ಎಲ್ಲ ಮುಗಿಯಿತು ಅಂದುಕೊಳ್ಳುವ ಕೊನೆ ಕ್ಷಣದಲ್ಲಿ ಅನಿರೀಕ್ಷಿತ ಒತ್ತಡ ಬೀಳಲಿದೆ. ಆದ್ದರಿಂದ ಯಾವುದೇ ಕೆಲಸದಲ್ಲಿ ಪ್ಲ್ಯಾನ್ ಬಿ ಎಂಬುದನ್ನು ಇಟ್ಟುಕೊಂಡು ಮುಂದುವರಿಯಿರಿ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಆಸ್ತಿ ವಿಚಾರದಲ್ಲಿ ಆತ್ಮೀಯರೊಬ್ಬರು ಆಡುವ ಮಾತುಗಳಿಂದ ಮನಸ್ಸಿಗೆ ಖೇದ ಉಂಟಾಗುತ್ತದೆ.
ಲೇಖನ- ಎನ್.ಕೆ.ಸ್ವಾತಿ