DK Shivakumar Horoscope: ಜಾತಕದಲ್ಲಿ ಹಲವು ಯೋಗಗಳಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಕಾಲ ಸನ್ನಿಹಿತವಾಯಿತೆ?

| Updated By: ನಯನಾ ರಾಜೀವ್

Updated on: Jun 02, 2024 | 10:04 AM

DK Shivakumar Astrology Prediction: ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ ಹಲವು ರಾಜಕೀಯ ಬದಲಾವಣೆಗಳು ಆಗಬಹುದು ಎನ್ನುವುದನ್ನು ಸಹಜವಾಗಿ ಎಲ್ಲರೂ ನಿರೀಕ್ಷಿಸುತ್ತಾರೆ. ಆದರೆ ಇಲ್ಲಿ ಪ್ರಭಾವಿ ನಾಯಕರ ಜನ್ಮಜಾತಕ, ಗ್ರಹಗಳ ಸದ್ಯದ ಗೋಚಾರ ಸ್ಥಿತಿಯನ್ನು ಪರಾಮರ್ಶಿಸಿ ಭವಿಷ್ಯವನ್ನು ನುಡಿಯಲಾಗಿದೆ. ಪಕ್ಷ- ಸಿದ್ಧಾಂತವನ್ನು ಪಕ್ಕಕ್ಕೆ ಇಟ್ಟು, ಪ್ರಾಂಜಲ ಮನಸ್ಸಿನಿಂದ- ಅಕೆಡಮಿಕ್ ಆದ ದೃಷ್ಟಿಯಿಂದ ಈ ಲೇಖನವನ್ನು ಗಮನಿಸಿ. ಕಾಂಗ್ರೆಸ್ ನ ಪ್ರಭಾವಿ ನಾಯಕ- ಉಪಮುಖ್ಯಮಂತ್ರಿ ಆದ ಡಿ.ಕೆ. ಶಿವಕುಮಾರ್ ಜಾತಕ ವಿಶ್ಲೇಷಣೆ ಮಾಡಲಾಗಿದೆ, ಒಪ್ಪಿಸಿಕೊಳ್ಳಿ.

DK Shivakumar Horoscope: ಜಾತಕದಲ್ಲಿ ಹಲವು ಯೋಗಗಳಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಕಾಲ ಸನ್ನಿಹಿತವಾಯಿತೆ?
Follow us on

ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಹಾಗೂ ಈ ಲೇಖನ ಬರೆಯುವ ಹೊತ್ತಿಗೆ ಕರ್ನಾಟಕದ ಉಪ ಮುಖ್ಯಮಂತ್ರಿ ಆಗಿರುವಂಥ ದೊಡ್ಡ ಆಲನಹಳ್ಳಿ ಕೆಂಪೇಗೌಡ ಶಿವಕುಮಾರ್ (ಡಿ.ಕೆ. ಶಿವಕುಮಾರ್) ಅವರ ಜಾತಕದ ವಿಶ್ಲೇಷಣೆ ಮಾಡಲಾಗುತ್ತಿದೆ. ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ ಮುಂದೆ ಏನಾಗಬಹುದು ಅನ್ನುವುದನ್ನೇ ಮುಖ್ಯ ವಿಷಯವಾಗಿ ಇಟ್ಟುಕೊಂಡು, ರಾಜಕೀಯವಾಗಿ ಪ್ರಭಾವಿಗಳೂ ಹಾಗೂ ಈ ಫಲಿತಾಂಶದ ನಂತರದಲ್ಲಿ ಇವರು ಇನ್ನೇನಾದರೂ (ಅದು ಎತ್ತರಕ್ಕೆ ಏರುವುದೇ ಇರಬಹುದು ಅಥವಾ ನೆಲಕ್ಕೆ ಬೀಳುವುದೂ ಆಗಬಹುದು) ಸುದ್ದಿ ಆಗುತ್ತಾರಾ ಎಂಬುದನ್ನು ಜ್ಯೋತಿಷ್ಯದ ಆಧಾರದಲ್ಲಿ ಪರಾಮರ್ಶೆ ಮಾಡಲಾಗಿದೆ. ಪ್ರಾಂಜಲ ಮನಸ್ಸಿನಿಂದ ಮಾಡಿರುವಂಥ ಜಾತಕ ವಿಶ್ಲೇಷಣೆ ಇದು. ಜ್ಯೋತಿಷ್ಯ ಎಂಬ ಮಹಾಸಾಗರದಲ್ಲಿ ಒಂದು ಹನಿಯ ನೀರು ಸಹ ದಕ್ಕುವುದು ಆ ಭಗವಂತನ ಕೃಪೆ. ಅದನ್ನು ವೈಯಕ್ತಿಕ ಒಲವು- ನಿಲುವುಗಳ ಕಾರಣಕ್ಕೆ ಬಳಸಬಾರದು ಎಂಬುದು ನನ್ನ ಸಿದ್ಧಾಂತ. ಆದ್ದರಿಂದ ಓದುಗರಾದ ನೀವೂ ಅಷ್ಟೇ ಮುಕ್ತವಾಗಿ ಈ ಜಾತಕ ವಿಶ್ಲೇಷಣೆಯನ್ನು ಸ್ವೀಕರಿಸುತ್ತೀರಿ ಎಂಬ ಆಶಯದೊಂದಿಗೆ ಈಗ ಮುಖ್ಯ ವಿಚಾರ ಆರಂಭಿಸುತ್ತೇನೆ.

ಮೇಷ ಲಗ್ನ ಹಾಗೂ ವೃಷಭ ರಾಶಿ

ಶಿವಕುಮಾರ್ ಅವರದು ಮೇಷ ಲಗ್ನ ಹಾಗೂ ವೃಷಭ ರಾಶಿ. ಅವರ ಜನ್ಮ ರಾಶಿಯಾದ ವೃಷಭದಲ್ಲೇ ರವಿ, ಚಂದ್ರ ಹಾಗೂ ಬುಧ ಗ್ರಹ ಸ್ಥಿತವಾಗಿದೆ. ಇನ್ನು ಮೇಷ ಲಗ್ನದ ಅಧಿಪತಿಯಾದ ಕುಜ ಗ್ರಹ ಕರ್ಕಾಟಕ ರಾಶಿಯಲ್ಲಿದೆ. ಮಕರ ರಾಶಿಯಲ್ಲಿ ಗುರು ಮತ್ತು ಶನಿ ಗ್ರಹವಿದ್ದರೆ, ಮೀನ ರಾಶಿಯಲ್ಲಿ ಉಚ್ಚ ಸ್ಥಿತಿಯಲ್ಲಿ ಶುಕ್ರ ಗ್ರಹವಿದೆ. ಇನ್ನು ಲಗ್ನದಿಂದ ಪಂಚಮದಲ್ಲಿ ರಾಹು (ಸಿಂಹದಲ್ಲಿ) ಹಾಗೂ ಏಕಾದಶದಲ್ಲಿ ಕೇತು (ಕುಂಭ ರಾಶಿಯಲ್ಲಿ) ಇದೆ. ಇದು ನವಗ್ರಹಗಳು ಜನ್ಮಕಾಲದಲ್ಲಿ ಇರುವಂಥ ಸ್ಥಿತಿ. ಇದರ ಆಧಾರದಲ್ಲಿ ಅವರ ಗುಣ ಸ್ವಭಾವವನ್ನು ಗಮನಿಸಬೇಕು.

ಶಿವಕುಮಾರ್ ಬಹಳ ಉತ್ಸಾಹಿ, ಪರಿಸರಪ್ರಿಯರು, ಅದೇ ರೀತಿ ಅಲಂಕಾರಪ್ರಿಯರು. ಇವರು ಎಷ್ಟೇ ಸರಳವಾಗಿ ಬದುಕಬೇಕು ಅಂದುಕೊಂಡರೂ ಹೈ-ಫೈ ಬದುಕು ಇವರನ್ನೇ ಹುಡುಕಿ ಬರುತ್ತದೆ ಅಥವಾ ಸೆಳೆತ ಹೆಚ್ಚಾಗಿರುತ್ತದೆ. ಇವರ ಈಗೋ ಬಹಳ ಬೇಗ ತಲೆ ಎತ್ತಿಬಿಡುತ್ತದೆ. ಮೇಲುನೋಟಕ್ಕೆ ಏನನ್ನಾದರೂ ಸಹಿಸಬಲ್ಲರು ಅಂತೆನಿಸಿದರೂ ತಾನು ಅಂದುಕೊಂಡ ಕೆಲಸದಲ್ಲಿ ಹಿನ್ನಡೆಯಾದರೆ ವಿಪರೀತ ಮಾನಸಿಕ ಖಿನ್ನತೆ ಅನುಭವಿಸುತ್ತಾರೆ. ಇನ್ನು ವೃಷಭ ರಾಶಿಯಾದ್ದರಿಂದ ಆ ರಾಶಿಯ ಅಧಿಪತಿಯಾದ ಶುಕ್ರನು ಜನ್ಮ ಜಾತಕದಲ್ಲಿ ಚಂದ್ರನಿರುವ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ (ಮೀನ) ಇದ್ದು, ಅದರ ಫಲದ ಪ್ರಕಾರ ವಿಪರೀತ ಶ್ರೀಮಂತಿಕೆ ದೊರೆಯುತ್ತದೆ. ಆದರೆ ಆರೋಗ್ಯದ ಸವಾಲು ತುಂಬ ಇರುತ್ತದೆ.

ಜನ್ಮ ಜಾತಕದಲ್ಲಿ ಹಲವು ಯೋಗಗಳು

ಇನ್ನು ಇವರ ಜಾತಕದಲ್ಲಿ ಯೋಗಗಳು ಬಹಳ ಇವೆ. ಮಕರದಲ್ಲಿ ಶನಿ- ಗುರು ಇವೆ. ದಶಮ ಸ್ಥಾನದಲ್ಲಿ (ಕೇಂದ್ರ) ಶನಿ ಅವನದೇ ರಾಶ್ಯಾಧಿಪತ್ಯದ ಮನೆಯಲ್ಲಿ ಇರುವುದರಿಂದ ಉಂಟಾಗುವಂಥ ಪಂಚ ಮಹಾಪುರುಷಗಳಲ್ಲಿ ಒಂದಾದ ಶಶ ಯೋಗ, ಅದೇ ಮಕರ ರಾಶಿಯಲ್ಲೇ ನೀಚ ಸ್ಥಾನದಲ್ಲಿ ಗುರು ಇದ್ದು, ಜತೆಯಲ್ಲಿ ಶನಿಯೂ ಇರುವುದರಿಂದ ಉಂಟಾಗಿರುವಂಥ ನೀಚಭಂಗ ರಾಜಯೋಗ, ಜೊತೆಗೆ ನಿಪುಣ ಯೋಗ ಸಹ ಈ ಜಾತಕದಲ್ಲಿ ಇದೆ.

ಕರ್ಮ ಸ್ಥಾನದಲ್ಲಿ (ಹತ್ತನೇ ಮನೆ) ಕುಜ ಮೊದಲಾಗಿ ಪಂಚಗ್ರಹರಿದ್ದರೆ ಅದನ್ನು ಅಮಲಾ ಯೋಗ ಎನ್ನುತ್ತಾರೆ. ಇವರಿಗೆ ಕರ್ಮಸ್ಥಾನದಲ್ಲಿ ಶನಿ- ಗುರುಗಳು ಇರುವುದರಿಂದ ಹೆಸರು ಮಾಡುವ (ಅಮಲಾ ಯೋಗ) ಯೋಗವೂ ಇದೆ. ಇಲ್ಲಿ ಜಾತಕರಿಗೆ ಜ್ಯೋತಿಷ್ಯರಾಗಿ ನೀಡುವ ಸೂಚನೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕರ್ಮಗಳಿರಲಿ ಅದನ್ನು ಸದುಪಯೋಗ ಮಾಡಿಕೊಂಡರೂ ದುರುಪಯೋಗ ಮಾಡಿಕೊಂಡರೂ ಹೆಸರುವಾಸಿಯಾಗುತ್ತಾರೆ. ಸದುಪಯೋಗ ಮಾಡಿಕೊಳ್ಳುವುದು ಅವರ ಕರ್ತವ್ಯ. ಇದೇ ಕರ್ಮಸ್ಥಾನವೇ ನೀಗಡ ದ್ರೇಕ್ಕಾಣವೂ ಹೌದು. ಅದರ ಅಧಿಪತಿಯಾದ ಶನಿಯೂ 10° (ಡಿಗ್ರಿ) ಒಳಗೇ ಇರುವುದರಿಂದ ಈ ಜಾತಕರು ಕೆಲಸ ಮಾಡುವಾಗ ಎಚ್ಚರದಿಂದ ಇರಬೇಕು. ಕೆಲವೊಮ್ಮೆ ನಮ್ಮ ಕರ್ಮಗಳೇ ಬಂಧನವನ್ನು ಆಹ್ವಾನಿಸುತ್ತದೆ. ವಿವೇಕಾನಂದರು ಹೇಳಿದಂತೆ, ‘ನೀನು ತಪ್ಪು ಮಾಡಿದರೆ ಅದನ್ನು ಒಪ್ಪಿಕೊಂಡರೆ ಕ್ಷಮೆ ಇದೆ. ಸಮರ್ಥನೆಗೆ ಹೋದರೆ ದೂಷಿತನಾಗುವೆ. ಕೆಲವರು ಒಂದು ತಪ್ಪನ್ನು ಸಮರ್ಥಿಸಲು ಹೋಗಿ ಇನ್ನೊಂದು ತಪ್ಪು ಮಾಡಿಕೊಳ್ಳುತ್ತಾರೆ,’ ಎಂದು ಅವರು ಹೇಳಿದ್ದಾರೆ.

ಗೋಚಾರ ಸ್ಥಿತಿ ಹೇಗಿದೆ?

ಈಗಿರುವ ಗೋಚಾರ ಸ್ಥಿತಿ ನೋಡಿದರೆ, ಲಗ್ನಾಧಿಪತಿಯಾದ ಕುಜ ಜನನ ಕಾಲದಲ್ಲಿ ಕರ್ಕಾಟಕ ರಾಶಿಯಲ್ಲಿದ್ದು, ಆ ಜನ್ಮ ಕುಜನಿಗೆ ಸದ್ಯಕ್ಕೆ ಹನ್ನೊಂದನೇ ಮನೆಯಲ್ಲಿ (ವೃಷಭ) ಗುರು ಗ್ರಹದ ಸಂಚಾರ ಆಗುತ್ತಿದೆ. ಆದ್ದರಿಂದ ಉನ್ನತಾಧಿಕಾರ ದೊರೆಯುವ ಸಮಯ ಅಂತ ಖಡಾಖಂಡಿತವಾಗಿ ಹೇಳಬಹುದು. ಅದೇ ಸಮಯದಲ್ಲಿ ಜನ್ಮ ರಾಶಿಯಲ್ಲಿ ಗುರು ಸಂಚರಿಸುತ್ತಿರುವುದರಿಂದ ಜನ್ಮೇ ಗುರು ದುಃಖದಾಯಕ ಅಂತಲೂ ಹೇಳಬೇಕಾಗುತ್ತದೆ. ಉನ್ನತಾಧಿಕಾರ ಸಿಕ್ಕರೂ ದುಃಖ ಇರುತ್ತದೆ. ಇನ್ನು ಮೇಷ ಲಗ್ನದ ಕರ್ಮ ಸ್ಥಾನಕ್ಕೆ (ಮಕರ ರಾಶಿಗೆ) ಗುರುವಿನ ದೃಷ್ಟಿ ಇರುತ್ತದೆ. ಹೀಗೆ ಕರ್ಮ ಸ್ಥಾನದ ದೃಷ್ಟಿ ಗುರು ಬೀರುವುದರಿಂದ ಶಿವಕುಮಾರ್ ಅವರ ಪಾಲಿಗೆ ಹಿರಿಯರಾದ ವ್ಯಕ್ತಿಯೊಬ್ಬರ ಅಗಲಿಕೆಯನ್ನು ಇದು ಸೂಚಿಸುತ್ತದೆ.

ಮೇಷ ಲಗ್ನಕ್ಕೆ ಬಾಧಾಧಿಪತಿಯೇ (ಹನ್ನೊಂದನೇ ಮನೆ ಅಧಿಪತಿ) ಶನಿ. ನಾವು ಶನಿಗೆ ಮಂದ ಅಂತಲೂ ಅನ್ನುತ್ತೇವೆ. ಶಿವಕುಮಾರ್ ಅವರ ಜಾತಕದಲ್ಲಿ ಶನಿಯು ಸ್ಥಾನ ಬಲಿಷ್ಠನಾದರೂ ಅಂಶ ಬಲಿಷ್ಠನಲ್ಲ. ಆದರೂ ಕುಂಭಾಶವು ಬಲಿಷ್ಠವೆ. ಕೇವಲ 6° (ಡಿಗ್ರಿ) ವಕ್ರೀ ಆಗಿದ್ದಾನೆ. ಯಾವುದೋ ಒಂದು ಅನಿವಾರ್ಯ, ಸಮಸ್ಯೆ ಬಗೆಹರಿಸುವುದಕ್ಕಾಗಿ ಇವರಿಗೆ ಮುಖ್ಯಮಂತ್ರಿ ಯೋಗ ಪ್ರಾಪ್ತಿಯಾಗುವ ಸಾಧ್ಯತೆಯೂ ಇದೆ. ಆದರೆ ಇದು ಸಮಸ್ಯೆಯನ್ನು ಮೈ ಮೇಲೆ ಎಳೆದು ಹಾಕಿಕೊಂಡಂತೆಯೂ ಆಗಬಹುದು. ಮಾಡು ಇಲ್ಲವೇ ಮಡಿ (Do or die) ಎಂಬ ತರಹದಲ್ಲಿ ಯೋಗ ಪ್ರಾಪ್ತಿ ಆಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಶುಕ್ರನ ಅನುಗ್ರಹ ಇರುವ ವ್ಯಕ್ತಿಗೆ ಪ್ರಧಾನಮಂತ್ರಿ ಹುದ್ದೆ; ಇಲ್ಲಿದೆ ಮತಎಣಿಕೆ ದಿನದ ಮುಹೂರ್ತ ವಿಶ್ಲೇಷಣೆ

ಶನಿಯ ಪ್ರಭಾವ

ಪಂಚ ಮಹಾಪುರುಷ ಯೋಗ (ಶಶ) ಇರುವ ಈ ಜಾತಕರು ಎಲ್ಲದರಲ್ಲೂ ಸಮರ್ಥ ನಾಯಕರು. ಆದರೆ ತಪ್ಪುಗಳಾದಾಗ ಅದನ್ನು ಒಪ್ಪಿಕೊಂಡರೆ ಇವರನ್ನು ಜಯಿಸುವುದಕ್ಕೆ ಸಾಧ್ಯವೇ ಇರದು. ಒಟ್ಟಿನಲ್ಲಿ ಅಹಂಕಾರ ಬರಬಾರದು. ಚಂದ್ರ ಕರ್ಮಸ್ಥಾನದಲ್ಲಿ ಕೇತುವಿದ್ದು, ಕುಜನ ದೃಷ್ಟಿಯೂ ಇರುವುದರಿಂದ ಇವರ ಸ್ವಭಾವದಲ್ಲಿ ಪೊಲೀಸರ ಗುಣವನ್ನು ಕಾಣಬಹುದು. ಯಾವುದನ್ನೂ ಸುಲಭಕ್ಕೆ ನಂಬುವುದಿಲ್ಲ. ಯಾರನ್ನೂ ಸುಲಭಕ್ಕೆ ಹಚ್ಚಿಕೊಳ್ಳುವುದಿಲ್ಲ. ಎಲ್ಲವನ್ನೂ ಗಮನಿಸುವ, ಸೂಕ್ಷ್ಮವಾಗಿ ಅವಲೋಕಿಸುವ, ಸರಿ- ತಪ್ಪುಗಳನ್ನು ಮುಖಕ್ಕೆ ಹೊಡೆದಂತೆ ಹೇಳುವ ವ್ಯಕ್ತಿತ್ವ ಇವರದು. ಅದನ್ನೇ ಸದುಪಯೋಗ ಮಾಡಿಕೊಂಡರೆ ಪ್ರಜಾ ಪ್ರೀತಿ ಇರುತ್ತದೆ.

ಇನ್ನು ನವಾಂಶದಲ್ಲಿ ಶನಿಯು ಕುಂಭಕ್ಕೆ ಅಂಶ ಕೊಟ್ಟಿರುವುದರಿಂದ ಇವರು ಕಿಂಗ್ ಮೇಕರ್. ಆದರೆ ಕುಂಭ ರಾಶಿಯೇ ಬಾಧಾಸ್ಥಾನವೂ ಆಗಿರುವುದರಿಂದ “ಹಂಚಿದವನಿಗೆ ಹಳಸಿದ ರೊಟ್ಟಿ” ಎಂಬಂತೆ, ಇವರ ಮೂಲಕ ಗದ್ದುಗೆಗೆ ಏರಿದವರು ಕೇವಲ ಅನುಕೂಲವನ್ನು ಬಳಸಿಕೊಳ್ಳುತ್ತಾರೆಯೇ ವಿನಾ ಅಗತ್ಯ ಬಿದ್ದಾಗ ಶಿವಕುಮಾರ್ ಬೆನ್ನಿಗೆ ನಿಲ್ಲುವುದಿಲ್ಲ. ಶಿವಕುಮಾರ್ ಜಾತಕ ಗಮನಿಸಿದರೆ, ಈ ವ್ಯಕ್ತಿ ಬಾಯಿ ಬಿಟ್ಟು ಏನನ್ನಾದರೂ ಕೇಳುವುದಕ್ಕೂ ಸಂಕೋಚ ಪಡುತ್ತಾರೆ ಎಂಬುದು ಗೊತ್ತಾಗುತ್ತದೆ. ಆ ಕಾರಣವೂ ಸೇರಿಕೊಂಡು ತಮ್ಮ ಸ್ಥಾನದಿಂದ ಮೇಲಕ್ಕೆ ಏರುವುದಕ್ಕೆ ಬಲು ಕಷ್ಟವಾಗುತ್ತದೆ. ಇವರಿಗೆ ಅವಕಾಶ ಬಂದಾಗ ಯಾವುದೇ ಸಂಕೋಚ ಇಲ್ಲದೆ ಅದನ್ನು ತಾವು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಅಂಥದ್ದೊಂದು ಬದಲಾವಣೆ ಇವರಲ್ಲಿ ಕಂಡುಬಂದರೆ ಶಿವಕುಮಾರ್ ಅವರನ್ನು ಸೋಲಿಸುವುದು ಕಷ್ಟ.

ದೊಡ್ಡ ಹುದ್ದೆಯೊಂದು ನಿರೀಕ್ಷೆಯಲ್ಲಿ

ಈ ಜಾತಕದ ಪ್ರಕಾರ, ಇವರು ಅಪಾರ ದೈವ ಭಕ್ತರೂ ಹೌದು. ಇದು ಇವರಿಗೆ ವರವೂ ಹೌದು. ಆದರೆ ಕೆಲವೊಮ್ಮೆ ಉತ್ತಮರು ಸಲಹೆ ನೀಡಿದರೆ ನಿರ್ಲಕ್ಷ್ಯ ಮಾಡುತ್ತಾರೆ. ಅದಕ್ಕೆ ಕಾರಣ ಏನೆಂದರೆ, ಲಗ್ನಾಧಿಪತಿ ಕುಜನಿಗೆ ದ್ವಿತೀಯದಲ್ಲಿ ರಾಹು ಅಥವಾ ಕೇತು ಬಂದರೆ ಈ ಸ್ವಭಾವ ಇರುತ್ತದೆ. ಹಾಗಾಗಿ ಇವರಿಗೇನಾದರೂ ಕಾನೂನು ತೊಡಕುಗಳು ಬಂದರೆ ಅದರಿಂದ ಬಚಾವಾಗಲು ಸುಲಭ ಉಪಾಯ ಹುಡುಕಬೇಕು. ಯಾರನ್ನೋ ಗದ್ದುಗೆಗೆ ಏರಿಸಲು ಹೋದರೆ ಇವರಿಗೆ ಹಿನ್ನಡೆಯೂ ಆದೀತು. ಕೆಲವೊಮ್ಮೆ ನಾವು ಇಂತಹ ಸನ್ನಿವೇಶದಲ್ಲಿ ಸ್ವಾರ್ಥಿಗಳಾಗ ಬೇಕಾಗುತ್ತದೆ. ಮೊದಲು ನಾವು ಬದುಕಬೇಕು, ನಾವು ಬದುಕಿದರೆ ಮಾತ್ರ ಇತರರನ್ನು ಬದುಕಿಸಬಹುದಷ್ಟೆ. ಈ ಸ್ವಭಾವ ಅಳವಡಿಸಿಕೊಳ್ಳಬೇಕು.

ಹೀಗೆ ಒಟ್ಟಾರೆಯಾಗಿ ವಿಶ್ಲೇಷಿಸಿದಾಗ ಡಿ.ಕೆ. ಶಿವಕುಮಾರ್ ಅವರದು ಪ್ರಬಲ ಜಾತಕ ಅಂತ ಖಚಿತವಾಗಿ ಹೇಳಬಹುದು. ದೊಡ್ಡ ಹುದ್ದೆಯೊಂದು ಅವರಿಗಾಗಿ ಕಾಯುತ್ತಿದೆ. ಅದು ಅವರು ಕಾಯುತ್ತಿರುವಂಥದ್ದು ಸಹ ಹೌದು. ಅವರಿಗೆ ಎಲ್ಲವೂ ಒಳಿತಾಗಲಿ, ಒಳಿತೇ ಆಗಲಿ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಅಧ್ಯಾತ್ಮ ಚಿಂತಕರು, ಕಾಪು (ಉಡುಪಿ ಜಿಲ್ಲೆ)

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಲೇಖಕರದು. ಜ್ಯೋತಿಷ್ಯ ಆಧಾರದಲ್ಲಿ ಲೇಖಕರು ವಿಶ್ಲೇಷಣೆ ಮಾಡಿದ್ದು, ಅದರ ಸಂಪೂರ್ಣ ಜವಾಬ್ದಾರಿ ಲೇಖಕರದು. ಇಲ್ಲಿ ವ್ಯಕ್ತವಾಗಿರುವ ಲೇಖಕರ ಅಭಿಪ್ರಾಯವನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಇತರ ಸೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ.)

Published On - 9:00 am, Sun, 2 June 24