
ಗುರು- ಚಂದ್ರ ಈ ಎರಡು ಗ್ರಹಗಳ ಸಂಯೋಜನೆಯಲ್ಲಿ ಸೃಷ್ಟಿಯಾಗುವ ಎರಡು ಯೋಗಗಳ ಬಗ್ಗೆ ಇಲ್ಲಿ ತಿಳಿಸಲಾಗುವುದು. ಅದರಲ್ಲಿ ಮೊದಲನೆಯದು ಗಜಕೇಸರಿ ಯೋಗ ಹಾಗೂ ಎರಡನೆಯದು ಶಕಟ ಯೋಗ. ಈ ಎರಡೂ ಯೋಗಗಳು ತುಂಬ ವಿರಳ ಅಂತೇನೂ ಇಲ್ಲ. ಚಂದ್ರ ಹನ್ನೆರಡು ರಾಶಿಗಳನ್ನು ಒಂದು ಸುತ್ತು ಬರುವ ಇಪ್ಪತ್ತೇಳು ದಿನಗಳ ಒಂದು ಮಾಸದಲ್ಲಿ ತುಂಬ ಸಾಮಾನ್ಯವಾಗಿ ಈ ಯೋಗಗಳು ಕಂಡುಬರುತ್ತವೆ. ಅದರಲ್ಲಿ ಗಜಕೇಸರಿ ಯೋಗ ಎಂಬುದು ಶುಭವಾದರೆ, ಶಕಟ ಯೋಗ ಎಂಬುದು ಅಶುಭ ಯೋಗ.
ಒಬ್ಬ ವ್ಯಕ್ತಿಯ ಜನ್ಮ ರಾಶಿ ಯಾವುದು ಇರುತ್ತದೋ ಅದೇ ರಾಶಿಯಲ್ಲಿ ಚಂದ್ರ ಇರುತ್ತಾನೆ. ಅದನ್ನು ಚಂದ್ರ ಲಗ್ನ ಅಂತಲೂ ಕರೆಯಲಾಗುತ್ತದೆ. ಚಂದ್ರ ಲಗ್ನದಿಂದ ಒಂದು, ನಾಲ್ಕು, ಏಳು ಅಥವಾ ಹತ್ತು ಈ ನಾಲ್ಕರಲ್ಲಿ ಯಾವುದೇ ಮನೆಯಲ್ಲಿ ಗುರು ಗ್ರಹ ಇದ್ದರೂ ಅದನ್ನು ಗಜಕೇಸರಿ ಯೋಗ ಎನ್ನಲಾಗುತ್ತದೆ. ಈಗಿನ ಉದಾಹರಣೆಯನ್ನೇ ತೆಗೆದುಕೊಳ್ಳಿ: ಸದ್ಯಕ್ಕೆ ಗುರು ಗ್ರಹ ಮಿಥುನ ರಾಶಿಯಲ್ಲಿ ಇದೆ. ಮೇ ಹದಿನೈದನೇ ತಾರೀಕಿನಿಂದ ಅಕ್ಟೋಬರ್ ಹದಿನೆಂಟನೇ ತಾರೀಕಿನ ತನಕ ಹಾಗೂ ಡಿಸೆಂಬರ್ ಆರರಿಂದ ಮುಂದಿನ ವರ್ಷದ ಜೂನ್ ಒಂದನೇ ತಾರೀಕಿನ ತನಕ ಅದೇ ರಾಶಿಯಲ್ಲಿ ಗುರು ಗ್ರಹ ಇರುತ್ತದೆ. ಈ ಅವಧಿಯಲ್ಲಿ ಮಿಥುನ, ಕನ್ಯಾ, ಧನುಸ್ಸು ಅಥವಾ ಮೀನ ರಾಶಿಯಲ್ಲಿ ಯಾರು ಜನಿಸುತ್ತಾರೋ ಅವರೆಲ್ಲರಿಗೂ ಗಜಕೇಸರಿ ಯೋಗ ಇರುತ್ತದೆ.
ಇನ್ನು ಅಕ್ಟೋಬರ್ ಹದಿನೆಂಟನೇ ತಾರೀಕು ಕರ್ಕಾಟಕ ರಾಶಿಗೆ ಗುರು ಗ್ರಹ ಪ್ರವೇಶಿಸಿ, ಡಿಸೆಂಬರ್ ಐದನೇ ತಾರೀಕಿನ ತನಕ ಅದೇ ರಾಶಿಯಲ್ಲಿ ಇರುತ್ತದೆ. ಆ ಅವಧಿಯಲ್ಲಿ ಕರ್ಕಾಟಕ, ತುಲಾ, ಮಕರ ಹಾಗೂ ಮೇಷ ರಾಶಿಯಲ್ಲಿ ಜನಿಸಿದವರಿಗೆ ಗಜಕೇಸರಿ ಯೋಗ ಆಗುತ್ತದೆ. ಅದರಲ್ಲೂ ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ಮತ್ತೂ ವಿಶೇಷ ಫಲ. ಏಕೆಂದರೆ, ಕರ್ಕಾಟಕ ರಾಶಿಯ ಮೊದಲ ಹತ್ತು ಡಿಗ್ರಿ ಗುರುವಿಗೆ ಪರಮೋಚ್ಚ ಸ್ಥಿತಿ ಆಗುತ್ತದೆ. ಇನ್ನು ಆ ರಾಶಿಯ ಅಧಿಪತಿ ಚಂದ್ರ. ಆ ಎರಡೂ ಗ್ರಹಗಳು ಕರ್ಕಾಟಕ ರಾಶಿಯಲ್ಲಿ ಇರುವುದು ಅಮೋಘ ಯೋಗ. ಪ್ರಭು ಶ್ರೀರಾಮಚಂದ್ರನ ಜಾತಕದಲ್ಲಿ ಚಂದ್ರ ಮತ್ತು ಗುರು ಕರ್ಕಾಟಕ ರಾಶಿಯಲ್ಲಿಯೇ ಇತ್ತು.
ಕೇಸರೀವ ರಿಪುವರ್ಗನಿಹಂತಾ ಪ್ರೌಢವಾಕ್ ಸದಸಿ ರಾಜಸವೃತ್ತಿಃ
ದೀರ್ಘಜೀವ್ಯತಿಯಶಾಃ ಪಟುಬುದ್ಧಿಸ್ತೇಜಸಾ ಜಯತಿ ಕೇಸರಿ ಯೋಗೇ
ಗಜಕೇಸರಿ ಯೋಗದಲ್ಲಿ ಜನಿಸಿದವರು ಸಿಂಹದ ರೀತಿಯಲ್ಲಿ ತಮ್ಮ ಶತ್ರುಗಳನ್ನು ನಾಶ ಮಾಡುತ್ತಾರೆ. ಪ್ರೌಢ ಮತ್ತು ಗಂಭೀರವಾಗಿ ಮಾತನಾಡುತ್ತಾರೆ. ರಾಜಸಮಾನವಾದ ಕಾರ್ಯವನ್ನು ನಿರ್ವಹಿಸುತ್ತಾರೆ. ದೀರ್ಘಾಯುಗಳಾಗಿರುತ್ತಾರೆ ಹಾಗೂ ಯಶಸ್ಸನ್ನು ಪಡೆಯುತ್ತಾರೆ. ತಮ್ಮ ಬುದ್ಧಿಕೌಶಲ ಹಾಗೂ ತೇಜಸ್ಸಿನ ಬಲದಿಂದಾಗಿ ಜಯ ಪಡೆಯುವವರಾಗಿರುತ್ತಾರೆ.
ಈ ಯೋಗದ ಫಲವು ಚಂದ್ರ ಮತ್ತು ಗುರು ಗ್ರಹ ಎಷ್ಟು ಬಲಿಷ್ಠ ಸ್ಥಿತಿಯಲ್ಲಿ ಇದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅಂದರೆ ಚಂದ್ರ ಮತ್ತು ಗುರು ಯಾವ ರಾಶಿಯಲ್ಲಿ ಇವೆ ಹಾಗೂ ಆ ಗ್ರಹಗಳು ಇರುವ ರಾಶಿಯು ಶತ್ರುವೋ ಮಿತ್ರವೋ ಉಚ್ಚ ಸ್ಥಿತಿಯೋ ನೀಚ ಸ್ಥಿತಿಯೋ ಇವೆಲ್ಲವನ್ನೂ ಸಹ ಗಮನಿಸಬೇಕಾಗುತ್ತದೆ.
ಇದನ್ನೂ ಓದಿ: ಹಳೆಯದ್ದು ಬಿಸಾಕಿ ಹೊಸ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಗ್ರಹದಿಂದ ಹನ್ನೆರಡು, ಎಂಟು ಅಥವಾ ಆರನೇ ಸ್ಥಾನದಲ್ಲಿ ಚಂದ್ರ ಇದ್ದರೆ ಆಗ ಶಕಟ ಯೋಗ ಆಗುತ್ತದೆ. ಆದರೆ ಜನ್ಮ ಲಗ್ನದಿಂದ (ನೆನಪಿರಲಿ, ಇದು ಚಂದ್ರ ಲಗ್ನವಲ್ಲ) ಕೇಂದ್ರ ಸ್ಥಾನದಲ್ಲಿ (1, 4, 7 ಅಥವಾ 10ನೇ ಸ್ಥಾನದಲ್ಲಿ) ಚಂದ್ರ ಇದ್ದಲ್ಲಿ ಈ ಶಕಟ ಯೋಗವು ಭಂಗವಾಗುತ್ತದೆ.
ಕ್ವಚಿಚಿತ್ಕ್ವದ್ಭಾಗ್ಯ ಪರಿಚ್ಯುತಃ ಸನ್ ಪುನಃ ಪುನಃ ಸರ್ವಮುಪೈತಿ ಭಾಗ್ಯಮ್
ಲೋಕೇ ಪ್ರಸಿದ್ಧೋ ಪರಿಹಾರ್ಯಮಂತಃ ಶಲ್ಯಂ ಪ್ರಪನ್ನಃ ಶಕಟೇತಿ ದುಃಖೀ
ಶಕಟಯೋಗದಲ್ಲಿ ಹುಟ್ಟಿದಂಥ ವ್ಯಕ್ತಿ ಆಗಾಗ ತನ್ನ ಭಾಗ್ಯವನ್ನು ಕಳೆದುಕೊಳ್ಳುತ್ತಾರೆ. ಹಾಗೂ ಅದನ್ನು ಮತ್ತೆ ಸಂಪಾದಿಸುತ್ತಾರೆ ಕೂಡ. ಪ್ರಪಂಚದಲ್ಲಿ ಅನಾಮಧೇಯರಾಗಿ ಉಳಿದು, ಸಾಧಾರಣವಾದ ಜೀವನವನ್ನು ನಡೆಸುವಂತೆ ಆಗುತ್ತದೆ. ತಮ್ಮ ಅದೃಷ್ಟದ ಬಗ್ಗೆ ಮಾನಸಿಕ ಸಂತಾಪದಿಂದ ಬಳಲುತ್ತಾರೆ, ದುಃಖಿ ಆಗಿರುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ