Jupiter transit in Cancer: ಗುರು ಗ್ರಹ ಅಕ್ಟೋಬರ್ ನಲ್ಲಿ ಕರ್ಕಾಟಕ ರಾಶಿ ಪರಮೋಚ್ಚ ಸ್ಥಿತಿಗೆ; ಈ ರಾಶಿಗಳಿಗೆ ರಾಜಯೋಗ
ಇದೇ ಅಕ್ಟೋಬರ್ 18ನೇ ತಾರೀಕಿನಂದು ಗುರು ಗ್ರಹವು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದ್ದು, ತನ್ನ ಪರಮೋಚ್ಚ ಸ್ಥಿತಿಯಲ್ಲಿ ಇರಲಿದೆ. ಹೀಗೆ ಡಿಸೆಂಬರ್ 5ನೇ ತಾರೀಕಿನ ತನಕ ಇರಲಿದೆ. ಆ ನಂತರ ಮತ್ತೆ ಮಿಥುನ ರಾಶಿಯನ್ನು ಪ್ರವೇಶಿಸಿ, ಮುಂದಿನ ವರ್ಷ ಜೂನ್ 1ನೇ ತಾರೀಕಿನ ತನಕ ಅದೇ ರಾಶಿಯಲ್ಲಿ ಇದ್ದು, ಮುಂದಿನ ರಾಶಿಗೆ ತೆರಳುತ್ತದೆ. ಸಾಮಾನ್ಯವಾಗಿ ಗುರು ಗ್ರಹವು ಒಂದು ರಾಶಿಯಲ್ಲಿ ಒಂದು ವರ್ಷಗಳ ಕಾಲ ಸಂಚರಿಸುತ್ತದೆ. ಒಂದು ವೇಳೆ ತನ್ನ ಸಾಮಾನ್ಯ ವೇಗಕ್ಕಿಂತ ಹೆಚ್ಚು ವೇಗವಾಗಿ ಮುಂದಿನ ರಾಶಿಗೆ ತೆರಳಿದರೆ ಇದನ್ನು ಗುರು ಅತಿಚಾರ ಎನ್ನಲಾಗುತ್ತದೆ. ಈ ಸಂಚಾರದಿಂದ ಯಾವ ರಾಶಿಯವರಿಗೆ ಏನು ಫಲ ಎಂಬುದನ್ನು ತಿಳಿದುಕೊಳ್ಳಿ.

ಉಪನಯನ, ಮದುವೆ ಮೊದಲಾದ ಶುಭ ಕಾರ್ಯಗಳಿಗೆ ಗುರುವಿನ ಬಲ ಇದೆಯಾ ಎಂಬುದನ್ನು ನೋಡುವ ಪದ್ಧತಿ ಇದೆ. ಜನನ ಕಾಲದಲ್ಲಿ ಚಂದ್ರ ಇರುವಂಥ ರಾಶಿಯಿಂದ ಅಥವಾ ಜನ್ಮ ರಾಶಿಯಿಂದ 2, 5, 7, 9 ಅಥವಾ 11ನೇ ಮನೆಯಲ್ಲಿ ಗುರು ಸಂಚರಿಸುವಾಗ ಅದನ್ನು ಗುರು ಬಲ ಎನ್ನಲಾಗುತ್ತದೆ. ಧನುಸ್ಸು ಮತ್ತು ಮೀನ ರಾಶಿಗಳು ಗುರು ಗ್ರಹದ ಸ್ವಕ್ಷೇತ್ರವಾದರೆ, ಕರ್ಕಾಟಕ ರಾಶಿಯು ಉಚ್ಚ ಕ್ಷೇತ್ರವಾಗುತ್ತದೆ. ಇನ್ನು ಮಕರ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಶಾಸ್ತ್ರಾಭಿಪ್ರಾಯ ಹಾಗೂ ಶಾಸ್ತ್ರಕಾರರ ಅಭಿಪ್ರಾಯದಂತೆ ಗುರು ಬಲ ಇದ್ದ ಹೊರತಾಗಿಯೂ ಕೆಲವು ಸ್ಥಾನಗಳನ್ನು ಗುರುಬಲ ಎಂದು ಪರಿಗಣಿಸುವುದಿಲ್ಲ. ಇನ್ನು ಜನ್ಮ ಲಗ್ನದಿಂದಲೂ ಗುರು ಬಲ ನೋಡುವ ಪರಿಪಾಠ ಇದೆ. ಕರ್ಕಾಟಕ ರಾಶಿಯಲ್ಲಿ ಗುರು ಸಂಚರಿಸುವಾಗ ಉಪನಯನ ಮಾಡುವುದಕ್ಕೆ ಗುರುಬಲ ನೋಡಲೇಬೇಕು ಎಂಬ ಕಡ್ಡಾಯ ಇಲ್ಲ ಎಂಬ ವಾಕ್ಯ ಸಹ ಇದೆ. ಇದೀಗ ಮೇಷದಿಂದ ಮೀನ ರಾಶಿಯ ತನಕ ಗುರು ಗ್ರಹದ ಕರ್ಕಾಟಕ ರಾಶಿಯ ಸಂಚಾರದ ಫಲ ಏನು ಎಂಬುದನ್ನು ನೋಡೋಣ.
ಮೇಷ ರಾಶಿ:
ಮನೆ, ಸೈಟು ಅಥವಾ ಫ್ಲ್ಯಾಟ್ ಖರೀದಿ ಮಾಡಬೇಕು ಎಂದಿರುವವರು ಅಥವಾ ಕಾರು- ಸ್ಕೂಟರ್ ಅಥವಾ ಬೈಕ್ ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಅನುಕೂಲಗಳು ಒದಗಿ ಬರಲಿದೆ. ಸ್ನೇಹಿತರ ಜೊತೆಗೆ ಮಾತುಕತೆ ನಡೆಸುವಾಗ ಎಚ್ಚರಿಕೆಯಿಂದ ಇರಬೇಕು. ತಮಾಷೆಗಾದರೂ ಸರಿ, ಇತರರ ವೈಯಕ್ತಿಕ ವಿಚಾರಗಳನ್ನು ಮೂದಲಿಸುವುದು, ಹಂಗಿಸುವುದು ಮಾಡಬೇಡಿ. ಇನ್ನು ಎಚ್ಚರಿಕೆ ಏನೆಂದರೆ, ನಿಮ್ಮ ಸಾಮರ್ಥ್ಯಕ್ಕೆ ಮೀರಿ ಕ್ರೆಡಿಟ್ ಕಾರ್ಡ್ ಇಎಂಐ ಕನ್ವರ್ಟ್ ಮಾಡಿಸಿ, ಅಥವಾ ಪರ್ಸನಲ್ ಲೋನ್ ತೆಗೆದುಕೊಂಡು, ವಿಲಾಸಿ ವಸ್ತುಗಳ ಖರೀದಿ ಮಾಡಲಿಕ್ಕೆ ಹೋಗಬೇಡಿ.
ವೃಷಭ ರಾಶಿ:
ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಅದು ಒಳ್ಳೆ ಕಾರಣಕ್ಕಾದರೂ ಇರಬಹುದು ಅಥವಾ ನೀವೇ ನೀಡಿದ ಹೇಳಿಕೆಗಳು- ಆಡಿದ ಮಾತಿನಿಂದ ಇರಬಹುದು. ಸೋಷಿಯಲ್ ಮೀಡಿಯಾ ಬಳಸುತ್ತಾ ಇದ್ದೀರಿ ಅಂತಾದಲ್ಲಿ ಅಂಥವರಿಗೆ ಈ ಮಾತು ಇನ್ನೂ ಹೆಚ್ಚು ಅನ್ವಯ ಆಗುತ್ತದೆ. ಸಾರ್ವಜನಿಕ ಜೀವನದಲ್ಲಿ ಇರುವವರು ಬಳಸುವ ಪದಗಳ ಬಗ್ಗೆ ಗಮನ ಇರಿಸಿಕೊಳ್ಳಿ. ಸೋದರ- ಸೋದರಿಯರ ಜೊತೆಗೆ ಮನಸ್ತಾಪ- ಅಭಿಪ್ರಾಯ ಭೇದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಸಿಕ್ಕ ಕೂಡಲೇ ಅದನ್ನು ಬಳಸಿಕೊಳ್ಳಿ.
ಮಿಥುನ ರಾಶಿ:
ದಾಂಪತ್ಯ ಜೀವನ ಉತ್ತಮವಾಗುತ್ತದೆ. ಹಣಕಾಸಿನ ಹರಿವಿನಲ್ಲಿ ಅಡೆತಡೆಗಳು ಎದುರಾಗುತ್ತಿದಲ್ಲಿ ಅದು ನಿವಾರಣೆ ಆಗಲಿದೆ. ಕಷ್ಟವಾದ ಕೆಲಸ- ಕಾರ್ಯಗಳನ್ನು ಸಹ ನಿಮ್ಮ ಮಾತಿನ ಮೂಲಕವಾಗಿ ಮುಗಿಸಿಕೊಂಡು ಬರುವುದಕ್ಕೆ ಸಾಧ್ಯವಾಗಲಿದೆ. ಪ್ರೀತಿ- ಪ್ರೇಮದಲ್ಲಿ ಇದ್ದು, ಆ ವಿಚಾರವನ್ನು ಮನೆಯಲ್ಲಿ ಪ್ರಸ್ತಾವ ಮಾಡಬೇಕು ಎಂದಿದ್ದಲ್ಲಿ ಇದು ಸೂಕ್ತ ಸಮಯ ಆಗಲಿದೆ. ವಿವಾಹ ವಯಸ್ಕರಾಗಿದ್ದು, ಮದುವೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಅಂಥವರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯುವ ಸಾಧ್ಯತೆಗಳು ಹೆಚ್ಚಿದೆ.
ಕರ್ಕಾಟಕ ರಾಶಿ:
ನಿಮ್ಮ ವ್ಯಕ್ತಿತ್ವದಲ್ಲಿ ಆತ್ಮವಿಶ್ವಾಸ ಜಾಸ್ತಿ ಆಗಲಿದೆ. ಈ ಹಿಂದೆ ನೀವು ಮಾಡಿದ ಪ್ರಯತ್ನಗಳು ಫಲ ನೀಡುವುದಕ್ಕೆ ಆರಂಭಿಸುತ್ತವೆ. ಸಾಮಾನ್ಯಕ್ಕಿಂತ ಹೆಚ್ಚೆಚ್ಚು ಬಿಜಿ ಆಗಿಬಿಡುತ್ತೀರಿ. ಕೆಲಸ- ಕಾರ್ಯಗಳು ಮೇಲಿಂದ ಮೇಲೆ ಬರಲಿವೆ. ಪಿತ್ರಾರ್ಜಿತ ಆಸ್ತಿ ವಿಚಾರಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ಆದರೆ ಆರೋಗ್ಯ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಸಂಗಾತಿಯ ಜೊತೆಗೆ ಪಾರದರ್ಶಕತೆ ಕಾಯ್ದುಕೊಳ್ಳಿ. ಯಾವ ವಿಷಯ ಮುಚ್ಚಿಡಬೇಡಿ. ದೇಹದ ತೂಕ, ಕೊಲೆಸ್ಟ್ರಾಲ್, ಜೀರ್ಣಾಂಗ, ಮಧುಮೇಹ ಇವುಗಳ ಬಗ್ಗೆ ಲಕ್ಷ್ಯ ಇರಲಿ.
ಸಿಂಹ ರಾಶಿ:
ನಿಮ್ಮ ಖರ್ಚಿನ ಪ್ರಮಾಣ ವಿಪರೀತ ಜಾಸ್ತಿ ಆಗಲಿದೆ. ಅತಿಯಾದ ಆತ್ಮವಿಶ್ವಾಸ ಯಾವ ಕಾರಣಕ್ಕೂ ಬೇಡ. ಯಾರದೋ ಮೇಲಿನ ಪ್ರತಿಷ್ಠೆಗಾಗಿ ಖರ್ಚು- ವೆಚ್ಚಗಳನ್ನು ಮಾಡಲಿಕ್ಕೆ ಹೋಗಬೇಡಿ. ಮುಖ್ಯವಾಗಿ ವಿಲಾಸಿ ಕಾರುಗಳ ಖರೀದಿ, ಮನೆಗೆ ದುಬಾರಿ ಪೀಠೋಪಕರಣಗಳನ್ನು ಖರೀದಿಸಿ ತರುವುದು, ಬ್ರ್ಯಾಂಡೆಡ್ ವಾಚ್, ಶೂ, ಫೋನ್, ಲ್ಯಾಪ್ ಟಾಪ್ ಇಂಥವುಗಳಿಗೆ ಅಗತ್ಯ ಇಲ್ಲದಿದ್ದರೂ ಹಣ ಖರ್ಚು ಮಾಡಲಿಕ್ಕೆ ಹೋಗಬೇಡಿ. ಸ್ವಲ್ಪ ಮಟ್ಟಿಗೆ ಶತ್ರು ಬಾಧೆ ಸಹ ಕಾಡಬಹುದು. ಈ ಹಿಂದೆ ನಿಮಗಿದ್ದ ಅನಾರೋಗ್ಯ ಸಮಸ್ಯೆ ಮರುಕಳಿಸಬಹುದು, ಜಾಗ್ರತೆ.
ಕನ್ಯಾ ರಾಶಿ:
ಲಾಭವನ್ನು ಗಮನದಲ್ಲಿ ಇಟ್ಟುಕೊಂಡು ನೀವು ಮಾಡಿದ್ದ ಹೂಡಿಕೆಗಳಾದ ಷೇರು, ಮ್ಯೂಚುವಲ್ ಫಂಡ್, ಚಿನ್ನ ಹಾಗೂ ಇತರ ಉಳಿತಾಯಗಳು ಫಲ ನೀಡುತ್ತವೆ. ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಮನೆ ನಿರ್ಮಾಣ, ರೆನೊವೇಷನ್ ಅಂತ ಮಾಡಿಸುತ್ತಿದ್ದು, ಹಣಕಾಸಿನ ಕಾರಣಕ್ಕೆ ವಿಳಂಬ ಆಗುತ್ತಾ ಇದ್ದಲ್ಲಿ ಆ ಕೆಲಸಗಳು ವೇಗ ಪಡೆಯಲಿವೆ. ಪ್ರಭಾವಿಗಳು ನಿಮ್ಮ ಸಂಪರ್ಕಕ್ಕೆ ಬರಲಿದ್ದು, ಅವರ ನೆರವಿನಿಂದ ನಿಮ್ಮ ಕೆಲವು ಸಮಸ್ಯೆಗಳು ಬಗೆಹರಿಯಲಿವೆ. ನೀವು ಯಾರಿಗಾದರೂ ಹಣ ಸಾಲ ಕೊಟ್ಟು ತಗುಲಿಹಾಕಿಕೊಂಡಿದ್ದರೆ ಅದನ್ನು ವಸೂಲಿ ಮಾಡುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ.
ತುಲಾ ರಾಶಿ:
ಉದ್ಯೋಗ ಸ್ಥಳದಲ್ಲಿ ಅಥವಾ ನೀವು ವೃತ್ತಿ ಮಾಡುವ ಕಡೆಯಲ್ಲಿ ಏಕ ಕಾಲಕ್ಕೆ ಶುಭ- ಅಶುಭ ಎರಡರ ಫಲವನ್ನೂ ಕಾಣುತ್ತೀರಿ. ಆರಂಭದಲ್ಲಿ ನಿಮಗೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಂಡ ಕೆಲವು ಜವಾಬ್ದಾರಿಗಳು ಸಾಧಕವಾಗಿ ಪರಿಣಮಿಸಲಿದೆ. ಅದೇ ವೇಳೆ ಭಾವನಾತ್ಮಕವಾಗಿ ನೀವು ಬಹಳ ಹಚ್ಚಿಕೊಂಡಂಥ ವ್ಯಕ್ತಿಗಳಿಂದ ದೂರ ಆಗುವಂಥ ಯೋಗ ಸಹ ಇದೆ. ಉದ್ಯೋಗ ಬದಲಾವಣೆ ಮಾಡಬೇಕು ಎಂದುಕೊಂಡಿರುವವರು ಅಳೆದು- ತೂಗಿ ನೋಡಿ, ನಿರ್ಧರಿಸಿ. ಹಿರಿಯರು, ಅನುಭವಿಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಿ.
ವೃಶ್ಚಿಕ ರಾಶಿ:
ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯದಲ್ಲಿ ಸಮಸ್ಯೆಗಳು ಇದ್ದಲ್ಲಿ ಸುಧಾರಣೆ- ಚೇತರಿಕೆ ಕಾಣಿಸಿಕೊಳ್ಳಲಿದೆ. ಪಿತ್ರಾರ್ಜಿತ ಆಸ್ತಿ ವ್ಯವಹಾರಗಳು ಇತ್ಯರ್ಥವಾಗಬಹುದು. ಅದೃಷ್ಟ ನಿಮ್ಮ ಪರವಾಗಿ ಇರುತ್ತದೆ. ಅಲ್ಪ ಅವಧಿಗಾದರೂ ನಿಮ್ಮಲ್ಲಿ ಕೆಲವರು ವಿದೇಶ ಪ್ರಯಾಣ ಮಾಡುವ ಯೋಗ ಸಹ ಇದೆ. ಇನ್ನು ಕುಟುಂಬ ಸಮೇತವಾಗಿಯೂ ಕೆಲವು ಪ್ರಯಾಣಗಳನ್ನು ಮಾಡಲಿದ್ದೀರಿ. ಹಣಕಾಸಿನ ಹರಿವು ಉತ್ತಮವಾಗಲಿದೆ. ಈ ಅವಧಿಯಲ್ಲಿ ನಿಮ್ಮಲ್ಲಿ ಕೆಲವರಿಗೆ ಬಡ್ತಿ, ವೇತನ ಹೆಚ್ಚಳದಂಥ ಶುಭಫಲಗಳು ಸಹ ದೊರೆಯಲಿವೆ.
ಧನುಸ್ಸು ರಾಶಿ:
ನಿಮ್ಮ ಆಲಸ್ಯ- ನಿರ್ಲಕ್ಷ್ಯದ ಕಾರಣಕ್ಕೆ ಕೆಲವು ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ. ಕಾನೂನಿಗೆ ಸಂಬಂಧಿಸಿದ ವಿಚಾರಗಳಿಗೆ ಆತಂಕಗಳು ಎದುರಾಗಬಹುದು. ನಿಮಗೇ ಸಿಗುತ್ತದೆ ಎಂದುಕೊಂಡಿದ್ದ ಆಸ್ತಿ- ಹಣ, ಪ್ರಾಜೆಕ್ಟ್, ಉದ್ಯೋಗ ಇಂಥವು ಬೇರೆಯವರ ಪಾಲಾಗಬಹುದು. ವಾಹನ ಓಡಿಸುವಾಗ ಎಚ್ಚರಿಕೆಯಿಂದ ಇರಬೇಕು. ದೇಹದ ತೂಕದ ಬಗ್ಗೆ ಹೆಚ್ಚು ಗಮನವನ್ನು ನೀಡಿ. ನಿಮ್ಮಲ್ಲಿ ಕೆಲವರಿಗೆ ಸಣ್ಣ- ಪುಟ್ಟ ಶಸ್ತ್ರಚಿಕಿತ್ಸೆಗಳು ಆಗಬಹುದು. ರಾಘವೇಂದ್ರ ಸ್ವಾಮಿ, ಶಿರಡಿ ಸಾಯಿಬಾಬ ಹೀಗೆ ನೀವು ಯಾರನ್ನು ಗುರುಗಳು ಎಂದು ಭಾವಿಸುತ್ತೀರೋ ಆ ಸನ್ನಿಧಾನಕ್ಕೆ ತೆರಳಿ ದರ್ಶನ, ಆರಾಧನೆ, ಸೇವೆಯನ್ನು ಮಾಡಿಕೊಳ್ಳಿ.
ಇದನ್ನೂ ಓದಿ: ಹಳೆಯದ್ದು ಬಿಸಾಕಿ ಹೊಸ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ಮಕರ ರಾಶಿ:
ವಿಪರೀತ ಖರ್ಚು ಆಗಬಹುದು ಎಂದುಕೊಂಡಿದ್ದ ಕೆಲಸಗಳು ಖರ್ಚೇ ಇಲ್ಲದೆ ಅಥವಾ ಕಡಿಮೆ ಖರ್ಚಿನಲ್ಲಿ ಮುಗಿಯಲಿವೆ. ದಂಪತಿ ಮಧ್ಯೆ ಅನ್ಯೋನ್ಯತೆ ಹೆಚ್ಚಾಗಲಿದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿರುವವರಿಗೆ ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆ ಆಗಲಿದೆ. ಉದ್ಯೋಗಸ್ಥರಿಗೆ ಉದ್ಯೋಗ ಬದಲಾವಣೆ ಅವಕಾಶಗಳು ದೊರೆಯಲಿವೆ. ಟ್ಯಾಕ್ಸ್ ರೀಫಂಡ್, ಸರ್ಕಾರದಿಂದ ಬರಬೇಕಾದ ಹಣ ನಿಮ್ಮ ಕೈ ಸೇರಲಿದೆ. ಮುಖ್ಯವಾಗಿ ಹಣಕಾಸಿನ ಹರಿವು ಸರಾಗವಾಗಿ ಆಗಿ, ನೆಮ್ಮದಿ ಸಿಗಲಿದೆ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಯತ್ನ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ.
ಕುಂಭ ರಾಶಿ:
ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳಲಿದೆ. ಈ ಹಿಂದೆ ನೀವೇನಾದರೂ ಆಪರೇಷನ್ ಮಾಡಿಸಿದ್ದಲ್ಲಿ ಅಥವಾ ಬೇರೆ ಯಾವುದಾದರೂ ಚಿಕಿತ್ಸೆ ತೆಗೆದುಕೊಳ್ಳುತ್ತಾ ಇದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ಸರಿಯಾದ ಫಾಲೋಅಪ್ ಮಾಡುವ ಕಡೆಗೆ ಗಮನವನ್ನು ನೀಡಿ. ನಿಮ್ಮ ಮಾತಿನಿಂದಾಗಿ ಕೆಲವರು ಶತ್ರುಗಳಾಗುವ ಸಾಧ್ಯತೆ ಇರುತ್ತದೆ. ಅಂಥ ಸನ್ನಿವೇಶ ಸೃಷ್ಟಿ ಆಗದಂತೆ ನೋಡಿಕೊಳ್ಳಿ. ನೀವಾಗಿಯೇ ಪೊಲೀಸ್ ಠಾಣೆ, ಕೋರ್ಟ್- ಕಚೇರಿ ಅಂತ ದೂರು- ಕೇಸು ನೀಡುವ ಮುನ್ನ ಅದರ ಫಲಿತಾಂಶ ಏನಾಗಬಹುದು ಎಂದು ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡಿ. ಇತರರ ಸಾಲಕ್ಕೆ ಜಾಮೀನು ನಿಲ್ಲಬೇಡಿ.
ಮೀನ ರಾಶಿ:
ಉದ್ಯೋಗ ಬದಲಾವಣೆಗೆ ಎದುರು ನೋಡುತ್ತಿರುವವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಅವಕಾಶಗಳು ಹುಡುಕಿಕೊಂಡು ಬರಲಿವೆ. ಈ ಹಿಂದೆ ನೀವು ಪಟ್ಟಿದಂಥ ಶ್ರಮಕ್ಕೆ ಫಲ ದೊರೆಯಲಿದೆ. ಸಂತಾನ ಅಪೇಕ್ಷಿತರಾಗಿ ಪ್ರಯತ್ನ ಪಡುತ್ತಿರುವ ದಂಪತಿಗೆ ಶುಭ ಸುದ್ದಿ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಈ ಅವಧಿಯಲ್ಲಿ ಮನೆ, ಸೈಟು ಅಥವಾ ಫ್ಲ್ಯಾಟ್ ಖರೀದಿ ಮಾಡಲಿದ್ದೀರಿ. ಅದೇ ರೀತಿ ಬೆಲೆಬಾಳುವ ಲೋಹಗಳು, ಷೇರು- ಮ್ಯೂಚುವಲ್ ಫಂಡ್ ಗಳು ಇಂಥವುಗಳ ಮೇಲೆ ಹೂಡಿಕೆ ಮಾಡುವಂಥ ಯೋಗ ಸಹ ಇದೆ. ವಿವಿಧ ರೀತಿಯ ಶುಭ ಫಲಗಳು ಈ ಅವಧಿಯಲ್ಲಿ ಅನುಭವಕ್ಕೆ ಬರಲಿದೆ.
ಪರಿಹಾರ:
ಕರ್ಕಾಟಕ, ಸಿಂಹ, ಧನುಸ್ಸು ಹಾಗೂ ಕುಂಭ ರಾಶಿಯವರು ಒಂದು ಗುರುವಾರ ಹಳದಿ ಬಟ್ಟೆಯಲ್ಲಿ ಕಡಲೇಕಾಳು ಕಟ್ಟಿ (ಮೂರು ಹಿಡಿಯಷ್ಟು ಕನಿಷ್ಠ ಪ್ರಮಾಣದಲ್ಲಿ) ತೆಂಗಿನಕಾಯಿ, ಅಡಿಕೆ, ವೀಳ್ಯದೆಲೆ, ದಕ್ಷಿಣೆ ಸಹಿತವಾಗಿ ದಾನ ಮಾಡಿ. ಗುರುವಾರಗಳಂದು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿ ದರ್ಶನ ಪಡೆಯಿರಿ. ಅನುಕೂಲವಿದ್ದರೆ ವಸ್ತ್ರಸಮರ್ಪಣೆಯನ್ನು ಮಾಡಿ. ಈ ಪೈಕಿ ಯಾವುದಾದರೂ ಒಂದನ್ನು ಅಥವಾ ಎಲ್ಲವನ್ನೂ ಮಾಡಬಹುದು. ಅನುಕೂಲ, ಸಾಧ್ಯತೆ ಮೇಲೆ ಇದು ಅವಲಂಬನೆ ಆಗಿರುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




