ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 29ರ ಸೋವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಮನೆಯಲ್ಲಿ ಪ್ರೀತಿಯಿಂದ ಸಾಕಿರುವ ಪ್ರಾಣಿಗಳಿಗೆ ಅನಾರೋಗ್ಯದ ಸಾಧ್ಯತೆ ಇದೆ. ಇನ್ನು ಊಟ- ತಿಂಡಿ, ಪಾನೀಯಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ, ಜತೆಗೆ ಅದು ನಿಮ್ಮ ದೇಹಕ್ಕೆ ಒಗ್ಗುತ್ತಿದೆಯಾ ಎಂಬ ಕಡೆ ಲಕ್ಷ್ಯ ಕೊಡಿ. ರಾಮಕೃಷ್ಣಾಶ್ರಮ, ಅಥವಾ ಚರ್ಚ್‌ಗೆ ಹೋಗುವಂಥವರು ಚರ್ಚ್‌ಗೆ ಅಥವಾ ಆಯಾ ಧಾರ್ಮಿಕ ಕೇಂದ್ರಕ್ಕೆ ಹೋಗುವಂಥವರು ಅಂಥಲ್ಲಿಗೆ ಈ ದಿನ ಹೋಗಿಬನ್ನಿ. ಮಾನಸಿಕ ಗೊಂದಲಗಳು ನಿವಾರಣೆ ಆಗಲಿಕ್ಕೆ ಸಹಾಯ ಆಗುತ್ತದೆ. ನಿಮ್ಮದಲ್ಲದ ತಪ್ಪಿಗೆ ಅಪವಾದ, ನಿಂದನೆಗಳನ್ನು ಎದುರಿಸಬೇಕಾಗುತ್ತದೆ. ಕಣ್ಣು ಮಂಜು ಬರುವುದು, ತಲೆ ಸುತ್ತುವುದು ಇತ್ಯಾದಿ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಒಂದು ವೇಳೆ ಗಾರ್ಡನಿಂಗ್ ಮಾಡುವಂಥ ಅಭ್ಯಾಸ ಇದ್ದರೆ ಒಳ್ಳೆಯದು, ಇಲ್ಲದಿದ್ದರೆ ಈ ದಿನ ರೂಢಿಸಿಕೊಳ್ಳಿ. ಏಕಾಗ್ರತೆ ಜಾಸ್ತಿ ಮಾಡಿಕೊಳ್ಳುವುದಕ್ಕೆ ಸೂಕ್ತ ದಿ ಇದು. ಬೇರೆಯವರ ಟೀಕೆಯನ್ನು ಪಾಸಿಟಿವ್ ಆಗಿ ಸ್ವೀಕರಿಸಿ. ಹೊಸ ಹೊಸ ತಂತ್ರಜ್ಞಾನ, ವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಮಾಮೂಲಿಗಿಂತ ಹೆಚ್ಚಿನ ಕೆಲಸದ ಒತ್ತಡವನ್ನು ಎದುರಿಸಲಿದ್ದೀರಿ. ಮನೆಗೆ ಬರುವಂಥ ಹೊಸ ವಸ್ತುಗಳ ಗುಣಮಟ್ಟ ಹಾಗೂ ಸ್ಥಿತಿಯನ್ನು ಒಂದಕ್ಕೆ ಎರಡು ಬಾರಿ ಪರೀಕ್ಷಿಸಿಕೊಳ್ಳಿ. ನೀವೇನಾದರೂ ಉನ್ನತ ಹುದ್ದೆಯಲ್ಲಿ ಇದ್ದಲ್ಲಿ ಮಿತ್ರರು, ಸಂಬಂಧಿಕರಿಂದ ಶಿಫಾರಸುಗಳು ಬರಬಹುದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಪ್ರಭಾವಿಗಳ ಪರಿಚಯ ಆಗಲಿವೆ. ಸಂಘ- ಸಂಸ್ಥೆಗಳಲ್ಲಿ ನಿಮ್ಮ ಮಾತಿನ ತೂಕ ಹೆಚ್ಚಾಗಲಿದೆ. ಹೊಸದಾಗಿ ಕೈಗೊಳ್ಳುವ ಕೆಲಸಗಳಲ್ಲಿ ಉತ್ತಮ ಪ್ರಗತಿ, ಬೆಳವಣಿಗೆ ಕಾಣಲಿದ್ದೀರಿ. ಇತರರ ನೆರವಿಗಾಗಿ ನಿರೀಕ್ಷೆ ಮಾಡದೆ ನಿಮ್ಮ ಕೆಲಸ ಮುಂದುವರಿಸಿ. ಆರೋಗ್ಯ ಸಮಸ್ಯೆಗಳು ಕಾಡಲಿವೆ. ಗಂಡು ಮಕ್ಕಳಿದ್ದು, ಅವರೇನಾದರೂ ವಿದೇಶಗಳಲ್ಲಿ ಇದ್ದಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ಮಕ್ಕಳಿಂದ ಭಾರೀ ವಿರೋಧಗಳು ಬರಲಿವೆ. ಸಾಯಿಬಾಬ ದೇವಸ್ಥಾನಕ್ಕೆ ಹೋಗಿ, ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸಂತಾನಕ್ಕಾಗಿ ಪ್ರಯತ್ನಿಸುತ್ತಿದ್ದಲ್ಲಿ ಶುಭ ಸಮಾಚಾರ ಕೇಳುವಂಥ ಯೋಗ ಇದೆ. ಔಷಧಗಳನ್ನು ಬದಲಾಯಿತ್ತಿದ್ದಲ್ಲಿ ಸರಿಯಾದ ವಿಚಾರ ಮಾಡಿ, ಆ ನಂತರ ಮುಂದುವರಿಯಿರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಮೊಬೈಲ್ ಫೋನ್, ಗ್ಯಾಜೆಟ್‌ಗಳು, ಲ್ಯಾಪ್‌ಟಾಪ್ ಇಂಥದ್ದನ್ನು ಖರೀದಿಸುವ ಯೋಗ ಇದೆ. ಇನ್ನು ಅಂಗಡಿಗಳಲ್ಲಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಯುಪಿಐ ಅಥವಾ ಗೂಗಲ್ ಪೇ- ಫೋನ್‌ಪೇ ಮೂಲಕ ಎಲ್ಲೇ ಹಣ ಪಾವತಿಸುವಾಗ ಮೊತ್ತವನ್ನು ಒಂದಕ್ಕೆ ಎರಡು ಸಲ ಪರೀಕ್ಷಿಸಿಕೊಳ್ಳಿ. ಒಮ್ಮೆ ಪೇಮೆಂಟ್ ಆಗಿಲ್ಲ ಎಂದು ಮತ್ತೊಮ್ಮೆ ಮಾಡಿ, ನಷ್ಟ ಆಗುವ ಸಾಧ್ಯತೆಗಳಿವೆ. ಚಿನ್ನ- ವಜ್ರಾಭರಣಗಳನ್ನು ಖರೀದಿ ಮಾಡುವಂಥ ಯೋಗ ಇದೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ನಿಮ್ಮ ಬಗ್ಗೆ ನಿರೀಕ್ಷೆಗಳು ವಿಪರೀತ ಜಾಸ್ತಿ ಆಗುತ್ತವೆ. ಯಾವುದೇ ಭರವಸೆ ನೀಡುವ ಮುನ್ನ ಎಚ್ಚರಿಕೆಯಿಂದ ಇರಬೇಕು.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ವಿವಾಹ ವಯಸ್ಕರು ಮನಸ್ಸಿನಲ್ಲಿ ಇರುವ ಪ್ರೇಮ ವಿಚಾರವನ್ನು ನಿವೇದನೆ ಮಾಡಬೇಕು ಅಂದುಕೊಳ್ಳುತ್ತಿರುವವರು ಕೊನೆ ಕ್ಷಣದಲ್ಲಿ ಗೊಂದಲಕ್ಕೆ ಬೀಳುತ್ತೀರಿ. ಇನ್ನು ಈಗ ಇರುವ ಕೆಲಸದಲ್ಲೇ ಮುಂದುವರಿಯಬೇಕಾ ಅಥವಾ ಹೊಸ ವ್ಯಾಪಾರ ಶುರು ಮಾಡಬೇಕಾ ಎಂಬ ಸಂಗತಿ ಬಹಳವಾಗಿ ಕಾಡುತ್ತದೆ. ಸುಖಾಸುಮ್ಮನೆ ಮೇಲಧಿಕಾರಿಗಳನ್ನು ಬೇರೆ ಯಾರದೋ ಕಾರಣಕ್ಕೆ ಎದುರುಹಾಕಿಕೊಳ್ಳುತ್ತೀರಿ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದವರಿಗೆ ಖರೀದಿಗಾಗಿ ಹೊಸ ಹೊಸ ಜನರು ವಿಚಾರಣೆಗೆ ಬರುತ್ತಾರೆ. ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ಸೌಂದರ್ಯವರ್ಧಕಗಳನ್ನು ಬಳಸುವವರಿಗೆ ಈ ಎಚ್ಚರಿಕೆ ಮಾತು ಹೆಚ್ಚು ಅನ್ವಯಿಸುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಕುಟುಂಬದ ಭವಿಷ್ಯ, ಆರೋಗ್ಯ, ಹೂಡಿಕೆ, ವಿಮೆ ವಿಚಾರಗಳು ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಳ್ಳುತ್ತವೆ. ನಿಮಗಿಂತ ಚಿಕ್ಕ ವಯಸ್ಸಿನವರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಕಡಿಮೆ ಬೆಲೆಗೆ ಏನಾದರೂ ಸಿಗುತ್ತದೆ ಎಂಬ ಆಸೆಗೆ ಬೀಳದಿರಿ. ಇದರಿಂದ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಇನ್ನು ಸಮುದಾಯಕ್ಕೆ ಸಂಬಂಧಿಸಿದ ಸಂಘ- ಸಂಸ್ಥೆಗಳಲ್ಲಿ ಮುಖ್ಯ ಹುದ್ದೆಗಳಿಗೆ ಆಯ್ಕೆ ಆಗುವಂಥ ಸಾಧ್ಯತೆ ಇದೆ. ಸಂಬಂಧಿಗಳು ನಿಮ್ಮಿಂದ ಹಣಕಾಸು ನೆರವನ್ನು ಕೇಳಿಕೊಂಡು ಬರಲಿದ್ದಾರೆ. ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಸೂಕ್ತ ಉದ್ಯೋಗಾವಕಾಶ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಇರುವ ಅಡೆತಡೆಗಳು ನಿವಾರಣೆ ಆಗಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಈ ಹಿಂದೆ ಯಾವಾಗಲೋ ಕೊಟ್ಟ ಮಾತಿಗೆ ಈಗ ಪಶ್ಚಾತ್ತಾಪ ಪಡುವಂತಾಗುತ್ತದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾಗಿ, ಇನ್ನೇನು ಕೆಲಸ ಕಳೆದುಕೊಂಡು ಬಿಟ್ಟೆ ಎಂಬ ಆತಂಕಕ್ಕೆ ಗುರಿ ಆಗುತ್ತೀರಿ. ಬಿಪಿ- ಶುಗರ್ ಇರುವಂಥವರಿಗೆ ಭುಜ, ಮೀನಖಂಡ, ನರಗಳ ಸಮಸ್ಯೆ ಹೆಚ್ಚಾಗುತ್ತದೆ. ಪಾರ್ಟಿಗಳಿಗೆ ಆಹ್ವಾನ ಬರಲಿದೆ. ವಿದೇಶಗಳಿಗೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ವೇಗ ದೊರೆಯುತ್ತದೆ. ಮನೆಗೆ ಹೊಸ ವಸ್ತುಗಳನ್ನು ತರಲಿದ್ದೀರಿ. ದೂರ ಪ್ರಯಾಣ ಮಾಡುವ ಯೋಗ ಇದೆ. ಪಶು ಸಾಕಣೆ ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ಮಕ್ಕಳ ಸಲುವಾಗಿ ಹೊಸ ವಾಹನವನ್ನು ಖರೀದಿಸಲಿದ್ದೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಉದ್ಯೋಗ ವಿಚಾರ ಪ್ರಾಶಸ್ತ್ಯ ಪಡೆಯುತ್ತದೆ. ಎಷ್ಟು ಖರ್ಚೆಂದರೆ ಬರುವ ಸಂಬಳ ಏನೇನೂ ಸಾಕಾಗುತ್ತಿಲ್ಲ. ಏನಾದರೂ ಹೊಸ ವ್ಯವಹಾರ ಶುರು ಮಾಡುವುದು ಉತ್ತಮವಾ ಎಂಬ ಆಲೋಚನೆ ಬರುತ್ತದೆ. ನೆನಪಿರಲಿ, ಯಾವ ಕಾರಣಕ್ಕೂ ಒಂದಕ್ಕಿಂತ ಹೆಚ್ಚು ಕಡೆ, ಒಬ್ಬರಿಗೆ ಗೊತ್ತಿಲ್ಲದೆ ಮತ್ತೊಂದು ಕಡೆ ಕೆಲಸ ಮಾಡುವುದು ಬೇಡ. ಏಕೆಂದರೆ ನೀವು ಕೆಲಸ ಮಾಡುವ ಸ್ಥಳದಲ್ಲೇ ಶತ್ರುಗಳ ಕಾಟ ಇದೆ. ಇನ್ನು ಮೂಳೆ ಆರೋಗ್ಯದ ಕಡೆ ಗಮನ ನೀಡಿ, ಸುಖಾಸುಮ್ಮನೆ ತಿರುಗಾಟದಿಂದ ಖರ್ಚಾಗುತ್ತದೆ. ಜತೆಗೆ ದೇಹಾಲಸ್ಯವೂ ಜಾಸ್ತಿ ಆಗುತ್ತದೆ. ರಾಜಕೀಯವಾಗಿ ಪ್ರಾಮುಖ್ಯ ದೊರೆಯುವ ಅವಕಾಶಗಳು ಹೆಚ್ಚಿದೆ. ನಿಮಗೆ ಯಾವುದಾದರೂ ಪ್ರಮುಖ ಜವಾಬ್ದಾರಿ ವಹಿಸಬಹುದು.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ನಿರ್ಧಾರದ ಬಗ್ಗೆ ಕುಟುಂಬದಲ್ಲಿ, ಸ್ನೇಹ ವಲಯದಲ್ಲಿ ಬೇರೆ ಬೇರೆ ಅಭಿಪ್ರಾಯ ಬರಬಹುದು. ಆದರೆ ನಿಮಗೆ ಸ್ಪಷ್ಟತೆ ಇರುವುದು ಮುಖ್ಯ. ಹೊಸ ಸ್ಥಳ, ಜಮೀನು ಖರೀದಿಸಬೇಕು ಎಂದಿದ್ದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಸಮಯ ಇದು. ನೀವು ಈಗಾಗಲೇ ಮಾಡಿರುವ ಹೂಡಿಕೆಯಿಂದ ಹಣ ಹಿಂಪಡೆದು, ಬೇರೆ ಕಡೆ ಅದನ್ನು ಹೂಡಿಕೆ ಮಾಡುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಹೊಸಬರ ಜತೆಗೆ ಸ್ನೇಹ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡುತ್ತಿದ್ದೀರಿ ಎಂಬ ಬಗ್ಗೆ ಗಮನ ಕೊಡಿ. ಯಾರ ಬಗ್ಗೆಯಾದರೂ ಮಾತನಾಡುವಾಗ, ಅಭಿಪ್ರಾಯ ಹೇಳುವಾಗ ಸ್ವಲ್ಪ ಎಚ್ಚರ ವಹಿಸಿ.
ಲೇಖನ- ಎನ್.ಕೆ. ಸ್ವಾತಿ