
ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರು, ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಆಗಿರುವವರು ಈ ದಿನ ಬಿಡುವಿಲ್ಲದಷ್ಟು ಕೆಲಸಗಳನ್ನು ಮೈ ಮೇಲೆ ಹಾಕಿ ಕೊಳ್ಳಲಿದ್ದೀರಿ. ಒಬ್ಬ ವ್ಯಕ್ತಿ ಅಥವಾ ಒಂದೇ ಪ್ಲಾನ್ ನೆಚ್ಚಿಕೊಂಡು ಯಾವುದಕ್ಕೂ ಮುನ್ನುಗ್ಗಬಾರದು ಎಂದು ತೀರ್ಮಾನ ಕೈಗೊಳ್ಳುವಂಥ ಬೆಳವಣಿಗೆಗಳು ಆಗಲಿವೆ. ನಿಮ್ಮ ಪರಿಚಿತರ ವರ್ತನೆಯಿಂದ ಏಕ ಕಾಲಕ್ಕೆ ಅಚ್ಚರಿ ಹಾಗೂ ಗಾಬರಿ ಉಂಟಾಗಲಿದೆ. ನಾನು ಹಾಗೆ ಹೇಳಿದ್ದೇ ಅಲ್ಲ, ನೀವು ಕೇಳಿಸಿಕೊಂಡಿದ್ದೇ ತಪ್ಪಾಗಿದೆ ಇತ್ಯಾದಿಯಾಗಿ ವಾದ ಹೂಡಿ, ನಿಮ್ಮ ಬಾಯಿ ಮುಚ್ಚಿಸುವುದಕ್ಕೆ ಮುಂದಾಗುತ್ತಾರೆ. ನೀವು ಈಗಾಗಲೇ ಮಾಡಿದ ಸಾಲವನ್ನು ತೀರಿಸಲೇ ಬೇಕು ಎಂಬ ಒತ್ತಡಕ್ಕೆ ನಿಮ್ಮಲ್ಲಿ ಕೆಲವರು ಸಿಲುಕಿ ಹಾಕಿ ಕೊಳ್ಳಲಿದ್ದೀರಿ. ಮಕ್ಕಳ ಸಲುವಾಗಿ ಬಟ್ಟೆ, ಶೂ, ವಾಚ್ ಇಂಥವುಗಳನ್ನು ಖರೀದಿಸುವ ಸನ್ನಿವೇಶ ಎದುರಾಗಲಿದೆ. ಇದು ನಿಮ್ಮ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವನ್ನು ಸಹ ತರಲಿದೆ.
ಸ್ವತಂತ್ರವಾಗಿ ಆಲೋಚಿಸಿ, ಯೋಜನೆ ರೂಪಿಸಿ ಹಣಕಾಸಿಗೆ ಪ್ರಯತ್ನಿಸುತ್ತಿರುವ ಪ್ರಾಜೆಕ್ಟ್ ಒಂದನ್ನು ಯಾರದೋ ಮಾತು ಕೇಳಿ ನಿಲ್ಲಿಸಬೇಕಾದ ಪರಿಸ್ಥಿತಿ ಒದಗಲಿದೆ. ನಿಮ್ಮ ಬಳಿ ಇರುವ ಇನ್ವೆಸ್ಟರ್ಸ್ ಸಹ ಇದಕ್ಕೆ ಸಹಾಯ ಮಾಡಲಾರರು ಎಂದು ಬಲವಾಗಿ ಅನಿಸಿ, ಮನಸ್ಸಿಗೆ ಬೇಸರ ಕಾಡಲಿದೆ. ನಿಮ್ಮಲ್ಲಿ ಕೆಲವರಿಗೆ ಕಾಲಿನ ಮೀನಖಂಡದ ವಿಪರೀತ ನೋವು ಆತಂಕಕ್ಕೆ ಕಾರಣ ಆಗಲಿದೆ. ವೇರಿಕೋಸ್ ಥರದ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು. ಈ ದಿನ ಕೆಲವು ಸಮಯವಾದರೂ ಏಕಾಂಗಿಯಾಗಿ ಸಮಯವನ್ನು ಕಳೆಯಬೇಕು ಎಂದು ತುಂಬ ಬಲವಾಗಿ ಅನಿಸಲಿದೆ. ನಿಮ್ಮಲ್ಲಿ ಕೆಲವರು ಒಡವೆಗಳನ್ನು ಮಾರಾಟ ಮಾಡಿ, ಅದನ್ನು ಬೇರೆ ಕಡೆ ಹೂಡಿಕೆ ಮಾಡಬೇಕು ಎಂದುಕೊಳ್ಳುವ ಸಾಧ್ಯತೆಗಳಿವೆ. ಅದರಲ್ಲೂ ಇಂಟ್ರಾ ಡೇ ಷೇರು ವ್ಯವಹಾರಗಳನ್ನು ಮಾಡಬೇಕು ಎಂದುಕೊಳ್ಳಲಿದ್ದೀರಿ.
ಹೊಸ ವ್ಯಾಪಾರ- ವ್ಯವಹಾರ ಆರಂಭಿಸಬೇಕು ಎಂದಿರುವವರಿಗೆ ಸರಿಯಾದ ಮಾರ್ಗದರ್ಶನ, ನೆರವು ದೊರೆಯಲಿದೆ. ಇಲ್ಲಿಯ ತನಕ ಕಾಡುತ್ತಿದ್ದ ದ್ವಂದ್ವ- ಗೊಂದಲಗಳು ನಿವಾರಣೆ ಆಗಲಿದೆ. ಸ್ನೇಹಿತರಿಗೆ ಅಥವಾ ಸಂಬಂಧಿಗಳಿಗೆ ಹಣಕಾಸಿನ ನೆರವಿನ ತುರ್ತಾಗಿ ಇರಲಿದ್ದು, ಅವರಿಗೆ ಸಹಾಯ ಮಾಡಲಿದ್ದೀರಿ. ಒಂದು ವೇಳೆ ನಿಮ್ಮಿಂದ ಆಗದಿದ್ದರೂ ಪರಿಚಯಸ್ಥರ ಮೂಲಕವಾಗಿ ಪ್ರಯತ್ನ ಮಾಡಲಿದ್ದೀರಿ. ಉದ್ಯೋಗಸ್ಥರಿಗೆ ಕೆಲಸದಲ್ಲಿ ಸ್ವಲ್ಪ ಮಟ್ಟಿಗಾದರೂ ನಿರಾಸಕ್ತಿ ಕಾಡಲಿದೆ. ಆಮೇಲೆ ಮಾಡಿದರಾಯಿತು, ನೋಡಿದರಾಯಿತು ಎಂಬ ಭಾವನೆ ಮೂಡಲಿದೆ. ನಿಮ್ಮಲ್ಲಿ ಕೆಲವರು ದೂರದ ಊರುಗಳಿಗೆ ಪ್ರಯಾಣ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಯಾವ ವ್ಯಕ್ತಿಗಳನ್ನು ಇನ್ನು ಮೇಲೆ ಇವರಿಂದ ಉಪಯೋಗ ಆಗಲಿಕ್ಕಿಲ್ಲ ಎಂದು ಅಂದುಕೊಂಡು, ಅಂತರ ಕಾಯ್ದುಕೊಳ್ಳಲು ಆರಂಭಿಸಿರುತ್ತೀರೋ ಅವರು ನಿಮಗೆ ಸಹಾಯ ಮಾಡಲಿದ್ದಾರೆ.
ದೇಹಾರೋಗ್ಯ ಯಾಕೋ ಸರಿಯಿಲ್ಲ ಎಂದೆನಿಸುವುದಕ್ಕೆ ಆರಂಭಿಸಲಿದೆ. ಮುಖ್ಯವಾಗಿ ಆಸಕ್ತಿ ಇಲ್ಲದಿರುವುದು, ಸುಸ್ತು, ಬೇಸರ, ಏಕಾಗ್ರತೆ ಸಾಧ್ಯವಾಗದಿರುವುದು ಇವೆಲ್ಲ ಸೇರಿ ಉತ್ಸಾಹ ಕಡಿಮೆ ಆಗಲಿದೆ. ಬಾಯಿ ರುಚಿಗೆ ಬಿದ್ದು, ಕರಿದ ಪದಾರ್ಥಗಳು- ಮಸಾಲೆ ಪದಾರ್ಥಗಳು ಜಾಸ್ತಿ ಸೇವನೆ ಮಾಡುವುದಕ್ಕೆ ಹೋಗಬೇಡಿ. ನೀವು ಅನಾರೋಗ್ಯ ಸಮಸ್ಯೆ ಈ ಹಿಂದೆ ಅನುಭವಿಸಿ, ಅದರ ಫಾಲೋ ಅಪ್ ಪರೀಕ್ಷೆಗಳು ಅಥವಾ ಕೆಲವು ವೈದ್ಯಕೀಯ ಪರೀಕ್ಷೆಗಳು ಮಾಡಿಸುತ್ತಾ ಇದ್ದೀರಿ ಅಂತಾದರಂತೂ ಯಾವುದೇ ಕಾರಣಕ್ಕೂ ಉದಾಸೀನ ಮಾಡಬೇಡಿ. ಆತ್ಮೀಯರು ಎಂಬ ಕಾರಣಕ್ಕೆ ನೀವು ಹೇಳಿದ್ದ ರಹಸ್ಯವೊಂದು ನೀವೇ ಅದನ್ನು ಹೇಳಿದ್ದು ಎಂಬ ಪ್ರಚಾರವಾಗಿ, ಆ ನಂತರ ನಿಮ್ಮ ಬಗ್ಗೆ ಒಂದು ನೆಗೆಟಿವ್ ಅಭಿಪ್ರಾಯ ಮೂಡಿಸಲು ಕಾರಣ ಆಗಬಹುದು. ಆದರೆ ಇದರಿಂದ ತೀರಾ ವಿಚಲಿತರಾಗುವ ಅಗತ್ಯ ಇಲ್ಲ. ಏಕೆಂದರೆ ಸಮಸ್ಯೆ ಬಗೆಹರಿಯುವ ಮಾರ್ಗವೂ ಸಿಗಲಿದೆ.
ನೀವು ಹೇಳಿದ್ದ ಯಾವುದೋ ಒಂದು ಕೆಲಸ ಆಗಿಲ್ಲ ಎಂಬುದು ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಳ್ಳುವಂತೆ ಆಗಲಿದೆ. ಅದರಲ್ಲೂ ಉದ್ಯೋಗ ಸ್ಥಳದಲ್ಲಿ ಸಾಮಾನ್ಯವಾಗಿ ಅಷ್ಟು ಕೋಪ ಮಾಡಿಕೊಳ್ಳದವರು ಈ ದಿನ ನೀವೇ ಅಲ್ಲವೇನೋ ಅನ್ನುವ ಮಟ್ಟಿಗೆ ಕೂಗಾಟ- ಕಿರುಚಾಟ ಮಾಡುವ ಸಾಧ್ಯತೆ ಇದೆ. ಯಾವುದೇ ಘಟನೆಗೂ ಉದ್ವೇಗದಿಂದ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರ ಮನೆಯಲ್ಲಿ ನೀರಿಗೆ ಸಂಬಂಧಿಸಿದ ತೊಂದರೆ- ತಾಪತ್ರಯಗಳು ಕಾಣಿಸಿಕೊಳ್ಳಬಹುದು. ಅಂದುಕೊಂಡ ಮೊತ್ತದೊಳಗೆ ಅದರ ರಿಪೇರಿ ಮುಗಿಯಲ್ಲ ಎಂಬುದು ಸಹ ಒಂದು ಬಗೆಯ ಆತಂಕವನ್ನು ಬಿತ್ತಲಿದೆ. ಮಧ್ಯಾಹ್ನದ ನಂತರದಲ್ಲಿ ಆಪ್ತರು- ಸಂಬಂಧಿಕರು ಭೇಟಿ ಆಗುವ ಬಗ್ಗೆ ನಿಮಗೆ ವರ್ತಮಾನ ಬಂದು, ಇದರಿಂದ ಒಂದು ಬಗೆಯ ಸಮಾಧಾನ ಮನಸ್ಸಿಗೆ ಮೂಡಲಿದೆ. ಒಂದು ಹತ್ತು ನಿಮಿಷಗಳ ಕಾಲ ಧ್ಯಾನ ಮಾಡುವುದಕ್ಕೆ ಪ್ರಯತ್ನಿಸಿ.
ನಿಮ್ಮ ಆಸಕ್ತಿಗೆ ಪೂರಕ ಆಗುವಂತೆ ಕೆಲವು ಸ್ನೇಹಿತರು ದೊರೆಯಲಿದ್ದಾರೆ. ಬೆಟ್ಟ- ಗುಡ್ಡ, ಕಾಡು ಪ್ರದೇಶಗಳಿಗೆ ಪ್ರವಾಸ ಹೋಗುವ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ನಿಮಗೆ ಸರ್ಕಾರದಿಂದ ಬರಬೇಕಾದ ಹಣ ಇದ್ದಲ್ಲಿ ಅದು ಕೈ ಸೇರುವ ಅವಕಾಶಗಳು ಇವೆ. ಆದಾಯ ತೆರಿಗೆ, ಜಿಎಸ್ ಟಿ ಅಥವಾ ಬೇರೆ ಯಾವುದೇ ರೀ ಫಂಡ್ ಬರಬೇಕಿದ್ದಲ್ಲಿ ಅದು ಬರಲಿದೆ. ಷೇರು- ಮ್ಯೂಚುವಲ್ ಫಂಡ್ ಗಳ ಹೂಡಿಕೆಗೆ ಸಂಬಂಧಿಸಿದಂತೆ ಉಪಯುಕ್ತ ಎನಿಸುವ ಸಲಹೆಗಳನ್ನು ನೀಡುವ ವ್ಯಕ್ತಿಯೊಬ್ಬರ ಪರಿಚಯ ಆಗುವ ಸಾಧ್ಯತೆಗಳಿದ್ದು, ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ಬಾಡಿಗೆ ಮನೆಯಲ್ಲಿ ವಾಸ ಇದ್ದು, ಅದನ್ನು ಬದಲಾವಣೆ ಮಾಡಬೇಕು ಎಂದುಕೊಂಡು ಪ್ರಯತ್ನ ಮಾಡುತ್ತಾ ಇರುವವರಿಗೆ ಮನಸ್ಸಿಗೆ ಒಪ್ಪುವಂಥ ಸ್ಥಳದಲ್ಲಿ ಮನೆ ಸಿಗುವಂಥ ಯೋಗ ಇದೆ. ಆರೋಗ್ಯಕರ ಅಭ್ಯಾಸಗಳನ್ನು ಆರಂಭಿಸುವ ತೀರ್ಮಾನ ಕೈಗೊಳ್ಳಲಿದ್ದೀರಿ.
ಎಲ್ಲವನ್ನೂ ಸಾವಧಾನದಿಂದ ವಿಶ್ಲೇಷಿಸಿ, ಆ ನಂತರವಷ್ಟೇ ನಿರ್ಧಾರ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿ ನೀವು ಇರುತ್ತೀರಿ. ನಿಮ್ಮಲ್ಲಿ ಕೆಲವರು ಉನ್ನತ ವಿದ್ಯಾಭ್ಯಾಸಕ್ಕೆ ತೆರಳುವ ಅಥವಾ ಒಂದು ವೇಳೆ ಅರ್ಧಕ್ಕೆ ನಿಲ್ಲಿಸಿದ್ದಲ್ಲಿ ಅದನ್ನು ಮುಂದುವರಿಸುವ ಸಾಧ್ಯತೆಗಳು ಇವೆ. ಆಹಾರ ಪಥ್ಯದ ವಿಚಾರವಾಗಿ ಸಂಬಂಧಪಟ್ಟ ವ್ಯಕ್ತಿಗಳು, ವೃತ್ತಿಪರರಿಂದ ಸಲಹೆ- ಸೂಚನೆಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಯಾರಿಗೆ ನೀವು ಸಾಲ ನೀಡಿ, ಅವರು ಅದನ್ನು ಹಿಂತಿರುಗಿಸುವುದಾಗಿ ಹೇಳಿದ್ದ ಸಮಯ ಸಹ ಮೀರಿರುತ್ತದೋ ಅಂಥವರ ಬಳಿ ಮುಲಾಜಿಲ್ಲದೆ ವಸೂಲಿ ಮಾಡಬೇಕು ಎಂಬ ಮನಸ್ಥಿತಿಯಲ್ಲಿ ನೀವು ಇರುತ್ತೀರಿ. ಇನ್ನು ಮುಂದುವರಿಯಲಾರದು ಎಂದುಕೊಂಡಿದ್ದ ಕೆಲವು ಕೆಲಸ- ಕಾರ್ಯಗಳು ದಿಢೀರನೇ ವೇಗ ಪಡೆದುಕೊಂಡು, ಅಚ್ಚರಿ ಆಗುವ ಮಟ್ಟಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಮೂಡಿಸಲಿದೆ. ಈಗಾಗಲೇ ಸೈಟು ಇದೆ ಎನ್ನುವವರು ಅಲ್ಲಿ ಮನೆ ಕಟ್ಟುವ ತೀರ್ಮಾನ ಮಾಡಲಿದ್ದೀರಿ.
ಶುಭ ಸುದ್ದಿ ಕೇಳುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ದೂರದ ಊರಿಗೆ ಪ್ರಯಾಣ ಮಾಡಿ, ಈಗಷ್ಟೇ ಬಂದಿದ್ದೀನಿ ಎನ್ನುವವರು ಮತ್ತೆ ಪ್ರಯಾಣ ಮಾಡಬೇಕಾದ ಅನಿವಾರ್ಯ ಉದ್ಭವ ಆಗಲಿದೆ. ವಿದೇಶಗಳಲ್ಲಿ ಉದ್ಯೋಗ ಪ್ರಯತ್ನ ಮಾಡುತ್ತಿರುವವರಿಗೆ ಹಾಗೂ ಈಗಾಗಲೇ ಇಂಟರ್ ವ್ಯೂ ಕೊಟ್ಟಾಗಿದೆ ಎನ್ನುವವರಿಗೆ ಪಾಸಿಟಿವ್ ಆದಂಥ ಪ್ರತಿಕ್ರಿಯೆ ದೊರೆಯಲಿದ್ದು, ಇದರಿಂದಾಗಿ ಆತ್ಮವಿಶ್ವಾಸ ಜಾಸ್ತಿ ಆಗಲಿದೆ. ಬ್ಯಾಂಕ್ ನಲ್ಲಿ ಎಫ್ ಡಿ ಮಾಡಿದ್ದಲ್ಲಿ ಅಥವಾ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದಲ್ಲಿ ಅದರಿಂದ ಹಣವನ್ನು ಹಿಂತೆಗೆದುಕೊಂಡು, ಈಗ ನಿಮಗಿರುವ ಸಾಲ ಕೆಲವನ್ನು ಚುಕ್ತಾ ಮಾಡುವ ಕುರಿತು ನಿರ್ಧಾರ ಮಾಡಲಿದ್ದೀರಿ. ನಿಮ್ಮಲ್ಲಿ ಯಾರು ಫ್ರೀ ಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ, ಅಂಥವರಿಗೆ ದೊಡ್ಡ ಮಟ್ಟದ ಹಾಗೂ ದೀರ್ಘಾವಧಿಯ ಆರ್ಡರ್ ದೊರೆಯುವ ಸುಳಿವು ಸಿಗಲಿದೆ.
ಹಳೇ ನೆನಪುಗಳು ವಿಪರೀತವಾಗಿ ಕಾಡಲಿವೆ. ನಿಮ್ಮ ಜೊತೆಗೆ ಈ ವ್ಯಕ್ತಿ ಹೀಗೆ ನಡೆದುಕೊಳ್ಳಲಾರರು ಅಂದುಕೊಂಡಿದ್ದವರು ಸಹ ನಿಮಗೆ ಮುಜುಗರ ಆಗುವಂಥ ಮಾತನಾಡುವುದೋ ಅಥವಾ ವರ್ತನೆ ತೋರುವುದೋ ಮಾಡುವುದರಿಂದ ಮನಸ್ಸು ಸ್ವಲ್ಪ ಮಟ್ಟಿಗೆ ಕಹಿ ಆಗಲಿದೆ. ನಿಮ್ಮನ್ನು ಕಂಡರೆ ಆಗುವುದಿಲ್ಲ ಎಂಬಂತೆ ಇರುವ ವ್ಯಕ್ತಿಯೊಬ್ಬರ ಚಿತಾವಣೆಯಿಂದ ಹೀಗೆ ಆಗುತ್ತಿದೆ ಎಂಬುದು ಗೊತ್ತಾದ ಮೇಲೆ, ನೀವು ಸಹ ಗೊಂದಲ ಪರಿಹಾರ ಮಾಡುವುದರೊಂದಿಗೆ ಎಲ್ಲವೂ ತಿಳಿಯಾಗಿ, ಮನಸ್ಸು ಹಗುರಾಗುತ್ತದೆ. ನಿಮ್ಮಲ್ಲಿ ವಿವಾಹ ವಯಸ್ಕರಿದ್ದು, ಸೂಕ್ತ ಸಂಬಂಧಕ್ಕಾಗಿ ಹುಡುಕಾಟ ನಡೆಸಿದ್ದಲ್ಲಿ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯಲಿದೆ. ಕೆಲ ದಿನಗಳ ಮಟ್ಟಿಗೆ ಬೇರೆ ಸ್ಥಳಕ್ಕೆ ತೆರಳಿ, ಕೆಲಸ ಮಾಡಬೇಕಾಗಲಿದೆ ಎಂಬ ಸೂಚನೆಯನ್ನು ನಿಮ್ಮಲ್ಲಿ ಕೆಲವರಿಗೆ ಮೇಲಧಿಕಾರಿಗಳು ನೀಡುವ ಸಾಧ್ಯತೆ ಇದೆ.
ಲೇಖನ- ಎನ್.ಕೆ.ಸ್ವಾತಿ