
ಸಂಗಾತಿಯ ಆರೋಗ್ಯ ವಿಚಾರ, ಕುಟುಂಬದಲ್ಲಿನ ಬೆಳವಣಿಗೆ, ಹಣಕಾಸು ಪರಿಸ್ಥಿತಿ ಇವೆಲ್ಲವೂ ನಿಮಗೆ ಕಲಸುಮೇಲೋಗರ ಆಗಿ, ಮುಂದೆ ಏನು ಮಾಡಬೇಕು ಎಂಬುದು ದೊಡ್ಡ ಚಿಂತೆಯಂತೆ ಮಾರ್ಪಡಲಿದೆ. ನನ್ನಿಂದ ಸಾಧ್ಯವಾದ ಸಹಾಯವನ್ನು ಮಾಡ್ತೀನಿ ಎಂದು ನಿಮ್ಮ ಆಪ್ತರ ಪೈಕಿಯೇ ಯಾರಾದರೂ ಮುಂದೆ ಬರಬಾರದಾ ಎಂದು ನಿರೀಕ್ಷೆ ಹಾಗೂ ಅಪೇಕ್ಷೆ ಬಹುವಾಗಿ ಕಾಡಲಿದೆ. ಮನಸಾರೆ ಮಾಡಿದ್ದ ಕೆಲಸದಲ್ಲಿ ಅಂದುಕೊಂಡಂತೆ ಅಥವಾ ಅಂದುಕೊಂಡ ರೀತಿಯಲ್ಲಿ ಫಲಿತಾಂಶ ಬಾರದೆ ನಿರಾಸೆ ಆಗಬಹುದು. ಊಟ- ತಿಂಡಿ ವಿಚಾರದಲ್ಲಿ ಹಠ ಮಾಡುವುದಕ್ಕೆ ಹೋಗಬೇಡಿ. ಒಂದು ವೇಳೆ ರುಚಿಯಾಗಿಲ್ಲ ಎಂಬ ಕಾರಣಕ್ಕೆ ಯಾರ ಮೇಲೂ ಕೂಗಾಡುವುದಕ್ಕೆ ಮುಂದಾಗಬೇಡಿ. ನೀವೇನಾದರೂ ಸ್ವಂತ ವ್ಯವಹಾರಗಳನ್ನು ಏನಾದರೂ ಮಾಡುತ್ತಾ ಇದ್ದಲ್ಲಿ ದೊಡ್ಡ ಮೊತ್ತದ ಆರ್ಡರ್ ನಿಮಗೆ ಬರಬಹುದು ಎಂದು ಸ್ನೇಹಿತರಿಂದಲೋ ಸಂಬಂಧಿಕರಿಂದಲೋ ಸುದ್ದಿ ಬರಬಹುದು.
ಸ್ನೇಹಿತರು ಅಥವಾ ಸಂಬಂಧಿಕರಿಗೆ ಸಹಾಯ ಮಾಡಬೇಕು ಎಂದುಕೊಂಡು ಸಾಲ ಪಡೆಯಬೇಕಾದ ಸನ್ನಿವೇಶ ಎದುರಾಗಬಹುದು. ಉದ್ಯೋಗ ಹಾಗೂ ವೈಯಕ್ತಿಕ ಜೀವನದ ಸಮತೋಲನವು ಕಷ್ಟ ಆಗಬಹುದು. ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಈಗಿನಿಂದಲೇ ಯೋಜನೆ ಮಾಡಿಟ್ಟುಕೊಳ್ಳುವ ಬಗ್ಗೆ ಮನೆಯಲ್ಲಿ ಈ ದಿನ ಚರ್ಚೆಗಳು ಆಗಬಹುದು. ಇಷ್ಟು ಸಮಯ ನಿಮಗೆ ಸಿಗದಿದ್ದ ಡಾಕ್ಯುಮೆಂಟ್ ಗಳು ಅಚಾನಕ್ ಆಗಿ ಸಿಕ್ಕಿಬಿಡುವ ಅವಕಾಶಗಳು ಇವೆ. ಕಣ್ಣೆದುರಿಗೆ ಇರುವಂಥ ದೊಡ್ಡ ಬೆಳವಣಿಗೆ ಸಾಧ್ಯತೆಗಳನ್ನು ಬಾಯಿ ಬಿಟ್ಟು ಕೇಳಿಯೇ ಪಡೆದುಕೊಳ್ಳಬೇಕು ಎಂದಾದಲ್ಲಿ ಸಂಕೋಚ ಮಾಡಿಕೊಳ್ಳದೆ ಕೇಳಿಪಡೆಯಿರಿ. ಇನ್ನು ನಿಮ್ಮಲ್ಲಿ ಯಾರು ಬಾಡಿಗೆ ಮನೆಯಲ್ಲಿದ್ದು, ಅಲ್ಲಿಂದ ಬೇರೆ ಸ್ಥಳಕ್ಕೆ ತೆರಳಬೇಕು ಎಂಬ ಚಿಂತನೆಯಲ್ಲಿ ಇರುತ್ತೀರಿ, ಅಂಥವರಿಗೆ ಮನಸ್ಸಿಗೆ ಒಪ್ಪುವಂಥ ಬಾಡಿಗೆ ಮನೆಯು ಸಿಗುವ ಯೋಗ ಇದೆ.
ಯಾವುದು ನಿರಂತರ ಎಂಬ ಅದಮ್ಯವಾದ ವಿಶ್ವಾಸದಲ್ಲಿ ಇರುತ್ತೀರಿ, ಅಂಥದ್ದೊಂದು ನಂಬುಗೆ ಅಲುಗಾಡುವಂಥ ಸನ್ನಿವೇಶಗಳು ಈ ದಿನ ಎದುರಾಗಬಹುದು. ಬಹಳ ದೊಡ್ಡ ಸಂಖ್ಯೆಯಲ್ಲಿ ಇರುವಂಥ ಜನರ ಗುಂಪೊಂದು ನಿಮ್ಮ ಅಭಿಪ್ರಾಯಕ್ಕೆ ಮನ್ನಣೆಯೇ ಸಿಗದಂತೆ ಮಾಡುವುದಕ್ಕೆ ಪ್ರಯತ್ನಿಸಬಹುದು. ಮೇಲುನೋಟಕ್ಕೆ ಏನೋ ಸರಿಯಿಲ್ಲ ಎಂಬ ಗುಮಾನಿ ಬರುವಂಥ ಸ್ಥಳದಲ್ಲಿ ಮಾತನಾಡಲು ಹೋಗಬೇಡಿ. ನಿಮಗೇ ಸಂದೇಹಗಳಿವೆ ಎಂಬ ವಿಷಯದ ಬಗ್ಗೆಯಂತೂ ತುಟಿ ಕೂಡ ಬಿಚ್ಚುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರು ಪ್ರತಿಷ್ಠೆಗೋಸ್ಕರ ಅಥವಾ ಇನ್ನೊಬ್ಬರ ಮೇಲಿನ ಸಿಟ್ಟಿಗೋಸ್ಕರ ದೊಡ್ಡ ಮಟ್ಟದ ಕೆಲವು ಖರ್ಚುಗಳನ್ನು ಮಾಡಲು ಮುಂದಾಗಬಹುದು. ಇಂಥದ್ದನ್ನು ಮಾಡುವುದನ್ನು ಸಾಧ್ಯವಾದಷ್ಟೂ ನಿಲ್ಲಿಸಿ. ಒಂದು ವೇಳೆ ನೀವೇನಾದರೂ ಕ್ರೆಡಿಟ್ ಕಾರ್ಡ್ ಹೆಚ್ಚಿಗೆ ಬಳಸುವವರು ಅಂತಾದಲ್ಲಿ ಇನ್ನೂ ಎಚ್ಚರಿಕೆಯಿಂದ ಇರಬೇಕು.
ನಿಮ್ಮ ತಂದೆಯವರ ಅಥವಾ ತಂದೆ ಸಮಾನರಾದವರ ಆರೋಗ್ಯ ಅಥವಾ ಆರ್ಥಿಕ ಸ್ಥಿತಿಗೆ ಚಿಂತೆಗೆ ಕಾರಣ ಆಗಬಹುದು. ಈ ಹಿಂದೆ ಮಾಡಿ ಮುಗಿಸಿಯಾದ ಕೆಲಸಗಳು ಕೆಲವನ್ನು ಮೊದಲಿಂದ ಆರಂಭ ಮಾಡಬೇಕಾದ ಸನ್ನಿವೇಶ ಬರಬಹುದು ಎಂಬ ಸುಳಿವು ನಿಮಗೆ ದೊರೆಯಲಿದೆ. ನಿಮ್ಮಿಂದ ಸಹಾಯದ ಅಗತ್ಯ ಇದೆ, ಇಂಥ ಸಮಯಕ್ಕೆ ಬರುವುದಾಗಿ ಹೇಳಿದ್ದವರು ಬಹಳ ಮುಂಚೆಯೇ ಬಂದು, ನಿಮಗಿರುವ ಇತರ ಕೆಲಸಗಳು ಒತ್ತಡ ಆಗುವುದಕ್ಕೆ ಕಾರಣ ಆಗಬಹುದು. ಯಾರಿಗೆ ಆದರೂ “ಆಯಿತು, ಮಾಡಿಕೊಡ್ತೀನಿ” ಎಂಬ ಮಾತನ್ನು ಹೇಳುವ ಮುಂಚೆ ಸಾವಿರ ಬಾರಿ ಆಲೋಚಿಸಿ. ಯಾವ ನಿರ್ಧಾರದಿಂದ ನಿಮಗೆ ಹೆಸರು ಬರಬಹುದು ಎಂದು ಭಾವಿಸಿರುತ್ತೀರೋ ಆ ಬಗ್ಗೆ ಆಕ್ಷೇಪಗಳನ್ನು ಕೇಳಿಸಿಕೊಳ್ಳುವಂತೆ ಆಗಲಿದೆ. ಈ ದಿನ ಸಾಧ‌್ಯವಾದಷ್ಟು ಮುಕ್ತವಾದ ಮನಸ್ಸಿನಿಂದ ಎಲ್ಲವನ್ನೂ ಸ್ವೀಕರಿಸುವ ಕಡೆಗೆ ಲಕ್ಷ್ಯವಿರಲಿ.
ಸಂತೋಷ ಹಾಗೂ ಬೇಸರ ಹೀಗೆ ಎರಡೂ ರೀತಿಯ ಭಾವನೆ, ಮಿಶ್ರ ಭಾವನೆಗಳು ಇರಲಿವೆ. ನೀವು ನಿರೀಕ್ಷೆ ಕೂಡ ಮಾಡಿರದಂಥ ಉಡುಗೊರೆ ನಿಮಗೆ ಸಿಗುವಂಥ ಯೋಗ ಇದೆ. ಇದೇ ವೇಳೆ ನೀವು ಬಹಳ ನಿರೀಕ್ಷೆ ಮಾಡುವಂಥ ವ್ಯಕ್ತಿಯ ಜೊತೆಗೆ ಮಾತು ಬಿಟ್ಟಿರುವುದೋ ಅಥವಾ ಜಗಳ ಆಗಿರುವುದೋ ಬೇಸರ ಕೂಡ ನೀಡಲಿದೆ. ನಿಮ್ಮ ತಂದೆ- ತಾಯಿಯಿಂದ ಮೆಚ್ಚುಗೆಯ ಮಾತುಗಳನ್ನು ಕೇಳಿಸಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ದೇವಸ್ಥಾನಗಳಿಗೆ ಕಾಣಿಕೆ ನೀಡುವುದು, ಕುಟುಂಬದ ಸದಸ್ಯರಿಗೆ ಬೇಕಾದ ಕೆಲವು ವಸ್ತುಗಳನ್ನು ಕೊಡಿಸುವುದು ಇಂಥದ್ದು ಸಹ ಈ ದಿನ ಮಾಡಲಿದ್ದೀರಿ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ಈ ವಿಷಯವನ್ನು ತಿಳಿಸಬೇಕು ಎಂದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಮೂರನೇ ವ್ಯಕ್ತಿಗಳ ಮೂಲಕವಾಗಿ ಕುಟುಂಬ ಸದಸ್ಯರಿಗೆ ಈ ವಿಚಾರ ತಿಳಿಯಲಿದೆ.
ನಿಮಗೆ ಬರಬೇಕಾದ ಹಣ ಬಾರದೆ ಆತಂಕ ಶುರುವಾಗುತ್ತದೆ. ನೀವು ಉದ್ಯೋಗ ಮಾಡುವ ಸ್ಥಳದಲ್ಲಿ ಸರಿಬಾರದ ವಿಷಯವನ್ನು ಹೇಳಬೇಕು ಎಂದು ಚಡಪಡಿಕೆ ಆಗಲಿದೆ. ನಿಮ್ಮ ಕಣ್ಣಂದಾಜಿನಲ್ಲಿಯೇ ಗುರುತಿಸ ಬಹುದಾದ ರೀತಿಯಲ್ಲಿ ಕೆಲವು ಬದಲಾವಣೆಗಳು ಆಗಲಿವೆ ಎಂಬುದು ತಿಳಿದು ಬರಲಿದೆ. ದಿಢೀರ್ ಅಂತ ದೂರ ಪ್ರಯಾಣ ಮಾಡಬೇಕು ಎಂದಾದಲ್ಲಿ ಸರಿಯಾದ ಸಿದ್ಧತೆಯನ್ನು ಮಾಡಿಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ. ನಿಮ್ಮಲ್ಲಿ ಯಾರು ಯೋಗ, ಪ್ರಾಣಾಯಾಮ ಇಂಥದ್ದನ್ನು ಕಲಿಸುವುದರ ಮೂಲಕ ಆದಾಯವನ್ನು ಗಳಿಸುತ್ತಿದ್ದೀರಿ ಅಂತಾದಲ್ಲಿ ಅದರಲ್ಲಿ ಹೆಚ್ಚಳ ಆಗಲಿದೆ. ಯಾವುದು ನಿಮ್ಮ ವೃತ್ತಿಯೋ ಅದರಲ್ಲಿ ಹೆಚ್ಚುವರಿ ಸೇವೆಗಳನ್ನು ಸೇರ್ಪಡೆ ಮಾಡಬೇಕು ಎಂದು ಆಲೋಚನೆ ಇದ್ದಲ್ಲಿ ಈ ದಿನ ಇಲ್ಲಿಯವರೆಗಿನ ಪ್ರಯತ್ನಗಳು ಫಲ ನೀಡುವುದಕ್ಕೆ ಆರಂಭವಾಗುತ್ತದೆ. ಈ ಬಗೆಗಿನ ಕೆಲವು ನಿರ್ಧಾರಗಳು ನಿಮಗೆ ಸಮಾಧಾನ ನೀಡಲಿದೆ.
ನಿಮ್ಮ ಜೀವನಶೈಲಿಯನ್ನು ಕಡ್ಡಾಯವಾಗಿ ಬದಲಿಸಿಕೊಳ್ಳಲೇಬೇಕು ಎಂಬ ಸನ್ನಿವೇಶ ಸೃಷ್ಟಿಯಾಗಲಿದೆ. ಈ ಹಿಂದಿನ ನಿಮ್ಮ ನಡವಳಿಕೆ, ಸ್ವಭಾವ ಹಾಗೂ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ವಿಶ್ಲೇಷಣೆಯನ್ನು ಆರಂಭಿಸಲಿದ್ದೀರಿ. ನಿಮ್ಮ ಸ್ನೇಹಿತರಿಂದ ಅಗತ್ಯವಾದ ನೆರವು, ಸಲಹೆ- ಸೂಚನೆಗಳು ಸಿಗಲಿವೆ. ಇತರರಿಗೆ ಸುಲಭಕ್ಕೆ ಹೊಳೆಯದ ಕೆಲವು ಸಂಗತಿಗಳು ಹೊಳೆಯಲಿವೆ. ಮನೆಯ ಖರ್ಚು- ವೆಚ್ಚಗಳಿಗೆ ಬೇಕಾದ ಮೂಲವನ್ನು ಹುಡುಕಿಕೊಳ್ಳುವುದಕ್ಕೆ ಗಂಭೀರ ಪ್ರಯತ್ನಗಳನ್ನು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಈಗ ಮಾಡುತ್ತಿರುವ ಉದ್ಯೋಗವೋ ವೃತ್ತಿ ವ್ಯಾಪಾರವೋ ಏನೇ ಇದ್ದರೂ ಅದರ ಜೊತೆಗೆ ಹೊಸದಾದ ಆದಾಯ ಮೂಲವನ್ನು ಸೇರ್ಪಡೆ ಮಾಡಿಕೊಳ್ಳಲಿದ್ದೀರಿ. ನಿಮ್ಮ ಬಳಿಯಿರುವ ವಸ್ತುವೊಂದನ್ನು ಆಪ್ತರೊಬ್ಬರಿಗೆ ಬಳಕೆ ಮಾಡುವ ಸಲುವಾಗಿ ಉಚಿತವಾಗಿ ಕೊಡುವಂಥ ಸಾಧ್ಯತೆ ಈ ದಿನ ಇದೆ.
ನೀವು ಸ್ವಾವಲಂಬಿಗಳು ಆಗಬೇಕು, ಆದಾಯಕ್ಕಾಗಿ ಇತರರನ್ನು ಎದುರು ನೋಡುವಂತಾಗಬಾರದು ಎಂಬ ಭಾವನೆ ಈ ದಿನ ಹೊಸ ಹೊಸ ಆಲೋಚನೆಗಳನ್ನು ತರಲಿವೆ. ನಿಮ್ಮ ಕಷ್ಟದ ದಿನಗಳಲ್ಲಿ ಇತರರು ಹಂಗಿಸಿದ್ದು, ಮೂದಲಿಸುವ ಮಾತುಗಳನ್ನಾಡಿದ್ದು ನೆನಪಾಗಿ ವಿಪರೀತ ಕಾಡಲಿವೆ. ಹೊಸ ಪ್ರಾಜೆಕ್ಟ್ ವೊಂದನ್ನು ಕೈಗೆತ್ತಿಕೊಳ್ಳುವುದಕ್ಕೆ ಬೇಕಾದ ಸಿದ್ಧತೆಗಳನ್ನು ಆರಂಭಿಸಲಿದ್ದೀರಿ. ನೀವು ಮಾಡಿದ ನಿರ್ಧಾರಕ್ಕೆ ಬೇಕಾದ ಸಂಪನ್ಮೂಲ ಸಂಗ್ರಹಕ್ಕೆ ಹೆಚ್ಚು ಸಮಯವನ್ನು ಮೀಸಲಿಡಲಿದ್ದೀರಿ. ಇತರರಿಗೆ ಸಹಾಯ ಮಾಡಿ, ಅದು ನೀವು ಹಾಕಿದ ಶ್ರಮದ ನಿರರ್ಥಕತೆ ಎಂದೇನಾದರೂ ಭಾವಿಸಿದ್ದಲ್ಲಿ ಅದು ಬದಲಾಗುವಂತೆ ನಿಮಗೆ ನೆರವು ದೊರೆಯಲಿದೆ. ಕ್ರಿಯೇಟಿವ್ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚೆಚ್ಚು ಅವಕಾಶಗಳು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಮೊದಮೊದಲಿಗೆ ಹಿಂಜರಿಕೆ ಮಾಡಿದಂತೆ ಕೆಲವು ಕೆಲಸಗಳನ್ನು ಒಪ್ಪಿಕೊಳ್ಳುವಂತಾಗಲಿದೆ.
ನಿಮಗೆ ತಿಳಿಯದಂತೆ ಅಥವಾ ನಿಮ್ಮ ತನಕ ವಿಷಯ ಬಾರದೆ ತುಂಬ ತಡವಾಗಿ ಸ್ನೇಹಿತರೋ- ಸಂಬಂಧಿಕರೋ ಸಮಸ್ಯೆಗೆ ಸಿಲುಕಿಕೊಂಡಿದ್ದರು ಎಂಬುದು ಮೂರನೇ ವ್ಯಕ್ತಿ ಮೂಲಕ ತಿಳಿದು ಬರಲಿದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ವಹಿಸಿದ ಜವಾಬ್ದಾರಿಗಳು ಬಹುತೇಕ ಸಮಯವನ್ನು ತೆಗೆದುಕೊಂಡು ಬಿಡಲಿದೆ. ನಿಮ್ಮಲ್ಲಿ ಯಾರು ಮನೆ ನಿರ್ಮಾಣ ಮಾಡುತ್ತಿದ್ದೀರೋ ಅಂಥವರಿಗೆ ಯಾವುದಾದರೂ ಸಂಬಂಧಪಟ್ಟ ಇಲಾಖೆಯಿಂದ ನೋಟಿಸ್ ನೀಡುವ ಸಾಧ್ಯತೆ ಇದೆ. ಇನ್ನು ಕೆಲವರಿಗೆ ಅಧಿಕಾರಿಗಳ ಮೂಲಕವಾಗಿ ಎಚ್ಚರಿಕೆ ಸಹ ಬರಬಹುದು. ಇಂಥದ್ದು ಏನೇ ಆದರೂ ತಕ್ಷಣಕ್ಕೆ ವಿಪರೀತವಾಗಿ ರಿಯಾಕ್ಟ್ ಮಾಡಬೇಡಿ. ಮಕ್ಕಳ ಶಿಕ್ಷಣದ ಸಲುವಾಗಿ ಉಳಿತಾಯ ಅಥವಾ ಹೂಡಿಕೆ ಯೋಜನೆಯಲ್ಲಿ ಹಣ ತೊಡಗಿಸುವ ಕುರಿತು ಕುಟುಂಬ ಸದಸ್ಯರ ಜೊತೆಗೆ ಚರ್ಚೆಯನ್ನು ನಡೆಸಲಿದ್ದೀರಿ. ಕಾಲಿನ ಮೀನಖಂಡ ಭಾಗದ ನೋವು ವಿಪರೀತ ಕಾಡಲಿದೆ.
ಲೇಖನ- ಎನ್.ಕೆ.ಸ್ವಾತಿ