Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 15ರ ದಿನ ಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಈ ಲೇಖನದಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಕೂಡ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 15ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಂಡು, ನಿಮ್ಮ ದಿನವನ್ನು ಪ್ರಾರಂಭಿಸಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 15ರ ದಿನ ಭವಿಷ್ಯ
ದಿನಭವಿಷ್ಯ
Updated By: ಅಕ್ಷತಾ ವರ್ಕಾಡಿ

Updated on: Nov 15, 2025 | 12:26 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಮಹಿಳೆಯರಿಗೆ ತವರು ಮನೆಯಲ್ಲಿನ ಕೆಲವು ಬೆಳವಣಿಗೆಗಳಿಂದ ಸಂತೋಷ ಆಗಲಿದೆ. ಸಮಾರಂಭಕ್ಕೆ ನಿಮ್ಮ ಉಪಸ್ಥಿತಿಯನ್ನು ಖಾತ್ರಿ ಪಡಿಸಬೇಕು ಎಂದು ಸ್ನೇಹಿತರು- ಸಂಬಂಧಿಗಳು ಒತ್ತಡ ಹಾಕಲಿದ್ದು, ಒಂದಲ್ಲಾ ಒಂದು ಕೆಲಸದ ಕಾರಣಕ್ಕೆ ಈ ಬಗ್ಗೆ ಏನೂ ಹೇಳುವ ಸ್ಥಿತಿಯಲ್ಲಿ ನೀವು ಇರುವುದಿಲ್ಲ. ಹೊಸ ಬಟ್ಟೆ, ಒಡವೆಗಳನ್ನು ಖರೀದಿ ಮಾಡುವುದಕ್ಕೆ ಹೆಚ್ಚು ಹಣವನ್ನು ಖರ್ಚು ಮಾಡುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ನಿಮ್ಮಲ್ಲಿ ಕೆಲವರು ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚು ಮಾಡಲಿದ್ದೀರಿ. ನಿಮ್ಮದೇ ಇಬ್ಬರು ಸ್ನೇಹಿತರ ಮಧ್ಯೆ ಏರ್ಪಟ್ಟ ಮನಸ್ತಾಪ ದೂರ ಮಾಡುವುದಕ್ಕೆ ರಾಜೀ- ಸಂಧಾನಕ್ಕೆ ಪ್ರಯತ್ನ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಕುಟುಂಬ ಸದಸ್ಯರ ಜೊತೆಗೆ ಹತ್ತಿರದ ಸ್ಥಳಕ್ಕೆ ಕಿರುಪ್ರವಾಸವಾದರೂ ಮಾಡುವ ಯೋಗ ಇದ್ದು, ಹೋಟೆಲ್- ರೆಸ್ಟೋರೆಂಟ್ ಅಥವಾ ರೆಸಾರ್ಟ್ ಗೆ ಹೋಗುವ ಮತ್ತು ಒಟ್ಟಿಗೆ ಸಮಯ ಕಳೆಯುವ ಅವಕಾಶ ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ತಂದೆ- ತಾಯಿಯ ಆರೋಗ್ಯದ ವಿಚಾರಕ್ಕೆ ಆತಂಕಕ್ಕೆ ಗುರಿ ಆಗಬೇಕಾಗುತ್ತದೆ. ಕೆಲವು ಔಷಧ- ಮಾತ್ರೆಗಳನ್ನು ತೆಗೆದುಕೊಳ್ಳುವ ವಿಚಾರವಾಗಿ ಕ್ರಮ ತಪ್ಪುವುದರಿಂದ ಅಥವಾ ಆಯಾ ಔಷಧದ ಕಂಪನಿ ಬದಲಾಗಿ, ಆರೋಗ್ಯದಲ್ಲಿ ಏರಿಳಿತ ಆಗಬಹುದು. ನಿಮ್ಮ ಪರಿಚಿತರ ಮನೆಯಲ್ಲಿ ಆಗುವ ಕೌಟುಂಬಿಕ ಬೆಳವಣಿಗೆಗಳಿಂದಾಗಿ ನಿಮಗೆ ಬರಬೇಕಾದ ಹಣಕಾಸಿನ ಬಾಕಿ ವಸೂಲಾತಿಗೆ ತಡೆ ಆಗಿ ಪರಿಣಮಿಸಬಹುದು. ದ್ವಿಚಕ್ರ ವಾಹನ ಬಳಕೆಯನ್ನು ಈ ದಿನ ಸಾಧ್ಯವಾದಷ್ಟೂ ಮಾಡದಿರುವುದು ಕ್ಷೇಮ. ಅನಿವಾರ್ಯ ಎಂದಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಿ, ವೇಗದ ಚಾಲನೆ ಯಾವುದೇ ಕಾರಣಕ್ಕೂ ಬೇಡ. ನಿಮ್ಮಲ್ಲಿ ಕೆಲವರಿಗೆ ದೇವತಾ ಕಾರ್ಯಗಳಲ್ಲಿ ಭಾಗೀ ಆಗುವಂಥ ಯೋಗ ಇದೆ. ಸೈಟು- ಮನೆ ಖರೀದಿ ಮಾಡುವುದಕ್ಕಾಗಿ ಹಣಕಾಸಿನ ಹೊಂದಾಣಿಕೆಗೆ ಯತ್ನ ಮಾಡುತ್ತಿರುವವರಿಗೆ ಅದು ಸಾಧ್ಯವಾಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಸಂಗೀತಗಾರರು, ಕಲಾವಿದರು, ನೃತ್ಯವನ್ನೇ ವೃತ್ತಿ ಆಗಿ ಮಾಡಿಕೊಂಡವರಿಗೆ ಹೊಸ ಹೊಸ ಅವಕಾಶ ಹುಡುಕಿ ಬರಲಿದೆ. ವಿದೇಶಗಳಿಂದಲೂ ನಿಮಗೆ ಆಹ್ವಾನ ಬರಬಹುದು. ಆಯುರ್ವೇದ ಮೂಲಿಕೆಗಳನ್ನು ಬೆಳೆಯುತ್ತಾ ಅದರ ಮಾರಾಟದ ಮೂಲಕ ಆದಾಯ ಬರುತ್ತಾ ಇರುವವರು ಶಾಖೆಯನ್ನು, ವ್ಯವಹಾರವನ್ನು ವಿಸ್ತರಣೆ ಮಾಡುವ ಅವಕಾಶಗಳ ಕಡೆಗೆ ನೋಡಲಿದ್ದೀರಿ. ನಿಮ್ಮಲ್ಲಿ ಕೆಲವರು ಸಂಬಂಧಿಗಳ ಮನೆಯ ವ್ಯಾಜ್ಯಗಳನ್ನು ಬಗೆಹರಿಸುವುದಕ್ಕೆ ಹೆಚ್ಚು ಸಮಯ ಮೀಸಲು ಇಡಬೇಕಾಗುತ್ತದೆ. ಮನೆಗೆ ಟೀವಿ, ರೆಫ್ರಿಜರೇಟರ್ ಅಥವಾ ಡಿಶ್ ವಾಷರ್ ಇಂಥ ಉಪಕರಣ ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಮತ್ತೆ ಕೆಲವರಿಗೆ ಇವು ಉಡುಗೊರೆಯಾಗಿ ದೊರೆಯುವ ಯೋಗ ಸಹ ಇದೆ. ಸಂಘ- ಸಂಸ್ಥೆಗಳ ಚುನಾವಣೆಗೆ ಸ್ಪರ್ಧೆ ಮಾಡುವ ಇರಾದೆ ಇರುವವರು ಅದಕ್ಕೆ ಕಾರ್ಯತಂತ್ರ ರೂಪಿಸುವುದಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿ ಆಗಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನಿಮ್ಮಲ್ಲಿ ಕೆಲವರು ಯೋಗ, ರೇಕಿ, ಪ್ರಾಣಾಯಾಮ ಇಂಥ ಕೋರ್ಸ್ ಗಳಿಗೆ ಸೇರ್ಪಡೆ ಆಗುವ ಬಗ್ಗೆ ಆಲೋಚನೆ ಮಾಡುತ್ತೀರಿ. ಈಗಾಗಲೇ ಹಣ ಪಾವತಿ ಮಾಡಿ, ಕಾಯ್ದಿರಿಸಿದ್ದ ಸೈಟು, ವಿಲ್ಲಾ ಅಥವಾ ಫ್ಲ್ಯಾಟ್ ಬಗ್ಗೆ ಈ ದಿನ ಅಪ್ ಡೇಟ್ ಸಿಗಲಿದೆ. ವೃತ್ತಿಯಲ್ಲಿ ವಕೀಲರಾಗಿ ಇರುವವರು ಹೊಸ ಕಚೇರಿ ಖರೀದಿ ಮಾಡುವ ಅಥವಾ ಲೀಸ್ ಗೆ ಪಡೆಯುವ ಬಗ್ಗೆ ಮಾತುಕತೆ ನಡೆಸಲಿದ್ದೀರಿ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಹೆಚ್ಚು ಸಮಯವನ್ನು ಮೀಸಲಿಡಲಿದ್ದೀರಿ. ವಿವಾಹಿತರಿಗೆ ಸಂಗಾತಿ ಜೊತೆ ಇರುವಂಥ ಅಭಿಪ್ರಾಯ ಭೇದ ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳುವ ವೇದಿಕೆ ದೊರೆಯಲಿದೆ. ಮಕ್ಕಳ ಸಲುವಾಗಿ ಸಮಗ್ರವಾಗಿ ಬರುವಂಥ ಒಟಿಟಿ ಸಬ್ ಸ್ಕ್ರಿಪ್ಷನ್ ಪಡೆದುಕೊಳ್ಳುವುದಕ್ಕೆ ಅಥವಾ ಹೊಸದಾಗಿ ಇಂಟರ್ ನೆಟ್ ಕನೆಕ್ಷನ್ ತೆಗೆದುಕೊಳ್ಳುವುದಕ್ಕೆ ಆಲೋಚನೆ ಮಾಡಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಮನೆಗೆ ದೂರದ ಊರಿನಲ್ಲಿನ ಸಂಬಂಧಿಗಳು ಬರುವಂಥ ಯೋಗ ಈ ದಿನ ಇದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿರುವವರು ಅದಕ್ಕೆ ಸಂಬಂಧಿಸಿದಂತೆ ಸಿದ್ಧತೆ ಮಾಡುವುದಕ್ಕೆ ಹೆಚ್ಚಿನ ಸಮಯ ಇಡಲಿದ್ದೀರಿ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಆಗಬೇಕಾದ ಕೆಲಸಗಳನ್ನು ಮಾಡಿ ಮುಗಿಸುವಲ್ಲಿ ಯಶಸ್ಸು ಕಾಣಲಿದ್ದೀರಿ. ದೇಹದ ತೂಕದಲ್ಲಿ ತುಂಬ ಏರಿಳಿತ ಕಾಣುತ್ತಾ ಇರುವವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದಕ್ಕೆ ಮುಂದಾಗಲಿದ್ದೀರಿ. ಮೊಬೈಲ್ ಫೋನ್, ಲ್ಯಾಪ್ ಟಾಪ್ ಮತ್ತು ಇತರ ಗ್ಯಾಜೆಟ್ ಖರೀದಿಗೆ ಈ ದಿನ ಹಣವನ್ನು ಖರ್ಚು ಮಾಡಲಿದ್ದೀರಿ. ಸೇಲ್ಸ್, ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಾ ಇರುವವರಿಗೆ ಈಗಿನ ಕಾರ್ಯವಿಧಾನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಆದ್ಯತೆ ನೀಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಸ್ವಂತ ಬಲದಲ್ಲಿಯೇ ಕೆಲಸ- ಕಾರ್ಯಗಳನ್ನು ಮಾಡಿಕೊಳ್ಳುವ ನಿರ್ಧಾರ ಮಾಡಲಿದ್ದೀರಿ. ಇಷ್ಟು ಸಮಯ ಇತರರ ಮೇಲೆ ಅವಲಂಬನೆ ಆಗುತ್ತಿದ್ದದ್ದು ಇನ್ನು ಮುಂದೆ ಹಾಗೆ ಇರಬಾರದು ಎಂಬ ಗಟ್ಟಿ ನಿರ್ಧಾರ ಮಾಡಲಿದ್ದೀರಿ. ನಿಮ್ಮಲ್ಲಿ ಯಾರು ಖಾಸಗಿ ಸಂಸ್ಥೆಗಳಲ್ಲಿ, ಅದರಲ್ಲೂ ಟಾಪ್ ಮ್ಯಾನೇಜ್ ಮೆಂಟ್ ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದೀರಿ ಅಂಥವರು ಈ ದಿನ ಕೆಲವು ಕಠಿಣ ನಿರ್ಧಾರ ಮಾಡಲೇಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮ ಜತೆಗೆ ಬಹಳ ಸಮಯದಿಂದ ಕೆಲಸ ಮಾಡುತ್ತಾ ಬರುತ್ತಿರುವವರನ್ನು ದೂರ ಇಡಲೇಬೇಕು ಎಂಬ ಪರಿಸ್ಥಿತಿ ಸೃಷ್ಟಿ ಆಗಲಿದ್ದು, ಈ ತೀರ್ಮಾನ ಇನ್ನೂ ಕೆಲ ಸಮಯ ತೀವ್ರವಾಗಿ ಕಾಡಲಿದೆ. ಹಣಕಾಸು ವಿಚಾರಕ್ಕೆ ನೀವು ತೆಗೆದುಕೊಳ್ಳುವ ನಿರ್ಧಾರದಿಂದ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಮುನ್ನಡೆಯಬೇಕು ಎಂಬ ಉದ್ದೇಶಕ್ಕೆ ಹಿನ್ನಡೆ ಆಗಲಿದೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 9ರಿಂದ 15ರ ತನಕ ವಾರಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ರಕ್ತದ ಒತ್ತಡ, ಮಧುಮೇಹ, ಅತಿ ತೂಕದ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ಸೂಕ್ತ ವೈದ್ಯೋಪಚಾರ ದೊರೆಯಲಿದೆ. ಯಾರು ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ಆಗಿರುತ್ತೀರಿ, ಅಂಥವರಿಗೆ ಹೊಸ ಕ್ಲೈಂಟ್ ದೊರೆಯಲಿದ್ದಾರೆ. ಸಂಕೋಚ ಮಾಡಿಕೊಂಡು ಇಷ್ಟು ಸಮಯ ಯಾವ್ಯಾವ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಬಂದಿರುತ್ತೀರೋ ಇನ್ನು ಮುಂದೆ ಹೀಗೆ ಇರಬಾರದು ಎಂಬ ತೀರ್ಮಾನ ಮಾಡಲಿದ್ದೀರಿ. ಯಾರು ಮ್ಯೂಚುವಲ್ ಫಂಡ್ ನಲ್ಲಿ ಹಣವನ್ನು ಹೂಡಿಕೆ ಮಾಡಿದ್ದೀರಿ ಅಂಥವರು ಸ್ವಲ್ಪ ಪ್ರಮಾಣದಲ್ಲಿಯಾದರೂ ಹಣವನ್ನು ಹಿಂಪಡೆಯುವ ಬಗ್ಗೆ ನಿರ್ಧರಿಸಿ, ಅದೇ ಹಣವನ್ನು ಚಿನ್ನ- ಬೆಳ್ಳಿಯಂಥ ಲೋಹದಲ್ಲಿ ಹೂಡುವ ಸಾಧ್ಯತೆ ಇದೆ. ಮನೆಯಲ್ಲಿ ಆಗಬೇಕಾದ ದುರಸ್ತಿ ಕಾರ್ಯಗಳು ಇದ್ದಲ್ಲಿ ಅದನ್ನು ಮಾಡಿಸುವುದಕ್ಕೆ ಸಮಯ, ಹಣವನ್ನು ಈ ದಿನ ಎತ್ತಿಡಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಮಕ್ಕಳ ಭವಿಷ್ಯಕ್ಕೆ ಇಲ್ಲಿಯ ತನಕ ಏನೇನು ಮಾಡಿದ್ದೀರಿ ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡಲಿದೆ. ಇಲ್ಲಿಯ ತನಕ ನೀವು ಅನುಸರಿಸಿಕೊಂಡು ಬಂದಂಥ ಹೂಡಿಕೆ- ಉಳಿತಾಯದ ವಿಧಾನದಲ್ಲಿಯೇ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನ ಮಾಡಲಿದ್ದೀರಿ. ಹಣಕಾಸು ವಿಚಾರದಲ್ಲಿ ಪ್ಲಾನಿಂಗ್ ಮಾಡುವುದಕ್ಕೆ ಸಲಹೆ ನೀಡುವಂಥ ವ್ಯಕ್ತಿಗಳನ್ನು ನಿಮ್ಮಲ್ಲಿ ಕೆಲವರು ಈ ದಿನ ಭೇಟಿ ಆಗುವಂಥ ಸಾಧ್ಯತೆ ಇದೆ. ಬೆಳ್ಳಿ ತಟ್ಟೆ- ಲೋಟ ಅಥವಾ ದೇವರ ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡುವುದಕ್ಕೆ ಸುತ್ತಾಟ ನಡೆಸಲಿದ್ದೀರಿ. ಅಚಾನಕ್ಕಾಗಿ ಭೇಟಿ ಆಗುವ ಸ್ನೇಹಿತರೋ ಅಥವಾ ಸಂಬಂಧಿಗಳ ಪೈಕಿ ಒಬ್ಬರೋ ನಿಮಗೆ ಸಹಾಯ- ಮಾರ್ಗದರ್ಶನ ಮಾಡಲಿದ್ದಾರೆ. ಸರ್ಕಾರಿ ಕಾಂಟ್ರಾಕ್ಟ್ ಗಳನ್ನು ತೆಗೆದುಕೊಂಡು, ಕೆಲಸ ಮಾಡಿಸುತ್ತಾ ಇರುವವರಿಗೆ ದೊಡ್ಡ ಮೊತ್ತದ ಗುತ್ತಿಗೆ ಸಿಗುವಂಥ ಅವಕಾಶ ಇದ್ದು, ಆ ಬಗ್ಗೆ ಪ್ರಭಾವಿ ವ್ಯಕ್ತಿಯೊಬ್ಬರು ಸುಳಿವು ನೀಡಲಿದ್ದಾರೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಬಳಿ ಇರುವ ಪುಸ್ತಕಗಳು, ಸಂಗೀತದ ಸಿ.ಡಿ ಅಥವಾ ಕ್ಯಾಸೆಟ್ ಗಳ ಸಂಗ್ರಹವನ್ನು ಸರಿಯಾಗಿ ಜೋಡಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಲಿದ್ದೀರಿ. ಏಕಾಂಗಿಯಾಗಿ ಅಥವಾ ಏಕಾಂತ ಬಯಸಿ, ಕೆಲವರು ದೂರದ ಪ್ರದೇಶಕ್ಕೆ ತೆರಳಿ, ಅಲ್ಲಿ ಸಮಯವನ್ನು ಕಳೆಯಲಿದ್ದೀರಿ. ಹೂವಿನ ವ್ಯಾಪಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಇಳಿಕೆ ಆಗುತ್ತಾ ಬರುತ್ತಿದೆ ಎಂಬ ಭಾವನೆ ಕಾಡಲಿದೆ. ಮೊದಲಿನ ಉತ್ಸಾಹದಲ್ಲಿ ಕೆಲಸದಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ ಎಂಬುದು ಸಹ ನಿಮಗೆ ಚಿಂತೆಗೆ ಕಾರಣ ಆಗಲಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿ ತುಂಬ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಬಹಳ ಉತ್ತಮವಾದ ದಿನ ಇದಾಗಲಿದೆ. ನಿಮಗೆ ಯಾವುದು ಮಹತ್ವಾಕಾಂಕ್ಷೆಯಾಗಿ ಇದೆಯೋ ಹಾಗೂ ಅದಕ್ಕಾಗಿ ಹಗಲಿರುಳು ಅದಕ್ಕಾಗಿ ಪ್ರಯತ್ನವನ್ನು ಪಡುತ್ತಾ ಇದ್ದೀರೋ ಅದರೆಡೆಗೆ ದೊಡ್ಡ ಹೆಜ್ಜೆಯನ್ನು ಇಡಲಿದ್ದೀರಿ.

ಲೇಖನ- ಎನ್‌.ಕೆ.ಸ್ವಾತಿ