Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 19ರ ದಿನಭವಿಷ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Jan 19, 2023 | 6:06 AM

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 19ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 19ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 19ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Numerology Weekly Horoscope: ಸಂಖ್ಯಾಶಾಸ್ತ್ರ ಪ್ರಕಾರ ಜನವರಿ 15ರಿಂದ 21ರ ತನಕ ವಾರಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಇತರರ ಸಲುವಾಗಿ ನೀವು ಸಮಯ, ಹಣ, ಬುದ್ಧಿ ಖರ್ಚು ಮಾಡುವ ಸಂದರ್ಭ ಬರಲಿದೆ. ಇದು ನೀವಾಗಿಯೇ ತಂದುಕೊಳ್ಳುವಂಥ ಸ್ಥಿತಿ ಆಗಲಿದೆ. ಕ್ರಿಯೇಟಿವ್ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಸ್ವಲ್ಪ ಮಟ್ಟಿಗೆ ಆತ್ಮವಿಶ್ವಾಸ ಕಡಿಮೆ ಆಗಿ, ಮುಂದೆ ಹೇಗೋ ಏನೋ ಎಂಬ ಆತಂಕ ಕಾಡಬಹುದು. ಯಾವುದೇ ನಿರ್ಧಾರ ಮಾಡುವ ಮುನ್ನ ಅದರ ಸಾಧಕ- ಬಾಧಕಗಳ ಬಗ್ಗೆ ಅಳೆದು- ತೂಗಿ ನೋಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಭವಿಷ್ಯದ ಯೋಜನೆಗಳಿಗಾಗಿ ಬಜೆಟಿಂಗ್ ಮಾಡಿಕೊಳ್ಳುವ ದಿನ ಇದು. ನಿಮ್ಮ ಸಾಮರ್ಥ್ಯ, ಬಜೆಟ್, ಪ್ಲಾನಿಂಗ್ ಬಗ್ಗೆ ಸ್ನೇಹಿತರು ಅಥವಾ ಗುರು ಸಮಾನರಾದವರ ಜತೆಗೆ ಚರ್ಚೆ ನಡೆಸಲಿದ್ದೀರಿ. ಕಠಿಣ ಮಾತುಗಳಿಂದ ಹತ್ತಿರದವರನ್ನು ನೋಯಿಸುವಂಥ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಬಹಳ ಸಮಯ ನಿಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಮನೆ ಖರೀದಿ, ಸೈಟು ಖರೀದಿ, ಮಕ್ಕಳ ಭವಿಷ್ಯದ ನಿರ್ಧಾರ ಹೀಗೆ ನಾನಾ ಸಂಗತಿಗಳು ಮನೆಯಲ್ಲಿ ಚರ್ಚೆಗೆ ಬರಲಿವೆ. ಈ ದಿನ ರುಚಿಕಟ್ಟಾದ ಭೋಜನ ಸವಿಯುವಂಥ ಯೋಗ ನಿಮಗಿದೆ. ಹೆಣ್ಣುಮಕ್ಕಳಿಗೆ ಹೊಸ ದಿರಿಸು ಅಥವಾ ಬೆಳ್ಳಿ ಆಭರಣಗಳನ್ನು ಖರೀದಿಸುವ ಯೋಗ ಇದೆ. ಹೊಟ್ಟೆ ನೋವು ಕಾಡಬಹುದು, ಜಾಗ್ರತೆ. ಕುಡಿಯುವ ನೀರಿನ ಶುದ್ಧತೆ ಕಡೆ ಜಾಸ್ತಿ ಲಕ್ಷ್ಯ ನೀಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ಗುರಿಯ ಬಗ್ಗೆ ಮತ್ತೊಮ್ಮೆ ಆಲೋಚನೆ ಮಾಡಬೇಕಾದ ಪರಿಸ್ಥಿತಿ ಬರಲಿದೆ. ಇನ್ನು ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ ಗೆಳೆಯರು ಅಥವಾ ಸಂಬಂಧಿಕರ ಮೂಲಕವಾಗಿ ಅಂಥದ್ದರ ಬಗ್ಗೆ ಮಾಹಿತಿ ದೊರೆಯುತ್ತದೆ. ಇನ್ನು ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳ ಮೂಲಕ ವಧು/ವರಾನ್ವೇಷಣೆ ಮಾಡುತ್ತಿರುವವರಿಗೆ ಸೂಕ್ತ ಸಂಬಂಧ ಕಂಡುಬರಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಮನಸ್ಸಿಗೆ ಬಹಳ ಹತ್ತಿರವಾದವರು, ಸ್ನೇಹಿತರ ಜತೆಗೆ ಒಟ್ಟಿಗೆ ಸಮಯ ಕಳೆಯುವಂಥ ಯೋಗ ಇದೆ. ಮುಂದಿನ ತಿಂಗಳುಗಳಲ್ಲಿ ಪ್ರವಾಸಕ್ಕೆ ತೆರಳುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಹಾಲಿನ ಪದಾರ್ಥಗಳ ಅಲರ್ಜಿ ಇರುವಂಥವರು ಈ ದಿನ ಆಹಾರ ಸೇವನೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರುವುದು ಮುಖ್ಯ. ಚಾಲಕ ವೃತ್ತಿಯಲ್ಲಿ ಇರುವವರಿಗೆ ಹೊಸ ಹೊಸ ಅವಕಾಶಗಳು ದೊರೆಯಲಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಅನಾಯಾಸವಾಗಿ ಕೆಲವು ಅನುಕೂಲಗಳು ನಿಮ್ಮ ಪಾಲಿಗೆ ಬರಲಿವೆ. ಯಾರೂ ಗಮನಿಸುತ್ತಿಲ್ಲ ಅಂದುಕೊಂಡು ಕಾನೂನು ಮೀರಲು ಹೋಗದಿರಿ. ಅದರಲ್ಲೂ ಟ್ರಾಫಿಕ್ ನಿಯಮಗಳನ್ನು ಮೀರಿದಲ್ಲಿ ಭಾರೀ ದಂಡ ತೆರುತ್ತೀರಿ, ಜಾಗ್ರತೆ. ನಿಮ್ಮ ಮಾತಿನ ಭರವಸೆ ಮೇಲೆ ಯಾರಾದರೂ ಸಲಹೆ ಕೇಳಲು ಬಂದಲ್ಲಿ ಸೌಜನ್ಯಯುತವಾಗಿ ನಡೆದುಕೊಳ್ಳಿ, ಅವರಿಗೆ ನೆರವಾಗಿ. ಈ ದಿನ ಪಾರ್ಟಿಗಳಿಗೆ ನಿಮಗೆ ಆಹ್ವಾನ ಬರಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮಗೇ ಅಚ್ಚರಿ ತರುವಂಥ ಕೆಲವು ತೀರ್ಮಾನಗಳನ್ನು ಮಾಡಲಿದ್ದೀರಿ. ಸಿನಿಮಾ ಕ್ಷೇತ್ರದಲ್ಲಿ ಇರುವವರು, ಷೇರು ದಲ್ಲಾಳಿಗಳು, ಬ್ಯಾಂಗಲ್ ಸ್ಟೋರ್‌ಗಳನ್ನು ನಡೆಸುತ್ತಿರುವವರಿಗೆ ಲಾಭದ ಪ್ರಮಾಣದ ಬಗ್ಗೆ ಅಸಮಾಧಾನ ಮೂಡಲಿದೆ. ನಿಮ್ಮ ವ್ಯವಹಾರದ ಅಲ್ಪ ಭಾಗದ ಯಜಮಾನಿಕೆ ಬೇರೆಯವರಿಗೆ ಬಿಟ್ಟುಕೊಡುವ ಆಲೋಚನೆ ಮಾಡಲಿದ್ದೀರಿ. ಸಂಗಾತಿ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದರಿಂದ ಲಾಭ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಈ ದಿನ ನಿಮಗೆ ಪ್ರಯಾಣ ಯೋಗ ಇದೆ. ಹಾಗಿದ್ದ ಮೇಲೆ ಖರ್ಚಿಲ್ಲದಿದ್ದರೆ ಹೇಗೆ, ಅದಕ್ಕೆ ನೀವು ಸಿದ್ಧರಾಗಿರುವುದಿಲ್ಲ ಅಷ್ಟೇ. ಸಾಂಸಾರಿಕ ವಿಚಾರವಾಗಿ ತುಂಬು ಮನಸ್ಸಿನಿಂದ ಗಮನ ಕೊಡುವುದಕ್ಕೆ ಈಗ ಸಾಧ್ಯವಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ಸೂಕ್ತ ಆಗುವಂಥ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ದೇಹದ ತೂಕ ಹೆಚ್ಚಿಗೆ ಇರುವವರಿಗೆ ಅದಕ್ಕೆ ಸಂಬಂಧಿಸಿದಂತೆ ಅನಾರೋಗ್ಯದ ಸೂಚನೆಗಳು ದೊರೆಯಲಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಯಾರ ಜತೆಗೂ ಈ ದಿನ ಸಲುಗೆಯಿಂದ ಇರಬೇಡಿ. ಏಕೆಂದರೆ ಸಣ್ಣ ಮಟ್ಟದಲ್ಲಾದರೂ ಜಗಳ- ಕಲಹಗಳಾಗುವ ಯೋಗ ನಿಮ್ಮ ಪಾಲಿಗೆ ಇದೆ. ನೀವು ತಿಳಿದುಕೊಂಡ ಅಥವಾ ಬೇರೆ ಯಾರಿಂದಲೋ ಕೇಳಿಸಿಕೊಂಡ ಸುದ್ದಿ- ವಿಚಾರವನ್ನೇ ನಿಜವೆಂದು ಭಾವಿಸಿ, ಇತರರಿಗೆ ಹೇಳದಿರಿ. ಕಾಲಿನ ಮೀನ ಖಂಡದ ನೋವು ವಿಪರೀತ ಕಾಡಲಿದೆ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ವಿದೇಶ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ.

ಲೇಖನ- ಎನ್‌.ಕೆ.ಸ್ವಾತಿ