
2026ನೇ ಇಸವಿಯಲ್ಲಿ ವೃಷಭ ರಾಶಿ ಫಲಾಫಲ ಹೇಗಿದೆ ಎಂಬುದನ್ನು ತಿಳಿಯುವುದಕ್ಕೆ ಮೊದಲಿಗೆ ಶನಿ, ರಾಹು-ಕೇತು ಹಾಗೂ ಗುರು ಗ್ರಹದ ಸಂಚಾರ ಯಾವ್ಯಾವ ರಾಶಿಯಲ್ಲಿ ಆಗಲಿದೆ ಎಂಬುದನ್ನು ತಿಳಿದುಕೊಂಡು ಬಿಡಿ. ಇಡೀ ವರ್ಷ ಶನಿ ಗ್ರಹವು ಲಾಭ ಸ್ಥಾನವಾದ 11ನೇ ಮನೆಯಾದ ಮೀನ ರಾಶಿಯಲ್ಲಿ ಆಗಲಿದೆ. ಇದು ಸಾಮಾನ್ಯವಾಗಿ ಅತ್ಯಂತ ಶುಭ ಸ್ಥಾನ. 2026ರ ಜನವರಿ 1ನೇ ತಾರೀಕಿನಿಂದ ಜೂನ್ 1ನೇ ತಾರೀಕಿನ ತನಕ ಗುರು ಗ್ರಹವು ಧನ ಸ್ಥಾನವಾದ 2ನೇ ಮನೆ, ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತದೆ. ಗುರು ಗ್ರಹವು ಜೂನ್ ನಂತರ ಅಕ್ಟೋಬರ್ ಕೊನೆಯ ತನಕ ಉಚ್ಚ ಸ್ಥಿತಿಯ ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡಲಿದೆ ಅದು ನಿಮ್ಮ ರಾಶಿಗೆ ಮೂರನೇ ಮನೆಯಾಗಲಿದೆ. ಆ ನಂತರದಲ್ಲಿ ಅಕ್ಟೋಬರ್ 31ನೇ ತಾರೀಕಿನಂದು ನಾಲ್ಕನೇ ಮನೆ ಸಿಂಹ ರಾಶಿಯನ್ನು ಪ್ರವೇಶಿಸಿ, ವರ್ಷದ ಕೊನೆಯ ತನಕ, ಅಂದರೆ ಡಿಸೆಂಬರ್ 31ನೇ ತಾರೀಕಿನ ತನಕ ಅದೇ ಸಿಂಹದಲ್ಲಿಯೇ ಇರಲಿದೆ. ಇನ್ನು ರಾಹು-ಕೇತು ಗ್ರಹಗಳು ಡಿಸೆಂಬರ್ 5ನೇ ತಾರೀಕಿನವರೆಗೆ ಕ್ರಮವಾಗಿ ಕರ್ಮ ಸ್ಥಾನವಾದ ಹತ್ತನೇ ಮನೆ ಕುಂಭ ರಾಶಿಯಲ್ಲೂ, ಕೇತು ಗ್ರಹ ಮಾತೃ ಸ್ಥಾನ- ಸುಖ ಸ್ಥಾನ ನಾಲ್ಕನೇ ಮನೆ ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಆ ನಂತರದಲ್ಲಿ ರಾಹು ನಿಮ್ಮ ರಾಶಿಗೆ 9ನೇ ಮನೆ ಮಕರಕ್ಕೆ ಹಾಗೂ ಕೇತು 3ನೇ ಮನೆಯಾದ ಕರ್ಕಾಟಕ ರಾಶಿಗೆ ಪ್ರವೇಶ ಆಗುತ್ತದೆ.
ಕೃತ್ತಿಕಾ ನಕ್ಷತ್ರದ ಎರಡನೇ, ಮೂರನೇ ಹಾಗೂ ನಾಲ್ಕನೇ ಪಾದ, ರೋಹಿಣಿ ನಕ್ಷತ್ರದ ನಾಲ್ಕೂ ಪಾದ ಹಾಗೂ ಮೃಗಶಿರಾ ನಕ್ಷತ್ರದ ಒಂದನೇ ಮತ್ತು ಎರಡನೇ ಪಾದ ಸೇರಿ ವೃಷಭ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಶುಕ್ರ ಗ್ರಹ.
ವೃಷಭ ರಾಶಿಯವರಿಗೆ ಲಾಭ ಸ್ಥಾನದಲ್ಲಿ ಶನಿ ಸಂಚಾರ ಮಾಡಲಿದ್ದು, ಇಡೀ ವರ್ಷ ಅತ್ಯಂತ ಶುಭಕರವಾಗಿ ಇರರಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಬಹುತೇಕ ದೂರವಾಗುತ್ತವೆ. ಸ್ಥಗಿತಗೊಂಡಿದ್ದ ಹಣಕಾಸು ಹರಿವು ಮತ್ತೆ ಪ್ರಾರಂಭವಾಗಿ, ವಿವಿಧ ಮೂಲಗಳಿಂದ ಆದಾಯದಲ್ಲಿ ಹೆಚ್ಚಳ ಆಗುತ್ತದೆ. ನಿಮ್ಮ ವ್ಯಾಪ್ತಿ ವಿಸ್ತರಣೆ ಆಗುತ್ತದೆ. ವೃತ್ತಿಪರರಿಗೆ ತಮ್ಮ ಕ್ಷೇತ್ರದಲ್ಲಿ ಹೆಸರು-ಕೀರ್ತಿ ಹೆಚ್ಚಲಿದೆ. ನಿಮ್ಮ ಯೋಜನೆಗಳು ಮತ್ತು ಆಲೋಚನೆಗಳಿಗೆ ಉತ್ತಮ ಪ್ರೋತ್ಸಾಹ ಮತ್ತು ಬೆಂಬಲ ದೊರೆಯುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಹಾಗೂ ಈಗಿರುವ ಉದ್ಯೋಗದ ಬದಲಾವಣೆ ಮಾಡಬೇಕು ಎಂದಿರುವವರಿಗೆ ಈ ಅವಧಿಯಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ವ್ಯಾಪಾರದಲ್ಲಿ ಲಾಭದಾಯಕ ಒಪ್ಪಂದಗಳು ಆಗುತ್ತವೆ. ನೀವು ದೀರ್ಘ ಕಾಲದ ಮಹತ್ವಾಕಾಂಕ್ಷೆಗಳು ಈ ವರ್ಷ ಪೂರ್ಣಗೊಳ್ಳುವ ಸಾಧ್ಯತೆ ಹೆಚ್ಚು. ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿದೇಶ ಪ್ರಯಾಣದ ಯೋಗಗಳು ಇವೆ. ತಂದೆ- ತಾಯಿಯೂ ಸೇರಿದಂತೆ ಹಿರಿಯರ ಆಶೀರ್ವಾದ ಬಲ ಸದಾ ನಿಮಗೆ ಇರುತ್ತದೆ.
ಜೂನ್ ಒಂದನೇ ತಾರೀಕಿನವರೆಗೆ ನಿಮ್ಮ ಧನ- ವಾಕ್ ಸ್ಥಾನವಾದ 2ನೇ ಮನೆಯಲ್ಲಿ ಸಂಚಾರ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ಮಾತು ಪ್ರಭಾವಶಾಲಿ ಆಗಿರುತ್ತದೆ. ನಿಮ್ಮ ಮಾತುಗಳಿಂದಲೇ ಬಹಳಷ್ಟು ಕೆಲಸಗಳು ಸುಲಭವಾಗಿ ಆಗುತ್ತವೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಹೂಡಿಕೆಗಳಿಗೆ ಇದು ಉತ್ತಮ ಸಮಯ, ಹಣದ ಉಳಿತಾಯ ಹೆಚ್ಚುತ್ತದೆ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧಗಳು ದೊರೆಯಲಿವೆ. ದಂಪತಿ ಮಧ್ಯ ಅಭಿಪ್ರಾಯ ಭೇದ ಅಥವಾ ಜಗಳ- ಕಲಹ ಇದ್ದಲ್ಲಿ ಅದು ಕೂಡ ದೂರ ಮಾಡಿಕೊಳ್ಳಲು ವೇದಿಕೆ ದೊರೆಯಲಿದೆ. ಜೂನ್ ಒಂದನೇ ತಾರೀಕಿನಿಂದ ಅಕ್ಟೋಬರ್ ಅಂತ್ಯದವರೆಗೆ ಮೂರನೇ ಮನೆಯಲ್ಲಿ ಸಂಚಾರ ಆಗುತ್ತದೆ. ಸೋದರ- ಸೋದರಿಯರ ಜೊತೆಗಿನ ವ್ಯವಹಾರಗಳಲ್ಲಿ ಒಂದಲ್ಲಾ ಒಂದು ಬಗೆಯ ಸಮಸ್ಯೆ ಆಗಬಹುದು. ಕೆಲವು ವಿಚಾರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಕೋರ್ಟ್- ಕಚೇರಿ ಮೆಟ್ಟಿಲೇರುವ ಸಾಧ್ಯತೆ ಇದೆ. ಯಾವುದೇ ವಿಚಾರದಲ್ಲಿನ ವ್ಯತ್ಯಾಸಗಳಿಗೆ ಕೂತು, ಮಾತನಾಡಿ, ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಕ್ಷೇಮ. ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ನಾಲ್ಕನೇ ಮನೆಯಲ್ಲಿ ಗುರು ಸಂಚಾರ ಇರಲಿದೆ. ಸ್ನೇಹಿತರ ಜೊತೆಗೆ ಮನಸ್ತಾಪ, ತಾಯಿಯ ಆರೋಗ್ಯದಲ್ಲಿ ಸಮಸ್ಯೆ, ನಿಮ್ಮ ಮಾತಿನಿಂದ ತೊಂದರೆ ಮಾಡಿಕೊಳ್ಳುವುದು ಇತ್ಯಾದಿ ತೊಂದರೆಗಳಿವೆ. ಸಾಮರ್ಥ್ಯಕ್ಕೆ ಮೀರಿದ ಸಾಲವನ್ನು ಮಾಡಿಕೊಂಡು ಸೈಟು- ಮನೆ, ಜಮೀನು ಖರೀದಿಯನ್ನು ಮಾಡುವಂತಾಗಲಿದೆ, ಎಚ್ಚರಿಕೆ.
ಇದನ್ನೂ ಓದಿ: 2026ರ ಹೊಸ ವರ್ಷ ಮೇಷ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ
ನಿಮ್ಮ ರಾಶಿಗೆ ಹತ್ತನೇ ಮನೆಯಲ್ಲಿ ರಾಹು ಮತ್ತು ನಾಲ್ಕನೇ ಮನೆಯಲ್ಲಿ ಕೇತು ಗ್ರಹ ಸಂಚಾರ ಆಗಲಿದೆ. ಉದ್ಯೋಗ- ವೃತ್ತಿ ಜೀವನದಲ್ಲಿ ಖ್ಯಾತಿ ದೊರೆಯಲಿದೆ ಹಾಗೂ ಅಪಪ್ರಚಾರ ಸಹ ಆಗಲಿದೆ. ಆದರೆ ಎರಡರಿಂದಲೂ ನಿಮಗೆ ಹೆಸರಂತೂ ಬರಲಿದೆ. ಹೆಚ್ಚಿನ ಸಂಬಳ- ಹುದ್ದೆಯ ಆಫರ್ ನೊಂದಿಗೆ ಉದ್ಯೋಗಾವಕಾಶಗಳು ಬರಲಿದ್ದು, ಅದರ ಬಗ್ಗೆ ಕೂಲಂಕಷವಾಗಿ ವಿಚಾರ ಮಾಡಿದ ನಂತರವಷ್ಟೇ ಮುಂದಕ್ಕೆ ಹೆಜ್ಜೆ ಇಡಿ. ಕೆಲವು ವಿಷಯಗಳನ್ನು ಪ್ರತಿಷ್ಠೆ ಮಾಡಿಕೊಂಡು, ನಿಮ್ಮ ಬಗ್ಗೆ ಬಹಳ ಪ್ರೀತಿ- ಅಕ್ಕರೆ ಇರಿಸಿಕೊಂಡಿರುವ ವ್ಯಕ್ತಿಗಳಿಂದ ದೂರವಾಗುವ ಯೋಗ ಇದೆ. ಒಂದು ವೇಳೆ ನಿಮ್ಮಿಂದ ತಪ್ಪುಗಳಾದಲ್ಲಿ ಅದನ್ನು ಒಪ್ಪಿಕೊಂಡು, ಕ್ಷಮೆ ಕೇಳಿ ಮುಂದುವರಿಯುವುದು ಒಳ್ಳೆಯದು. ಅದನ್ನು ಬಿಟ್ಟು, ವಿತಂಡವಾದ ಮಾಡುತ್ತಾ, ನಾನು ಮಾಡಿದ್ದೇ ಸರಿ ಎಂದು ಕೂರಬೇಡಿ. ಹೀಗೆ ಮಾಡುವುದರಿಂದ ಅವಮಾನ, ಮುಜುಗರ ಅನುಭವಿಸಬೇಕಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಮಾನಸಿಕ ಖಿನ್ನತೆ ಕಾಡಬಹುದು. ಭಾವನಾತ್ಮಕವಾಗಿ ಆಲೋಚನೆ ಮಾಡಿ, ನಿಮಗೆ ಸಂಬಂಧಪಡದ ವಿಷಯದಲ್ಲಿ ಸಿಟ್ಟು, ಕೋಪ- ತಾಪ ಮಾಡಿಕೊಳ್ಳುವುದರಿಂದ ನಷ್ಟವನ್ನು ಅನುಭವಿಸುವಂತೆ ಆಗಲಿದೆ. ತಾಯಿಯ ಆರೋಗ್ಯ ವಿಚಾರದಲ್ಲಿ ಆತಂಕ ಪಡುವಂತೆ ಆಗಲಿದೆ. ವಿಪರೀತ ಸುಸ್ತು, ಕಿಡ್ನಿಗೆ ಸಂಬಂಧಿಸಿದ ಅನಾರೋಗ್ಯ, ನರಕ್ಕೆ ಸಂಬಂಧಿಸಿದ ತೊಂದರೆ ಇವೆಲ್ಲವು ನಿಮ್ಮನ್ನು ಚಿಂತೆಗೆ ಗುರಿ ಮಾಡಲಿವೆ.
ಪರಿಹಾರ: ಗಣಪತಿ ಹಾಗೂ ದುರ್ಗಾ ದೇವಿಯ ಆರಾಧನೆಯನ್ನು ಮಾಡಿಕೊಳ್ಳಿ.
ಲೇಖನ- ಸ್ವಾತಿ ಎನ್.ಕೆ.
Published On - 3:19 pm, Sat, 6 December 25