Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 6ರಿಂದ 12ರ ತನಕ ವಾರಭವಿಷ್ಯ
ಸಾಪ್ತಾಹಿಕ ಸಂಖ್ಯಾಶಾಸ್ತ್ರ ಮುನ್ಸೂಚನೆಗಳು: ಬೆಳಗ್ಗೆ ಎದ್ದ ತಕ್ಷಣ ನಮ್ಮ ದಿನ ಹೇಗಿದೆಯಪ್ಪಾ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ರಾಶಿಭವಿಷ್ಯದ ಜೊತೆಗೆ ಜನ್ಮಸಂಖ್ಯೆಗೆ ಅನುಗುಣವಾಗಿ ದಿನಭವಿಷ್ಯ ನೋಡುತ್ತಾರೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 6ರಿಂದ 12 ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮ ಮನಸ್ಸಿನಲ್ಲಿ ಇರುವ ಸಂಗತಿಯನ್ನು ಮೊದಲೇ ಹೇಳಿಬಿಟ್ಟಿರುವಂತೆ ಎದುರಿಗೆ ಇರುವವರು ನಡೆದುಕೊಳ್ಳಲು ಆರಂಭಿಸಲಿದ್ದಾರೆ. ಇನ್ನು ನಿಮಗೆ ದೇವತಾ ಕಾರ್ಯಗಳಲ್ಲಿ ಆಸಕ್ತಿ ಜಾಸ್ತಿ ಆಗುತ್ತದೆ. ತೀರ್ಥಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಕಾನೂನು- ಕಟ್ಟಳೆ ವಿಚಾರಗಳಲ್ಲಿ ಖರ್ಚುಗಳಾಗುವಂಥ ಸಾಧ್ಯತೆ ಇದೆ. ಸಂಚಾರ ನಿಯಮಗಳನ್ನು ಪಾಲಿಸುವ ಕಡೆಗೆ ಗಮನ ನೀಡಿ, ಇಲ್ಲದಿದ್ದಲ್ಲಿ ಭಾರೀ ಬೆಲೆಯನ್ನು ತೆರಬೇಕಾದೀತು. ವೈಯಕ್ತಿಕ ವಿಚಾರಗಳನ್ನು ಹೊಸಬರ ಜತೆಗೆ ಹಂಚಿಕೊಳ್ಳದಿರಿ. ಈ ಸಲಹೆ ನಿರ್ಲಕ್ಷ್ಯ ಮಾಡಿದಲ್ಲಿ ನಿಮ್ಮ ಬಗ್ಗೆ ಅಪಪ್ರಚಾರಗಳಾಗುವ ಸಾಧ್ಯತೆ ಇದೆ. ಕೃಷಿ ವೃತ್ತಿಯಲ್ಲಿ ಇರುವವರಿಗೆ ಮಕ್ಕಳ ಉನ್ನತ ಶಿಕ್ಷಣಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ಇದಕ್ಕಾಗಿ ಆಸ್ತಿಯನ್ನು ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಯನ್ನು ಅಡಮಾನ ಮಾಡುವ ಸಾಧ್ಯತೆ ಇದೆ. ನೀವಾಗಿಯೇ ಒಪ್ಪಿಕೊಂಡ ಜವಾಬ್ದಾರಿ ಅಥವಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ತಿ ಮಾಡಲಿಕ್ಕಾಗದೆ ಟೀಕೆಗೆ ಗುರಿ ಆಗಲಿದ್ದೀರಿ. ವೃತ್ತಿನಿರತರಿಗೆ ತಂದೆ- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಮನೆಗೆ ಹೊಸದಾಗಿ ಸಾಕು ಪ್ರಾಣಿಗಳನ್ನು ತರುವ ಸಾಧ್ಯತೆ ಇದೆ. ಇನ್ನು ಮಹಿಳೆಯರು ಕುಟುಂಬ ವೆಚ್ಚದ ಕಡೆಗೆ ಗಮನವನ್ನು ನೀಡಬೇಕು ಹಾಗೂ ಹಾಕಿಕೊಂಡ ಬಜೆಟ್ ವ್ಯಾಪ್ತಿಯೊಳಗೆ ಖರ್ಚಿನ ಪ್ರಮಾಣ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಮೇಲೆ ಸ್ನೇಹಿತರು, ಸಂಬಂಧಿಕರ ಅವಲಂಬನೆ ಹೆಚ್ಚಾಗಲಿದೆ. ಮನೆಯಲ್ಲಿ ಮಕ್ಕಳ ಆರೋಗ್ಯ ವಿಚಾರವು ಚಿಂತೆಗೆ ಕಾರಣ ಆಗಬಹುದು. ಪ್ರೇಮಿಗಳು ಇದ್ದಲ್ಲಿ, ಇನ್ನೂ ಈ ವಿಚಾರ ಮನೆಗೆ ಗೊತ್ತಾಗಿಲ್ಲ ಎಂದಾದಲ್ಲಿ ಮೂರನೇ ವ್ಯಕ್ತಿಗಳ ಮೂಲಕ ವಿಚಾರ ಗೊತ್ತಾಗಿ, ಆತಂಕದ ಸನ್ನಿವೇಶ ಸೃಷ್ಟಿಯಾಗಲಿದೆ. ಆದ್ದರಿಂದ ಹೊರಗೆ ಸುತ್ತಾಡದಿರುವುದು ಉತ್ತಮ. ಇಲ್ಲದಿದ್ದಲ್ಲಿ ನಿಮ್ಮ ಪ್ರೀತಿಯ ವಿಷಯವನ್ನು ಮನೆಯಲ್ಲಿ ಹೇಳಿಕೊಂಡುಬಿಡಿ. ಯಾವ ವಿಚಾರವನ್ನು ಹೇಗೆ ಸಂಭಾಳಿಸಬೇಕು ಎಂಬ ಬಗ್ಗೆ ಯೋಜನೆಯನ್ನು ರೂಪಿಸಿಕೊಳ್ಳುವುದು ಮುಖ್ಯ, ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಉತ್ಪನ್ನಗಳ ಖರೀದಿಗಾಗಿ ವರ್ತಕರು ಅಥವಾ ಕಂಪನಿ ಜತೆಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದು ಒಪ್ಪಂದದ ಮಟ್ಟಕ್ಕೆ ಬಾರದಿದ್ದರೂ ಒಂದಿಷ್ಟು ಉತ್ತಮ ಬೆಳವಣಿಗೆ ಆಗಲಿದೆ. ಸ್ನೇಹಿತರ ನೆರವಿನಿಂದ ಆದಾಯದ ಮೂಲಗಳು ಜಾಸ್ತಿ ಮಾಡಿಕೊಳ್ಳುವುದಕ್ಕೆ ಅವಕಾಶದ ಬಾಗಿಲುಗಳು ತೆರೆದುಕೊಳ್ಳಲಿವೆ. ವೃತ್ತಿನಿರತರು ದ್ವಿಚಕ್ರ ವಾಹನವನ್ನೋ, ಕಾರನ್ನೋ ಖರೀದಿಸುವಂಥ ಯೋಗ ಇದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸಬಹುದು ಅಥವಾ ಸಾಲವಂತೂ ಮಾಡಲಿದ್ದೀರಿ. ಆದಾಯ ಹಾಗೂ ವೆಚ್ಚದ ಲೆಕ್ಕಾಚಾರ ಸರಿಯಾಗಿ ಹಾಕಿಟ್ಟುಕೊಳ್ಳಿ. ಶಕ್ತಿ ಮೀರಿ, ಸಾಲ ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಆಟೋಟಗಳಲ್ಲಿ ಉತ್ತಮ ಹೆಸರು ಪಡೆಯುವ ಯೋಗ ಇದೆ. ರಾಜಕಾರಣದಲ್ಲಿ ಇರುವ ಮಹಿಳೆಯರಿಗೆ ಪದೋನ್ನತಿ ಇದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಹೊಸ ಕಾರು ಖರೀದಿ ಮಾಡಬೇಕು ಅಂದುಕೊಂಡಿರುವವರಿಗೆ ಹಣಕಾಸಿನ ಅನುಕೂಲ, ಮನೆಯಲ್ಲಿ ಕುಟುಂಬಸ್ಥರ ಬೆಂಬಲ ದೊರೆಯುವ ಸಾಧ್ಯತೆ ಇದೆ. ಕೆಲಸ ಬದಲಾವಣೆ ಮಾಡಬೇಕು ಅಂದುಕೊಂಡಿರುವವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದು. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಒಪ್ಪಿಕೊಂಡ ಕೆಲಸ ಮುಗಿಸುವುದರೊಳಗೆ ಬಹಳ ಶ್ರಮ ಪಡಬೇಕಾಗುತ್ತದೆ. ಕೃಷಿ ವೃತ್ತಿಯಲ್ಲಿ ಇರುವವರಿಗೆ ಆಯಾ ವ್ಯಾಪ್ತಿಯಲ್ಲಿ ಮೆಚ್ಚುಗೆ, ಗೌರವ- ಸಮ್ಮಾನಗಳು ದೊರೆಯುವ ಅವಕಾಶಗಳು ಉಂಟು. ಸಹಕಾರ ಸಂಘಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಪ್ರಭಾವಿಗಳ ಶಿಫಾರಸು ದೊರೆತು, ಶೀಘ್ರ ಸಾಲ ಮಂಜೂರಾಗಲಿದೆ. ವೃತ್ತಿನಿರತರಿಗೆ ನಾನಾ ಸವಾಲುಗಳು ಎದುರಾಗಲಿವೆ. ಈ ಹಿಂದೆ ನೀವೇ ಆಡಿದ್ದ ಮಾತು ಅಥವಾ ಇನ್ನೊಬ್ಬರ ವಿಚಾರವಾಗಿ ಸಾರ್ವಜನಿಕವಾಗಿ ಮಂಡಿಸಿದ್ದ ಅಭಿಪ್ರಾಯಕ್ಕೆ ಈಗ ಆಕ್ಷೇಪಗಳು ವ್ಯಕ್ತ ಆಗುತ್ತವೆ. ದೇವತಾ ಕಾರ್ಯಗಳಿಗೆ ಹಣಕಾಸಿನ ದೇಣಿಗೆ ನೀಡಲಿದ್ದೀರಿ. ವಿದ್ಯಾರ್ಥಿಗಳಿಗೆ ವಿನಾಕಾರಣದ ಪ್ರಯಾಣ ಮತ್ತು ಇದರಿಂದ ಅನಗತ್ಯವಾಗಿ ಖರ್ಚುಗಳು ಆಗಲಿವೆ. ಮಹಿಳೆಯರು ಈ ಹಿಂದೆ ಮಾಡಿದ್ದ ಹೂಡಿಕೆಗೆ ಈಗ ಹೆಚ್ಚು ಲಾಭ ದೊರೆಯಲಿದೆ. ಬಂದ ಲಾಭದಿಂದ ಚಿನ್ನಾಭರಣಗಳನ್ನು ಖರೀದಿ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಸಾಧ್ಯವಾದಲ್ಲಿ ಈ ವಾರದಲ್ಲಿ ಬರುವ ಗುರುವಾರದಂದು ನೀವು ಗುರುಗಳಾಗಿ ಭಾವಿಸುವವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದುಕೊಳ್ಳಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ದೊರೆಯಲಿದೆ. ಭವಿಷ್ಯದ ಬಗ್ಗೆ ಬಹಳ ಮುಖ್ಯವಾದ ತೀರ್ಮಾನವೊಂದನ್ನು ತೆಗೆದುಕೊಳ್ಳಲಿದ್ದೀರಿ. ನಿಮ್ಮ ಮಾತಿಗೆ ಬೆಲೆ ದೊರೆಯಲಿದೆ. ಇತರರ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ನೀವು ಪ್ರಭಾವಿಗಳಾಗಲಿದ್ದೀರಿ. ವಿದೇಶಗಳಿಗೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಬೆಳವಣಿಗೆ ವೇಗ ಪಡೆದುಕೊಳ್ಳಲಿದೆ. ನಿಮ್ಮ ನಿರೀಕ್ಷೆಗೂ ಮೀರಿದಂತೆ ಸವಾಲುಗಳನ್ನು ಸಲೀಸಾಗಿ ದಾಟಿ ಹೋಗಲಿದ್ದೀರಿ. ಕೃಷಿ ವಲಯದಲ್ಲಿ ಇರುವವರಿಗೆ ಕಟ್ಟಡ ನಿರ್ಮಾಣಗಳಿಗೆ ಹಣ ಖರ್ಚಾಗುವ ಯೋಗ ಇದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ಅಥವಾ ಹಣದ ಮೂಲಕ್ಕಾಗಿ ಪ್ರಯತ್ನಿಸುತ್ತಾ ಇದ್ದಲ್ಲಿ ಅದು ಒದಗಿ ಬರುವಂಥ ಸಾಧ್ಯತೆಗಳಿವೆ. ಯಾವುದೇ ಕೆಲಸವನ್ನಾಗಲಿ ಪೂರ್ಣ ಮನಸ್ಸಿನಿಂದ ಮಾಡಬೇಕು. ಆರಂಭದಲ್ಲಿ ಇರುವ ಉತ್ಸಾಹ ಕೆಲಸ ಪೂರ್ಣ ಆಗುವ ತನಕ ಇರಬೇಕು. ವೃತ್ತಿನಿರತರಿಗೆ ಈ ವಾರ ಮಿಶ್ರ ಫಲ ಇದೆ. ಶುಭಾಶುಭ ಫಲಗಳ ಮಿಶ್ರಣ ಇರುವುದರಿಂದ ಯಾವುದೇ ಕೆಲಸ ಮಾಡುವಾಗಲೂ ಅದರ ಫಲಿತಾಂಶ ಏನಾಗಬಹುದು ಎಂಬ ಬಗ್ಗೆ ಅಂದಾಜು ಇರಲಿ. ವಿದ್ಯಾರ್ಥಿಗಳು ಸ್ನೇಹಿತರ ಮಧ್ಯೆ ತುಂಬ ಅಚ್ಚರಿ ಮೂಡಿಸುವಂಥ ಸಾಧನೆಯನ್ನು ಮಾಡುವಿರಿ. ಮದುವೆ ಸೂಕ್ತ ವಯಸ್ಸಿನ ಯುವತಿಯರಿಗೆ ಸೂಕ್ತ ಸಂಬಂಧಗಳು ದೊರೆಯಲಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಅನಗತ್ಯವಾಗಿ ಸಮಯ ಕಳೆದುಹೋಗುತ್ತಿದೆ, ಅಂದುಕೊಂಡಿದ್ದನ್ನು ಮಾಡಲು ಆಗುತ್ತಿಲ್ಲ ಎಂದು ನಿಮಗೆ ಅನಿಸುವುದಕ್ಕೆ ಶುರುವಾಗುತ್ತದೆ. ವಾರದ ಶುರುವಿನಲ್ಲಿ ಕೆಲವು ಕೆಲಸಗಳನ್ನು ಮುಗಿಸುವುದಕ್ಕೆ ಶತಾಯಗತಾಯ ಪ್ರಯತ್ನ ಪಡಲಿದ್ದೀರಿ. ಇನ್ನು ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸಂಬಂಧಿಗಳ ಮೂಲಕವಾಗಿ ಕೆಲವು ಸಲಹೆ, ರೆಫರೆನ್ಸ್ ಗಳನ್ನು ನೀಡುವ ಸಾಧ್ಯತೆ ಇದೆ. ಕುಟುಂಬದಲ್ಲಿ ಹಣಕಾಸಿನ ತುರ್ತು, ಭವಿಷ್ಯದ ಅಗತ್ಯಗಳ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯಲಿದೆ. ಉದ್ಯೋಗದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದಲ್ಲಿ ಜಾಬ್ ಕನ್ಸಲ್ಟೆನ್ಸಿ ಮೂಲಕವಾಗಿ ಸಹಾಯ ಆಗಲಿದೆ. ಕೃಷಿಕರು ದೊಡ್ಡ ಮೊತ್ತದ ಖರ್ಚುಗಳನ್ನು ಸಂಭಾಳಿಸುವುದಕ್ಕೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದಕ್ಕೆ ಮುಂದಾಗಲಿದ್ದೀರಿ. ಇನ್ನು ಕೆಲವರಿಗೆ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ನೀವು ಮಾಡಿದ ಕೆಲಸಗಳಲ್ಲಿ ತಪ್ಪು ಹುಡುಕುವುದಕ್ಕೆ ಅಂತಲೇ ಕೆಲವರು ಪ್ರಯತ್ನಿಸುತ್ತಾರೆ. ಈ ನಡೆಗಳಿಂದ ಅಧೀರರಾಗಬೇಡಿ. ನಿಮಗೆ ಸತ್ಯ ಎಂದು ಗೊತ್ತಿರುವ ವಿಚಾರಗಳಲ್ಲಿ ಯಾವುದೇ ಕಾರಣಕ್ಕೂ ರಾಜೀ ಆಗಬೇಡಿ. ವೃತ್ತಿನಿರತರಿಗೆ ನೀವು ಬಹಳ ನಿರೀಕ್ಷೆ ಮಾಡುತ್ತಿದ್ದಲ್ಲಿ ಕಚೇರಿಗೆ ಬೇಕಾದಂಥ ಸಲಕರಣೆಗಳನ್ನು ಖರೀದಿ ಮಾಡಲಿದ್ದೀರಿ.ಇವೆಲ್ಲಕ್ಕೂ ಶಕ್ತಿ ಮೀರಿ ಶ್ರಮಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯ ವಾತಾವರಣದಲ್ಲಿ ಬಹಳ ಬದಲಾವಣೆ ಆಗಿದೆ ಎನಿಸುವುದಕ್ಕೆ ಆರಂಭವಾಗುತ್ತದೆ. ಗೆಳೆಯರ ಜತೆಗೆ ಮಾಮೂಲಿನಂತೆ ಇರುವುದು ಕಷ್ಟವಾಗುತ್ತದೆ. ಯುವತಿಯರು ಪ್ರೀತಿ- ಪ್ರೇಮದಲ್ಲಿ ಇದ್ದಲ್ಲಿ ಮೂರನೇ ವ್ಯಕ್ತಿಗಳ ಮಧ್ಯಪ್ರವೇಶವಾಗಿ, ಗೊಂದಲಗಳಿಗೆ ಎಡೆ ಮಾಡಿಕೊಡಬಹುದು. ಮಹಿಳೆಯರು ಮನೆಗೆ ಗೃಹೋಪಯೋಗಿ ವಸ್ತುಗಳನ್ನು ತರುವುದಕ್ಕೆ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಸೋದರ ಸಂಬಂಧಿಗಳು ನಿಮ್ಮಿಂದ ಸಹಾಯವನ್ನು ಬಯಸಿ ಬರಲಿದ್ದಾರೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಉದ್ಯೋಗ ಸ್ಥಳದಲ್ಲಿ ಭಾರೀ ಬದಲಾವಣೆಗಳನ್ನು ಕಾಣಬೇಕಾಗುತ್ತದೆ. ಮಹತ್ತರವಾದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ನೀವು ಸಿದ್ಧವಾಗಬೇಕಾಗುತ್ತದೆ. ವಾಹನಗಳ ದುರಸ್ತಿ, ಸರ್ವೀಸ್ ಗಾಗಿ ಹಣ ಖರ್ಚು ಮಾಡಲಿದ್ದೀರಿ. ನೇರವಂತಿಕೆಯಿಂದ ಮಾಡಿದಲ್ಲಿ ವ್ಯವಹಾರಗಳು ಕೈ ಹಿಡಿಯಲಿವೆ. ದೂರದ ಊರಿನಲ್ಲಿ ಇರುವ ಸಂಬಂಧಿಕರು ತುರ್ತಾಗಿ ಹಣದ ಅಗತ್ಯವಿದೆ ಎಂದು ಕೇಳಿಕೊಂಡು ಬರಬಹುದು. ಸಣ್ಣ ಮಟ್ಟದ ವ್ಯಾಜ್ಯವೋ ಅಥವಾ ಮನಸ್ತಾಪವೋ ಇದು ಇಲ್ಲಿಗೇ ನಿಲ್ಲುವುದಿಲ್ಲ ಎಂದು ಬಲವಾಗಿ ಅನಿಸುತ್ತದೆ. ಆದರೆ ನೀವಾಗಿಯೇ ಇದನ್ನು ಮುಂದುವರಿಸಿಕೊಂಡು ಹೋಗದಿರುವುದು ಕ್ಷೇಮ. ನಿಮಗಿಂತ ಸಣ್ಣ ವಯಸ್ಸಿನವರ ಜತೆಗೆ ವ್ಯವಹರಿಸುವಾಗ ಬಳಸುವ ಪದಗಳ ಬಗ್ಗೆ ನಿಗಾ ಇರಲಿ. ಇಲ್ಲದಿದ್ದರೆ ಅವಮಾನದ ಪಾಲಾಗುತ್ತೀರಿ. ಕೃಷಿಕರಿಗೆ ಅಂದುಕೊಳ್ಳದ ರೀತಿಯಲ್ಲಿ ಆದಾಯಕ್ಕೆ ದಾರಿ ಕಾಣಿಸಿಕೊಳ್ಳುತ್ತದೆ. ಕೆಲಸದ ಒತ್ತಡ ಅಂತಲೋ ಅಥವಾ ಆಸಕ್ತಿ ಕಳೆದುಕೊಂಡಿರಿ ಎಂಬ ಕಾರಣಕ್ಕೆ ಮುಖ್ಯ ಸಂಗತಿ ಅಥವಾ ಜವಾಬ್ದಾರಿಗಳನ್ನು ಮುಂದಕ್ಕೆ ಹಾಕಬೇಡಿ. ವೃತ್ತಿನಿರತರಿಗೆ ಸ್ಪರ್ಧೆ ಹೆಚ್ಚಾಗಲಿದೆ. ಈಗ ಮಾಡುತ್ತಿರುವುದರ ಜತೆಗೆ ಹೊಸ ವ್ಯವಹಾರ ಕೂಡ ಶುರು ಮಾಡಬೇಕು ಎಂದು ಆಲೋಚಿಸಲಿದ್ದೀರಿ. ಕಾರು ಅಥವಾ ಎಲೆಕ್ಟ್ರಿಕಲ್ ಸ್ಕೂಟರ್ ಖರೀದಿ ಮಾಡುವುದಕ್ಕೆ ಮಾಹಿತಿ ಕಲೆ ಹಾಕಲಿದ್ದೀರಿ ಮತ್ತು ನಿಮ್ಮಲ್ಲಿ ಕೆಲವರು ಅಡ್ವಾನ್ಸ್ ನೀಡುವ ಸಾಧ್ಯತೆ ಕೂಡ ಇದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಮಿಂಚಲಿದ್ದು, ಕೆಲವು ವಿಭಾಗಕ್ಕೆ ನಿಮ್ಮನ್ನು ನಾಯಕ/ನಾಯಕಿ ಮಾಡುವಂಥ ಅವಕಾಶಗಳಿವೆ. ಆ ಮೂಲಕವಾಗಿ ನೀವು ಜನಪ್ರಿಯರಾಗಲಿದ್ದೀರಿ. ಮಹಿಳೆಯರಿಗೆ ತವರು ಮನೆಯಲ್ಲಿನ ಕಾರ್ಯಕ್ರಮಗಳಿಗೆ ಆಹ್ವಾನ ಬರಲಿದೆ. ತಂದೆ ಅಥವಾ ತಂದೆ ಸಮಾನರಾದವರು ಹಣಕಾಸನ್ನು ಪ್ರೀತಿಪೂರ್ವಕವಾಗಿ ನೀಡಲಿದ್ದಾರೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮ ಸ್ವಂತ ವಿಚಾರಗಳನ್ನು ಯಾರ ಜತೆಗೆ ಹಂಚಿಕೊಳ್ಳುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಆಪ್ತರು ಎನಿಸಿಕೊಂಡವರ ಬಳಿ ನಿಮ್ಮ ಖಾಸಗಿ ಅಥವಾ ಸ್ವಂತ ವಿಚಾರಗಳು ಎಷ್ಟರ ಮಟ್ಟಿಗೆ ರಹಸ್ಯವಾಗಿ ಉಳಿದೀತು ಎಂಬುದರ ಬಗ್ಗೆಯೂ ನಿಗಾ ಇರಲಿ. ಕೆಲವು ಅನಾರೋಗ್ಯ ಸಮಸ್ಯೆಗಾಗಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಸಾಕು ಪ್ರಾಣಿಗಳ ಜತೆಗೆ ಇರುವಾಗ ಮಾಮೂಲಿಗಿಂತ ಸ್ವಲ್ಪ ಜಾಸ್ತಿಯೇ ಎಚ್ಚರಿಕೆಯಿಂದ ಇರುವುದು ಉತ್ತಮ. ಇಲ್ಲದಿದ್ದಲ್ಲಿ ಅವುಗಳಿಂದ ಗಾಯ ಆಗಬಹುದು ಅಥವಾ ಕಡಿತವಾಗಬಹುದು. ಕೃಷಿಕರಿಗೆ ಮನೆಯಲ್ಲಿ ಆಸ್ತಿ ಹಂಚಿಕೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಲಿದೆ. ಮಕ್ಕಳ ಶಿಕ್ಷಣದ ಸಲುವಾಗಿ ರಾಸುಗಳನ್ನೋ ಅಥವಾ ಸೈಟು- ಸ್ವಲ್ಪ ಜಮೀನನ್ನು ಮಾರಾಟ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವವರಿಗೆ ಹೊಸದಾಗಿ ಹುದ್ದೆ ಅಥವಾ ಜವಾಬ್ದಾರಿ ನಿಮ್ಮ ಪಾಲಿಗೆ ಬರಲಿವೆ. ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ಪ್ರಭಾವಿಗಳ ಸಂಫರ್ಕಕ್ಕೆ ಬರಲಿದ್ದು, ಅವರ ಮಾತಿ- ಶಿಫಾರಸಿನ ಮೂಲಕಚಾಗಿ ಕೆಲವು ಕೆಲಸಗಳು ಸರಾಗವಾಗಿ ಮುಗಿಯಲಿವೆ. ವೃತ್ತಿನಿರತರು ನೀವು ಕೈಗೆತ್ತಿಕೊಂಡ ಕೆಲಸ ಪೂರ್ತಿ ಆಗುವ ತನಕ ಅದರ ಬಗ್ಗೆ ಹೇಳಿಕೊಳ್ಳಬೇಡಿ. ಹಾಗೊಂದು ವೇಳೆ ಹೇಳಿಕೊಂಡಲ್ಲಿ ನಿಮ್ಮ ಅತ್ಯುತ್ಸಾಹಕ್ಕೆ ತಣ್ಣೀರು ಎರಚುವಂಥ ಬೆಳವಣಿಗೆಗಳು ಆಗಲಿವೆ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಮುಗಿಸುವ ಕಡೆಗೆ ಲಕ್ಷ್ಯ ವಹಿಸಬೇಕು. ನೀವು ಅದೆಷ್ಟು ಡಿಪ್ಲೊಮ್ಯಾಟಿಕ್ ಆಗಿ ವ್ಯವಹಾರಗಳನ್ನು ಮಾಡಿ ಮುಗಿಸಲಿದ್ದೀರಿ ಎಂಬ ಕಡೆಗೆ ಹೆಚ್ಚು ಶ್ರಮ ವಹಿಸಿ. ಮಹಿಳೆಯರು ಉದ್ಯೋಗಸ್ಥರಾಗಿದ್ದಲ್ಲಿ ಡೆಡ್ ಲೈನ್ ಒಳಗಾಗಿ ಕೆಲಸವನ್ನು ಮುಗಿಸಬೇಕಾದ ಒತ್ತಡದ ಸನ್ನಿವೇಶ ಸೃಷ್ಟಿ ಆಗಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನೀವು ಇಷ್ಟವಿರುತ್ತದೋ ಇಲ್ಲವೋ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಈ ಹಿಂದೆ ಅಭಿಪ್ರಾಯ ಭೇದಗಳು, ಜಗಳ- ಕಲಹ ಏನೇ ಆಗಿದ್ದರೂ ಅಂಥವರ ಜತೆಗೂಡಿಯೇ ಕೆಲಸ ಮಾಡುವಂಥ ಅನಿವಾರ್ಯ ಸೃಷ್ಟಿ ಆಗುತ್ತದೆ. ದೈಹಿಕ ದೃಢತೆ ಕಾಪಾಡಿಕೊಳ್ಳುವ ಸಲುವಾಗಿ ಜಿಮ್, ಯೋಗ ಅಥವಾ ಇಂಥ ಯಾವುದಾದರೂ ಒಂದರಲ್ಲಿ ತೊಡಗಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಗುರುವಿನ ಸ್ಮರಣೆ, ಆರಾಧನೆಯಿಂದ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಕೃಷಿಕರಿಗೆ ಡೇರಿ ವ್ಯವಹಾರ ಕೈ ಹಿಡಿಯಲಿದೆ. ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದಲೇ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೀರಿ. ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಪ್ರತಿಷ್ಠಿತ ಕಂಪನಿಯೊಂದರ ಜತೆಗೆ ವ್ಯವಹಾರದ ಮಾತುಕತೆಗಳು ನಡೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಚೌಕಾಶಿಗೆ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸಂಗಾತಿಯ ಮಾತನ್ನು ಕೇಳಿಸಿಕೊಳ್ಳಿ. ಅವರು ನೀಡುವ ಸಲಹೆಗಳನ್ನು ಪಾಲಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಿ. ವೃತ್ತಿ ನಿರತರಾಗಿ ವಿದೇಶದಲ್ಲಿ ಇರುವವರಿಗೆ ಒಂಟಿತನ ವಿಪರೀತ ಕಾಡಲಿದೆ. ಕೂಡಿಟ್ಟ ಹಣ ಅಚಾನಕ್ ಆಗಿ ಅಥವಾ ನೀವಾಗಿಯೇ ಖರ್ಚು ಮಾಡಿಬಿಡುವಂಥ ಸಾಧ್ಯತೆ ಇದೆ. ಮನಸ್ಸಿನ ಮೇಲೆ ಹತೋಟಿ ಸಾಧಿಸುವುದಕ್ಕೆ ಪ್ರಯತ್ನಿಸಿ. ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಅಂತಾದರೆ ಖರ್ಚಿನ ವಿಚಾರದಲ್ಲಿ ಇನ್ನೂ ಹೆಚ್ಚು ಜಾಗ್ರತೆಯಿಂದ ಇರುವುದು ಅತ್ಯವಶ್ಯ. ವಿದ್ಯಾರ್ಥಿಗಳು ಯಾವುದೇ ಮುಖ್ಯ ದಿನ, ಕೆಲಸ ಅಂತ ಇರುವುದಾದರೆ ಆಗ ಹಳದಿ ದಿರಿಸನ್ನು ಧರಿಸುವುದು ಉತ್ತಮ. ಏಕಾಏಕಿ ದೊಡ್ಡ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ. ಮಹಿಳೆಯರಿಗೆ ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳು ದೊರೆಯುವ ಅವಕಾಶಗಳು ಹೆಚ್ಚಿವೆ. ಕುಟುಂಬ ಸದಸ್ಯರ ಬೆಂಬಲ ಕೂಡ ನಿಮ್ಮ ಪಾಲಿಗೆ ದೊರೆಯಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಬ್ಯಾಂಕಿಂಗ್ ವ್ಯವಹಾರಗಳಿಗೆ ಅಲೆದಾಟ ನಡೆಸುತ್ತಾ, ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸ ಈ ವಾರದಲ್ಲಿ ಮುಗಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಯಾರನ್ನಾದರೂ ಸರಿ, ಸುಖಾಸುಮ್ಮನೆ ಬೈದಾಡಿಕೊಂಡು ಓಡಾಡಬೇಡಿ.ಯಾರು- ಯಾವ ಸಮಯದಲ್ಲಿ ಹಾಗೂ ಹೇಗೆ ಸಹಾಯಕ್ಕೆ ಬರುತ್ತಾರೆ ಎಂಬುದನ್ನು ಹೇಳುವುದೇ ಕಷ್ಟವಾದ ದಿನಗಳಿವು. ವಾಹನ ಖರೀದಿ ಮಾಡಬೇಕು ಎಂದು ಕೊನೆ ಕ್ಷಣದ ತನಕ ಯೋಚನೆ ಮಾಡದೆ ದಿಢೀರ್ ಎಂದು ತೀರ್ಮಾನ ಮಾಡಲಿದ್ದೀರಿ. ಕೃಷಿ ವಲಯದಲ್ಲಿ ಇರುವವರಿಗೆ ಹೊಸ ಮಾರುಕಟ್ಟೆ, ಖರೀದಿದಾರರು ದೊರೆಯುವ ಅವಕಾಶಗಳು ಹೆಚ್ಚಿವೆ. ಇದರೊಂದಿಗೆ ನಿಮ್ಮ ಹಣಕಾಸಿನ ಅಗತ್ಯಗಳು ಸ್ವಲ್ಪ ಮಟ್ಟಿಗಾದರೂ ಪೂರೈಕೆ ಆಗುತ್ತದೆ. ಕೃಷಿ ಉತ್ಪನ್ನಗಳ ರಫ್ತು ವಹಿವಾಟನ್ನು ಮಾಡುತ್ತಿರುವವರಿಗೆ ಸವಾಲಿನ ಸಮಯ ಇದಾಗಿರುತ್ತದೆ. ನಿಮ್ಮದಲ್ಲದ ತಪ್ಪಿಗೆ ಇತರರ ನಿಂದೆಯನ್ನು ಅನುಭವಿಸಬೇಕಾಗುತ್ತದೆ. ಜ್ಯೋತಿಷ್ಯ, ಪೌರೋಹಿತ್ಯ, ರೇಕಿ, ಪ್ರಾಣಿಕ್ ಹೀಲಿಂಗ್ ಇಂಥದ್ದರದಲ್ಲಿ ತೊಡಗಿರುವವರಿಗೆ ಈ ವಾರ ಬಿಡುವಿಲ್ಲದಂಥ ಕೆಲಸ ಇರಲಿದೆ. ಈ ಮೊದಲು ನಿಮ್ಮಿಂದ ಕೆಲಸ ಮಾಡಿಸಿರುವವರು ಮತ್ತೆ ಹುಡುಕಿಕೊಂಡು ಬಂದು, ಕೆಲವು ಕೆಲಸಗಳನ್ನು ಒಪ್ಪಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಸಂಸ್ಥೆಯಿಂದ ಯಾವುದಾದರೂ ಸ್ಪರ್ಧೆ, ಅಧ್ಯಯನ ಪ್ರವಾಸ ಇತ್ಯಾದಿಗಳಿಗೆ ಕಳಿಸುವಂಥ ಯೋಗ ಇದೆ. ಮಹಿಳೆಯರು ಈ ವಾರ ಸಾಧ್ಯವಾದಷ್ಟೂ ಇತರರ ವೈಯಕ್ತಿಕ ವಿಚಾರಗಳನ್ನು ಮಾತನಾಡದಿರುವುರು ಒಳಿತು.
ಲೇಖನ- ಎನ್.ಕೆ.ಸ್ವಾತಿ