Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 26ರಿಂದ ಏಪ್ರಿಲ್ 1ರ ತನಕ ವಾರಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 26ರಿಂದ ಏಪ್ರಿಲ್ 1ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 25ರಿಂದ ಏಪ್ರಿಲ್ 1ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ವಾರ ತಾಳ್ಮೆ ಬಹಳ ಮುಖ್ಯವಾಗುತ್ತದೆ. ಮೇಲ್ನೋಟಕ್ಕೆ ಲಾಭದಾಯಕ ಅವಕಾಶ ಎಂದುಕೊಂಡು ದಿಢೀರನೇ ಆ ಕೆಲಸವನ್ನು ಅಥವಾ ವಿಷಯವನ್ನು ಒಪ್ಪಿಕೊಂಡಲ್ಲಿ ಆ ನಂತರ ಅದರಿಂದ ಹೊರಬರುವುದು ಹೇಗೆ ಎಂದು ಪರಿತಪಿಸಬೇಕಾಗುತ್ತದೆ. ನೀರಿಗೆ ಸಂಬಂಧಿಸಿದ ಕೆಲಸ ಅಥವಾ ವೃತ್ತಿಯಲ್ಲಿ ಇರುವವರು ನಾನಾ ಬಗೆಯಲ್ಲಿ ಸವಾಲುಗಳನ್ನು ಕಾಣುವಂತಾಗುತ್ತದೆ. ಸ್ವಂತ ಮನೆ ನಿರ್ಮಾಣ ಮಾಡುತ್ತಿರುವವರು ಅದಕ್ಕೆ ಅಗತ್ಯ ಇರುವ ಹಣಕಾಸನ್ನು ಹೊಂದಿಸಿಕೊಳ್ಳುವುದಕ್ಕೆ ಹೆಚ್ಚಿಗೆ ಶ್ರಮ ಹಾಕಬೇಕಾಗುತ್ತದೆ. ಮನೆ ದೇವರ ಆರಾಧನೆಯನ್ನು ಮಾಡುವುದರಿಂದ ಕೆಲಸಗಳಲ್ಲಿನ ಸವಾಲುಗಳನ್ನು ಸುಲಭವಾಗಿ ದಾಟುವುದಕ್ಕೆ ಸಾಧ್ಯವಾಗುತ್ತದೆ. ಕೃಷಿ ವೃತ್ತಿಯಲ್ಲಿ ಇರುವಂಥವರು ತಮ್ಮ ಆಸ್ತಿ, ವಾಹನ ಹೀಗೆ ಹಣದ ಅಗತ್ಯಗಳಿಗಾಗಿಯೇ ಮಾರಾಟ ಮಾಡುವುದಕ್ಕೆ ಮುಂದಾಗಲಿದ್ದೀರಿ ಅಥವಾ ಚಿನ್ನವನ್ನು ಅಡಮಾನ ಮಾಡಿ, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಲಿದ್ದೀರಿ. ವೃತ್ತಿನಿರತರು ಹಾಗೂ ಸ್ವಂತ ವ್ಯವಹಾರ ಮಾಡುತ್ತಿರುವವರಿಗೆ ಹೊಸ ವೃತ್ತಿಯೊಂದಕ್ಕೆ ಹೊರಳಿಕೊಳ್ಳುವ ಆಲೋಚನೆ ಮೂಡಲಿದೆ. ಕಚೇರಿ ಖರ್ಚುಗಳು ಕಡಿಮೆ ಮಾಡುವ ಕಡೆಗೆ ನಿಮ್ಮ ಗಮನವನ್ನು ಹೆಚ್ಚಿಗೆ ಹರಿಸಲಿದ್ದೀರಿ. ಯಾವುದೇ ತೀರ್ಮಾನ ಮಾಡುವ ಮುನ್ನ ಅದರ ಪರಿಣಾಮವನ್ನು ಆಲೋಚನೆ ಮಾಡಿದ ನಂತರ ನಿರ್ಧಾರ ಕೈಗೊಳ್ಳಿ. ವಿದ್ಯಾರ್ಥಿಗಳಿಗೆ ಜ್ವರ, ಕಫ, ಒಣಕೆಮ್ಮು ಇಂಥ ಅನಾರೋಗ್ಯ ಸಮಸ್ಯೆಗಳು ಕಾಡುವಂಥ ಸಾಧ್ಯತೆ ಇದೆ. ಪರೀಕ್ಷೆಗಳು ಇರುವಂಥವರು, ಸಿದ್ಧತೆ ನಡೆಸುತ್ತಿರುವವರು ಆರೋಗ್ಯ- ನೀರಿನ ಸೇವನೆ ವಿಚಾರದಲ್ಲಿ ಹೆಚ್ಚಾಗಿಯೇ ಜಾಗ್ರತೆಯಿಂದ ಇರಬೇಕು. ವಿವಾಹ ವಯಸ್ಕ ಯುವತಿಯರು ಸೂಕ್ತ ಸಂಬಂಧದ ಅನ್ವೇಷಣೆಯಲ್ಲಿ ಇದ್ದರೆ ಒದಗಿಬರುವ ಅವಕಾಶಗಳಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಕ್ಕು ಸುಮ್ಮನಾಗುವಂಥ ಅಥವಾ ಸ್ವಲ್ಪವೂ ಗಮನ ನೀಡುವ ಅಗತ್ಯ ಇಲ್ಲದ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದಿರಿ. ನಿಮ್ಮ ಕೆಲಸದ ಬಗ್ಗೆ ಆಕ್ಷೇಪ ಮಾಡಿದರೂ ಅಥವಾ ಟೀಕೆ ಮಾಡಿದರೂ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಇನ್ನು ಕೆಲಸದ ವಿಚಾರವಾಗಿ ಪ್ರಯಾಣ ಮಾಡುವಂಥವರಿಗೆ ಅಥವಾ ಈಗಾಗಲೇ ಪ್ರವಾಸದಲ್ಲಿ ಇರುವಂಥವರಿಗೆ ಬಿಡುವಿಲ್ಲದಷ್ಟು ಕೆಲಸಗಳು ಮಾಡಬೇಕಾದಂಥ ಸನ್ನಿವೇಶ ಒದಗಲಿದೆ. ಇನ್ನು ಎದುರಿಗಿರುವ ವ್ಯಕ್ತಿಯ ಆಂತರ್ಯವನ್ನು ಕನಿಷ್ಠ ಮಟ್ಟದಲ್ಲಿಯಾದರೂ ಗಮನಿಸದೆ ಯಾವುದೇ ಆಫರ್ ಅಥವಾ ಭರವಸೆಯನ್ನು ನೀಡದಿರುವುದು ಉತ್ತಮ. ಕೃಷಿಕರಿಗೆ ಹೊಸದಾಗಿ ಹೂಡಿಕೆ ಮಾಡಿ, ನಿಶ್ಚಿತವಾದ ಆದಾಯ ಮೂಲವೊಂದನ್ನು ಸೃಷ್ಟಿಸಿಕೊಳ್ಳಬೇಕು ಎಂಬ ಆಲೋಚನೆ ಬರಲಿದೆ. ಇದಕ್ಕಾಗಿ ಮಕ್ಕಳು ಅಥವಾ ಅಣ್ಣ- ತಮ್ಮಂದಿರು ಒಟ್ಟಿನಲ್ಲಿ ಕುಟುಂಬ ಸದಸ್ಯರ ಜತೆಗೆ ಚರ್ಚೆ ಮಾಡಲಿದ್ದೀರಿ. ಸರ್ಕಾರದಿಂದ ಆಗಿರುವ ಹೊಸ ನಿಯಮಾವಳಿಗಳು ಅಥವಾ ನೀವು ಯಾವುದೇ ಕೆಲಸ ಮಾಡಿದರೂ ಅದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಿ. ವೈದ್ಯಕೀಯ ಕ್ಷೇತ್ರವನ್ನು ವೃತ್ತಿಯನ್ನಾಗಿ ಆರಿಸಿಕೊಂಡು, ಇದೀಗ ವೃತ್ತಿಯನ್ನು ಸ್ವಂತವಾಗಿ ಆರಂಭಿಸುವ ಅಥವಾ ಪಾಲುದಾರಿಕೆಯಲ್ಲಿ ವಿಸ್ತರಣೆ ಮಾಡುವಂಥ ಆಲೋಚನೆ ಬರಲಿದೆ. ಇನ್ನು ವಾಹನಗಳನ್ನು ಖರೀದಿಸುವ ಯೋಗ ಇದೆ. ವಿದ್ಯಾರ್ಥಿಗಳು ಕೋರ್ಸ್ ಬದಲಾವಣೆ ಅಥವಾ ಶಿಕ್ಷಣ ಸಂಸ್ಥೆ ಬದಲಾವಣೆ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಮಹಿಳಾ ಉದ್ಯೋಗಸ್ಥರಿಗೆ ಈಗಿರುವ ಅನುಕೂಲಕರ ವಾತಾವರಣ ಮುಗಿದು, ಒತ್ತಡದ ವಾತಾವರಣ ಸೃಷ್ಟಿಯಾಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನೀವು ಅಂದುಕೊಳ್ಳುವುದು, ಆಲೋಚಿಸುವುದು ಬೇರೆ, ಆದರೆ ನಿಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳುವಾಗ ಅದಕ್ಕೆ ಬೇಕಾದ ಪೂರಕ ಆಧಾರ, ಪುರಾವೆಗಳು ಇವೆಯೇ ಎಂಬುದನ್ನು ನೋಡಿಕೊಳ್ಳಿ. ನೀವು ಮಾಡುವ ಅಥವಾ ಕೈಗೆತ್ತಿಕೊಂಡ ಕೆಲಸದಲ್ಲಿ ನಿರೀಕ್ಷಿತವಾದ ಫಲಿತಾಂಶ ಬರುವ ಬಗ್ಗೆ ಅನುಮಾನಗಳು ಮೂಡಿದಲ್ಲಿ ಅದರಲ್ಲಿ ಮುಂದುವರಿಯಬೇಡಿ. ಇಷ್ಟು ಸಮಯ ನಿಮಗೆ ಆತ್ಮೀಯರಾಗಿರುವವರು ನೆರವನ್ನು ಬಯಸಿ, ನಿಮ್ಮ ಬಳಿ ಬರುವಂಥ ಸಾಧ್ಯತೆ ಇದೆ. ಅವರಿಗೆ ಸಹಾಯ ಮಾಡುವುದಕ್ಕೆ ನಿಮ್ಮಿಂದ ಆದಲ್ಲಿ ಮಾಡಿ, ಇಲ್ಲದಿದ್ದಲ್ಲಿ ಬೇಡ. ಅದನ್ನು ಬಿಟ್ಟು ಹಂಗಿಸುವುದೋ ಅಥವಾ ಅನುಮಾನಿಸುವುದೋ ಮಾಡದಿರಿ. ಕೃಷಿಕರು ಕುಟುಂಬದ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಬೇಕಾಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳಿಗಾಗಿ ಸಿದ್ಧತೆ ನಡೆಸಬೇಕಾಗಬಹುದು. ಮುಖ್ಯವಾಗಿ ಹಣಕಾಸು ಹೊಂದಾಣಿಕೆ, ಅಗತ್ಯ ಪರಿಕರಗಳ ಖರೀದಿ ಇತ್ಯಾದಿಗಳನ್ನು ಮಾಡಬೇಕಾಗಲಿದೆ. ಎಳ್ಳು, ಶೇಂಗಾ, ಟೊಮೆಟೊ ಬೆಳೆಗಾರರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಸೂಚನೆಯು ದೊರೆಯಲಿದೆ. ವೃತ್ತಿನಿರತರು ಬಹಳ ಮುಖ್ಯವಾದ ವ್ಯಕ್ತಿಯೊಬ್ಬರನ್ನು ಭೇಟಿ ಆಗಲಿದ್ದೀರಿ. ಅವರ ನೀಡುವ ಸಲಹೆಯಿಂದ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಸಹಾಯ ಒದಗಿಬರಲಿದೆ. ಅತಿಯಾದ ನಿರೀಕ್ಷೆ ಇಟ್ಟುಕೊಂಡ ಪ್ರಾಜೆಕ್ಟ್ ವೊಂದರ ಕೆಲಸಗಳು ಸ್ವಲ್ಪ ಮಟ್ಟಿಗೆ ನಿಧಾನ ಆಗುವಂಥ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ವಹಿಸುವುದು ದೊಡ್ಡ ಸವಾಲಾಗಿ ಮಾರ್ಪಡಲಿದೆ. ಮಹಿಳೆಯರಿಗೆ ವಸ್ತ್ರಾಭರಣಗಳನ್ನು ಖರೀದಿ ಮಾಡುವಂಥ ಯೋಗ ಇದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಹಣಕಾಸು ಹರಿವಿನಲ್ಲಿ ನಿಧಾನ ಆಗಲಿದ್ದು, ಮಾಡುವ ಕೆಲಸದಲ್ಲಿ ಆಸಕ್ತಿ ಕಡಿಮೆ ಆಗುವಂಥ ಯೋಗ ಇದೆ. ಬೆಂಕಿಯ ಮುಂದೆ ನಿಂತು ಕೆಲಸ ಮಾಡುವಂಥವರಿಗೆ ಸಣ್ಣ-ಪುಟ್ಟ ಪೆಟ್ಟಾಗುವಂಥ ಯೋಗ ಇದೆ. ರಾತ್ರಿ ಹೊತ್ತು ನಿದ್ದೆ ಮಾಡದೆ ಕೆಲಸ ಮಾಡುವಂಥವರಿಗೆ ಆರೋಗ್ಯದಲ್ಲಿ ಸಮಸ್ಯೆಗಳು ಕಾಡಬಹುದು. ನಿಮಗೆ ಯಾವ ವ್ಯಕ್ತಿಯ ಬಗ್ಗೆ ಅಸಮಾಧಾನ ಅಥವಾ ಆಕ್ಷೇಪಗಳು ಇರುತ್ತದೆಯೋ ಅದೇ ವ್ಯಕ್ತಿ ಜತೆಗೆ ಕೆಲಸ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಇದೇ ಮೊದಲ ಬಾರಿಗೆ ಎಂಬಂತೆ ಯಾವುದಾದರೂ ಒಂದು ಕೆಲಸ ನೀವಯ ಮಾಡುತ್ತಿದ್ದೀರಿ ಎಂದಾದಲ್ಲಿ ಅನುಭವಸ್ಥರು ಅಥವಾ ಪರಿಣತರ ಮಾರ್ಗದರ್ಶನ ಪಡೆಯುವ ಕಡೆಗೆ ಗಮನವನ್ನು ನೀಡಿ. ಕೃಷಿ ಉತ್ಪನ್ನಗಳ ಮಾರುಕಟ್ಟೆಗಾಗಿ ಎದುರು ನೋಡುತ್ತಿರುವವರಿಗೆ ನಿರೀಕ್ಷೆಯಂತೆಯೇ ಕೆಲವು ಹಿರಿಯರು ಸಹಾಯ ಮಾಡಲಿದ್ದಾರೆ. ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿರುವವರಿಗೆ ಆದಾಯದ ಮೂಲ ಹೆಚ್ಚಳವಾಗಲಿದೆ. ವೃತ್ತಿಯಲ್ಲಿ ಇರುವಂಥವರು ಭಾರೀ ಗೊಂದಲಕ್ಕೆ ಗುರಿ ಆಗುವಂಥ ಸಾಧ್ಯತೆಗಳಿವೆ. ಆದ್ದರಿಂದ ದೊಡ್ಡ ಮೊತ್ತದ ಹಣಕಾಸು ಒಳಗೊಂಡ ವ್ಯವಹಾರಗಳಿದ್ದಲ್ಲಿ ಕೆಲ ಸಮಯವಾದರೂ ಮುಂದೂಡುವುದು ಉತ್ತಮ ನಡೆ ಎನಿಸಿಕೊಳ್ಳಲಿದೆ. ಇನ್ನು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಡಬಹುದು. ಆದರೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಹೆಸರು ಪಡೆದುಕೊಳ್ಳಲಿದ್ದಾರೆ. ಉದ್ಯೋಗಸ್ಥ ಮಹಿಳೆಯರಿಗೆ ವಾಹನ ಖರೀದಿ ಮಾಡುವುದಕ್ಕೆ ಕಡಿಮೆ ಬಡ್ಡಿಗೆ ಅಥವಾ ಬಡ್ಡಿ ಇಲ್ಲದೆ ಸಾಲ ದೊರೆಯುವಂಥ ಅವಕಾಶಗಳಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಸಂಬಂಧಿಗಳ ಮಧ್ಯೆ ತಮಾಷೆಗೆ ಆಡಿದ ಮಾತು, ಪ್ರಸ್ತಾವ ಆದ ವಿಚಾರಕ್ಕೆ ನಿಮ್ಮ ಮನಸ್ಸಿಗೆ ಬೇಸರ ಆಗಬಹುದು. ಮಕ್ಕಳ ಶಿಕ್ಷಣಕ್ಕೆ ಪ್ರಾಶಸ್ತ್ಯ, ಪ್ರಾತಿನಿಧ್ಯ, ಗಮನವನ್ನು ಹೆಚ್ಚು ನೀಡಬೇಕಾಗುತ್ತದೆ. ಈ ಅವಧಿಯಲ್ಲಿ ಅದೆಂಥ ಸಣ್ಣ ಪ್ರಮಾಣದ ಅನಾರೋಗ್ಯವಾದರೂ ಸ್ವಯಂ ವೈದ್ಯ ಮಾಡಿಕೊಳ್ಳದಿರುವುದು ಉತ್ತಮ. ಕಣ್ಣು ಕತ್ತಲೆ ಬರುವುದು, ಮಂಜಾಗುವುದು ಈ ರೀತಿಯ ಸಮಸ್ಯೆಗಳು ಈಗಾಗಲೇ ಇದೆ ಎಂದಾದಲ್ಲಿ ಎತ್ತರದ ಸ್ಥಳಗಳಲ್ಲಿ ಬಹಳ ಹೊತ್ತು ನಿಲ್ಲದಿರಿ ಹಾಗೂ ಒಂಟಿಯಾಗಿ ತೆರಳದಿರಿ. ಲಿಫ್ಟ್ ಹೆಚ್ಚಾಗಿ ಬಳಸುವಂಥವರಿದ್ದಲ್ಲಿ ಹೆಚ್ಚು ಜಾಗ್ರತೆ ತೆಗೆದುಕೊಳ್ಳಬೇಕಿರುವುದು ತುಂಬ ಅಗತ್ಯ. ಕೃಷಿ ಅಥವಾ ಕೃಷಿಗೆ ಸಂಬಂಧಿತ ಕಾಯಕದಲ್ಲಿ ತೊಡಗಿರುವವರು ರಾಸುಗಳು, ಯಂತ್ರೋಪಕರಣಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಆದಾಯ ಮೂಲಗಳನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಸದಾಗಿ ಕೆಲವು ವ್ಯವಹಾರಗಳನ್ನು ಆರಂಭ ಮಾಡುವಂಥ ಯೋಗ ಇದೆ. ಸಂಗಾತಿ ಆರೋಗ್ಯದ ಸಮಸ್ಯೆಗಳು ಇದ್ದಲ್ಲಿ ಅದು ಸುಧಾರಿಸುವಂಥ, ಸೂಕ್ತ ವೈದ್ಯೋಪಚಾರಗಳು ದೊರೆಯುವಂಥ ಯೋಗ ಇದೆ. ವೃತ್ತಿನಿರತರು ಆದಾಯ ತೆರಿಗೆ, ಜಿಎಸ್ ಟಿ ಅಥವಾ ಸರ್ಕಾರದ ಪರವಾನಗಿ ಇವುಗಳನ್ನು ಸರಿಯಾಗಿ ಭರಿಸುತ್ತಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ದೂರ ಪ್ರಯಾಣಗಳನ್ನು ದಿಢೀರ್ ಎಂದು ನಿರ್ಧಾರ ಮಾಡಿ, ಕೈಗೊಳ್ಳಬೇಕಾದ ಸನ್ನಿವೇಶಗಳು ಎದುರಾಗುವುದರಿಂದ ಸ್ವಲ್ಪ ಮಟ್ಟಿಗೆ ಒತ್ತಡದ ಎದುರಿಸಬೇಕಾಗುತ್ತದೆ. ಮಹಿಳೆಯರಿಗೆ ವೃಥಾ ಆರೋಪಗಳನ್ನು ಹೊರಿಸುವುದರಿಂದ ಮಾನಸಿಕ ಖಿನ್ನತೆ ಅನುಭವಿಸಬೇಕಾಗುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಒಂದು ವೇಳೆ ನೀವೇನಾದರೂ ಬಡ್ತಿ ಅಥವಾ ನಿಮಗೆ ಬೇಕಾದಂಥ ಸ್ಥಳಕ್ಕೆ ವರ್ಗಾವಣೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಈ ಬಗ್ಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಆದರೆ ಇದಕ್ಕಾಗಿ ನೀವು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ನಿತ್ಯದ ಕೆಲಸಗಳಲ್ಲಿ ಕೆಲವು ಮಟ್ಟಿಗೆ ಗೊಂದಲ ಏರ್ಪಡಬಹುದು. ಇನ್ನೊಬ್ಬರು ಮಾಡುತ್ತಾರೆ ಎಂದುಕೊಂಡು ನೀವು ಹಾಗೂ ನೀವೇ ಮಾಡುತ್ತಿರಿ ಎಂದುಕೊಂಡು ಇತರರು ಗೊಂದಲ ಮಾಡಿಕೊಂಡು ಕೆಲಸವು ಕೊನೆ ಕ್ಷಣದ ಹಾಗೇ ಬಾಕಿ ಉಳಿದುಹೋಗುವ ಸಾಧ್ಯತೆ ಇದೆ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಇರುವವರುಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಸಾಧ್ಯತೆ ಇದೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಹಣವನ್ನು ಹೂಡಿಕೆ ಮಾಡಲಿದ್ದೀರಿ. ಆಯುರ್ವೇದ ಮೂಲಿಕೆಗಳನ್ನು ಬೆಳೆಯುತ್ತಾ ಇರುವವರಿಗೆ ಆದಾಯ ಜಾಸ್ತಿ ಆಗುವ ಜತೆಗೆ ಹೆಸರು, ಕೀರ್ತಿ ಹಾಗೂ ಮನ್ನಣೆ ಕೂಡ ಜಾಸ್ತಿ ಆಗುತ್ತದೆ. ವೃತ್ತಿನಿರತರು ಹೊಸ ವಾಹನ, ಲ್ಯಾಪ್ ಟಾಪ್, ಕಚೇರಿಗೆ ಬೇಕಾದಂಥ ಸಲಕರಣೆಗಾಗಿ ಹಣ ಖರ್ಚು ಮಾಡುವಂಥ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪ ಮಟ್ಟಿಗೆ ಆಸಕ್ತಿ ಕಡಿಮೆ ಆಗಬಹುದು. ಪಠ್ಯೇತರ ಸಂಗತಿಗಳಲ್ಲಿ ನಿಮ್ಮ ಮನಸ್ಸು ವಾಲುವುದರಿಂದ ಮನೆಯಲ್ಲಿ ಕೂಡ ಆಕ್ಷೇಪಣೆಗಳು ಕೇಳಿಬರಲಿವೆ. ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಇದ್ದಲ್ಲಿ ಏಳ್ಗೆ ಸಾಧ್ಯತೆಗಳು ಹೆಚ್ಚಾಗಿವೆ. ಸಿಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಕಡೆಗೆ ಗಮನವನ್ನು ನೀಡಬೇಕು.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಬ್ಯಾಂಕಿಂಗ್ ವ್ಯವಹಾರಗಳಿಗೆ ಅಲೆದಾಟ ನಡೆಸುತ್ತಾ, ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸ ಈ ವಾರದಲ್ಲಿ ಮುಗಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಯಾರನ್ನಾದರೂ ಸರಿ, ಸುಖಾ- ಸುಮ್ಮನೆ ಬೈದಾಡಿಕೊಂಡು ಓಡಾಡಬೇಡಿ.ಯಾರು- ಯಾವ ಸಮಯದಲ್ಲಿ ಹಾಗೂ ಹೇಗೆ ಸಹಾಯಕ್ಕೆ ಬರುತ್ತಾರೆ ಎಂಬುದನ್ನು ಹೇಳುವುದೇ ಕಷ್ಟವಾದ ದಿನಗಳಿವು. ವಾಹನ ಖರೀದಿ ಮಾಡಬೇಕು ಎಂದು ಕೊನೆ ಕ್ಷಣದ ತನಕ ಯೋಚನೆ ಮಾಡದೆ ದಿಢೀರ್ ಎಂದು ತೀರ್ಮಾನ ಮಾಡಲಿದ್ದೀರಿ. ಋಷಿ ವಲಯದಲ್ಲಿ ಇರುವವರಿಗೆ ಹೊಸ ಮಾರುಕಟ್ಟೆ, ಖರೀದಿದಾರರು ದೊರೆಯುವ ಅವಕಾಶಗಳು ಹೆಚ್ಚಿವೆ. ಇದರೊಂದಿಗೆ ನಿಮ್ಮ ಹಣಕಾಸಿನ ಅಗತ್ಯಗಳು ಸ್ವಲ್ಪ ಮಟ್ಟಿಗಾದರೂ ಪೂರೈಕೆ ಆಗುತ್ತದೆ. ಕೃಷಿ ಉತ್ಪನ್ನಗಳ ರಫ್ತು ವಹಿವಾಟನ್ನು ಮಾಡುತ್ತಿರುವವರಿಗೆ ಸವಾಲಿನ ಸಮಯ ಇದಾಗಿರುತ್ತದೆ. ನಿಮ್ಮದಲ್ಲದ ತಪ್ಪಿಗೆ ಇತರರ ನಿಂದೆಯನ್ನು ಅನುಭವಿಸಬೇಕಾಗುತ್ತದೆ. ಜ್ಯೋತಿಷ್ಯ, ಪೌರೋಹಿತ್ಯ, ರೇಕಿ, ಪ್ರಾಣಿಕ್ ಹೀಲಿಂಗ್ ಇಂಥದ್ದರದಲ್ಲಿ ತೊಡಗಿರುವವರಿಗೆ ಈ ವಾರ ಬಿಡುವಿಲ್ಲದಂಥ ಕೆಲಸ ಇರಲಿದೆ. ಈ ಮೊದಲು ನಿಮ್ಮಿಂದ ಕೆಲಸ ಮಾಡಿಸಿರುವವರು ಮತ್ತೆ ಹುಡುಕಿಕೊಂಡು ಬಂದು, ಕೆಲವು ಕೆಲಸಗಳನ್ನು ಒಪ್ಪಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಸಂಸ್ಥೆಯಿಂದ ಯಾವುದಾದರೂ ಸ್ಪರ್ಧೆ, ಅಧ್ಯಯನ ಪ್ರವಾಸ ಇತ್ಯಾದಿಗಳಿಗೆ ಕಳಿಸುವಂಥ ಯೋಗ ಇದೆ. ಮಹಿಳೆಯರು ಈ ವಾರ ಸಾಧ್ಯವಾದಷ್ಟೂ ಇತರರ ವೈಯಕ್ತಿಕ ವಿಚಾರಗಳನ್ನು ಮಾತನಾಡದಿರುವುರು ಒಳಿತು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ವಿದೇಶದಿಂದ ಶುಭ ಸುದ್ದಿ ನಿರೀಕ್ಷೆ ಮಾಡುತ್ತಿರುವವರಿಗೆ ಅದು ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಅಥವಾ ಕೆಲಸವೇ ಹೋಗುವಂಥ ಸನ್ನಿವೇಶ ಸೃಷ್ಟಿ ಆಗಬಹುದು. ಆದರೆ ತೀರಾ ಗಾಬರಿಗೆ ಬೀಳಬೇಡಿ. ನಿಮ್ಮ ಸಾಮರ್ಥ್ಯದ ಆಧಾರದ ಮೇಲೆ ಕೆಲಸದಿಂದ ತೆಗೆಯಲಾಗಿದೆ ಎಂದುಕೊಂಡು, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಇನ್ನು ಬೇಸರದಿಂದಾಗಿ ಈಗಿನ ಸ್ನೇಹಿತರಿಂದ ದೂರ ಕೂಡ ಆಗದಿರಿ. ಏಕೆಂದರೆ ನಿಮ್ಮ ಸ್ನೇಹಿತರೇ ಹೊಸ ಅವಕಾಶಗಳ ಬಗ್ಗೆ ತಿಳಿಸುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಹೊಸದಾಗಿ ಸಣ್ಣ ಪ್ರಮಾಣದಲ್ಲಿಯಾದರೂ ಭೂಮಿ ಖರೀದಿಸುವುದಕ್ಕೆ ಮನಸ್ಸು ಮಾಡುವ ಸಾಧ್ಯತೆ ಇದೆ. ಇನ್ನು ಕೆಲವರು ಗುತ್ತಿಗೆ ಆಧಾರದಲ್ಲಿ ಭೂಮಿಯನ್ನು ಖರೀದಿಸಬಹುದು. ಇನ್ನು ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು. ಅದಕ್ಕೆ ಸಿದ್ಧತೆ ನಡೆಸಲಿದ್ದೀರಿ. ವೃತ್ತಿನಿರತರಿಗೆ ಅನಿರೀಕ್ಷಿತವಾಗಿ ಹೊಸ ಆದಾಯ ಮೂಲ ದೊರೆಯಲಿದೆ. ಆದರೆ ನಿಮಗೆ ಬರಬೇಕಾದ ಹಣವನ್ನು ಪಡೆಯುವುದಕ್ಕೆ ಹೆಚ್ಚಿನ ಪರಿಶ್ರಮವನ್ನು ಹಾಕಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್ ತೆಗೆದುಕೊಳ್ಳುವ ಇಚ್ಛೆಯಿದ್ದಲ್ಲಿ ಸರಿಯಾಗಿ ವಿಚಾರಿಸಿ, ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಂಡು ನಿರ್ಧಾರವನ್ನು ತೆಗೆದುಕೊಳ್ಳಿ. ಇನ್ನು ಮಹಿಳೆಯರು ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಹಣಕಾಸಿನ ಹೂಡಿಕೆ, ಈ ಹಿಂದೆ ನೀವು ಮಾಡಿಕೊಂಡಿರುವ ಸಾಲ ಹಾಗೂ ತಿಂಗಳಾ ತಿಂಗಳು ಕಟ್ಟುತ್ತಿರುವ ಬಡ್ಡಿ ಇಂಥದ್ದನ್ನೆಲ್ಲ ಲೆಕ್ಕ ಹಾಕಿಕೊಳ್ಳಲಿದ್ದೀರಿ. ಆಪ್ತರು, ಸ್ನೇಹಿತರು, ಸಂಬಂಧಿಗಳ ಮದುವೆಗಾಗಿ ಪ್ರಯಾಣ ಮಾಡಬೇಕಾಗುತ್ತದೆ. ಕೊನೆ ಕ್ಷಣದ ತನಕ ಕೆಲಸ ಮಾಡದೆ ಹಾಗೇ ಉಳಿಸಿಕೊಂಡು ಬಂದಿದ್ದು ಡೆಡ್ ಲೈನ್ ಹತ್ತಿರ ಬರುತ್ತಿದ್ದಂತೆ ಒತ್ತಡ ಹೆಚ್ಚಾಗುವಂತೆ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಶೀಘ್ರವಾಗಿ ಕೆಲಸಗಳನ್ನು ಮುಗಿಸಿಕೊಳ್ಳಿ. ಕೃಷಿ ವೃತ್ತಿಯಲ್ಲಿ ಇರುವವರಿಗೆ ನಿಮ್ಮದೇ ಕ್ಷೇತ್ರದಲ್ಲಿ ಇರುವ ಇತರರ ಸಹಾಯ ಬೇಕಾಗುತ್ತದೆ. ಸಾಲದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತಿದೆ. ನೀವಾಗಿಯೇ ಕೆಲವು ಕೆಲಸಗಳನ್ನು ಮೈ ಮೇಲೆ ಹಾಕಿಕೊಂಡು, ಕುಟುಂಬದವರ ಸಲುವಾಗಿ ಹೆಚ್ಚಿನ ಸಮಯ ಮೀಸಲಿಡುವುದು ಕಷ್ಟ ಆಗಲಿದೆ. ಚಾರ್ಟರ್ಡ್ ಅಕೌಂಟೆಂಟ್, ವಕೀಲರು, ದಂತ ವೈದ್ಯರು ಹೀಗೆ ವೃತ್ತಿನಿರತರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ದಾರಿ ಗೋಚರ ಆಗಲಿದೆ. ಸ್ನೇಹಿತರು- ಸಂಬಂಧಿಗಳ ಮೂಲಕವಾಗಿ ಹೊಸ ಕ್ಲೈಂಟ್ ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಹೊಸ ಬಟ್ಟೆ, ವಾಹನ, ಕನಿಷ್ಠ ಬೆಳ್ಳಿಯ ವಸ್ತುಗಳನ್ನಾದರೂ ಖರೀದಿ ಮಾಡುವಂಥ ಯೋಗ ಇದೆ. ಸಂಘಟನೆಯಲ್ಲಿ ತೊಡಗಿರುವಂಥ ಮಹಿಳೆಯರಿಗೆ ಬಿಡುವೇ ಆಗದಷ್ಟು ಕೆಲಸಗಳು ಮೈ ಮೇಲೆ ಬರಲಿವೆ. ಸೋದರ ಸಂಬಂಧಿಗಳು ನಿಮ್ಮಿಂದ ಹಣದ ಹೊರತಾದ ಸಹಾಯವನ್ನು ಕೇಳಿಕೊಂಡು ಬರುವ ಸಾಧ್ಯತೆಗಳು ಹೆಚ್ಚಿವೆ.