Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 2ರಿಂದ 8ರ ತನಕ ವಾರಭವಿಷ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 02, 2023 | 1:10 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 2ರಿಂದ 8ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 2ರಿಂದ 8ರ ತನಕ ವಾರಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 2ರಿಂದ 8ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹೆಚ್ಚಿನ ಮೊತ್ತ ಅಂತಲೋ ಅಥವಾ ಈಗಿನ ಪರಿಸ್ಥಿತಿಗೆ ಅಗತ್ಯ ಎಂಬ ಕಾರಣಕ್ಕೆ ಯಾವುದಾದರೂ ಕಷ್ಟಸಾಧ್ಯವಾದ ಕೆಲಸವನ್ನು ಒಪ್ಪಿಕೊಂಡು, ಅದನ್ನು ಪೂರ್ಣಗೊಳಿಸುವುದಕ್ಕೆ ಭಾರೀ ಶ್ರಮ ಪಡಬೇಕಾಗುತ್ತದೆ. ನಿಮ್ಮ ಬಳಿ ಇರುವ ಸಮಯ, ಆಗುವ ಕೆಲಸದ ಪ್ರಮಾಣ ಇವೆಲ್ಲವನ್ನೂ ಸರಿಯಾಗಿ ಲೆಕ್ಕ ಹಾಕಿಕೊಂಡ ನಂತರವೇ ನಿಮ್ಮ ತೀರ್ಮಾನವನ್ನು ಕೈಗೊಳ್ಳಿ. ವಾಹನದ ಖರೀದಿ ಮಾಡಬೇಕು ಎಂದು ಕೂಡಿಟ್ಟಿದ್ದ ಹಣವನ್ನು ಇತರ ಉದ್ದೇಶಗಳಿಗೆ ಬಳಸಬೇಕಾದ ಸನ್ನಿವೇಶ ಎದುರಾಗಲಿದೆ. ಕುಟುಂಬಸ್ಥರು ಒಂದು ವೇಳೆ ಸಲಹೆ ನೀಡುವುದಕ್ಕೆ ಮುಂದಾದಲ್ಲಿ ಗಮನವಿಟ್ಟು ಕೇಳಿಸಿಕೊಳ್ಳಿ. ನಿಮ್ಮ ಸಮಸ್ಯೆಗೆ ಪರಿಹಾರ ದೊರೆತೀತು. ಕೃಷಿಕರಾಗಿದ್ದಲ್ಲಿ ಈಗ ಬೆಳೆಯುತ್ತಿರುವ ಬೆಳೆಯಿಂದ ಬೇರೆಯದಕ್ಕೆ ಬದಲಾಯಿಸಬೇಕು ಎಂದು ಆಲೋಚನೆ ಮೂಡಲಿದೆ. ಈ ವಿಚಾರವಾಗಿ ಆಪ್ತರು, ಸ್ನೇಹಿತರು, ಕುಟುಂಬಸ್ಥರ ಜತೆಗೆ ಮಾತುಕತೆಯನ್ನು ನಡೆಸಲಿದ್ದೀರಿ. ಸರ್ಕಾರಿ ಯೋಜನೆಗಳಿಂದ ಹಣ ಬರಬಹುದು ಎಂಬ ನಿರೀಕ್ಷೆಯಲ್ಲಿ ಇರುವವರಿಗೆ ನಿರಾಸೆ ಕಾಡುವಂಥ ಸಾಧ್ಯತೆಯಿದೆ. ಕೆಲಸಗಳು ಪೂರ್ತಿ ಆಗುವ ಮುನ್ನವೇ ಎಲ್ಲರೆದುರು ಹೇಳಿಕೊಂಡು ಬಾರದಿರಿ. ವೃತ್ತಿನಿರತರು ಸೇವಾ ಶುಲ್ಕ ಹೆಚ್ಚು ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ವಿದ್ಯಾರ್ಥಿಗಳು ಸ್ನೇಹಿತರ ಸಲುವಾಗಿ ಸಮಯ, ಹಣವನ್ನು ಮೀಸಲಿಡಲಿದ್ದೀರಿ. ಮೊಳಕೈ ಅಥವಾ ಕಾಲಿನ ಮೀನ ಖಂಡಕ್ಕೆ ಸಣ್ಣ ಮಟ್ಟದಲ್ಲಾದರೂ ನೋವು ಅಥವಾ ಅಪಘಾತ ಆಗುವಂಥ ಯೋಗ ಇದ್ದು, ಜಾಗ್ರತೆ ವಹಿಸುವುದು ಮುಖ್ಯವಾಗುತ್ತದೆ. ವಿವಾಹಿತ ಮಹಿಳೆಯರಿಗೆ ಸಂಗಾತಿ ಜತೆಗೆ ವಾಗ್ವಾದ, ಭಿನ್ನಾಭಿಪ್ರಾಯ ಏರ್ಪಡುವಂಥ ಸಾಧ್ಯತೆ ಇದೆ. ವೈದ್ಯಕೀಯ ಚಿಕಿತ್ಸೆಗಾಗಿ ಹಣ ಖರ್ಚಾಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ವ್ಯಕ್ತಿಗೆ ಯಾಕಾದರೂ ಮಾತು ಕೊಟ್ಟೆ ಎಂದೆನಿಸುವಂತೆ ಬೆನ್ನು ಬೀಳುವ ಆಸಾಮಿಯಿಂದ ರೇಜಿಗೆ ಆಗುತ್ತದೆ. ಸಂಬಂಧಿಕರು ಆಹ್ವಾನಿಸಿದ ಕಾರ್ಯಕ್ರಮದಲ್ಲಿ ನೀವು ಭಾಗೀ ಆಗುವುದಕ್ಕೆ ಸಾಧ್ಯವಾಗದೆ ಟೀಕೆ- ಆಕ್ಷೇಪಗಳನ್ನು ಕೇಳಿಸಿಕೊಳ್ಳ ಬೇಕಾಗುತ್ತದೆ. ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವವರು ಕೆಲಸದಲ್ಲಿ ಆಗುವ ಪ್ರಗತಿಯಿಂದ ಸಂತೋಷವನ್ಬು ಪಡಲಿದ್ದೀರಿ. ಈಗಾಗಲೇ ವ್ಯವಹಾರ ನಡೆಸುತ್ತಿರುವ ವ್ಯಕ್ತಿ ಹೊಸ ಆಫರ್ ನೊಂದಿಗೆ ಬರಬಹುದು. ಮೇಲುನೋಟಕ್ಕೆ ಆಕರ್ಷಣೀಯವಾಗಿ ಕಂಡರೂ ಪೂರ್ವಾಪರವಾಗಿ ಆಲೋಚಿಸದೆ ಏನನ್ನೂ ಹೇಳದಿರಿ. ನಿಮ್ಮೆದುರು ಹೊಗಳುವಂಥವರ ಇರಾದೆಗಳನ್ನು ಸರಿಯಾಗಿ ಗುರುತಿಸುವುದು ಮುಖ್ಯ. ಕೃಷಿಕರಾಗಿ ಇರುವಂಥವರಿಗೆ ಖರ್ಚಿನ ಪ್ರಮಾಣ ಜಾಸ್ತಿ ಆಗಲಿದೆ. ಇದೇ ವೇಳೆ ನಿಮ್ಮಲ್ಲಿ ಕೆಲವರು ಸಾಲ ಮಾಡಬೇಕಾದ ಸಂದರ್ಭಗಳು ಕೂಡ ಸೃಷ್ಟಿ ಆಗಲಿವೆ. ಚಿನ್ನ ಅಡಮಾನ ಮಾಡಬಹುದು ಅಥವಾ ಕೈ ಸಾಲ ಪಡೆಯುವಂಥ ಸಾಧ್ಯತೆಗಳು ಇವೆ. ನಿಮ್ಮ ಇಲ್ಲಿಯ ತನಕದ ನಿರ್ಧಾರಗಳ ಬಗ್ಗೆ ಮನೆಯಲ್ಲಿ ಪ್ರಶ್ನೆಗಳು ಎದುರಾಗಲಿವೆ. ಕೆಲವರು ಅಸಮಾಧಾನ ಕೂಡ ವ್ಯಕ್ತಪಡಿಸಲಿದ್ದಾರೆ. ವೃತ್ತಿನಿರತರು ಅತಿಯಾದ ಆತ್ಮವಿಶ್ವಾಸದಿಂದ ಆಡಿದ ಮಾತುಗಳಿಗಾಗಿ ಈಗ ಪರಿತಪಿಸುವಂತೆ ಆಗುತ್ತದೆ. ಮೊದಲು ಮಾತನ್ನು ಕಡಿಮೆ ಮಾಡಬೇಕು ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಬೇಕು ಎಂದು ಆಲೋಚಿಸುವ, ಅದಕ್ಕಾಗಿ ಪ್ರಯತ್ನಿಸುವ ಯೋಗ ಇದೆ. ಉದ್ಯೋಗಸ್ಥ ಮಹಿಳೆಯರಿಗೆ ಹೊಸ ಕಡೆಗೆ ಅವಕಾಶ ಹುಡುಕಿಕೊಂಡು ಬರಲಿವೆ. ನಿಮ್ಮಲ್ಲಿ ಕೆಲವರು ಬೆಟ್ಟ- ಗುಡ್ಡ ಪ್ರದೇಶಗಳಿಗೆ ಪ್ರವಾಸಕ್ಕೆ ತೆರಳುವಂಥ ಯೋಗ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ದೀರ್ಘಾವಧಿಗೆ ಆದಾಯ ತರಬಲ್ಲಂಥ ಮೂಲವೊಂದು ತೆರೆದುಕೊಳ್ಳಲಿದೆ. ಅವಿವಾಹಿತರಿದ್ದಲ್ಲಿ ನಿಮ್ಮದೇ ವೃತ್ತಿಯಲ್ಲಿ ಇರುವ ಅಥವಾ ನೀವು ಉದ್ಯೋಗ ಮಾಡುವ ಸ್ಥಳದಲ್ಲೇ ಇರುವ ವ್ಯಕ್ತಿ ಜತೆಗೆ ಪ್ರೀತಿ ಮೂಡುವಂಥ ಯೋಗ ಇದೆ. ಉತ್ಪಾದನಾ ವಲಯದಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಬೇರೆ ಇಲಾಖೆಯ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಬಹುದು. ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗುವಂಥ ಸಾಧ್ಯತೆ ಇದೆ. ಮನೆಯಲ್ಲಿ ದೇವತಾ ಕಾರ್ಯಗಳನ್ನು ಆಯೋಜಿಸಲಿದ್ದೀರಿ. ಹಳೇ ಹೂಡಿಕೆಯಿಂದ ಹಣವನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಮಾಡಲಿದ್ದೀರಿ. ಮದುವೆ ಮಂಟಪ, ರೆಸಾರ್ಟ್ ಇತ್ಯಾದಿಗಳನ್ನು ನಡೆಸುವಂಥವರಿಗೆ ಉತ್ತಮ ಸಮಯ ಇದಾಗಿರಲಿದೆ. ಕೃಷಿಕರಾಗಿದ್ದಲ್ಲಿ ಆದಾಯ ಮೂಲವನ್ನು ಜಾಸ್ತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿಸ್ತರಣೆಗೆ ಮುಂದಾಗಲಿದ್ದೀರಿ. ಮನೆಗೆ ಅಗತ್ಯ ಇರುವಂಥ ವಸ್ತುಗಳನ್ನು ತರುವ ವಿಚಾರವಾಗಿ ಅಭಿಪ್ರಾಯ ಭೇದಗಳು ಕಂಡುಬರಬಹುದು. ಏನನ್ನಾದರೂ ಮಾತು ನೀಡುವ ಮುಂಚೆ ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸಾಧ್ಯವಾ ಎಂಬುದನ್ನು ಆಲೋಚನೆ ಮಾಡುವುದು ಒಳ್ಳೆಯದು. ವೃತ್ತಿನಿರತರು ಸೈಟು ಖರೀದಿಯನ್ನೋ ಅಥವಾ ಕಚೇರಿಗೆ ಬೇಕಾದಂಥ ಸ್ಥಳವನ್ನು ಭೋಗ್ಯಕ್ಕೆ ಪಡೆಯುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಹಣಕಾಸು ಹೊಂದಿಸುವ ನಿಟ್ಟಿನಲ್ಲಿ ಹೆಚ್ಚಿನ ಸಮಯ ಹೋಗಲಿದೆ. ವಿದ್ಯಾರ್ಥಿಗಳ ಪೈಕಿ ಕೆಲವರು ಈಗಿಂದಲೇ ಆದಾಯ ಮೂಲವೊಂದನ್ನು ಹುಡುಕಿಕೊಳ್ಳಲಿದ್ದೀರಿ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇಂಟರ್ನ್ ಷಿಪ್ ಅವಕಾಶಗಳು ಸಹ ದೊರೆಯಲಿವೆ. ಯುವತಿಯರು ವಿವಾಹ ವಯಸ್ಕರಾಗಿದ್ದಲ್ಲಿ ಮದುವೆಗಾಗಿ ಪ್ರಯತ್ನಿಸುತ್ತಿದ್ದಲ್ಲಿ ವಿಳಂಬ ಆಗಲಿದೆ. ಅಥವಾ ನೀವೇ ಕೆಲ ಕಾಲ ಪ್ರಯತ್ನವನ್ನು ಮುಂದೂಡುವಂಥ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಬಹಳ ಆಪ್ತರಾಗಿರುವಂಥವರೇ ನಿಮ್ಮ ಬಗ್ಗೆ ಅಸಮಾಧಾನ ವ್ಯಕ್ತಪಡಿಸಬಹುದು. ಮುಖ್ಯವಾಗಿ ಒಂದೇ ವೃತ್ತಿಯಲ್ಲಿ ಇರುವವರು, ಒಂದೇ ಕಡೆಯಲ್ಲಿ ಕೆಲಸ ಮಾಡುತ್ತಿರುವವರ ಮಧ್ಯೆ ಸಣ್ಣ ಮಟ್ಟದಲ್ಲಾದರೂ ಅಭಿಪ್ರಾಯ ಭೇದ, ವೈಮನಸ್ಯ ಕಾಣಿಸಿಕೊಳ್ಳಬಹುದು. ಇತರರ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಪದಗಳ ಆಯ್ಕೆಯನ್ನು ಸರಿಯಾಗಿ ಮಾಡಿಕೊಳ್ಳಿ. ತಮಾಷೆಗೆ ಮಾತನಾಡುವಂಥ ಸಂದರ್ಭದಲ್ಲೂ ಅದರ ಪರಿಣಾಮ ಏನಾಗಬಹುದು ಎಂಬ ಬಗ್ಗೆ ಎಚ್ಚರಿಕೆಯೊಂದು ಇರಲಿ. ಮನೆಯನ್ನು ಹೊಸದಾಗಿ ಕಟ್ಟಿದ್ದು, ಪೀಠೋಪಕರಣದ ಕೆಲಸಗಳನ್ನು ಮಾಡಿಸುವ ಹಂತದಲ್ಲಿ ಇರುವಂಥವರು ಖರ್ಚಿನ ಬಗ್ಗೆ ಹಿಡಿತ ಸಾಧಿಸುವುದು ಮುಖ್ಯ. ಕೃಷಿಕರಾಗಿ ಇರುವವರಿಗೆ ಭವಿಷ್ಯದ ಬಗ್ಗೆ ಗೊಂದಲ ಸೃಷ್ಟಿಯಾಗಲಿದೆ. ಇಷ್ಟು ಸಮಯ ಅಂದುಕೊಂಡಿದ್ದ ಕೆಲಸವನ್ನು ಬಿಟ್ಟು ಬೇರೆಯದನ್ನು ಆರಂಭಿಸುವಂಥ ಸಾಧ್ಯತೆ ಇದೆ. ಇತರರ ಮಾತು, ಸಲಹೆ, ಸೂಚನೆಗಳನ್ನು ಕೇಳಿಸಿಕೊಂಡು, ಜಾರಿಗೆ ತರುವ ಮುಂಚಿತವಾಗಿ ಅದರ ಸಾಧಕ- ಬಾಧಕಗಳ ಬಗ್ಗೆ ಒಂದಕ್ಕೆ ನಾಲ್ಕು ಸಲ ಆಲೋಚನೆ ಮಾಡುವುದು ಮುಖ್ಯವಾಗುತ್ತದೆ. ವೃತ್ತಿನಿರತರಿಗೆ ಜತೆಯಲ್ಲಿ ಅಥವಾ ಕೈ ಕೆಳಗೆ ಕೆಲಸ ಮಾಡುವಂಥವರ ಬಗ್ಗೆ ವಿವಿಧ ಕಾರಣಗಳಿಗಾಗಿ ಅನುಮಾನ ಮೂಡಲಿದೆ. ಅನಿರೀಕ್ಷಿತವಾಗಿ ಕೆಲವು ದುಬಾರಿ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದಕ್ಕಾಗಿ ಸಾಲ ಪಡೆದುಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಕಷ್ಟ ಎನಿಸಿದ ವಿಷಯವನ್ನು ಬೋಧಿಸುವುದಕ್ಕೆ ಸೂಕ್ತ ಉಪನ್ಯಾಸಕರು ದೊರೆಯಲಿದ್ದಾರೆ. ಗೃಹಿಣಿಯರಾಗಿದ್ದಲ್ಲಿ, ಒಂದು ವೇಳೆ ಸೋಷಿಯಲ್ ಮೀಡಿಯಾ ಹೆಚ್ಚಿಗೆ ಬಳಸುತ್ತಿದ್ದೀರಿ ಎಂದಾದಲ್ಲಿ ಅಪರಿಚಿತರ ಬಗ್ಗೆ ಎಚ್ಚರಿಕೆಯನ್ನು ವಹಿಸುವುದು ಮುಖ್ಯವಾಗುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಾನು ಹೀಗೆ ಮಾತನಾಡಬಾರದಿತ್ತು ಎಂದು ಹಲವು ಸಲ, ವಿವಿಧ ವಿಚಾರಗಳಿಗೆ ನಿಮಗೆ ಅನಿಸಲಿದೆ. ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವಂಥವರಿಗೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ಮೊದಮೊದಲಿಗೆ ಎಂಬಂತೆ ಆರಂಭಿಸಿದ ಕೆಲಸಗಳಿಗೆ ಹೆಚ್ಚು ಸಮಯ ನೀಡಬೇಕಾದ ಸ್ಥಿತಿ ಏರ್ಪಡುವುದರಿಂದ ಮನೆಯಲ್ಲಿ ನಡೆಯಬೇಕಾದ ಮುಖ್ಯ ಕಾರ್ಯಕ್ರಮಕ್ಕೆ ಹೆಚ್ಚು ಸಮಯ ನೀಡುವುದಕ್ಕೆ ಸಾಧ್ಯವಾಗದೇ ಹೋಗಬಹುದು. ವಿದೇಶಗಳಲ್ಲಿ ಉದ್ಯೋಗ ಅಥವಾ ವ್ಯಾಸಂಗ ಮಾಡುತ್ತಿರುವವರು ಸ್ನೇಹಿತರ ಹಿನ್ನೆಲೆ ಹಾಗೂ ಅವರ ಸ್ವಭಾವವನ್ನು ಸರಿಯಾಗಿ ವಿಶ್ಲೇಷಿಸುವುದು ಬಹಳ ಮುಖ್ಯವಾಗುತ್ತದೆ. ಕೃಷಿಕರಾಗಿದ್ದಲ್ಲಿ ಹಣಕಾಸು ಲೆಕ್ಕಾಚಾರಗಳು ನೀವಂದುಕೊಂಡಿದ್ದಕ್ಕಿಂತ ಕೈ ಮೀರಿ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಒಂದಕ್ಕೆ ನಾಲ್ಕು ಬಾರಿ ಎಂಬಂತೆ ವಿಚಾರಿಸಿ, ಮುಂದುವರಿಯುವುದು ಉತ್ತಮ. ಕೃಷಿ ಕಾರ್ಮಿಕರಾಗಿ ಇರುವಂಥವರಾಗಿದ್ದಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಭೂಮಿಯನ್ನು ಖರೀದಿಸುವ ಅಥವಾ ಗುತ್ತಿಗೆಗೆ ಪಡೆಯುವಂಥ ಯೋಗಗಳಿವೆ. ಈ ಬೆಳವಣಿಗೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿನಿರತರಾಗಿದ್ದು, ಹಣಕಾಸು ವಿಚಾರದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೀರಿ ಅಂತಾದಲ್ಲಿ ನಿಮ್ಮ ಸಮಯಪ್ರಜ್ಞೆಯಿಂದ ದೊಡ್ಡ ಮೊತ್ತ ನಷ್ಟವಾಗುತ್ತಿದ್ದುದನ್ನು ತಪ್ಪಿಸಲಿದ್ದೀರಿ. ಇನ್ನು ಸ್ವಂತ ಕಚೇರಿಯನ್ನು ನಡೆಸುತ್ತಿರುವವರಿದ್ದಲ್ಲಿ ಹೊಸ ಶಾಖಾ ಕಚೇರಿಯನ್ನು ಆರಂಭಿಸುವಂಥ ಯೋಗ ಇದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡುವಂಥ ಯೋಗಗಳಿವೆ. ಮಹಿಳೆಯರು ಗಾಸಿಪ್ ಮಾತನಾಡಬೇಡಿ. ಇದರಿಂದ ನಿಮ್ಮ ಬಗ್ಗೆಯೇ ಇತರರು ಕೆಟ್ಟದಾಗಿ ಮಾತನಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಸಂಯಮ, ತಾಳ್ಮೆ, ಆಲೋಚನೆಯ ನಿರ್ಧಾರ ಇವುಗಳು ಈ ವಾರ ನಿಮ್ಮನ್ನು ಕಾಪಾಡಲಿವೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುತ್ತೀರೋ ಅಥವಾ ಅಪಾರ್ಟ್ ಮೆಂಟ್ ಕೊಳ್ಳುವುದಕ್ಕೆ ಮುಂದಾಗುತ್ತೀರೋ ಏನೇ ಆದರೂ ಮೇಲುನೋಟದ ಅಂದಚಂದಕ್ಕೆ ಮಾರುಹೋಗದಿರಿ. ನೀವು ಖರೀದಿಸುವುದಕ್ಕೆ ಬೇಕಾದ ಎಲ್ಲ ಒತ್ತಡವೂ ಬೀಳಲಿದೆ. ಆದರೆ ಆ ಕಾರಣಕ್ಕೆ ಪಿಗ್ಗಿ ಬೀಳದಿರಿ. ಚಾಟ್ಸ್, ಉತ್ತರ ಭಾರತೀಯ ತಿನಿಸುಗಳು, ಚೈನೀಸ್ ಆಹಾರಗಳ ಮಾರಾಟ ಮಾಡುವಂಥವರಾಗಿದ್ದಲ್ಲಿ ವ್ಯವಹಾರವನ್ನು ವಿಸ್ತರಣೆ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಸಣ್ಣ ನಿರ್ಧಾರವೊಂದು ದೊಡ್ಡ ರೀತಿಯಲ್ಲಿ ನಿಮಗೆ ಲಾಭವನ್ನು ತರಲಿದೆ. ಕೃಷಿಕರಾಗಿದ್ದಲ್ಲಿ ಅಧ್ಯಯನ ಪ್ರವಾಸಕ್ಕೆ ತೆರಳುವಂಥ ಸಾಧ್ಯತೆ ಇದೆ. ಇನ್ನು ಸಾವಯವ ಕೃಷಿ ಮಾಡುತ್ತಿದ್ದಲ್ಲಿ ಪ್ರತಿಷ್ಠಿತ ಕಂಪನಿಗಳಿಂದ ಕೃಷಿ ಉತ್ಪನ್ನಗಳ ಖರೀದಿಗಾಗಿ ಆಫರ್ ಬರುವಂಥ ಯೋಗ ಇದೆ. ಇದಕ್ಕೆ ಸಂಬಂಧಿಸಿದ ಅಗತ್ಯ ಇರುವಂಥ ಮೂಲ ಸೌಕರ್ಯಗಳು, ನಿಯಮಾವಳಿಗಳ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೀರಿ. ವೃತ್ತಿನಿರತರಿಗೆ ತಮ್ಮ ಈಗಿನ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಬಗ್ಗೆ ನಿರ್ಧಾರವನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ. ಅಕೌಂಟೆಂಟ್, ವಕೀಲರಾಗಿ ಇರುವವರಿಗೆ ಆದಾಯ ಹೆಚ್ಚಾಗುವುದಕ್ಕೆ ದಾರಿಗಳು ಗೋಚರ ಆಗಲಿವೆ. ವಿದ್ಯಾರ್ಥಿಗಳು ವ್ಯಾಸಂಗದ ಸಲುವಾಗಿ ಬ್ಯಾಂಕ್ ಲೋನ್ ಗೆ ಅಪ್ಲೈ ಮಾಡಿದ್ದಲ್ಲಿ ಅದು ದೊರೆಯಲಿದೆ. ಈ ಕ್ಷೇತ್ರದಲ್ಲಿ ಪರಿಣತರಾದವರ ಮಾರ್ಗದರ್ಶನದಿಂದಲೂ ಅನುಕೂಲ ಆಗಲಿದೆ. ಮಹಿಳೆಯರು ಪ್ರಯಾಣ ಮಾಡುವಾಗ ಬೆಲೆ ಬಾಳುವ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳುವ ಕಡೆಗೆ ನಿಗಾ ಮಾಡುವುದು ಮುಖ್ಯ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಕುಟುಂಬ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳಲಿವೆ. ಹೆಲ್ತ್ ಇನ್ಷೂರೆನ್ಸ್, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಹೂಡಿಕೆ ವಿಚಾರವಾಗಿ ಕುಟುಂಬದಲ್ಲಿ ಚರ್ಚೆ ನಡೆಯಲಿದೆ. ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿರುವವರು, ಮಾಧ್ಯಮಗಳಲ್ಲಿ ಇರುವಂಥವರು, ಬಟ್ಟೆ- ಮೊಬೈಲ್ ಫೋನ್ ಗಳ ಮಾರಾಟ ಮಾಡುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ. ಕಮಿಷನ್ ಮೂಲಕ ಆದಾಯ ಬರುತ್ತಿರುವವರಿಗೆ ಇಳಿಕೆ ಆಗಿ, ಭವಿಷ್ಯದ ಬಗ್ಗೆ ಆತಂಕ ಎದುರಾಗಲಿದೆ. ಮನೆ ಅಥವಾ ಸೈಟು ಮಾರಾಟ ಮಾಡುವುದಕ್ಕೆ ಪ್ರಯತ್ನಿಸುತ್ತಿರುವವರಿಗೆ ಅಂದುಕೊಂಡಂತೆ ಏನೂ ಆಗುತ್ತಿಲ್ಲ ಎನಿಸುವುದಕ್ಕೆ ಶುರು ಆಗುತ್ತದೆ. ಕೃಷಿಕರಿಗೆ ಹೊಸ ವಾಹನ ಅಥವಾ ಕೆಲಸಕ್ಕೆ ಅಗತ್ಯ ಇರುವಂಥ ಸಲಕರಣೆಗಳನ್ನು ಖರೀದಿಸುವಂಥ ಯೋಗ ಇದೆ. ಇದಕ್ಕಾಗಿ ಬ್ಯಾಂಕ್ ನಿಂದ ಸಾಲಕ್ಕೆ ಪ್ರಯತ್ನಿಸಿದಲ್ಲಿ ಸುಲಭವಾಗಿ ದೊರೆಯಲಿದೆ. ಸ್ನೇಹಿತರು- ಸಂಬಂಧಿಕರು ದೇವತಾಕಾರ್ಯಗಳಿಗಾಗಿ ಅಥವಾ ತಮ್ಮ ಮನೆಯ ಕಾರ್ಯಕ್ರಮಗಳಿಗಾಗಿ ಆಹ್ವಾನ ನೀಡಲಿದ್ದಾರೆ. ಇದರಲ್ಲಿ ಭಾಗೀ ಆಗುವುದರಿಂದ ನಿಮಗೆ ಹೊಸ ಸ್ನೇಹಿತರು ದೊರೆಯಲಿದ್ದು, ಭವಿಷ್ಯದಲ್ಲಿ ಅನುಕೂಲಗಳು ಒದಗಿಬರಲಿವೆ. ವೃತ್ತಿನಿರತರಿಗೆ ಸ್ಪರ್ಧೆ ಹೆಚ್ಚಾಗಲಿದ್ದು, ಇದನ್ನು ಎದುರಿಸುವ ಸಲುವಾಗಿ ಏನೇನು ಮಾಡಬೇಕು ಎಂಬ ಬಗ್ಗೆ ಯೋಜನೆಯನ್ನು ರೂಪಿಸಲಿದ್ದೀರಿ. ಮನೆ ನಿರ್ಮಾಣ ಅಥವಾ ದುರಸ್ತಿ ಕೆಲಸಗಳನ್ನು ಮಾಡಿಸುತ್ತಿರುವವರಿಗೆ ಹಣವನ್ನು ಹೊಂದಿಸುವುದು ಪ್ರಮುಖ ಆದ್ಯತೆ ಆಗಲಿದ್ದು, ಒಟ್ಟಾರೆಯಾಗಿ ಬಿಡುವಿಲ್ಲದಷ್ಟು ಕೆಲಸಗಳು ಬೀಳಲಿವೆ. ವಿದ್ಯಾರ್ಥಿಗಳಿಗೆ ಕಣ್ಣಿಗೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆ ಕಾಡಲಿದ್ದು, ಪಾಠ- ಪ್ರವಚನಗಳನ್ನು ತಪ್ಪಿಸಿಕೊಳ್ಳುವಂತಾಗುತ್ತದೆ. ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಇತ್ಯರ್ಥ ಆಗುವ ಯೋಗ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಸಾಧನೆಗೆ ಇತರರು ಹೊಟ್ಟೆಕಿಚ್ಚು ಪಡುವಂತೆ ಆಗುತ್ತದೆ. ಉದ್ಯಮ- ವ್ಯವಹಾರಗಳನ್ನು ಮಾಡುತ್ತಿರುವವರು ತಮ್ಮ ಮಾತಿನ ಮೂಲಕ ಹಣದ ಹರಿವನ್ನು ಹೆಚ್ಚು ಮಾಡಿಕೊಳ್ಳುವಂಥ ಯೋಗ ಇದೆ. ನವ ದಂಪತಿಗೆ ವಿದೇಶ ಪ್ರಯಾಣ ಅಥವಾ ಸಮುದ್ರ ಇರುವಂಥ, ಬೆಟ್ಟಗಳಿರುವಂಥ ಪ್ರದೇಶಗಳಿಗೆ ತೆರಳುವಂಥ ಯೋಗ ಇದೆ. ನಿಮಗೆ ಬರಬೇಕಾದ ಬಾಕಿ ಇದ್ದಲ್ಲಿ ಗಟ್ಟಿಯಾಗಿ ಪ್ರಯತ್ನಿಸಿದರೆ ಅದು ಬರುವಂಥ ಯೋಗ ಇದೆ. ಬ್ಯಾಂಕ್, ಲೇವಾದೇವಿ ಸಂಸ್ಥೆಗಳಲ್ಲಿ, ವಾಹನಗಳಿಗೆ ಸಾಲ ಒದಗಿಸುವಂಥ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮುಗಿಸುವ ಮೂಲಕ ಮೇಲಧಿಕಾರಿಗಳಿಂದ ಮೆಚ್ಚುಗೆ ಮಾತುಗಳನ್ನು ಕೇಳಿಸಿಕೊಳ್ಳಲಿದ್ದೀರಿ. ಕೃಷಿಕರಿಗೆ ಈಗಾಗಲೇ ಅರ್ಧ ಮುಗಿದಿರುವ ಕೆಲಸಗಳನ್ನು ಮತ್ತೆ ಮೊದಲಿಂದ ಮಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಇತರರನ್ನು ನಂಬಿ, ಕೆಲಸ ಒಪ್ಪಿಸುತ್ತಿದ್ದೀರಿ ಎಂದಾದಲ್ಲಿ ಸರಿಯಾಗಿ ಫಾಲೋ ಅಪ್ ಮಾಡುವ ಕಡೆಗೆ ಲಕ್ಷ್ಯ ಇರಲಿ. ವೃತ್ತಿನಿರತರು ಕೆಲಸ- ಕಾರ್ಯದ ನಿಮಿತ್ತವಾಗಿ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ. ಅಲ್ಲಿ ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಅಂತ ಮಾಡಲಿಕ್ಕೆ ಆಗದಿರಬಹುದು. ಒಂದು ವೇಳೆ ಮಧುಮೇಹ, ರಕ್ತದೊತ್ತಡದಂಥ ಸಮಸ್ಯೆಗಳು ಇದ್ದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳಿಗೆ ಗ್ಯಾಜೆಟ್ ಗಳನ್ನು ಖರೀದಿ ಮಾಡುವಂಥ ಯೋಗ ಇದ್ದು, ನಿಮ್ಮಲ್ಲಿ ಕೆಲವರಿಗೆ ಗಿಫ್ಟ್ ಆಗಿ ದೊರೆಯುವಂಥ ಸಾಧ್ಯತೆ ಇದೆ. ಮಹಿಳೆಯರಿಗೆ ಹಳೇ ಸ್ನೇಹಿತರನ್ನು ಭೇಟಿ ಆಗುವ ಯೋಗ ಇದೆ. ಇದರಿಂದ ಮನಸ್ಸಿಗೆ ಸಂತೋಷ ಆಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಮನೆಯಲ್ಲಿ ಹಿರಿಯರ ಅನಾರೋಗ್ಯವು ಆತಂಕಕ್ಕೆ ಕಾರಣ ಆಗಲಿದೆ. ಏಕ ಕಾಲಕ್ಕೆ ಹಲವು ಸವಾಲುಗಳು ಎದುರಾಗುವುದರಿಂದ ಒತ್ತಡಕ್ಕೆ ಗುರಿ ಆಗುತ್ತೀರಿ. ಉಳಿತಾಯ ಅಥವಾ ಹೂಡಿಕೆ ಮಾಡಿದ್ದ ಹಣವನ್ನು ತೆಗೆಯಬೇಕಾದಂಥ ಸನ್ನಿವೇಶ ಎದುರಾಗಲಿದೆ. ಮ್ಯಾಟ್ರಿಮೋನಿ ವೆಬ್ ಸೈಟ್ ಗಳ ಮೂಲಕ ವಧು/ವರಾನ್ವೇಷಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಹಿನ್ನಡೆ ಆಗುತ್ತದೆ. ಮಸಾಲೆಯುಕ್ತ ಪದಾರ್ಥಗಳ ಸೇವನೆ ಮಾಡುವುದರಿಂದ ದೂರ ಇದ್ದರೆ ಉತ್ತಮ. ನಿಮ್ಮ ಕೈಕೆಳಗೆ ಕೆಲಸ ಮಾಡುವವರಿಂದ ಹೇಗೆ ಕೆಲಸ ಮಾಡುವುದು ಎಂಬ ಬಗ್ಗೆ ಸರಿಯಾದ ಯೋಜನೆ ರೂಪಿಸುವುದು ಮುಖ್ಯವಾಗುತ್ತದೆ. ಕೃಷಿಕರು ಮನೆಗೆ ರಾಸು ಅಥವಾ ಸಾಕುಪ್ರಾಣಿಗಳನ್ನು ತರುವಂಥ ಯೋಗ ಇದೆ. ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಆದಾಯದಲ್ಲಿ ಆದಾಯದಲ್ಲಿ ಹೆಚ್ಚಳ ಆಗಲಿದೆ. ಸಂಘ- ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಸ್ಥಾನ- ಮಾನಗಳು ದೊರೆಯಲಿವೆ. ನಿಮ್ಮ ಪ್ರಭಾವಲಯ ವಿಸ್ತರಣೆ ಆಗುವಂಥ ಯೋಗ ಸಹ ಇದ್ದು, ಉನ್ನತ ಸ್ಥಾನದಲ್ಲಿ ಇರುವಂಥವರು ನಿಮ್ಮ ನೆರವಿಗೆ ಬರಲಿದ್ದಾರೆ. ವೃತ್ತಿ ನಿರತರು ತಂದೆ- ತಾಯಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಬೇಕಾಗುತ್ತದೆ. ಈಗಾಗಲೇ ಅಪ್ಲೈ ಮಾಡಿರುವಂಥ ನೋಂದಣಿ, ಪರವಾನಗಿಗಳು ಇದ್ದಲ್ಲಿ ಅದು ನಿಮ್ಮ ಕೈ ಸೇರಲಿದೆ. ವಿದ್ಯಾರ್ಥಿಗಳು ಪೋಷಕರ ಜತೆಗೆ ಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ಇದರಿಂದ ಬಾಂಧವ್ಯ ಗಟ್ಟಿ ಆಗಲಿದೆ. ವಿವಾಹಿತ ಮಹಿಳೆಯರು ತವರು ಮನೆಗೆ ತೆರಳುವಂಥ ಯೋಗ ಇದ್ದು, ಮನಸ್ಸಿಗೆ ಸಂತೋಷ ಆಗಲಿದೆ.