ನವದೆಹಲಿ: ಹವಾಮಾನ ಬದಲಾವಣೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ವಿವಿಧ ಸ್ತರಗಳಲ್ಲಿ ಕ್ರಮ ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಇದೀಗ 25 ವರ್ಷಕ್ಕಿಂತ ಹಳೆಯದಾದ ಆಯಿಲ್ ಟ್ಯಾಂಕರ್ ಹಡಗು (Oil Tanker Vessel) ಮತ್ತು ಬಲ್ಕ್ ಕ್ಯಾರಿಯರ್ ಹಡಗುಗಳನ್ನು (Bulk Carrier Ship) ನಿಷೇಧಿಸಿದೆ. ಈ ಹಳೆಯ ಹಡುಗುಗಳಿಂದ ಹೆಚ್ಚು ಮಾಲಿನ್ಯಕಾರಕ ಅನಿಲಗಳು ಹೊರಹೊಮ್ಮುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ, 20 ವರ್ಷಕ್ಕಿಂತ ಹಳೆಯ ಹಡಗುಗಳ ಖರೀದಿಗೂ ಕೇಂದ್ರ ತಡೆ ಹಾಕಿದೆ. ಹಳೆಯ ಆಯಿಲ್ ಟ್ಯಾಂಕರುಗಳ ಪಾಲನೆ ವಿಚಾರದಲ್ಲಿ ಒಂದಷ್ಟು ನಿಯಮಗಳನ್ನು ರೂಪಿಸಲಾಗಿದೆ. ಕಡಿಮೆ ಮಾಲಿನ್ಯಕಾರಕ ಹಡಗುಗಳ ತಯಾರಿಕೆಗೆ ಒತ್ತು ಕೊಡಲಾಗುತ್ತಿದೆ.
ಕೇಂದ್ರದ ಹಡಗು ಪ್ರಾಧಿಕಾರ ಹೊರಡಿಸಿದ ನಿಯಮಗಳ ಪ್ರಕಾರ 25 ವರ್ಷಕ್ಕಿಂತ ಹಳೆಯದಾದ ಆಯಿಲ್ ಟ್ಯಾಂಕರ್ ಮತ್ತು ಬಲ್ಕ್ ಕ್ಯಾರಿಯರ್ ಹಡಗುಗಳಿಗೆ ಟ್ರೇಡಿಂಗ್ ಲೈಸೆನ್ಸ್ ಅನ್ನು ಹಿಂಪಡೆಯಲಾಗಿದೆ. ಈಗ ಇರುವ ವ್ಯವಸ್ಥೆಯಲ್ಲಿ 25 ವರ್ಷಕ್ಕಿಂತ ಹೆಚ್ಚು ಹಳೆಯದಲ್ಲದ ಹಡಗುಗಳನ್ನು ಯಾವುದೇ ತಾಂತ್ರಿಕ ಕಟ್ಟುಪಾಡು ಇಲ್ಲದೇ ಖರೀದಿಸಬಹುದು. ಇನ್ಮುಂದೆ ಈ ನಿಯಮ ಬದಲಾಗಬಹುದು.
ಈಗ 25 ವರ್ಷಕ್ಕಿಂತ ಹಳೆಯ ಆಯಿಲ್ ಟ್ಯಾಂಕರ್ ಹಡಗು ಮತ್ತು ಬಲ್ಕ್ ಕ್ಯಾರಿಯರ್ ಹಡಗುಗಳನ್ನು ಬಳಸುವಂತಿಲ್ಲ. ಆದರೆ, ಈಗಾಗಲೇ ಭಾರತಕ್ಕೆ ಬಂದು ಹೋಗುತ್ತಿರುವ ಇಂಥವೇ ವಿದೇಶೀ ಹಡಗುಗಳಿಗೆ 3 ವರ್ಷದ ಕಾಲಾವಕಾಶ ಕೊಡಲಾಗಿದೆ. ಆ ಬಳಿಕ ವಿದೇಶದ ಯಾವ ಆಯಿಲ್ ಟ್ಯಾಂಕರ್ ವೆಸೆಲ್ ಅಥವಾ ಬಲ್ಕ್ ಕ್ಯಾರಿಯರ್ ಹಡಗಾಗಲೀ ಭಾರತಕ್ಕೆ ಬರುವಂತಿಲ್ಲ.
ಇದನ್ನೂ ಓದಿ: GDP: 3ನೇ ತ್ರೈಮಾಸಿಕದ ಜಿಡಿಪಿ ವರದಿ: ಡಿಸೆಂಬರ್ ಕ್ವಾರ್ಟರ್ನಲ್ಲಿ ಶೇ. 4.4ರ ದರಕ್ಕೆ ಸೀಮಿತಗೊಂಡ ಆರ್ಥಿಕತೆ
ಭಾರತದಲ್ಲಿರುವ ಹಲವು ಸರಕು ಸಾಗಣೆ ಹಡಗುಗಳು ಬೇರೆ ದೇಶಗಳಿಗೆ ಹೋಲಿಸಿದರೆ ಬಹಳ ಹಳತು ಎನ್ನಲಾಗಿದೆ. ಈ ಹಡಗುಗಳು ಹೆಚ್ಚು ಗ್ರೀನ್ ಹೌಸ್ ಗ್ಯಾಸ್ ಹೊರಹೊಮ್ಮಿಸುತ್ತವೆ. ಈಗ ಇವುಗಳನ್ನು ನಿಲ್ಲಿಸಿದ ಬಳಿಕ ಪರ್ಯಾಯವಾಗಿ ಹೊಸ ಹಡಗುಗಳು ಬೇಕಾಗುತ್ತದೆ. ಅದರನ್ನು ಭಾರತದಲ್ಲೇ ನಿರ್ಮಿಸುವುದಕ್ಕೆ ಆದ್ಯತೆ ಕೊಡಲಾಗುತ್ತಿದೆ. ಭಾರತದಲ್ಲಿ 35 ಹಡಗು ನಿರ್ಮಾಣ ಸಂಸ್ಥೆಗಳಿದ್ದು, ಕ್ಯಾಷ್ ಸಬ್ಸಿಡಿ, ತೆರಿಗೆ ಕಡಿತ ಇತ್ಯಾದಿ ಉತ್ತೇಜಕ ಕ್ರಮಗಳ ಮೂಲಕ ಹೊಸ ಹಡಗುಗಳ ನಿರ್ಮಾಣ ಮಾಡುವ ಯೋಜನೆ ಇದೆ.
ಇಲ್ಲಿ ಬಲ್ಕ್ ಕ್ಯಾರಿಯರ್ ಹಡಗು ಎಂದರೆ ಕಂಟೇನರ್ಗಳಲ್ಲಿ ಪ್ಯಾಕ್ ಆಗದೇ ಸರಕುಗಳನ್ನು ಸಾಗಿಸುವ ಹಡಗು.