ಭಾರತದಲ್ಲಿ 2005ರಿಂದ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿರುವ ಟೊಯೊಟಾ(Toyota) ಇನೋವಾ ಕಾರು ಗ್ರಾಹಕರ ಬೇಡಿಕೆಯೆಂತೆ ಈಗಾಗಲೇ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಇದೀಗ ಬಿಡುಗಡೆಯಾಗಲಿರುವ ಹೊಸ ತಲೆಮಾರಿನ ಆವೃತ್ತಿಯು ಸಾಕಷ್ಟು ಹೊಸ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ. 2005ರಿಂದ ಇದುವರೆಗೆ ಭಾರತದಲ್ಲಿ 10 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟ ದಾಖಲೆ ಹೊಂದಿರುವ ಟೊಯೊಟಾ ಇನೋವಾ ಕಾರು ಹೊಸ ತಲೆಮಾರಿನ ಮಾದರಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, 2023ರ ಆರಂಭದಲ್ಲಿ ಇನೋವಾ ಹೈಕ್ರಾಸ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
2016ರಿಂದ ಇನೋವಾ ಕ್ರಿಸ್ಟಾ ಹೆಸರಿನಲ್ಲಿ ಮಾರಾಟಗೊಳ್ಳುತ್ತಿರುವ ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಯು ಹೊಸ ತಲೆಮಾರಿನ ಆವೃತ್ತಿಯು ಇನೋವಾ ಹೈಕ್ರಾಸ್(Innova Hycross) ಹೆಸರಿನಲ್ಲಿ ಮಾರಾಟಗೊಳ್ಳಲಿದ್ದು, ಹೊಸ ಕಾರು ಈ ಬಾರಿ ಹೊಸ ಡಿಸೈನ್ ಸೇರಿದಂತೆ ಎಂಜಿನ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ಪಡೆದುಕೊಳ್ಳಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಜಿ, ಜಿ ಪ್ಲಸ್, ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ಐದು ವೆರಿಯೆಂಟ್‌ಗಳನ್ನು ಹೊಂದಿರುವ ಇನೋವಾ ಕ್ರಿಸ್ಟಾ ಕಾರು ಮಾದರಿಯು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಮುಂಬರುವ 2023ರಿಂದ ಜಾರಿಗೆ ಜಾರಿಗೆ ಬರಲಿರುವ ಹೊಸ ಎಮಿಷನ್ ನಿಯಮ ಹಿನ್ನಲೆಯಲ್ಲಿ ಡೀಸೆಲ್ ವೆರಿಯೆಂಟ್ ಗಳ ಮಾರಾಟವನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಇನೋವಾ ಕ್ರಿಸ್ಟಾ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಖರೀದಿ ಲಭ್ಯವಿದ್ದು, ಹೊಸ ತಲೆಮಾರಿನ ಇನೋವಾ ಹೈಕ್ರಾಸ್ ಕಾರು ಮಾದರಿಯು ಪೆಟ್ರೋಲ್ ಸೇರಿದಂತೆ ಪೆಟ್ರೋಲ್ ಹೈಬ್ರಿಡ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗುವುದು ಬಹುತೇಕ ಖಚಿತವಾಗಿದೆ.
ಇದನ್ನು ಓದಿ: ಭರ್ಜರಿ ಮೈಲೇಜ್ ನೀಡುವ ಟೊಯೊಟಾ ಹೈರೈಡರ್ ಕಾರು ಖರೀದಿಗೆ ಇಷ್ಟು ದಿನ ಕಾಯಲೇಬೇಕು!
ಹೊಸ ಇನೋವಾ ಹೈಕ್ರಾಸ್ ಕಾರು ಮಾದರಿಗಾಗಿ ಕಂಪನಿಯು ಹೈಬ್ರಿಡ್ ಮಾದರಿಯನ್ನು ನಿರಂತವಾಗಿ ಪರೀಕ್ಷಿಸುತ್ತಿದ್ದು, ಇತ್ತೀಚೆಗೆ ಹೊಸ ಹೈಬ್ರಿಡ್ ಮಾದರಿಯನ್ನು ಸಾರ್ವಜನಿಕ ರಸ್ತೆಗಳಲ್ಲಿ ಪರೀಕ್ಷಿಸುವ ಮೂಲಕ ಹೊಸ ಕಾರಿನ ಬಿಡುಗಡೆಯನ್ನು ಖಚಿತಪಡಿಸಿದೆ. ಹೊಸ ಇನೋವಾ ಹೈಕ್ರಾಸ್ ಕಾರಿನಲ್ಲಿ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ 2.7 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಕ್ಯಾಮ್ರಿ ಸೆಡಾನ್ ಮಾದರಿಯಲ್ಲಿರುವ 2.5 ಲೀಟರ್ ಆಟ್ಕಿನ್ಸ್ ಸೈಕಲ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಅನ್ನು ಪರಿಚಯಿಸಬಹುದಾಗಿದೆ.
ಇದು ಸೆಲ್ಪ್ ಡ್ರೈವ್ ಚಾರ್ಜಿಂಗ್ ವೈಶಿಷ್ಟ್ಯತೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 17 ರಿಂದ 19 ಕಿ.ಮೀ ಮೈಲೇಜ್ ಖಾತ್ರಿಪಡಿಸಲಿದ್ದು, ಸ್ಥಗಿತಗೊಳಿಸಲಾಗಿರುವ ಡೀಸೆಲ್ ಎಂಜಿನ್ ಸ್ಥಾನವನ್ನು ತುಂಬಲು ಹೊಸ ಮಾದರಿಯು ಸಹಕಾರಿಯಾಗಿದೆ. ಜೊತೆಗೆ ಹೊಸ ಇನೋವಾ ಹೈಕ್ರಾಸ್ ಕಾರಿನಲ್ಲಿ ಗರಿಷ್ಠ ಸೇಫ್ಟಿ ಫೀಚರ್ಸ್ ಹೊಂದಿರುವ ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೌಲಭ್ಯವನ್ನು ಜೋಡಣೆ ಮಾಡಲಾಗುತ್ತಿದೆ. ಹಾಗೆಯೇ ಹೊಸ ಕಾರಿನಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಸನ್ ರೂಫ್, ಸುಧಾರಿತ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಹಲವು ಕಾರ್ ಕನೆಕ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.
Published On - 5:06 pm, Sat, 15 October 22