ನವದೆಹಲಿ: ಭಾರತ್ ಬಯೋಟೆಕ್ನಿಂದ ಪ್ರಮುಖ ಘೋಷಣೆ ಮಾಡಲಾಗಿದೆ. ಭಾರತ ಸೇರಿದಂತೆ ಇಡೀ ವಿಶ್ವದಲ್ಲೇ ಕೊರೊನಾ ಅಲೆಯು ತೀವ್ರವಾಗಿರುವ ಹಿನ್ನೆಲೆಯಲ್ಲಿ ಕೋವ್ಯಾಕ್ಸಿನ್ (COVAXIN) ಅನ್ನು ರಾಜ್ಯ ಸರ್ಕಾರಗಳಿಗೆ ರೂ. 600ಕ್ಕೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ರೂ. 1200ಕ್ಕೆ ಮತ್ತು ರಫ್ತು ಮಾಡುವುದಾದರೆ 15ರಿಂದ 20 ಡಾಲರ್ಗೆ ಎಂದು ಭಾರತ ಸರ್ಕಾರದ ನಿರ್ದೇಶನದ ಅನುಸಾರವಾಗಿ ದರ ಘೋಷಣೆ ಮಾಡಲಾಗಿದೆ. ಒಂದು ಡೋಸ್ಗೆ 150 ರೂಪಾಯಿ ತಗುಲುತ್ತದೆ. ಇದನ್ನು ಭಾರತ ಸರ್ಕಾರದಿಂದ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಅಂದಹಾಗೆ ಕೋವ್ಯಾಕ್ಸಿನ್ ಎಂಬುದು ಭಾರತದ ಮೊದಲ ದೇಶೀ ಕೋವಿಡ್-19 ಲಸಿಕೆಯಾಗಿದೆ. ಇನ್ನು ಇದೇ ವೇಳೆ ಕಂಪೆನಿಯು ಹೇಳಿಕೆ ನೀಡಿದ್ದು, ಉತ್ಪಾದನೆ ಮಾಡುವ ಲಸಿಕೆಯ ಶೇಕಡಾ 50ರಷ್ಟನ್ನು ಕೇಂದ್ರ ಸರ್ಕಾರಕ್ಕೆ ಪೂರೈಸುವುದಕ್ಕೆ ಮೀಸಲಿರಿಸುವುದಾಗಿ ಹೇಳಿದೆ.
ಕೋವ್ಯಾಕ್ಸಿನ್ ವೈಶಿಷ್ಟ್ಯಗಳೇನು ಎಂಬ ಬಗ್ಗೆ ಕೂಡ ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
* ಕೋವ್ಯಾಕ್ಸಿನ್ ವಯಲ್ ಒಮ್ಮೆ ತೆರೆದರೆ ಅದನ್ನು 2ರಿಂದ 8 ಡಿಗ್ರಿ ತಾಪಮಾನದಲ್ಲಿ 28 ದಿನಗಳ ಕಾಲ ಸುರಕ್ಷಿತವಾಗಿ ಇಡಬಹುದು.
* ಮೂರನೇ ಹಂತದ ಅಧ್ಯಯನದ ವೇಳೆಯಲ್ಲಿ ಒಟ್ಟಾರೆಯಾಗಿ ಕೋವಿಡ್-19 ವಿರುದ್ಧ ಶೇ 78 ಪರಿಣಾಮಕಾರಿ ಮತ್ತು ಗಂಭೀರ ಕಾಯಿಲೆ ವಿರುದ್ಧ ಶೇ 100ರಷ್ಟು ಪರಿಣಾಮಕಾರಿ ಎಂದು ತಿಳಿದುಬಂದಿದೆ. ಆಸ್ಪತ್ರೆಗೆ ಸೇರಬೇಕಾದ ಅಗತ್ಯವನ್ನು ಕಡಿಮೆ ಮಾಡುತ್ತದೆ.
* ಈಗಾಗಲೇ ಸಾಬೀತಾದ, ಪರೀಕ್ಷಿಸಲಾದ, ವೆರೋ- ಸೆಲ್ ತಂತ್ರಜ್ಞಾನ, ಹೋಲ್ ವಿರಿಯನ್, ಇನ್ಆಕ್ಟಿವೇಟೆಡ್ ಲಸಿಕೆ.
ಇದರ ಜತೆಗೆ ಇನ್ನೂ ಕೆಲವು ಮಾಹಿತಿಗಳೊಂದಿಗೆ ಭಾರತ್ ಬಯೋಟೆಕ್ ಅದ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಕೃಷ್ಣ ಎಂ ಎಳ್ಳ ಅವರು ಸಾರ್ವಜನಿಕರ ಬೆಂಬಲವನ್ನು ಕೋರಿದ್ದಾರೆ.
(Bharat Biotech’s Covaxin for state governments Rs 600 and for private hospitals Rs 1200)