ಜಪಾನ್ನ ಟೊಯೊಟಾ (Toyota) ಕಂಪೆನಿಯು ಶುಕ್ರವಾರ ತಿಳಿಸಿರುವ ಪ್ರಕಾರ, ಕಳೆದ ವರ್ಷ ವಾಹನ ಮಾರಾಟ ಶೇ 10.1ರಷ್ಟು ಏರಿಕೆ ಆಗಿದೆ. ಆ ಮೂಲಕ ಸತತ ಎರಡನೇ ವರ್ಷ ವಿಶ್ವದ ಅತಿದೊಡ್ಡ ಕಾರು ತಯಾರಕ ಎನಿಸಿಕೊಂಡಿದೆ. ತನ್ನ ಸಮೀಪ ಪ್ರತಿಸ್ಪರ್ಧಿಯಾದ ಜರ್ಮನಿಯ ಫೋಕ್ಸ್ವ್ಯಾಗನ್ ಎಜಿ ಜತೆಗಿನ ಅಂತರವನ್ನು ಹೆಚ್ಚಿಸಿಕೊಂಡಿದೆ. ಕಾರು ತಯಾರಿಕೆ ಸಂಸ್ಥೆ ಟೊಯೊಟಾದಿಂದ ಮಾತನಾಡಿ, 2021ರಲ್ಲಿ 10.5 ಮಿಲಿಯನ್ ವಾಹನಗಳ ಮಾರಾಟ ಮಾಡಲಾಗಿದೆ. ಇದರಲ್ಲಿ ದಹಿಟ್ಸು ಮೋಟಾರ್ಸ್ ಮತ್ತು ಹಿನೋ ಮೋಟಾರ್ಸ್ ಸಹ ಒಳಗೊಂಡಿದೆ. ಫೋಕ್ಸ್ವ್ಯಾಗನ್ ಇದೇ ಅವಧಿಯಲ್ಲಿ 8.9 ಮಿಲಿಯನ್ ಮಾರಾಟ ಮಾಡಿದೆ. 2020ರಲ್ಲಿನ ಮಾರಾಟಕ್ಕೆ ಹೋಲಿಸಿದರೆ ಶೇ 5ರಷ್ಟು ಕಡಿಮೆ ಆಗಿದ್ದು, ಮಾರಾಟವು ಹತ್ತು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಪ್ಲೈಚೈನ್ ಅಸ್ತವ್ಯಸ್ತಗೊಂಡಿದ್ದರಿಂದ ಅರೆವಾಹಕಗಳು (ಸೆಮಿಕಂಡಕ್ಟರ್ಸ್) ಕೊರತೆ ಬಿದ್ದು, ಉತ್ಪಾದನೆ ಕಡಿಮೆ ಮಾಡಬೇಕಾಯಿತು. ಪ್ರಮುಖ ಬಿಡಿ ಭಾಗದ ಬೇಡಿಕೆಯು ಗ್ರಾಹಕ ಎಲೆಕ್ಟ್ರಾನಿಕ್ ಸಾಧನಗಳಿಗೆ ಜಾಸ್ತಿ ಆಗಿದ್ದರಿಂದ ಇಂಥ ಸನ್ನಿವೇಶ ಸೃಷ್ಟಿಯಾಯಿತು. ಅಂದಹಾಗೆ ಸೆಮಿಕಂಡಕ್ಟರ್ಸ್ಗಳನ್ನು ಎಲೆಕ್ಟ್ರಾನಿಕ್ ಸಾಧನಗಳಲ್ಲೂ ಬಳಸಲಾಗುತ್ತದೆ. ಆದರೆ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಉಳಿದ ಕಾರು ತಯಾರಕ ಕಂಪೆನಿಗಳಿಗಿಂತ ಈ ಜಪಾನೀಸ್ ಕಂಪೆನಿಯ ಸ್ಥಿತಿ ಉತ್ತಮವಾಗಿದೆ. ಅದಕ್ಕೆ ಕಾರಣವಾಗಿದ್ದು ಅದರ ತವರು ಮಾರುಕಟ್ಟೆ. ಜಪಾನ್ ಮತ್ತು ಏಷ್ಯಾದ ಭಾಗಗಳು ಯುರೋಪ್ಗಿಂತ ಕಡಿಮೆ ಪ್ರಭಾವಕ್ಕೆ ಒಳಗಾಗಿವೆ.
ಟೊಯೊಟಾ ಮೂರನೇ ತ್ರೈಮಾಸಿಕ ಗಳಿಕೆಯನ್ನು ಫೆಬ್ರವರಿ 9ನೇ ತಾರೀಕಿನಂದು ಬಿಡುಗಡೆ ಮಾಡಿದೆ. ಕೊವಿಡ್ 19ಗೆ ಸಂಬಂಧಿಸಿದ ಸಮಸ್ಯೆಯ ಕಾರಣಗಳಿಗೆ ಮಾರ್ಚ್ 31ಕ್ಕೆ ಕೊನೆಯಾಗುವ ಬಿಜಿನೆಸ್ ವರ್ಷಕ್ಕೆ 90 ಲಕ್ಷದ ಉತ್ಪಾದನೆಯ ಗುರಿಯನ್ನು ಮುಟ್ಟುವುದಿಲ್ಲ ಎಂದು ಹೇಳಿದೆ. ಕೊವಿಡ್19 ಕಾರಣದಿಂದ ಕಳೆದ ಕೆಲ ಸಮಯದಿಂದ ವಾಹನ ಕ್ಷೇತ್ರವು ಸಂಕಷ್ಟ ಎದುರಿಸುತ್ತಿದೆ. ಹೆಚ್ಚುತ್ತಿರುವ ಇನ್ಪುಟ್ ವೆಚ್ಚವೂ ಸೇರಿಕೊಂಡು ಪದೇ ಪದೇ ಬೆಲೆ ಏರಿಕೆಯನ್ನು ಮಾಡುವಂತೆ ಆಗಿದೆ.
ಇದನ್ನೂ ಓದಿ: Hilux booking In India: ಟೊಯೊಟಾದಿಂದ ಲೈಫ್ ಸ್ಟೈಲ್ ಯುಟಿಲಿಟಿ ವೆಹಿಕಲ್ – ಹಿಲಕ್ಸ್ ಬುಕ್ಕಿಂಗ್ ಆರಂಭ