ನವದೆಹಲಿ: ಮೊದಲ ಬಾರಿಗೆ ಉದ್ಯೋಗ (Job) ಹುಡುಕುತ್ತಿರುವವರು ಅಥವಾ ಫ್ರೆಷರ್ಗಳಿಗೆ ಕೆಲಸ ನೀಡುವಲ್ಲಿ 2022ರ ಜುಲೈ – ಡಿಸೆಂಬರ್ ಅವಧಿಯಲ್ಲಿ ಭಾರತದ ಕಂಪನಿಗಳು (Indian Companies) ವಿದೇಶಿ ಕಂಪನಿಗಳಿಗಿಂತ ಮುಂದಿವೆ ಎಂದು ವರದಿಯೊಂದು ತಿಳಿಸಿದೆ. ಈ ಅವಧಿಯಲ್ಲಿ ಜಾಗತಿಕವಾಗಿ ಶೇಕಡಾ 11ರಷ್ಟು ಕಂಪನಿಗಳು ಹೊಸಬರಿಗೆ ಉದ್ಯೋಗ ನೀಡಿದರೆ ಶೇಕಡಾ 59ರಷ್ಟು ಭಾರತೀಯ ಕಂಪನಿಗಳು ಫ್ರೆಷರ್ಗಳನ್ನು ನೇಮಕಾತಿ ಮಾಡಿಕೊಂಡಿವೆ. 2022ರ ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ಹೊಸಬರ ನೇಮಕಾತಿಯಲ್ಲಿ ಶೇಕಡಾ 12ರ ಹೆಚ್ಚಳ ಕಂಡುಬಂದಿದೆ. ಹೊಸಬರನ್ನು ನೇಮಕ ಮಾಡಿಕೊಳ್ಳುವ ಒಲವು ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಶೇಕಡಾ 20ರಷ್ಟಿದೆ. ಅಮೆರಿಕದಲ್ಲಿ ಶೇಕಡಾ 15ರಷ್ಟಿದ್ದರೆ, ಪಶ್ಚಿಮ ಏಷ್ಯಾದಲ್ಲಿ ಶೇಕಡಾ 6ರಷ್ಟಿದೆ ಎಂದು ಟೀಮ್ಲೀಸ್ ಎಜುಟೆಕ್ ಕಂಪನಿಯ ‘ಕೆರಿಯರ್ ಔಟ್ಲುಕ್ ರಿಪೋರ್ಟ್’ ತಿಳಿಸಿದೆ.
ಹೊಸಬರು ಮತ್ತು ಅನುಭವ ಇರುವ ಉದ್ಯೋಗಾರ್ಥಿಗಳಿಗೆ ಈ ವರ್ಷದ ಬೆಳವಣಿಗೆ ಆಶಾದಾಯಕವಾಗಿ ಪರಿಣಮಿಸಿದೆ. ಈ ಎರಡೂ ಕೆಟಗರಿಯವರ ನೇಮಕಾತಿಯಲ್ಲಿ ವರ್ಷದ ಮೊದಲಾರ್ಧದಲ್ಲಿ ಶೇಕಡಾ 50ರಷ್ಟಿದ್ದರೆ ದ್ವಿತೀಯಾರ್ಧದಲ್ಲಿ ಶೇಕಡಾ 61ರಷ್ಟಿದೆ ಎಂದು ವರದಿ ತಿಳಿಸಿದೆ. ಉತ್ಪಾದನೆ, ಸೇವಾ ಕ್ಷೇತ್ರ, ತಂತ್ರಜ್ಞಾನ, ಐಟಿ, ಇ-ಕಾಮರ್ಸ್, ಸ್ಟಾರ್ಟಪ್ಗಳು, ಟೆಲಿ ಕಮ್ಯುನಿಕೇಷನ್ ಸೇರಿದಂತೆ ವಿವಿಧ ಕ್ಷೇತ್ರಗಳ 865 ಸಣ್ಣ, ಮಧ್ಯಮ ಮತ್ತು ಬೃಹತ್ ಗಾತ್ರದ ಉದ್ಯಮಗಳನ್ನು ಸಮೀಕ್ಷೆಗೆ ಒಳಪಡಿಸಿ ವರದಿ ಸಿದ್ಧಪಡಿಸಲಾಗಿದೆ.
23ನೇ ಹಣಕಾಸು ವರ್ಷದಲ್ಲಿ ಐಟಿ ಕಂಪನಿಗಳು ಒಂದು ಲಕ್ಷ ಮಂದಿ ಹೊಸಬರನ್ನು ನೇಮಕ ಮಾಡಿಕೊಳ್ಳುವ ನಿರೀಕ್ಷೆ ಇದೆ. ಆರ್ಥಿಕ ಹಿಂಜರಿತ ಮತ್ತು ಬೆಳವಣಿಗೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಐಟಿ ಕಂಪನಿಗಳು ಹೊಸಬರ ನೇಮಕಕ್ಕೆ ಮುಂದಾಗಿವೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: SIP Vs Lumpsum: ಲಂಸಮ್ ಅಥವಾ ಎಸ್ಐಪಿ; 2023ರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಯಾವುದು ಉತ್ತಮ? ತಜ್ಞರ ಸಲಹೆ ಇಲ್ಲಿದೆ
ಸ್ಟಾರ್ಟಪ್ಗಳು ಮತ್ತು ಸೀಮಿತ ಆದಾಯವಿರುವ ಕಂಪನಿಗಳಿಗೆ ಕಡಿಮೆ ವೆಚ್ಚದ ದೃಷ್ಟಿಯಿಂದ ಹೊಸಬರು ಉತ್ತಮ ಆಯ್ಕೆಯಾಗಿದ್ದಾರೆ. ಡಿಜಿಟಲ್ ವ್ಯವಸ್ಥೆಯ ಅರಿವಿರುವ ಈಗಿನ ಯುವಕರು ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚು ಅರಿವು ಹೊಂದಿದವರಾಗಿದ್ದು, ಉತ್ಪಾದನೆ ಹೆಚ್ಚಿಸುವಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಅರಿವು ಅವರಿಗಿರುತ್ತದೆ ಎಂದು ಟೀಮ್ಲೀಸ್ ಎಜುಟೆಕ್ನ ಅಧ್ಯಕ್ಷ ನೀತಿ ಶರ್ಮಾ ತಿಳಿಸಿದ್ದಾರೆ.
ಹೊಸಬರನ್ನು ನೇಮಕ ಮಾಡಿಕೊಳ್ಳಲು ಹೆಚ್ಚು ಒಲವು ವ್ಯಕ್ತಪಡಿಸಿದ ನಗರಗಳ ಪೈಕಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿರುವ ಶೇಕಡಾ 68ರಷ್ಟು ಕಂಪನಿಗಳು ಫ್ರೆಷರ್ಗಳ ನೇಮಕಾತಿಗೆ ಒಲವು ವ್ಯಕ್ತಪಡಿಸಿವೆ.